ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಪೊಸಿಸ್‌:ತನಿಖೆಗೆ ಚಾಲನೆ ನೀಡಿದ ಅಮೆರಿಕದ ಷೇರು ನಿಯಂತ್ರಣ ಸಂಸ್ಥೆ

Last Updated 24 ಅಕ್ಟೋಬರ್ 2019, 19:23 IST
ಅಕ್ಷರ ಗಾತ್ರ

ನವದೆಹಲಿ: ಲಾಭ ಹೆಚ್ಚಿಸಲು ಕಂಪನಿಯ ಉನ್ನತ ಅಧಿಕಾರಿಗಳು ನಡೆಸಿರುವ ನ್ಯಾಯಬಾಹಿರ ವಿಧಾನಗಳ ಬಗ್ಗೆ ಅಮೆರಿಕದ ಷೇರುಪೇಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಕ್ಯುರಿಟೀಸ್‌ ಆ್ಯಂಡ್ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ತನಿಖೆ ಆರಂಭಿಸಿದೆ.

ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಿರುವುದರ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೆಚ್ಚುವರಿ ಮಾಹಿತಿ ಒದಗಿಸುವಂತೆಯೂ ಸಂಸ್ಥೆಗೆ ಕೇಳಿಕೊಂಡಿದೆ.

ಅಕ್ರಮಗಳನ್ನು ಬಯಲಿಗೆ ಎಳೆದಿರುವ ಅನಾಮಧೇಯರಿಂದ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಕಂಪನಿಯು ‘ಎಸ್‌ಇಸಿ’ಯ ಸಂಪರ್ಕದಲ್ಲಿ ಇದೆ. ‘ಎಸ್‌ಇಸಿ’ ಆರಂಭಿಸಿರುವ ತನಿಖೆಗೆ ಕಂಪನಿಯು ಎಲ್ಲ ಸಹಕಾರ ನೀಡಲಿದೆ. ‘ಸೆಬಿ’ ಕೇಳಿರುವ ಹೆಚ್ಚುವರಿ ಮಾಹಿತಿಯನ್ನೂ ಒದಗಿಸಲಾಗಿದೆ ಎಂದು ಇನ್ಫೊಸಿಸ್‌ ಹೇಳಿಕೆಯಲ್ಲಿ ತಿಳಿಸಿದೆ.

ಅನಾಮಧೇಯ ದೂರುಗಳಲ್ಲಿನ ಸಾಮಾನ್ಯ ಸ್ವರೂಪದ ಆರೋಪಗಳನ್ನು ಆಧರಿಸಿ ಅಮೆರಿಕದ ಫೆಡರಲ್‌ ಕೋರ್ಟ್‌ನಲ್ಲಿ ‘ಸೆಕ್ಯುರಿಟಿಸ್‌ ಕ್ಲಾಸ್‌ ಆ್ಯಕ್ಷನ್‌’ ಮೊಕದ್ದಮೆ ದಾಖಲಿಸಿರುವ ಬಗ್ಗೆಯೂ ತನಗೆ ಮಾಹಿತಿ ಇದೆ. ಈ ಪ್ರಕರಣದಲ್ಲಿ ಕಂಪನಿಯು ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲಿದೆ ಎಂದು ತಿಳಿಸಿದೆ. ಅಮೆರಿಕದಲ್ಲಿನ ಹೂಡಿಕೆದಾರರಿಗೆ ಆಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಮೊಕದ್ದಮೆ ಹೂಡುವುದಾಗಿ ರೋಸನ್‌ ಲಾ ಫರ್ಮ್‌ ಈ ಮೊದಲೇ ಪ್ರಕಟಿಸಿತ್ತು.

ಕೇಂದ್ರ ಸರ್ಕಾರದ ಕ್ರಮ: ಲೆಕ್ಕಪತ್ರ ಅವ್ಯವಹಾರಗಳ ಬಗ್ಗೆ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರಕ್ಕೆ (ಎನ್‌ಎಫ್‌ಆರ್‌ಎ) ಕೇಳಿಕೊಂಡಿದೆ.

ಲೆಕ್ಕಪತ್ರ ತಪಾಸಣೆ ವೃತ್ತಿಗೆ ಸಂಬಂಧಿಸಿದ ಸ್ವತಂತ್ರ ನಿಯಂತ್ರಣ ಸಂಸ್ಥೆಯಾಗಿರುವ ಈ ಪ್ರಾಧಿಕಾರವು, ಕಂಪನಿ ವ್ಯವಹಾರಗಳಡಿ ಕಾರ್ಯನಿರ್ವಹಿಸುತ್ತದೆ.

ಷೇರುಬೆಲೆ ಕುಸಿತ: ‘ಸೆಬಿ’ ಮತ್ತು ಅಮೆರಿಕದ ‘ಎಸ್‌ಇಸಿ’ ತನಿಖೆ ಆರಂಭಿಸಿರುವುದರಿಂದ ಷೇರುಪೇಟೆಯ ಗುರುವಾರದ ವಹಿವಾಟಿನಲ್ಲಿ ಕಂಪನಿಯ ಷೇರುಬೆಲೆ ಶೇ 2.36ರಷ್ಟು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT