ಹೂಡಿಕೆಗೂ ಮುನ್ನ ಇರಲಿ ಭದ್ರತೆ...

5

ಹೂಡಿಕೆಗೂ ಮುನ್ನ ಇರಲಿ ಭದ್ರತೆ...

Published:
Updated:
INVESTMENT

ನೀವು ‘ಉದ್ಯೋಗಿ’ ಎನಿಸಿಕೊಳ್ಳುತ್ತಿದ್ದಂತೆ, ಜೀವನದ ಹೊಸ ಹಂತವೊಂದು ಪ್ರಾರಂಭವಾಗುತ್ತದೆ. ಇಂತಹ ‘ಉದ್ಯೋಗ’ ಹೊಸ ಅನುಭವದೊಂದಿಗೆ ಆರ್ಥಿಕ ಸ್ವಾತಂತ್ರ್ಯವನ್ನೂ ನಿಮಗೆ ತಂದುಕೊಡುತ್ತದೆ. ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಅವಕಾಶವನ್ನು ಕೊಡುವ ಈ ಹಂತದಲ್ಲಿ, ಕುಟುಂಬದ ಜವಾಬ್ದಾರಿ ಜೊತೆಗೆ ಅನೇಕ ಹೊಣೆಗಳೂ ನಮ್ಮದಾಗುತ್ತವೆ. ದುಡಿಯಲು ಆರಂಭಿಸಿದಾಗಿನಿಂದಲೇ ಆರ್ಥಿಕ ಶಿಸ್ತು ರೂಢಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ. 

ನಿರೀಕ್ಷಿಸಿದ್ದಕ್ಕಿಂತಲೂ ಮೊದಲೇ ಜವಾಬ್ದಾರಿಗಳು ದುಡಿಯುವ ವ್ಯಕ್ತಿಯ ಹೆಗಲೇರುತ್ತವೆ. ಈ ಸಂದರ್ಭದಲ್ಲಿ, ಹೂಡಿಕೆ ಮಾಡಲು ಮುಂದಾಗುವುದಕ್ಕೆ ಮೊದಲು ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆರ್ಥಿಕ ಭದ್ರತೆಯತ್ತ ಗಮನ ಹರಿಸುವುದು ಮುಖ್ಯವಾಗುತ್ತದೆ. ಉಳಿತಾಯದ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಗಳಿಸುವುದು ನಿಮ್ಮ ಉದ್ದೇಶವಾಗಿದ್ದರೂ, ಮೊದಲು ನಿಮ್ಮ ಜೀವನ ಮತ್ತು ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಳ್ಳುವುದೂ ಅವಶ್ಯ. ಇದಕ್ಕೆ ಜೀವವಿಮೆ ಉತ್ತಮ ಮಾರ್ಗ ಎನ್ನಬಹುದು. ದುರದೃಷ್ಟವಶಾತ್, ನೀವು ಉಳಿಸಿದ ಹಣವನ್ನು ನೀವೇ ಅನುಭವಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮನ್ನು ನಂಬಿದವರ ರಕ್ಷಣೆಗಾದರೂ ಬಳಕೆಯಾಗುತ್ತದೆ. ಈ ನಿಟ್ಟಿನಿಂದ, ಹೂಡಿಕೆಗಿಂತ ಮೊದಲು ಆರ್ಥಿಕ ಭದ್ರತೆಗೆ ಆದ್ಯತೆ ನೀಡುವುದೊಳಿತು.

ವಿಮೆ ಮಾಡಿಸಿ, ಹೆಚ್ಚು ಗಳಿಸಿ 
ಕೆಲಸ ಮಾಡಲು ಆರಂಭಿಸಿದ ಪ್ರಾರಂಭದಲ್ಲೇ ಜೀವವಿಮೆ ಮಾಡಿಸುವುದು ಸೂಕ್ತ. ಏಕೆಂದರೆ, ಚಿಕ್ಕ ವಯಸ್ಸಿನಲ್ಲಿ ವಿಮಾ ಕಂತಿನ ಮೊತ್ತವೂ ಕಡಿಮೆ ಇರುತ್ತದೆ. ಮುಂದೆ, ಜವಾಬ್ದಾರಿಗಳು, ಖರ್ಚುಗಳು ಹೆಚ್ಚಾದಾಗ, ಹೆಚ್ಚಿನ ವಿಮಾ ಕಂತಿನ ಹಣವನ್ನು ಭರಿಸುವುದು ಉದ್ಯೋಗಿಗೆ ಕಷ್ಟವಾಗಬಹುದು.

ವೈದ್ಯಕೀಯ ವಿಮೆಯನ್ನು ನಂತರದಲ್ಲಿ ಮಾಡಿಸಬಹುದು. ಆದರೆ, ನೀವು ಮುಂದೆ ಅನಾರೋಗ್ಯಕ್ಕೆ ತುತ್ತಾದಾಗ ಜೀವವಿಮೆ ಮಾಡಿಸಲು ಸಾಧ್ಯವಾಗುವುದಿಲ್ಲ. ಮೊದಲೇ ಜೀವವಿಮೆ ಮಾಡಿಸಿದರೆ, ಮುಂದೆ ವೃದ್ಧಾಪ್ಯ, ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ, ಪೂರ್ಣಗೊಂಡ ಜೀವವಿಮೆಯ ಹಣ ಸಂಪೂರ್ಣವಾಗಿ ನಿಮ್ಮ ಕೈಗೆ ಬರುತ್ತದೆ. ಅಂದರೆ, ನೀವು ಪ್ರಾರಂಭದಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರ ಕೊನೆಯವರೆಗೂ ನಿಮ್ಮ ಕೈಹಿಡಿಯುತ್ತದೆ.  

ನೇರ ಲಾಭಗಳು 
ನಿಮ್ಮ ಜೀವನಕ್ಕೆ ಭದ್ರತೆ ಒದಗಿಸುವುದರ ಜೊತೆಗೆ ಜೀವವಿಮೆಯು ತೆರಿಗೆ ವಿನಾಯ್ತಿಯ ಸಾಧನವಾಗಿಯೂ ನಿಮ್ಮ ನೆರವಿಗೆ ನಿಲ್ಲುತ್ತದೆ. ಆದಾಯ ತೆರಿಗೆ ಇಲಾಖೆಯ 80ಸಿ ಸೆಕ್ಷನ್‌ ಅನ್ವಯ, ಜೀವವಿಮೆ ಪಾಲಿಸಿದಾರರು ₹1.5ಲಕ್ಷದವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು. ಅಲ್ಲದೆ,  ಪಾಲಿಸಿದಾರನು ಸಾವಿಗೀಡಾದರೆ, ಜೀವವಿಮೆಯ ಸಂಪೂರ್ಣ ಮೊತ್ತ ಕೈಗೆ ಸಿಗಲಿದ್ದು, ಈ ಹಣ ತೆರಿಗೆ ಮುಕ್ತವಾಗಿರುತ್ತದೆ ಎಂದು 1961ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 10 (ಡಿ) ಹೇಳುತ್ತದೆ. ದೀರ್ಘಾವಧಿ ಪಾಲಿಸಿಗಳನ್ನು ನೀವು ಹೊಂದಿದ್ದರೆ, ನಿಮ್ಮ ದೀರ್ಘಾವಧಿ ಗುರಿಗಳನ್ನು ಈಡೇರಿಸಿಕೊಳ್ಳಲೂ ಈ ಜೀವವಿಮೆಗಳು ನೆರವು ನೀಡುತ್ತವೆ. ಮನೆ, ಆಟೊ, ಕಾರು ಅಥವಾ ವೈಯಕ್ತಿಕ ಸಾಲವನ್ನೂ ಈ ಪಾಲಿಸಿಗಳ ಮೂಲಕ ನೀವು ಪಡೆಯಬಹುದು. 

ಮೊದಲು ಏನು ಮಾಡಬೇಕು?
ನಿಮ್ಮ ಜೀವನದ ವಿವಿಧ ಹಂತಗಳಲ್ಲಿ ನಿಮ್ಮ ಆರ್ಥಿಕ ಗುರಿಗಳು ಯಾವ ರೀತಿ ಇರಬೇಕು ಎಂಬುದನ್ನು ಮೊದಲೇ ನಿರ್ಧಾರ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿಕೊಳ್ಳಬೇಕು. ನಿಮ್ಮ ವಯಸ್ಸು, ಜೀವನದಲ್ಲಿರುವ ನೀವಿರುವ ಹಂತ, ವಿಮಾ ಮೊತ್ತ ಮತ್ತು ವಿಮೆ ಸೌಲಭ್ಯದ ವ್ಯಾಪ್ತಿ ಅನ್ನು ವಿಮಾ ಪಾಲಿಸಿ ಅವಲಂಬಿಸಿರುತ್ತದೆ. ಕಡಿಮೆ ಮೊತ್ತದ ವಿಮಾ ಕಂತನ್ನು ಆಯ್ದುಕೊಂಡು, ನಾವು ಮರಣ ಹೊಂದಿದಾಗ ನಮ್ಮ ಕುಟುಂಬ ಸದಸ್ಯರಿಗೆ ಹೆಚ್ಚು ಪರಿಹಾರ ಸಿಗುವಂತಾಗಬೇಕು ಎಂದುಕೊಂಡರೆ, ಅಂತಹ ಪಾಲಿಸಿ ಮಾಡುವುದು ಕಷ್ಟ.

ವಿಮೆ ಅವಧಿ ಮತ್ತು ನೀವು ಕಟ್ಟಲು ಬಯಸುವ ವಿಮೆ ಕಂತಿನ ಮೇಲೆ ಅದರಿಂದ ಸಿಗುವ ಸೌಲಭ್ಯಗಳು ನಿರ್ಧಾರವಾಗುತ್ತವೆ. ನೀವು ಎಂತಹ ಪಾಲಿಸಿಯನ್ನು ಆಯ್ದುಕೊಳ್ಳುತ್ತೀರಿ ಎಂಬುದನ್ನು ನಿರ್ಧರಿಸಿದ ನಂತರ, ವಿಮೆ ಕಂಪನಿಗಳ ಅಂತರ್ಜಾಲ ತಾಣಗಳಲ್ಲಿ ಮಾಹಿತಿ ತೆಗೆದುಕೊಳ್ಳಬಹುದು ಅಥವಾ ವಿಮೆ ಕಂಪನಿಗಳ ಕಚೇರಿಗೆ ಭೇಟಿ ನೀಡಿ ಸಲಹೆ ಪಡೆಯಬಹುದು. 

ಆದರೆ, ಜೀವವಿಮೆ ಮಾಡಿಸುವುದಕ್ಕೂ ಮುನ್ನ, ಷರತ್ತು ಮತ್ತು ನಿಬಂಧನೆಗಳನ್ನು ಎಚ್ಚರಿಕೆಯಿಂದ ಓದಬೇಕು. ‍‍‍‍‍ಪೂರ್ಣಗೊಂಡ ವಿಮಾ ಮೊತ್ತದ ಅನುಪಾತ, ಪಾಲಿಸಿಯ ಸ್ವರೂಪ, ವಿಮಾ ಕಂಪನಿಯ ಪೂರ್ವಾಪರ ತಿಳಿದುಕೊಳ್ಳಬೇಕು. ಈಗ, ಜೀವವಿಮೆ ಯೋಜನೆಗಳು ನಿಮ್ಮ ಮನೆ ಬಾಗಿಲಿನಲ್ಲೇ ಲಭ್ಯ ಇವೆ. ಅದರಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಜಾಣತನ ನಿಮ್ಮದಾದರೆ, ಆರ್ಥಿಕ ಭದ್ರತೆಯ ದೃಷ್ಟಿಯಿಂದ ನೀವು ಗೆದ್ದಂತೆಯೇ ಸರಿ. 

(ಲೇಖಕ: ಆದಿತ್ಯ ಬಿರ್ಲಾ ಸನ್‌ಲೈಫ್‌ ಇನ್ಶುರನ್ಸ್‌ನ ಮುಖ್ಯ ವಿತರಣಾ ಅಧಿಕಾರಿ)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !