ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರೇ ಹೂಡಿಕೆಯ ಮೊದಲ ಹೆಜ್ಜೆ ಆರಂಭಿಸಿ

Last Updated 10 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹೂಡಿಕೆ ಮುಂತಾಗಿ ಕುಟುಂಬದ ಆರ್ಥಿಕ ವಿಚಾರಗಳ ನಿರ್ವಹಣೆಯನ್ನು ಪುರುಷರೇ ಮಾಡುವುದು ನಮ್ಮಲ್ಲಿ ಸಂಪ್ರದಾಯ. ಉದ್ಯೋಗಿ ಮಹಿಳೆಯರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿರುವುದರಿಂದ, ಹೂಡಿಕೆ ವಿಚಾರದಲ್ಲಿ ಅವರೂ ಸಮಾನ ಜವಾಬ್ದಾರಿ ಹೊರಲು ಆರಂಭಿಸಿದ್ದಾರೆ. ವರ್ಷಗಳು ಕಳೆದಂತೆ ಹೊಸ ತಲೆಮಾರಿನ ಮಹಿಳೆಯರು (ಮಿಲೇನಿಯಲ್ಸ್‌) ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕ್ಕೆ ಬಂದಿದ್ದಾರೆ. ಈ ತಲೆಮಾರಿನವರು ಹೆಚ್ಚು ಸ್ವಾತಂತ್ರ್ಯದಿಂದ ಬೆಳೆದವರು. ಹೆಚ್ಚು ಮಹತ್ವಾಕಾಂಕ್ಷೆ ಉಳ್ಳವರು. ಅಷ್ಟೇ ಅಲ್ಲ, ತಾವು ಸಂಪಾದಿಸಿದ ಹಣದ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿದವರಾಗಿದ್ದಾರೆ.

ಇಂತಹ ಮಹಿಳೆಯರು ಈಗ ತಮ್ಮ ಮತ್ತು ಕುಟುಂಬದ ನಿರ್ಧಾರ ಕೈಗೊಳ್ಳುವ ವಿಚಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದಾರೆ. ವೈಯಕ್ತಿಕ ಹಣಕಾಸಿನ ವಿಚಾರದಲ್ಲಿ ಹೆಚ್ಚು ತಿಳಿವಳಿಕೆ ಹೊಂದಿರುವ ಅವರು, ಹೂಡಿಕೆಯ ವಿಚಾರದಲ್ಲೂ ಸ್ವತಂತ್ರ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ.

‘ಹೂಡಿಕೆಯ ಉದ್ದೇಶವಿಲ್ಲದ ಮಹಿಳೆಯು ಗಮ್ಯ ಸ್ಥಾನವೇ ಇಲ್ಲದ ಪ್ರವಾಸಿಗ ಇದ್ದಂತೆ’ ಎಂಬ ಮಾತಿದೆ. ದೇಶದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕ ಸ್ವಾತಂತ್ರ್ಯದ ವಿಚಾರದಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾದ ಸಮಯ ಈಗ ಬಂದಿದೆ.

ತಮ್ಮ ಬಳಿಯಲ್ಲಿ ಎಷ್ಟು ಹಣ ಇದೆ ಎಂಬುದೇ ‘ಆರ್ಥಿಕ ಸ್ವಾತಂತ್ರ್ಯ’ದ ವ್ಯಾಖ್ಯಾನ ಅಲ್ಲ. ಬದಲಿಗೆ, ಇರುವ ಹಣದಲ್ಲೇ ಸರಿಯಾದ ತೀರ್ಮಾನ ಕೈಗೊಳ್ಳುವುದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೂಡಿಕಾ ಉತ್ಪನ್ನಗಳು ಮತ್ತು ಅವುಗಳ ಸಂಕೀರ್ಣತೆಯನ್ನು ನೋಡಿದರೆ ಹೂಡಿಕೆಯ ವಿಚಾರದಲ್ಲಿ ಮಹಿಳೆ ಹೆಚ್ಚು ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ.

ಮಹಿಳಾ ಹೂಡಿಕೆದಾರರು ಪುರುಷ ಹೂಡಿಕೆದಾರರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ ಎಂಬ ವಾದವಿದೆ. ಅವರು ಯಾವ ಹೂಡಿಕಾ ವಿಧಾನವನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಇದು ಅವಲಂಬಿಸಿರುತ್ತದೆ. ಅಪಾಯಗಳನ್ನು ಎದುರುಹಾಕಿಕೊಳ್ಳುವ ವಿಚಾರದಲ್ಲಿ ಮಹಿಳೆಯರು ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ಅಂದರೆ, ಅವರು ಹೆಚ್ಚು ಆಕ್ರಮಣಕಾರಿ ಹೂಡಿಕೆಯ ಗೋಜಿಗೆ ಹೋಗುವುದಿಲ್ಲ.

ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬ ಮಹಿಳೆಯರ ಇಚ್ಛೆಗೆ ಪೂರಕವೆಂಬಂತೆ ಬ್ಯಾಂಕಿಂಗ್‌, ಹಣಕಾಸು ಸೇವೆ ಹಾಗೂ ವಿಮಾ ಕ್ಷೇತ್ರದ (ಬಿಎಫ್‌ಎಸ್ಐ) ಸಂಸ್ಥೆಗಳು ಮಹಿಳಾ ಕೇಂದ್ರಿತ ಯೋಜನೆಗಳನ್ನು ರೂಪಿಸಿ, ಅವುಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಇಂತಹ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುವುದಕ್ಕೂ ಮುನ್ನ, ಪ್ರಮುಖವಾದ ಐದು ಅಂಶಗಳತ್ತ ಗಮನ ಹರಿಸುವುದು ಅಗತ್ಯ.

ಸರಿಯಾದ ನಿರ್ಧಾರ ಕೈಗೊಳ್ಳುವುದು
ಆರ್ಥಿಕ ಸ್ವಾತಂತ್ರ್ಯ ಹೊಂದಬೇಕು ಎಂಬುದು ಒಳ್ಳೆಯ ವಿಚಾರ. ಆದರೆ, ಆರಂಭಿಸಿದ ಹೂಡಿಕೆಯ ಉದ್ದೇಶಕ್ಕೆ ದೀರ್ಘಕಾಲದವರೆಗೆ ಬದ್ಧರಾಗಿರುವುದು ಹೆಚ್ಚು ಅಗತ್ಯ. ಆರ್ಥಿಕ ಗುರಿ ಸಾಧಿಸುವ ಉದ್ದೇಶಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು. ಇಂತಹ ಹಣಕಾಸಿನ ಹಾದಿಯಲ್ಲಿ ಅಡೆತಡೆಗಳು ನುರಾರು ಇರುತ್ತವೆ. ಅವು ಆರ್ಥಿಕ ಸ್ವಾತಂತ್ರ್ಯದ ಉದ್ದೇಶ ಸಾಧನೆಯನ್ನು ವಿಳಂಬ ಮಾಡಬಲ್ಲವು.

ಭಾವುಕತೆ ಬೇಡ
ಹೂಡಿಕೆಯ ಸಂದರ್ಭದಲ್ಲಿ ಭಾವುಕತೆಯನ್ನು ನಿಯಂತ್ರಿಸುವುದು ಮುಖ್ಯ. ಕಡಿಮೆ ಮೊತ್ತವೇ ಆಗಿದ್ದರೂ ಬೇರೆ ಬೇರೆ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದರಿಂದ ಒಳ್ಳೆಯ ನಿಧಿಯನ್ನು ಕ್ರೋಡೀಕರಿಸಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಚಿನ್ನದಂಥ ಭೌತಿಕ ವಸ್ತುವಿನಲ್ಲಿ ಹೂಡಿಕೆ ಮಾಡುವುದರಿಂದ ಸೀಮಿತ ಉದ್ದೇಶವನ್ನಷ್ಟೇ ಸಾಧಿಸಬಹುದು. ‘ಆಭರಣ’ ಎಂಬುದನ್ನು ಬಿಟ್ಟರೆ, ಚಿನ್ನದ ಹೂಡಿಕೆಯು ದೀರ್ಘಾವಧಿಯಲ್ಲಿ ಹೆಚ್ಚಿನ ಮೌಲ್ಯವನ್ನೇನೂ ತಂದುಕೊಡಲಾರದು.

ವ್ಯತ್ಯಾಸ ತಿಳಿಯಿರಿ
ಉಳಿತಾಯ ಮತ್ತು ಹೂಡಿಕೆ ನಡುವಣ ವ್ಯತ್ಯಾಸವನ್ನು ಅರಿಯಬೇಕು. ಹೆಚ್ಚಿನವರು ‘ನಿವೃತ್ತಿಯ ವೇಳೆಗೆ ಇರಲಿ’ ಎಂದು ತಮ್ಮ ಆದಾಯದ ದೊಡ್ಡ ಪ್ರಮಾಣವನ್ನು ಉಳಿತಾಯ ಮಾಡುತ್ತಾ ಹೋಗುತ್ತಾರೆ. ‘ಉಳಿಸಿದ ಹಣ ಗಳಿಕೆಗೆ ಸಮಾನ’ ಎಂಬುದು ನಿಜವಾಗಿದ್ದರೂ ಹೂಡಿಕೆ ಮಾಡಿದ ಹಣವು ನಿಧಿಯ ಕ್ರೋಡೀಕರಣಕ್ಕೆ ಸಮ ಎಂಬುದನ್ನು ಅರಿಯಬೇಕು.

ಅತಿರೇಕ ಬೇಡ
ಕಾಲಕಾಲಕ್ಕೆ ಹೂಡಿಕೆಯ ಪರಿಶೀಲನೆ ನಡೆಸುವುದು ಒಳ್ಳೆಯದೇ, ಆದರೆ ಪ್ರತಿ ದಿನ ಎಂಬಂತೆ ಆ ಕೆಲಸ ಮಾಡುವುದು ಸೂಕ್ತವಲ್ಲ. ಹೂಡಿಕೆ ಇರುವುದು ದೀರ್ಘಾವಧಿಯ ಲಾಭಕ್ಕಾಗಿಯೇ ವಿನಾ ಕ್ಷಣಿಕ ಉದ್ದೇಶದ ಈಡೇರಿಕೆಗಲ್ಲ. ಮ್ಯೂಚುವಲ್‌ ಫಂಡ್‌ನಂಥ ಉತ್ಪನ್ನಗಳಲ್ಲಿ ಮಾಡಿದ ಹೂಡಿಕೆಯನ್ನು ನಿಗದಿತ ಅವಧಿಯಲ್ಲಿ ಮರು ಪರಿಶೀಲನೆ ಮಾಡುವುದು ಸೂಕ್ತ. ಕಿರು ಅವಧಿಯಲ್ಲೇ ನಿರೀಕ್ಷಿತ ಫಲವನ್ನು ನೀಡಿಲ್ಲ ಎಂಬ ಕಾರಣಕ್ಕೆ ಹೂಡಿಕೆಯನ್ನು ಬದಲಿಸುವುದು ಸರಿಯಲ್ಲ.

ಭಾರತದಲ್ಲಿ ಮಹಿಳೆಯರಿಗೆ ಹೂಡಿಕೆಗೆ ಇದ್ದ ಅವಕಾಶಗಳು ಈಗ ಹೆಚ್ಚುತ್ತಿವೆ. ಹೂಡಿಕೆಯ ಅವಕಾಶಗಳಿಗೆ ಸಂಬಂಧಿಸಿ ಹೇಳುವುದಾದರೆ ಭಾರತದಲ್ಲಿ ಈಗ ಪ್ರಶಸ್ತ ವಾತಾವರಣವಿದೆ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಗುರಿ ಹೊಂದಿದವರು ಈ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು ಅಷ್ಟೇ.

**

ಆಮಿಷಕ್ಕೆ ಬಲಿಯಾಗಬೇಡಿ

ಹೆಚ್ಚಿನ ಲಾಭದ ಆಮಿಷಕ್ಕೆ ಉತ್ಪನ್ನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಉದ್ದೇಶವೇ ವ್ಯರ್ಥವಾಗುವ ಅಪಾಯವಿದೆ. ಆದ್ದರಿಂದ ಆಮಿಷಕ್ಕೊಳಗಾಗದೆ, ಸಂಪೂರ್ಣ ಮಾಹಿತಿ ಪಡೆದೇ ಹೂಡಿಕೆ ಆರಂಭಿಸಬೇಕು. ಹೂಡಿಕೆಯನ್ನು ಯಾವತ್ತೂ ಸರಳವಾಗಿ ಮತ್ತು ವಾಸ್ತವಕ್ಕೆ ಹತ್ತಿರ ಇರುವಂತೆ ನೋಡುವುದು ಸೂಕ್ತ. ಹೆಚ್ಚಿನ ಲಾಭದ ಆಸೆಗೆ ಹೈಬ್ರಿಡ್‌ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿದರೆ ಉದ್ದೇಶ ವಿಫಲವಾಗಬಹುದು.

(ಲೇಖಕ: ಯೆಸ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT