ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಿ ಏಜೆಂಟ್‌ ವಿವರನೀಡಲು ಆರ್‌ಬಿಐ ತಾಕೀತು

Last Updated 14 ಫೆಬ್ರುವರಿ 2023, 19:26 IST
ಅಕ್ಷರ ಗಾತ್ರ

ಮುಂಬೈ : ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ ಸಂಸ್ಥೆಗಳು, ಗ್ರಾಹಕರು ಸಾಲ ಮರುಪಾವತಿಸಲು ವಿಫಲವಾದರೆ ಸಾಲ ವಸೂಲಿಗೆ ಅವರನ್ನು ಯಾರು ಸಂಪರ್ಕಿಸುತ್ತಾರೆ ಎಂಬ ವಿವರವನ್ನು ಕೊಡಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಾಕೀತು ಮಾಡಿದೆ.

‘ಸಾಲ ವಸೂಲಿಗೆ ತಮ್ಮಿಂದ ಯಾವ ಏಜೆಂಟರನ್ನು ನೇಮಕ ಮಾಡಲಾಗಿದೆ ಎಂಬ ವಿವರವನ್ನು ಗ್ರಾಹಕರಿಗೆ ಕೊಡಬೇಕು. ಹಾಗೆಯೇ, ಸಾಲ ವಸೂಲಿ ಪ್ರಕ್ರಿಯೆ ಆರಂಭಿಸುವ ಮೊದಲು ಅದರ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕು’ ಎಂದು ಕೂಡ ಆರ್‌ಬಿಐ ಸ್ಪಷ್ಟಪಡಿಸಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಆರ್‌ಬಿಐ, ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವ ಸಂಸ್ಥೆಗಳು ಪಾಲಿಸಬೇಕಿರುವ ನಿಯಮಗಳನ್ನು ಬಿಗಿಗೊಳಿಸಿತ್ತು. ಸಂಸ್ಥೆಗಳು ವಿಪರೀತ ಪ್ರಮಾಣದಲ್ಲಿ ಬಡ್ಡಿ ಹೇರದಂತೆ ತಡೆಯಲು ಈ ಕ್ರಮ ಕೈಗೊಂಡಿತ್ತು.

ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಗಳ ಕುರಿತಾಗಿ ಕೆಲವು ವಿವರಗಳನ್ನು (ಎಫ್‌ಎಕ್ಯು) ಆರ್‌ಬಿಐ ಮಂಗಳವಾರ ಬಿಡುಗಡೆ ಮಾಡಿದೆ. ‘ಸಾಲ ಮರುಪಾವತಿಯಲ್ಲಿ ಗ್ರಾಹಕ ವಿಫಲನಾದರೆ, ಆತನನ್ನು ಸಂಸ್ಥೆಯ ಕಡೆಯಿಂದ ಯಾವ ಏಜೆಂಟ್‌ಗಳು ಸಂಪರ್ಕಿಸುತ್ತಾರೆ ಎಂಬುದರ ವಿವರವನ್ನು ಸಾಲ ಮಂಜೂರು ಮಾಡುವಾಗಲೇ ತಿಳಿಸಬೇಕು’ ಎಂದು ಹೇಳಿದೆ.

‘ಗ್ರಾಹಕ ಸಾಲವನ್ನು ಮರುಪಾವತಿಸದೆ ಇದ್ದರೆ, ಸಾಲ ವಸೂಲಿ ಹೊಣೆಯನ್ನು ಏಜೆಂಟ್‌ಗೆ ವಹಿಸಿದರೆ, ಆ ಏಜೆಂಟ್‌ನ ವಿವರವನ್ನು ಗ್ರಾಹಕನಿಗೆ ಇ–ಮೇಲ್ ಹಾಗೂ ಎಸ್‌ಎಂಎಸ್‌ ಮೂಲಕ ತಿಳಿಸಬೇಕು. ಗ್ರಾಹಕನನ್ನು ಏಜೆಂಟ್‌ ಸಂಪರ್ಕಿಸುವ ಮೊದಲೇ ಈ ವಿವರಗಳನ್ನು ಕಳಿಸಿರಬೇಕು’ ಎಂದು ಆರ್‌ಬಿಐ ಹೇಳಿದೆ.

‌ಚೆಕ್‌ ಬೌನ್ಸ್‌ಗೆ ಹಾಗೂ ಸಾಲ ಪಡೆದವರ ಉಳಿತಾಯ ಖಾತೆಯಿಂದ ಸಾಲದ ಖಾತೆಗೆ ಹಣ ವರ್ಗಾವಣೆ ಆಗದಿದ್ದರೆ ವಿಧಿಸುವ ಶುಲ್ಕವನ್ನು ಗ್ರಾಹಕರಿಗೆ ಪ್ರತ್ಯೇಕವಾಗಿ ತಿಳಿಸಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT