ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿಸುವುದೇ ವಿಮೆಯ ಗುರಿಯಲ್ಲ

Last Updated 2 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ನಮಗೆ ಬಹತೇಕ ಎಲ್ಲರೂ ನೀಡುವ ಮೊದಲ ಸಲಹೆ ಎಂದರೆ, ‘ಈಗಿನಿಂದಲೇ ಉಳಿತಾಯ ಆರಂಭಿಸಿ, ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ಹೂಡಿಕೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ’ ಎಂದು. ಹೂಡಿಕೆ ಅಥವಾ ಉಳಿತಾಯದ ಯೋಚನೆ ಮಾಡುತ್ತಿದ್ದಂತೆ ನಮ್ಮ ತಲೆಯೊಳಗೆ ಸುಳಿಯುವ ಮೊದಲ ವಿಚಾರವೆಂದರೆ ತೆರಿಗೆ ಉಳಿಸುವುದು. ಜೀವವಿಮೆಯು ತೆರಿಗೆ ಉಳಿಸುವ ನಿಟ್ಟಿನಲ್ಲಿ ಅತ್ಯುತ್ತಮ ಹೂಡಿಕಾ ಉತ್ಪನ್ನವಾಗಿದೆ. ಆದ್ದರಿಂದ ಸಹಜವಾಗಿ ಹೆಚ್ಚಿನವರು ಈ ವಿಧಾನವನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಶೇ 40ರಷ್ಟು ಜೀವವಿಮೆಗಳು ಜನವರಿಯಿಂದ ಮಾರ್ಚ್‌ ಒಳಗಿನ ಅವಧಿಯಲ್ಲೇ ಮಾರಾಟವಾಗುತ್ತವೆ ಎಂಬುದು ಮೇಲಿನ ಮಾತಿಗೆ ಸಾಕ್ಷಿ.

ಉಳಿದೆಲ್ಲ ಹೂಡಿಕೆಗಳ ಗುರಿ ತೆರಿಗೆ ಉಳಿಸುವುದು ಮತ್ತು ಸಂಪತ್ತನ್ನು ವೃದ್ಧಿಸುವುದಾಗಿದ್ದರೆ, ಜೀವ ವಿಮೆಯ ಉದ್ದೇಶ ಇದಕ್ಕೆ ಭಿನ್ನವಾದುದಾಗಿದೆ. ಇಲ್ಲಿ ತೆರಿಗೆ ಉಳಿತಾಯ ಮೊದಲ ಆದ್ಯತೆಯಲ್ಲ. ಅದು ಹೆಚ್ಚುವರಿಯಾಗಿ ಲಭಿಸುವ ಸೌಲಭ್ಯ ಅಷ್ಟೇ. ಹಾಗಿದ್ದರೆ ವಿಮೆಯ ಉದ್ದೇಶವೇನು?

ಆರ್ಥಿಕ ಭದ್ರತೆ
ಕುಟುಂಬದ ಆರ್ಥಿಕ ಭದ್ರತೆಯೇ ಜೀವವಿಮೆಯ ಉದ್ದೇಶ. ದುಡಿಯುವ ವ್ಯಕ್ತಿಗೆ ಏನಾದರೂ ಅಪಾಯ ಸಂಭವಿಸಿದರೆ ಕುಟುಂಬದ ಜೀವನಶೈಲಿಗೆ ಧಕ್ಕೆಯಾಗಬಾರದು. ಕುಟುಂಬದವರಿಗೆ ಆರ್ಥಿಕ ಮುಗ್ಗಟ್ಟು ಬರಬಾರದು ಎಂಬುದು ಜೀವ ವಿಮೆಯ ಮೂಲ ಉದ್ದೇಶ. ದುಡಿಯುವ ವ್ಯಕ್ತಿಯ ನಿಧನದಿಂದ ಆದ ನಷ್ಟವನ್ನು ಯಾರಿಂದಲೂ ಭರಿಸಲಾಗದು. ಆದರೆ, ಕುಟುಂಬದವರು ಕಂಡಿದ್ದ ಕನಸುಗಳು ಛಿದ್ರವಾಗದಂತೆ ವಿಮೆಯು ಭದ್ರತೆ ಒದಗಿಸಬಲ್ಲದು. ಜೀವ ವಿಮಾ ಯೋಜನೆಗಳ ಕಂತಿನ ಪ್ರಮಾಣಗಳು ಬೇರೆಬೇರೆ ಇರಬಹುದು. ಆದರೆ, ಉದ್ದೇಶ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದೇ ಆಗಿರುತ್ತದೆ.

ದೀರ್ಘಾವಧಿ ಉದ್ದೇಶ ಈಡೇರಿಕೆ
ಜೀವವಿಮೆಯಲ್ಲಿ ತೆರಿಗೆ ಉಳಿತಾಯ ಎಂಬುದು ತಾತ್ಕಾಲಿಕವಾದ ಲಾಭ. ವಿಮೆಯ ಒಟ್ಟಾರೆ ಲಾಭ ತಿಳಿಯುವುದು ದೀರ್ಘಾವಧಿಯಲ್ಲಿ. ಈ ವಿಚಾರವನ್ನು ಮನಗಂಡಾಗ ಮಾತ್ರ ವಿಮೆಯ ಮೌಲ್ಯವೇನು, ಅದರ ಅಗತ್ಯವೇನು ಎಂಬುದು ಅರ್ಥವಾಗುತ್ತದೆ. ದೀರ್ಘಾವಧಿಯವರೆಗೆ ವಿಮೆಯಲ್ಲಿ ಹೂಡಿಕೆ ಮಾಡುತ್ತಾ ಹೋದರೆ ಮಕ್ಕಳ ಶೈಕ್ಷಣಿಕ ವೆಚ್ಚ, ನಿವೃತ್ತಿ ಯೋಜನೆ ಮುಂತಾಗಿ ಜೀವನದಲ್ಲಿ ನಿಗದಿಮಾಡಿದ್ದ ಗುರಿಗಳು, ಕನಸುಗಳು ನನಸಾಗುತ್ತಾ ಹೋಗುವುದನ್ನು ಕಾಣಬಹುದು.

ಅಗತ್ಯಕ್ಕೆ ತಕ್ಕಂಥ ಯೋಜನೆ ಇರಲಿ
ನಿವೃತ್ತಿಯ ನಂತರದ ಅಗತ್ಯಗಳು, ಮಕ್ಕಳ ಶಿಕ್ಷಣ, ಯುಲಿಪ್‌... ಹೀಗೆ ಬೇರೆ ಬೇರೆ ವಯೋಮಾನದವರ ಅಗತ್ಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಎಲ್ಲ ವಯೋಮಾನದವರ ಅಗತ್ಯಗಳನ್ನು ಈಡೇರಿಸುವ ವಿಮೆ ಉತ್ಪನ್ನಗಳು ಈಗ ಲಭ್ಯ ಇವೆ. ನಮ್ಮ ಅಗತ್ಯವನ್ನು ಅರಿತು, ಅದಕ್ಕೆ ತಕ್ಕಂತಹ ಉತ್ಪನ್ನದಲ್ಲಿ ಹೂಡಿಕೆ ಮಾಡಬೇಕು ಅಷ್ಟೇ.

2018–19ರ ಆರ್ಥಿಕ ವರ್ಷ ಮುಗಿದಿದೆ. ತೆರಿಗೆ ಉಳಿತಾಯವನ್ನೇ ಮುಂದಿಟ್ಟುಕೊಂಡು ಅನೇಕರು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಹೂಡಿಕೆ ಮಾಡಿರಬಹುದು. ಮುಂದಿನ ಬಾರಿ ಯಾವುದೇ ವಿಮೆ ಉತ್ಪನ್ನದಲ್ಲಿ ಹೂಡಿಕೆ ಮಾಡುವ ಮುನ್ನ ನಿಮ್ಮ ಜೀವನದ ಮೌಲ್ಯವನ್ನು ಅರಿಯಿರಿ. ತೆರಿಗೆ ಉಳಿತಾಯದ ಜೊತೆಗೆ ಮಕ್ಕಳ ಶಿಕ್ಷಣ, ನಿವೃತ್ತಿಯ ನಂತರದ ಜೀವನ, ಸಂಪತ್ತು ವೃದ್ಧಿಸುವುದೇ ಮುಂತಾದ ಭವಿಷ್ಯದ ಅಗತ್ಯಗಳನ್ನೂ ಗಮನದಲ್ಲಿಟ್ಟು ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಆದ್ಯತೆಯಾಗಲಿ.

ಕುಟುಂಬದ ಆರ್ಥಿಕ ಭದ್ರತೆಯು ತೆರಿಗೆ ಉಳಿತಾಯಕ್ಕಿಂತ ಮುಖ್ಯವಾದ ಉದ್ದೇಶ ಎಂಬುದನ್ನು ಮರೆಯಬಾರದು. ವಿಮೆಯಲ್ಲಿ ಮಾಡಿರುವ ಹೂಡಿಕೆಯ ಗರಿಷ್ಠ ಲಾಭ ಸಿಗಬೇಕಾದರೆ ಜೀವ ವಿಮೆ ಮಾಡಿಸುವ ವೇಳೆಗೆ ನಿಮಗೆ ನಿಮ್ಮ ಉದ್ದೇಶದ ಸ್ಪಷ್ಟ ಅರಿವು ಇರುವುದು ಮುಖ್ಯ. ಹೆಚ್ಚುವರಿ ಲಾಭದ ರೂಪದಲ್ಲಿ ತೆರಿಗೆ ಉಳಿತಾಯ ಆಗಿಯೇ ಆಗುತ್ತದೆ.

(ಲೇಖಕ: ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ನ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT