ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ನಲ್ಲಿ ಮತ್ತೆ ನಾಯಕತ್ವ ಬಿಕ್ಕಟ್ಟು

Last Updated 30 ಅಕ್ಟೋಬರ್ 2019, 6:28 IST
ಅಕ್ಷರ ಗಾತ್ರ

ದೇಶದ ಎರಡನೇ ಅತಿದೊಡ್ಡ ಸಾಫ್ಟವೇರ್‌ ಸೇವಾ ಸಂಸ್ಥೆಯಾಗಿರುವ ಬೆಂಗಳೂರಿನ ಹೆಮ್ಮೆಯ ಇನ್ಫೊಸಿಸ್‌ ಮತ್ತೆ ಸುದ್ದಿಯಲ್ಲಿ ಇದೆ. ಕಂಪನಿಯ ಉನ್ನತ ಮಟ್ಟದ ನಾಯಕತ್ವವು ಎರಡನೇ ಬಾರಿಗೆ ವಿವಾದದಲ್ಲಿ ಸಿಲುಕಿದೆ. ವಹಿವಾಟು ಚೇತರಿಸಿಕೊಂಡು ಸ್ಥಿರತೆ ಕಂಡು ಬಂದಿದೆ ಎನ್ನುವಾಗಲೇ ಹೂಡಿಕೆದಾರರ ಎದುರು ಮತ್ತೆ ಅನಿಶ್ಚಿತತೆ ಎದುರಾಗಿದೆ.

ಹಿಂದೊಮ್ಮೆ ದೇಶದಲ್ಲಿನ ಮಾಹಿತಿ ತಂತ್ರಜ್ಞಾನ ರಂಗದ ಆದರ್ಶ ಸಂಸ್ಥೆಯಾಗಿದ್ದ ಇನ್ಫೊಸಿಸ್‌ನ ವರ್ಚಸ್ಸಿಗೆ ಈಗ ಮತ್ತೊಮ್ಮೆ ತೀವ್ರ ಧಕ್ಕೆ ಒದಗಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಷ್ಟೇ ಪ್ರಕಟವಾಗಿದ್ದ ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದ ಗ್ರಾಹಕರ ಮನ್ನಣೆಗೆ ‍ಪಾತ್ರವಾಗಿರುವ ಮುಂಚೂಣಿ ಕಂಪನಿಗಳ ಪಟ್ಟಿಯಲ್ಲಿ ಇನ್ಫೊಸಿಸ್‌ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿತ್ತು. ಈಗ ಭಾರತದಲ್ಲಷ್ಟೇ ಅಲ್ಲದೆ ಅಮೆರಿಕದಲ್ಲಿಯೂ ಕಂಪನಿ ವಿರುದ್ಧ ವಿಚಾರಣೆಗೆ ಚಾಲನೆ ನೀಡಲಾಗಿದೆ. ದಾಖಲಾದ ದೂರುಗಳನ್ನು ತಕ್ಷಣಕ್ಕೆ ಷೇರುಪೇಟೆ ಮತ್ತು ಷೇರುಪೇಟೆ ನಿಯಂತ್ರಣ ಮಂಡಳಿಯ ಗಮನಕ್ಕೆ ತರದ ನಿರ್ದೇಶಕ ಮಂಡಳಿಯ ನಿಲುವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಲೀಲ್‌ ಪಾರೇಖ್‌ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ನೀಲಾಂಜನ ರಾಯ್‌ ವಿರುದ್ಧ ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲು ಉತ್ತೇಜನ ನೀಡಿದ ಆರೋಪಗಳು ಕೇಳಿ ಬಂದಿವೆ. ವರಮಾನ ಮತ್ತು ಲಾಭದ ಪ್ರಮಾಣ ಹೆಚ್ಚಿಸಲು ಇವರಿಬ್ಬರೂ ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಎಸಗಲು ಪ್ರೇರಣೆ ನೀಡಿದ್ದಾರೆ ಎಂದು ಸಂಸ್ಥೆಯ ನೌಕರರೇ ತಮ್ಮ ಹೆಸರು ಬಹಿರಂಗಪಡಿಸದೇ ಅಕ್ರಮ ಬಯಲಿಗೆ ಎಳೆದಿದ್ದಾರೆ. ಕಂಪನಿ ಅನುಸರಿಸುವ ಆಡಳಿತ ವಿಧಾನ ಮತ್ತು ಲೆಕ್ಕಪತ್ರ ವಿಧಾನಗಳ ಬಗ್ಗೆ ಆರು ವರ್ಷಗಳಲ್ಲಿ ಮೂರನೇ ಬಾರಿಗೆ ಮತ್ತೆ ಪ್ರಶ್ನೆಗಳು ಉದ್ಭವವಾಗಿವೆ.

ಸಲೀಲ್‌ ಪಾರೇಖ್
ಸಲೀಲ್‌ ಪಾರೇಖ್

ಕಂಪನಿಯು 2013ರಲ್ಲಿ ವೀಸಾ ವಂಚನೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ₹ 245 ಕೋಟಿ ಪಾವತಿಸಿ ವಿವಾದ ಇತ್ಯರ್ಥಪಡಿಸಿಕೊಂಡಿತ್ತು. 2017ರಲ್ಲಿ ಇಸ್ರೇಲ್‌ನ ಸಾಫ್ಟ್‌ವೇರ್‌ ಕಂಪನಿ ಪನಯಾ ಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದ ಆರೋಪಗಳು ಕೇಳಿ ಬಂದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ (ಸಿಎಫ್‌ಒ) ರಾಜೀವ್‌ ಬನ್ಸಲ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ಬಾಯಿ ಮುಚ್ಚಿಸಲು ದೊಡ್ಡ ಮೊತ್ತ ಪಾವತಿಸಲಾಗಿತ್ತು ಎನ್ನುವ ಆರೋಪವೂ ಕೇಳಿ ಬಂದಿತ್ತು.

ಈ ಆರೋಪಗಳಿಗೆ ಸಂಬಂಧಿಸಿದಂತೆ ದೋಷಮುಕ್ತರಾಗಿ ಹೊರ ಬರಲು ಕಂಪನಿಯ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರು ನಿರ್ದೇಶಕ ಮಂಡಳಿಗೆ ಒತ್ತಾಯಿಸಿದ್ದರು. ಕಂಪನಿಯ ಉದ್ಯೋಗಿಗಳು ಯಾವುದೇ ಪ್ರಮಾದ ಎಸಗಿಲ್ಲ ಎಂದು ಮೂರು ಪ್ರತ್ಯೇಕ ತನಿಖಾ ಸಮಿತಿಗಳು ವರದಿ ನೀಡಿದ್ದವು. ಸಹ ಸ್ಥಾಪಕರ ಜತೆಗಿನ ಭಿನ್ನಾಭಿಪ್ರಾಯದ ಫಲವಾಗಿ ಸಿಇಒ ವಿಶಾಲ್‌ ಸಿಕ್ಕಾ ತಮ್ಮ ಹುದ್ದೆ ತೊರೆದಿದ್ದರು.

ಸೂಕ್ಷ್ಮ ಮಾಹಿತಿಯನ್ನು ಲೆಕ್ಕತಪಾಸಿಗರು ಮತ್ತು ನಿರ್ದೇಶಕ ಮಂಡಳಿಯಿಂದ ಮುಚ್ಚಿಡಲಾಗಿದೆ. ದೊಡ್ಡ ಮೊತ್ತದ ಒಪ್ಪಂದಗಳಲ್ಲಿ ತಂತ್ರಗಾರಿಕೆಯಿಂದ ಅಕ್ರಮಗಳನ್ನು ಎಸಗಲಾಗಿದೆ. ದೊಡ್ಡ ಒಪ್ಪಂದಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಂಡಳಿಯ ಗಮನಕ್ಕೆ ತರದಂತೆ ಸಿಎಫ್‌ಒ ತಮ್ಮನ್ನು ನಿರ್ಬಂಧಿಸಿದ್ದಾರೆ ಎಂದೂ ಈ ಗುಂಪು ಆಪಾದಿಸಿದೆ. ಸಿಇಒ ಪಾರೇಖ್‌ ಅವರು ಹೆಚ್ಚಾಗಿ ಮುಂಬೈನಲ್ಲಿ ಕುಳಿತುಕೊಂಡೆ ಕೆಲಸ ನಿರ್ವಹಿಸುತ್ತಾರೆ ಎಂದೂ ಆರೋಪಿಸಲಾಗಿದೆ. ಮುಂಬೈ ದೇಶದ ವಾಣಿಜ್ಯ ರಾಜಧಾನಿ ಆಗಿರುವುದರಿಂದ ಈ ಆರೋಪದಲ್ಲಿ ಹೆಚ್ಚಿನ ಹುರುಳು ಇರಲಾರದು.

ವಿಶಾಲ್‌ ಸಿಕ್ಕಾ ಪ್ರಕರಣದಲ್ಲಿ ನಡೆದಿದ್ದ ಬೋರ್ಡ್‌ರೂಂ ಕಲಹ ಈ ಬಾರಿ ಕಂಡು ಬಂದಿಲ್ಲ. ದೂರುಗಳ ಸಂಬಂಧ ಕಂಪನಿಯ ಪ್ರವರ್ತಕರು ಇದುವರೆಗೂ ಮೌನ ಮುರಿದಿಲ್ಲ. 38 ವರ್ಷ ಹಳೆಯದಾದ ಕಂಪನಿಯಲ್ಲಿ ದೀರ್ಘ ಸಮಯದವರೆಗೆ ಸಹ ಸ್ಥಾಪಕರೇ ಸಿಇಒ ಹುದ್ದೆ ನಿಭಾಯಿಸುತ್ತ ಬಂದಿದ್ದರು. 2014ರಲ್ಲಿ ವೃತ್ತಿನಿರತರ ವಶಕ್ಕೆ ಒಪ್ಪಿಸಲಾಗಿತ್ತು. ಈ ವೃತ್ತಿ ನಿರತರ ತಂಡದ ಕಾರ್ಯವೈಖರಿಯು ಕಂಪನಿಯ ಪ್ರವರ್ತಕರಿಗೆ ಪಥ್ಯವಾಗಿರಲಿಲ್ಲ.

ಅಕ್ರಮಗಳು ನಡೆದಿರುವ ದೂರುಗಳ ಸಂಬಂಧದ ಸಾಕ್ಷ್ಯಾಧಾರಗಳು ಬಹಿರಂಗಗೊಂಡಿಲ್ಲ. ಈ ದೂರುಗಳ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಕಂಪನಿ ಭರವಸೆ ನೀಡಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ತನಿಖೆಗೆ ಚಾಲನೆ ನೀಡಿವೆ.

ದೂರುಗಳು ಕೇಳಿ ಬಂದಿರುವ ಪಾರೇಖ್‌ ಮತ್ತು ನೀಲಾಂಜನ ರಾಯ್‌ ಮಾತ್ರ ಇದುವರೆಗೂ ಬಾಯಿ ಬಿಟ್ಟಿಲ್ಲ. ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ಮತ್ತು ನಿರ್ದೇಶಕ ಮಂಡಳಿ ವಿರುದ್ಧದ ದೂರುಗಳು ಕೇಳಿ ಬಂದಾಗ ಆ ಬಗ್ಗೆ ದನಿ ಎತ್ತಿದ್ದ ಕಂಪನಿಯ ಸಹ ಸ್ಥಾಪಕರೂ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.

ತನಿಖೆಗೆ ಚಾಲನೆ: ಲಾಭ ಹೆಚ್ಚಿಸಲು ಕಂಪನಿಯ ಉನ್ನತ ಅಧಿಕಾರಿಗಳು ನಡೆಸಿರುವ ನ್ಯಾಯಬಾಹಿರ ವಿಧಾನಗಳ ಬಗ್ಗೆ ಅಮೆರಿಕದ ಷೇರುಪೇಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಕ್ಯುರಿಟೀಸ್‌ ಆ್ಯಂಡ್ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತನಿಖೆ ಆರಂಭಿಸಿವೆ. ತನಿಖೆಯಲ್ಲಿ ‘ಎಸ್‌ಇಸಿ’ಗೆ ಅಗತ್ಯ ಸಹಕಾರ ನೀಡುವುದಾಗಿಯೂ ‘ಸೆಬಿ’ ಭರವಸೆ ನೀಡಿದೆ.

ಅಮೆರಿಕದಲ್ಲಿನ ಹೂಡಿಕೆದಾರರಿಗೆ ಆಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಮೊಕದ್ದಮೆ ಹೂಡುವುದಾಗಿ ರೋಸನ್‌ ಲಾ ಫರ್ಮ್‌ ಮುಂದಾಗಿದೆ. ಅನಾಮಧೇಯ ದೂರುಗಳಲ್ಲಿನ ಸಾಮಾನ್ಯ ಸ್ವರೂಪದ ಆರೋಪಗಳನ್ನು ಆಧರಿಸಿ ಅಮೆರಿಕದ ಫೆಡರಲ್‌ ಕೋರ್ಟ್‌ನಲ್ಲಿ ‘ಸೆಕ್ಯುರಿಟಿಸ್‌ ಕ್ಲಾಸ್‌ ಆ್ಯಕ್ಷನ್‌’ ಮೊಕದ್ದಮೆ ದಾಖಲಿಸಲಾಗಿದೆ. ಲೆಕ್ಕಪತ್ರ ಅವ್ಯವಹಾರಗಳ ಬಗ್ಗೆ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರಕ್ಕೂ (ಎನ್‌ಎಫ್‌ಆರ್‌ಎ) ಕೇಳಿಕೊಂಡಿದೆ. ಅಮೆರಿಕ ಮತ್ತು ಭಾರತದಲ್ಲಿ ಕಾರ್ಪೊರೇಟ್‌ ಆಡಳಿತ ಮತ್ತು ಲೆಕ್ಕಪತ್ರ ಮಾನದಂಡಗಳು ಭಿನ್ನವಾಗಿವೆ. ಹೀಗಾಗಿ ತನಿಖೆ ಯಾವ ದಿಕ್ಕಿನಲ್ಲಿ ನಡೆಯಲಿದೆ, ಯಾವ ರೀತಿಯ ವರದಿ ಬರಲಿದೆ ಎನ್ನುವುದರ ಬಗ್ಗೆ ಹೂಡಿಕೆದಾರಲ್ಲಿ ಕುತೂಹಲ ಮನೆ ಮಾಡಿದೆ.

ವಿಶಾಲ್ ಸಿಕ್ಕಾ ಪ್ರಕರಣ

ಜರ್ಮನಿಯ ಸಾಫ್ಟ್‌ವೇರ್‌ ಸಂಸ್ಥೆ ಎಸ್ಎಪಿಯ (SAP) ತಂತ್ರಜ್ಞಾನ ಮುಖ್ಯಸ್ಥರಾಗಿದ್ದ ಸಿಕ್ಕಾ ಅವರು, ಸಿಇಒ ಎಸ್‌. ಡಿ. ಶಿಬುಲಾಲ್‌ ಅವರಿಂದ 2014ರ ಜೂನ್‌ 12 ರಂದು ಹೊಸ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಇಲ್ಲಿಂದ ಸಂಸ್ಥೆಯು ಸಹ ಸ್ಥಾಪಕರ ನಿಯಂತ್ರಣ ಕಳಚಿಕೊಂಡು ವೃತ್ತಿನಿರತರ ವಶಕ್ಕೆ ಹೋಗಿತ್ತು. ಇದು ಸಂಸ್ಥೆಯ ಇತಿಹಾಸದಲ್ಲಿ ಹೊಸ ಅಧ್ಯಾಯದ ಮುನ್ನುಡಿಯಾಗಿತ್ತು.

ವಹಿವಾಟು, ವರಮಾನ, ನಿವ್ವಳ ಲಾಭ ಹೆಚ್ಚಿಸಿ ಸಂಪತ್ತು ಸೃಷ್ಟಿಸುತ್ತಾರೆ ಎಂದು ಸಹ ಸ್ಥಾಪಕರು ಸಿಕ್ಕಾ ಅವರ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಿಕ್ಕಾ ಅವರು ಕೂಡ ಆ ನಿರೀಕ್ಷೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕಿದ್ದರು. ಅದೇ ಕಾರಣಕ್ಕೆ ಅವರ ಸೇವಾವಧಿಯನ್ನೂ ವಿಸ್ತರಿಸಲಾಗಿತ್ತು. ಆದರೆ, ಸಿಕ್ಕಾ ನೇತೃತ್ವದಲ್ಲಿನ ವೃತ್ತಿನಿರತ ನಿರ್ದೇಶಕ ಮಂಡಳಿಯು ನಂತರದ ದಿನಗಳಲ್ಲಿ ಕೈಗೊಂಡ ಹಲವಾರು ನಿರ್ಧಾರಗಳು ಪ್ರವರ್ತಕರಿಗೆ ಪಥ್ಯವಾಗಿರಲಿಲ್ಲ. ಸಿಕ್ಕಾ ಕುರಿತು ಆರಂಭದಲ್ಲಿನ ಶ್ಲಾಘನೆ, ಅಭಿಮಾನವು ಮೂರೇ ವರ್ಷಗಳಲ್ಲಿ ಟೀಕೆಯಾಗಿ ಪರಿವರ್ತನೆಗೊಂಡಿತ್ತು. ತಮ್ಮದೇ ಆದ ಮಾರ್ಗದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಮುಂದಾದ ಸಿಕ್ಕಾ ಅವರು ನಾರಾಯಣಮೂರ್ತಿ ಅವರಿಂದಲೇ ತೀವ್ರ ಟೀಕೆಗೆ ಗುರಿಯಾಗಿ ಸಂಸ್ಥೆಯಿಂದ ಹೊರ ನಡೆಯಬೇಕಾಯಿತು.

ವಿಷಲ್‌ಬ್ಲೋವರ್ ರಕ್ಷಣೆ

ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ದನಿ ಎತ್ತುವ ಮತ್ತು ಅವುಗಳನ್ನು ಬಯಲಿಗೆ ಎಳೆಯುವವರ ರಕ್ಷಣೆಗೆ 2014ರಲ್ಲಿಯೇ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ಅದು ಇನ್ನೂ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ಭ್ರಷ್ಟಾಚಾರ ಬಯಲಿಗೆ ಎಳೆಯುವವರ ರಕ್ಷಣೆಗೆ ಮಸೂದೆಯಲ್ಲಿ ಹೆಚ್ಚು ಕಾಳಜಿವಹಿಸಿಲ್ಲ ಎನ್ನುವ ಟೀಕೆಗೆ ಗುರಿಯಾಗಿದೆ.

ಬಿಹಾರದಲ್ಲಿ ನಡೆದಿದ್ದ ಹೆದ್ದಾರಿ ನಿರ್ಮಾನ ಯೋಜನೆಯಲ್ಲಿ ಭ್ರಷ್ಟಚಾರ ನಡೆದಿರುವುದನ್ನು 2003ರಲ್ಲಿ ಬಯಲಿಗೆ ಎಳೆದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಸತ್ಯೇಂದ್ರ ದುಬೆ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇವರ ಸಾವಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಬಯಲಿಗೆ ಎಳೆಯುವವರ ರಕ್ಷಣೆಗೆ ಕಾಯ್ದೆ ರೂಪಿಸುವ ಕೂಗು ಕೇಳಿ ಬಂದಿತ್ತು.

‘ಸೆಬಿ’ ಕ್ರಮ

ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರ ಅಥವಾ ನ್ಯಾಯ ಬಾಹಿರ ವಿಧಾನಗಳು ಬಹಿರಂಗಗೊಳ್ಳುವುದಕ್ಕೆ ಅಕ್ರಮಗಳನ್ನು ಬಯಲಿಗೆ ಎಳೆಯುವವರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರ ದೂರುಗಳನ್ನು ದಾಖಲಿಸಿಕೊಳ್ಳಲು ವ್ಯವಸ್ಥೆ ಇರಬೇಕು ಎಂದು ‘ಸೆಬಿ’ ನಿಯಮಗಳನ್ನು ರೂಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT