ಹಿಗ್ಗಲಿರುವ ಬಜೆಟ್‌ ಗಾತ್ರ

7

ಹಿಗ್ಗಲಿರುವ ಬಜೆಟ್‌ ಗಾತ್ರ

Published:
Updated:

ನವದೆಹಲಿ: ಬಜೆಟ್‌ನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡವಾರು ಪ್ರಮಾಣವನ್ನು ತಗ್ಗಿಸುವ ವಾಗ್ದಾನ ಕೈಬಿಡಲು ನಿರ್ಧರಿಸಿರುವ ಕೇಂದ್ರ ಸರ್ಕಾರವು, ಮಧ್ಯಂತರ ಬಜೆಟ್‌ ಗಾತ್ರವನ್ನು ಹಿಗ್ಗಿಸಲು ಮುಂದಾಗಿದೆ.

ಚುನಾವಣೆ ಹೊತ್ತಿನಲ್ಲಿ ಲೇಖಾನುದಾನ ಪಡೆಯುವ ಸಂಪ್ರದಾಯ ಕೈಬಿಟ್ಟು ಮಧ್ಯಂತರ ಬಜೆಟ್‌ ಮಂಡಿಸುವ ನಿರ್ಧಾರಕ್ಕೆ ಬಂದಿದೆ. ಕೃಷಿ, ನವೋದ್ಯಮಗಳಿಗೆ ಕೊಡುಗೆ, ಮಹಿಳೆ ಮತ್ತು ಯುವ ಜನಾಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಗರಿಷ್ಠ ಅನುದಾನ ನೀಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೃಷಿ ವಲಯದ ಪರಿಹಾರ ಕೊಡುಗೆ ರೂಪದಲ್ಲಿ ₹ 1.25 ಲಕ್ಷ ಕೋಟಿ, ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಲು ₹ 200 ಕೋಟಿವರೆಗೆ ಕೊಡುಗೆ ಇರಲಿದೆ. ಕೃಷಿ ವಲಯದ ಕೊಡುಗೆಯು ರೈತರ ಖಾತೆಗೆ ನೇರ ಹಣ ವರ್ಗಾವಣೆ, ಸಣ್ಣ ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯಗಳನ್ನೂ ಒಳಗೊಂಡಿರಲಿದೆ.

‘ನರೇಗಾ’ಗೆ ವಿಶೇಷ ಆದ್ಯತೆ ಒಳಗೊಂಡ ಗ್ರಾಮೀಣ ಅಭಿವೃದ್ಧಿ ಮತ್ತು ರೈಲ್ವೆಯ ವಾರ್ಷಿಕ ಅನುದಾನ ಹೆಚ್ಚಳಗೊಳ್ಳಲಿದೆ. ಈ ಹಿಂದೆ ಯಾವತ್ತೂ ಮಂಡಿಸದ ರೀತಿಯಲ್ಲಿ ಈ ಮಧ್ಯಂತರ ಬಜೆಟ್‌ನ ಸ್ವರೂಪವು ಇರಲಿದೆ. ‘ಆರ್ಥಿಕತೆಯ ಹಿತಾಸಕ್ತಿ ದೃಷ್ಟಿಯಿಂದ ಮಧ್ಯಂತರ ಬಜೆಟ್‌ ಮಂಡಿಸಲಾಗುವುದು’ ಎಂದು ಹೇಳಿರುವ ಅರುಣ್‌ ಜೇಟ್ಲಿ ಅವರ ಆಶಯಕ್ಕೆ ಪೂರಕವಾಗಿ ಬಜೆಟ್‌ನ ಸ್ವರೂಪ ಇರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2013 ರಿಂದ 2018ರವರೆಗೆ ಪ್ರತಿ ವರ್ಷ ಬಜೆಟ್‌ನ ಜಿಡಿಪಿಯ ಶೇಕಡ ಗಾತ್ರವನ್ನು ಶೇ 14.2ರಿಂದ ಶೇ 12.7ಕ್ಕೆ ಇಳಿಸಲಾಗಿದೆ. 2019–20ರಲ್ಲಿಯೂ ಈ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇತ್ತು.

ಮತದಾರರನ್ನು ಓಲೈಸಲು ತೀರ್ಮಾನಿಸಿರುವ ಎನ್‌ಡಿಎ ಸರ್ಕಾರ, ನಿಯಮಗಳನ್ನು ಗಾಳಿಗೆ ತೂರಿ, ತನ್ನ ವಾಗ್ದಾನ ಕೈಬಿಟ್ಟು ಅನೇಕ ಕೊಡುಗೆಗಳನ್ನು ನೀಡಲು ಬಜೆಟ್‌ನ ಗಾತ್ರ ಹಿಗ್ಗಿಸಲು ತೀರ್ಮಾನಿಸಿದೆ.

ಸಾರ್ವತ್ರಿಕ ಚುನಾವಣಾ ವರ್ಷದಲ್ಲಿ, ಏಪ್ರಿಲ್‌ 1ರಿಂದ ಆರಂಭವಾಗುವ ಹೊಸ ಹಣಕಾಸು ವರ್ಷದ ಆರಂಭದಿಂದ ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಅವಧಿವರೆಗಿನ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವುದು ಸಂಪ್ರದಾಯವಾಗಿದೆ. ಇಂತಹ ಲೇಖಾನುದಾನಕ್ಕೆ ಲೋಕಸಭೆಯು ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ನೀಡುತ್ತದೆ.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !