ಸೋಮವಾರ, ಜೂಲೈ 6, 2020
22 °C
2020–21ರಲ್ಲಿ ಶೇ 5ರಷ್ಟು; ಫಿಚ್‌ ರೇಟಿಂಗ್‌ ಅಂದಾಜು

ಕುಸಿತದ ಹಾದಿಯಲ್ಲಿ ಜಿಡಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 2020–21ನೇ ಹಣಕಾಸು ವರ್ಷದಲ್ಲಿ ಶೇ 5ರಷ್ಟು ಋಣಾತ್ಮಕ ಪ್ರಗತಿ ದಾಖಲಿಸಲಿದೆ ಎಂದು ಜಾಗತಿಕ ರೇಟಿಂಗ್‌ ಕಂಪನಿ ಫಿಚ್ ರೇಟಿಂಗ್‌ ಅಂದಾಜಿಸಿದೆ.

ನಿರೀಕ್ಷೆಗಿಂತ ದೀರ್ಘ ಸಮಯ ತೆಗೆದುಕೊಂಡ ಮತ್ತು ತೀವ್ರ ಸ್ವರೂಪದ ಲಾಕ್‌ಡೌನ್‌ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಬಾಧಿತಗೊಂಡಿರುವುದರಿಂದ ವೃದ್ಧಿ ದರ ಋಣಾತ್ಮಕ ದಿಕ್ಕಿನಲ್ಲಿ ಚಲಿಸಲಿದೆ. 2019–20ರ ಸಾಲಿನ ವೃದ್ಧಿ ದರ ಶೇ 3.9ರಷ್ಟು ಇರಲಿದೆ. 2021–22ರ ಹಣಕಾಸು ವರ್ಷದಲ್ಲಿ  ಚೇತರಿಕೆ ಹಾದಿಗೆ ಮರಳಲಿದೆ ಎಂದು ತನ್ನ ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವೃದ್ಧಿ ದರವು ಶೇ 0.8ರಷ್ಟು ಇರಲಿದೆ ಎಂದು ಫಿಚ್‌ ಈ ಮೊದಲು ಅಂದಾಜಿಸಿತ್ತು. ಈಗಿನ ಅಂದಾಜಿನಲ್ಲಿ ಭಾರಿ ಬದಲಾವಣೆಯಾಗಿದೆ.

ಸತತ ಎರಡು ತ್ರೈಮಾಸಿಕಗಳಲ್ಲಿ ಭಾರತದ ಜಿಡಿಪಿಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಋಣಾತ್ಮಕ ದಿಕ್ಕಿನಲ್ಲಿ ಚಲಿಸಲಿದೆ. ಏಪ್ರಿಲ್‌ನಿಂದ ಜೂನ್‌ (–) ಶೇ 2.7 ಹಾಗೂ ಜುಲೈನಿಂದ ಸೆಪ್ಟೆಂಬರ್‌ನಲ್ಲಿ (–) ಶೇ 12.4 ದಾಖಲಾಗಲಿದೆ. ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ಶೇ 1.2ರಷ್ಟು ಪ್ರಗತಿ ಕಾಣಲಿದೆ.

ಗ್ರಾಹಕರ ವೆಚ್ಚದಲ್ಲಿನ ಶೇ 8.3 ಕುಸಿತ ಮತ್ತು ಸ್ಥಿರ ಹೂಡಿಕೆಯಲ್ಲಿನ ಶೇ 9.7 ಕುಸಿತದಿಂದಾಗಿ ಆರ್ಥಿಕ ಪ್ರಗತಿ ಕುಸಿಯಲಿದೆ.

ಜಾಗತಿಕ ಜಿಡಿಪಿ ಕುಸಿತಗೊಳ್ಳಲು ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳಾದ ಭಾರತ ಮತ್ತು ರಷ್ಯಾ (ಶೇ 5)  ಮೆಕ್ಸಿಕೊ  ಮತ್ತು ಬ್ರೆಜಿಲ್‌ನಲ್ಲಿ ಶೇ 6 ರಿಂದ ಶೇ 7ರಷ್ಟು ಕುಸಿತ ಕಂಡು ಬರಲಿದೆ ಎಂದು ತಿಳಿಸಿದೆ.

ನಾಲ್ಕನೇ ಆರ್ಥಿಕ ಹಿಂಜರಿತ: ಕ್ರಿಸಿಲ್‌

ಸ್ವಾತಂತ್ರ್ಯಾ ನಂತರದ ನಾಲ್ಕನೇ, ಆರ್ಥಿಕ ಉದಾರೀಕರಣ ನಂತರದ ಮೊದಲ ಮತ್ತು ಇದುವರೆಗಿನ ಅತ್ಯಂತ ಕೆಟ್ಟ ಸ್ವರೂಪದ ಆರ್ಥಿಕ ಹಿಂಜರಿತಕ್ಕೆ ಭಾರತ ಈಗ ಸಾಕ್ಷಿಯಾಗಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ವೃದ್ಧಿ ದರ ಶೇ 5ರಷ್ಟು ಕಡಿಮೆಯಾಗಲಿದೆ ಎಂದು ರೇಟಿಂಗ್ ಸಂಸ್ಥೆ ‘ಕ್ರಿಸಿಲ್‌‘ ಅಭಿಪ್ರಾಯಪಟ್ಟಿದೆ.

ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 10ರಷ್ಟು ನಷ್ಟವಾಗಲಿದೆ. ಕೋವಿಡ್‌ ಪಿಡುಗಿನ ಮುಂಚೆ ಅಂದಾಜಿಸಿದ್ದ ಆರ್ಥಿಕ ವೃದ್ಧಿ ದರ ಮುಂದಿನ ಮೂರು ವರ್ಷಗಳವರೆಗೆ ಕಂಡು ಬರುವುದಿಲ್ಲ. ಈ ಹಿಂದೆ  1958, 1966 ಮತ್ತು 1980ರಲ್ಲಿ ದೇಶಿ ಆರ್ಥಿಕತೆ ಹಿಂಜರಿತ ಕಂಡಿತ್ತು. ಈ ಮೂರೂ ಸಂದರ್ಭಗಳಲ್ಲಿ ಕೃಷಿ ಉತ್ಪಾದನೆ ಕಡಿಮೆಯಾಗಿ ಆರ್ಥಿಕ ಹಿಂಜರಿತ ಕಂಡು ಬಂದಿತ್ತು. 2020–21ರಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳಿದೆ.

ಅಂಕಿ ಅಂಶ

ತ್ರೈಮಾಸಿಕ; ವೃದ್ಧಿ ದರ (%)

ಮೊದಲ; (–) ಶೇ 2.7

ದ್ವಿತೀಯ; (–) ಶೇ 12.4

ನಾಲ್ಕನೇ; 1.2

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು