ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂನ್‌ಲೈಟಿಂಗ್‌: ನೌಕರರಿಗೆ ಇನ್ಫಿ ಎಚ್ಚರಿಕೆ

Last Updated 13 ಸೆಪ್ಟೆಂಬರ್ 2022, 14:10 IST
ಅಕ್ಷರ ಗಾತ್ರ

ನವದೆಹಲಿ: ತನ್ನ ನೌಕರರಿಗೆ ಪತ್ರವೊಂದನ್ನು ರವಾನಿಸಿರುವ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್, ಎರಡು ಕಡೆ ಕೆಲಸ ಮಾಡುವುದಕ್ಕೆ (ಮೂನ್‌ಲೈಟಿಂಗ್) ಕಂಪನಿಯ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಗುತ್ತಿಗೆ ಒಪ್ಪಂದವನ್ನು ಉಲ್ಲಂಘಿಸಿದರೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಶಿಸ್ತು ಕ್ರಮ ಅಂದರೆ ನೌಕರಿಯಿಂದ ವಜಾಗೊಳಿಸುವುದೂ ಸೇರಿದೆ ಎಂದು ಇನ್ಫೊಸಿಸ್ ಎಚ್ಚರಿಕೆ ನೀಡಿದೆ.

ನೌಕರರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಕೆಲಸ ಮಾಡುವುದನ್ನು ಮೂನ್‌ಲೈಟಿಂಗ್ ಎಂದು ಗುರುತಿಸಲಾಗಿದೆ. ‘ನೌಕರರ ನೀತಿ ಸಂಹಿತೆ ಪ್ರಕಾರ ಎರಡು ಕಡೆ ನೌಕರಿ ಮಾಡಲು ಅವಕಾಶ ಇಲ್ಲ’ ಎಂದು ಇನ್ಫೊಸಿಸ್‌ನ ಆಂತರಿಕ ಪತ್ರವು ಹೇಳಿದೆ. ಈ ಕುರಿತು ಪ್ರತಿಕ್ರಿಯೆ ಕೋರಿ ಇನ್ಫೊಸಿಸ್‌ಗೆ ಕಳುಹಿಸಿದ ಇ–ಮೇಲ್‌ಗೆ ಉತ್ತರ ಬಂದಿಲ್ಲ.

‘ಮೂನ್‌ಲೈಟಿಂಗ್ ಅಂದರೆ ಕೆಲಸದ ಅವಧಿಯಲ್ಲಿ ಅಥವಾ ಕೆಲಸದ ಅವಧಿಯ ನಂತರದಲ್ಲಿ ಇನ್ನೊಂದು ಕಡೆ ಕೆಲಸ ಮಾಡುವುದು. ಇಂತಹ ಪ್ರವೃತ್ತಿಯನ್ನು ಇನ್ಫೊಸಿಸ್‌ ಪ್ರೋತ್ಸಾಹಿಸುವುದಿಲ್ಲ’ ಎಂದು ನೌಕರರಿಗೆ ಕಂಪನಿಯು ಹೇಳಿದೆ.

ಮೂನ್‌ಲೈಟಿಂಗ್ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆದಿವೆ, ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ, ಕಾನೂನು ಪ್ರಶ್ನೆಗಳು ಕೂಡ ಉದ್ಭವಿಸಿವೆ.

ವಿಪ್ರೊ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಅವರು ಮೂನ್‌ಲೈಟಿಂಗ್ಅನ್ನು ‘ಮೋಸ ಮಾಡುವುದು’ ಎಂದು ಕರೆದ ನಂತರದಲ್ಲಿ, ಇದು ಚರ್ಚೆಯ ವಸ್ತುವಾಗಿದೆ.

ಇನ್ಫೊಸಿಸ್‌ ರವಾನಿಸಿರುವ ಪತ್ರಕ್ಕೆ ಪುಣೆ ಮೂಲದ, ಐ.ಟಿ. ಉದ್ಯೋಗಿಗಳ ಸಂಘ ಎನ್‌ಐಟಿಇಎಸ್‌ ವಿರೋಧ ವ್ಯಕ್ತಪಡಿಸಿದೆ. ‘ಇದು ಬೆದರಿಸುವ ಇ–ಮೇಲ್’ ಎಂದು ಹೇಳಿದೆ. ವಾಸ್ತವದಲ್ಲಿ ಮೂನ್‌ಲೈಟಿಂಗ್‌ನಲ್ಲಿ ತೊಡಗಲು ಆಗುವುದಿಲ್ಲ ಎಂದು ಅದು ಹೇಳಿದೆ. ‘ಯಾವುದೇ ಕಂಪನಿ ಸೇರಲು ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಕಡ್ಡಾಯ. ಆಧಾರ್ ಸಂಖ್ಯೆಯು ಪಿಎಫ್ ಖಾತೆಗೆ ಜೋಡಣೆ ಆಗಿರುತ್ತದೆ. ಎರಡು ಕಂಪನಿಗಳು ಒಂದೇ ವ್ಯಕ್ತಿಗೆ ಒಂದೇ ತಿಂಗಳಿನಲ್ಲಿ ಪಿಎಫ್‌ ವಂತಿಗೆ ನೀಡಲು ಸಾಧ್ಯವಿಲ್ಲ’ ಎಂದು ಸಂಘದ ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲುಜಾ ಹೇಳಿದ್ದಾರೆ.

‘ಕೆಲಸದ ಅವಧಿಯ ನಂತರದಲ್ಲಿ ನೌಕರರು ಏನು ಮಾಡುತ್ತಾರೆ ಎಂಬುದು ಅವರ ಪರಮಾಧಿಕಾರ’ ಎಂದು ಕೂಡ ಸಂಘ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT