ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಗೃಹ ಸಾಲ: ಸಹಕಾರಿ ಬ್ಯಾಂಕ್‌ಗಳ ಮಿತಿ ಎರಡು ಪಟ್ಟು ಹೆಚ್ಚಳ

Last Updated 8 ಜೂನ್ 2022, 16:14 IST
ಅಕ್ಷರ ಗಾತ್ರ

ಮುಂಬೈ: ಸಹಕಾರಿ ಬ್ಯಾಂಕ್‌ಗಳು ನೀಡುವ ವೈಯಕ್ತಿಕ ಗೃಹ ಸಾಲದ ಮೊತ್ತವನ್ನು ಆರ್‌ಬಿಐ ಎರಡು ಪಟ್ಟು ಹೆಚ್ಚಿಸಿದೆ. ಗರಿಷ್ಠ ₹ 1.40 ಕೋಟಿವರೆಗೂ ಸಾಲ ನೀಡಬಹುದು ಎಂದು ಹೇಳಿದೆ.

ನಗರ ಸಹಕಾರಿ ಬ್ಯಾಂಕ್‌ಗಳಿಗೆ ಈ ಹಿಂದೆ ₹ 70 ಲಕ್ಷದ ಮಿತಿ ನಿಗದಿಪಡಿಸಲಾಗಿತ್ತು. ಅದನ್ನು ₹ 1.40 ಕೋಟಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು ₹ 75 ಲಕ್ಷದವರೆಗೆ ಸಾಲ ನೀಡಬಹುದಾಗಿದೆ. ಈ ಹಿಂದೆ ₹ 30 ಲಕ್ಷದ ಮಿತಿ ನಿಗದಿ ಮಾಡಲಾಗಿತ್ತು.

ಮನೆಗಳ ಬೆಲೆ ಹೆಚ್ಚಳ ಆಗುತ್ತಿರುವುದು ಮತ್ತು ಗ್ರಾಹಕರ ಅಗತ್ಯಗಳನ್ನು ಪರಿಗಣಿಸಿ ವೈಯಕ್ತಿಕ ಗೃಹ ಸಾಲಗಳ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ದಶಕಕ್ಕೂ ಹೆಚ್ಚಿನ ಸಮಯದ ಬಳಿಕ ಸಹಕಾರಿ ಬ್ಯಾಂಕ್‌ಗಳ ಸಾಲ ನೀಡಿಕೆ ಮಿತಿ ಪರಿಷ್ಕರಣೆ ಮಾಡಲಾಗಿದೆ.

ನಗರ ಸಹಕಾರಿ ಬ್ಯಾಂಕ್‌ಗಳ ವರ್ಗೀಕರಣದ ಆಧಾರದ ಮೇಲೆ ಸಾಲ ನೀಡಿಕೆಯ ಗರಿಷ್ಠ ಮಿತಿ ನಿರ್ಧಾರವಾಗಲಿದೆ. ಈ ಬ್ಯಾಂಕ್‌ಗಳನ್ನು ಟಯರ್‌–1 ಮತ್ತು ಟಯರ್–2 ಎಂದು ವರ್ಗೀಕರಿಸಲಾಗಿದೆ.

ರಾಜ್ಯ ಸಹಕಾರಿ ಬ್ಯಾಂಕ್‌ಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳನ್ನು ಒಳಗೊಂಡು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳನ್ನು ಅವುಗಳ ನಿವ್ವಳ ಮೌಲ್ಯದ ಆಧಾರದ ಮೇಲೆ ಗರಿಷ್ಠ ಸಾಲದ ಮಿತಿ ನಿರ್ಧಾರ ಆಗಲಿದೆ. ₹ 100 ಕೋಟಿವರೆಗಿನ ಮೌಲ್ಯ ಇರುವ ಬ್ಯಾಂಕ್‌ಗಳ ಸಾಲ ನೀಡಿಕೆ ಮಿತಿಯನ್ನು ₹ 20 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಉಳಿದ ಬ್ಯಾಂಕ್‌ಗಳು ₹ 75 ಲಕ್ಷದವರೆಗೆ ಸಾಲ ನೀಡಬಹುದಾಗಿದೆ.

ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು ವಸತಿ ಯೋಜನೆಗಳನ್ನು ಆರಂಭಿಸಿರುವ ನಿರ್ಮಾಣಗಾರರಿಗೆ ಇನ್ನು ಮುಂದೆ ಸಾಲ ನೀಡಬಹುದಾಗಿದೆ. ಸದ್ಯ ಈ ಅವಕಾಶ ಇರಲಿಲ್ಲ.

ವೃದ್ಧರು ಮತ್ತು ಅಂಗವಿಕಲರಿಗೆ ಅನುಕೂಲ ಆಗುವಂತೆ ನಗರ ಗ್ರಾಮೀಣ ಬ್ಯಾಂಕ್‌ಗಳು ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆಗಳನ್ನು ನೀಡಲು ಸಹ ಆರ್‌ಬಿಐ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT