‘ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ’ ಎಂಬ ಮಾತು ಹೂಡಿಕೆ ಲೋಕಕ್ಕೆ ಅನ್ವಯಿಸುತ್ತದೆ. ಆದರೆ ‘ಹೂಡಿಕೆಯ ಬುಟ್ಟಿಯಲ್ಲಿ ಎಷ್ಟು ಮೊಟ್ಟೆಗಳಿರಬೇಕು’ ಎಂಬ ಪ್ರಶ್ನೆಯೂ ಇದೆ. ಅನೇಕ ಹೂಡಿಕೆದಾರರು 40ರಿಂದ 50 ಕಂಪನಿಗಳ ಷೇರುಗಳನ್ನು ಖರೀದಿಸಿದರೆ ತಮ್ಮ ಹೂಡಿಕೆ ಸಂಪೂರ್ಣ ಸುರಕ್ಷಿತ ಎಂದು ನಂಬುತ್ತಾರೆ. ಹಣಕಾಸು ತಜ್ಞರ ಪ್ರಕಾರ, ಅತಿಯಾದ ಹೂಡಿಕೆ ವೈವಿಧ್ಯತೆಯು ಲಾಭದ ಬದಲು ಸಂಕಷ್ಟವನ್ನೇ ತಂದೊಡ್ಡಬಹುದು. ಹಾಗಾದರೆ, ಒಬ್ಬ ಹೂಡಿಕೆದಾರನ ಬಳಿ ಇರಬೇಕಾದ ಷೇರುಗಳ ಸಂಖ್ಯೆ ಎಷ್ಟು?

ಅಪಾಯಗಳ ನಿರ್ವಹಣೆ ಹೇಗೆ?: ಷೇರು ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಎರಡು ರೀತಿಯ ಅಪಾಯಗಳನ್ನು ಎದುರಿಸುತ್ತೇವೆ. ಮೊದಲನೆಯದು ಅಪರಿಮಿತ ಅಪಾಯ. ಇದು ಕೇವಲ ಒಂದು ನಿರ್ದಿಷ್ಟ ಕಂಪನಿಯ ಆಂತರಿಕ ಸಮಸ್ಯೆಗಳಾದ ಮ್ಯಾನೇಜ್ಮೆಂಟ್ ಹಗರಣ, ಲಾಭದಲ್ಲಿ ಕುಸಿತ ಅಥವಾ ಉತ್ಪನ್ನದ ವೈಫಲ್ಯಕ್ಕೆ ಸೀಮಿತವಾಗಿರುತ್ತದೆ. ಇಂತಹ ಅಪಾಯವನ್ನು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಎರಡನೆಯದು ವ್ಯವಸ್ಥಿತ ಅಪಾಯ. ಇದು ಇಡೀ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹಣದುಬ್ಬರ, ಯುದ್ಧ ಅಥವಾ ಬಡ್ಡಿದರ ಏರಿಕೆಯಂತಹ ಜಾಗತಿಕ ವಿದ್ಯಮಾನಗಳಾಗಿದ್ದು, ಇದನ್ನು ವೈವಿಧ್ಯೀಕರಣದಿಂದ ತಪ್ಪಿಸಲು ಸಾಧ್ಯವಿಲ್ಲ. ದೊಡ್ಡ ಕಂಪನಿಗಳ ಷೇರುಗಳು ಸಹ ನೆಲ ಕಚ್ಚುತ್ತವೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ಕೇವಲ ‘ಹೆಡ್ಜಿಂಗ್ ತಂತ್ರ’ಗಳ ಮೂಲಕ ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

20 ಷೇರುಗಳ ಮ್ಯಾಜಿಕ್ ಸಂಖ್ಯೆ: ಹಣಕಾಸು ಸಂಶೋಧನೆಗಳ ಪ್ರಕಾರ, 15ರಿಂದ 20 ಉತ್ತಮ ಗುಣಮಟ್ಟದ ಷೇರುಗಳನ್ನು ಹೊಂದಿದ್ದರೆ ನಿಮ್ಮ ಪೋರ್ಟ್ಫೋಲಿಯೊದ ಶೇ 90ರಷ್ಟು ಅನ್-ಸಿಸ್ಟಮ್ಯಾಟಿಕ್ ಅಪಾಯವು ಇಲ್ಲವಾಗುತ್ತದೆ. ನಿಮ್ಮ ಬಳಿ 20 ಕಂಪನಿಗಳ ಷೇರುಗಳಾದ ಮೇಲೆ ನೀವು 21ನೇ ಕಂಪನಿಯ ಷೇರನ್ನು ಸೇರಿಸಿದಾಗ, ನಿಮ್ಮ ಅಪಾಯವೇನೂ ಗಣನೀಯವಾಗಿ ಕಡಿಮೆಯಾಗುವುದಿಲ್ಲ. ಬದಲಿಗೆ, ಅಷ್ಟು ಕಂಪನಿಗಳಿಗೆ ಸಂಬಂಧಿಸಿದ ವಿದ್ಯಮಾನಗಳ ಮೇಲೆ ಗಮನ ಇರಿಸುವುದು ನಿಮಗೆ ತಲೆನೋವಾಗಿ ಪರಿಣಮಿಸುತ್ತದೆ. ಹೆಚ್ಚಿನ ಕಂಪನಿಗಳ ಷೇರುಗಳನ್ನು ಹೊಂದುವುದರಿಂದ ನಿಮ್ಮ ಪೋರ್ಟ್ಫೋಲಿಯೊ ಒಟ್ಟಾರೆ ಮಾರುಕಟ್ಟೆಯ ಸೂಚ್ಯಂಕದಂತೆ ವರ್ತಿಸಲು ಶುರು ಮಾಡುತ್ತದೆ. ಇದರಿಂದ ಸರಾಸರಿಗಿಂತ ಹೆಚ್ಚಿನ ಲಾಭ ಗಳಿಸುವ ನಿಮ್ಮ ಆಸೆ ಕೈಗೂಡದಿರಬಹುದು.

ಅತಿಯಾದ ಸಂಖ್ಯೆ ಏಕೆ ಅಪಾಯಕಾರಿ?: ಹೂಡಿಕೆ ಎನ್ನುವುದು ಹಣ ಹಾಕಿ ಸುಮ್ಮನೆ ಕೂರುವುದಲ್ಲ. ನೀವು ಹೂಡಿಕೆ ಮಾಡಿದ ಕಂಪನಿಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸುವುದು ಅಗತ್ಯ. ಸಾಮಾನ್ಯ ಹೂಡಿಕೆದಾರನಿಗೆ 50 ಕಂಪನಿಗಳ ತ್ರೈಮಾಸಿಕ ವರದಿಗಳು, ಆಡಳಿತ ಮಂಡಳಿಯ ನಿರ್ಧಾರಗಳು ಮತ್ತು ಮಾರುಕಟ್ಟೆಯ ಸುದ್ದಿಗಳ ಮೇಲೆ ನಿಗಾ ಇಡುವುದು ಅಸಾಧ್ಯದ ಮಾತು. 20ಕ್ಕಿಂತ ಹೆಚ್ಚು ಕಂಪನಿಗಳ ಷೇರುಗಳನ್ನು ಹೊಂದಿದ್ದರೆ, ಯಾವುದೋ ಒಂದು ಕಂಪನಿ ಸಂಕಷ್ಟಕ್ಕೆ ಸಿಲುಕಿದಾಗ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಹೂಡಿಕೆದಾರರು ವಿಫಲರಾಗಬಹುದು. ಬದಲಿಗೆ, 15-20 ಕಂಪನಿಗಳ ಮೇಲೆ ಸಂಪೂರ್ಣ ಗಮನವಿಟ್ಟರೆ, ಅವುಗಳ ವ್ಯವಹಾರದ ಏರಿಳಿತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಹೂಡಿಕೆ ಮಾಡಿದ ಕಂಪನಿಗಳ ಸಂಖ್ಯೆ ಕಡಿಮೆಯಿದ್ದಷ್ಟೂ, ಹೂಡಿಕೆದಾರರ ನಿರ್ಧಾರಗಳಲ್ಲಿ ಸ್ಪಷ್ಟತೆ ಇರುತ್ತದೆ ಮತ್ತು ಅನಗತ್ಯ ನಷ್ಟದಿಂದ ಪಾರಾಗುವುದು ಸುಲಭವಾಗುತ್ತದೆ.

ಮೇಲ್ನೋಟದ ವೈವಿಧ್ಯೀಕರಣ ಬೇಡ: ಬಹಳಷ್ಟು ಮಂದಿ ಐದು ವಿಭಿನ್ನ ಬ್ಯಾಂಕ್ಗಳ ಷೇರುಗಳನ್ನು ಖರೀದಿಸಿ, ‘ಹೂಡಿಕೆ ವೈವಿಧ್ಯಮಯವಾಗಿದೆ’ ಎಂದು ಬೀಗುತ್ತಾರೆ. ಆದರೆ ಇದು ತಪ್ಪು. ಆರ್ಥಿಕತೆಯಲ್ಲಿ ಬದಲಾವಣೆಯಾದಾಗ ಎಲ್ಲ ಬ್ಯಾಂಕುಗಳೂ ಒಟ್ಟಿಗೇ ಏರಬಹುದು ಅಥವಾ ಬೀಳಬಹುದು. ನಿಜವಾದ ವೈವಿಧ್ಯೀಕರಣ ಎಂದರೆ ಪರಸ್ಪರ ಸಂಬಂಧವಿಲ್ಲದ ವಲಯಗಳಲ್ಲಿ ಹೂಡಿಕೆ ಮಾಡುವುದು. ಹೂಡಿಕೆ ಬುಟ್ಟಿಯಲ್ಲಿ ಬ್ಯಾಂಕಿಂಗ್ ಜೊತೆಗೆ ಮಾಹಿತಿ ತಂತ್ರಜ್ಞಾನ, ಔಷಧ, ಎಫ್ಎಂಸಿಜಿ ಮತ್ತು ತಯಾರಿಕಾ ವಲಯದ ಕಂಪನಿಗಳೂ ಇರಲಿ. ಒಂದಕ್ಕೊಂದು ಸಂಬಂಧವಿಲ್ಲದ ವಲಯಗಳು ಹೂಡಿಕೆಗೆ ಸಮತೋಲನ ನೀಡುತ್ತವೆ. ಒಂದು ವೇಳೆ ಒಂದು ವಲಯ ಸಂಕಷ್ಟಕ್ಕೆ ಸಿಲುಕಿದರೆ, ಬೇರೆ ವಲಯದ ಷೇರುಗಳು ಕಾಪಾಡುತ್ತವೆ.

ಹೂಡಿಕೆಯಲ್ಲಿ ಯಶಸ್ವಿಯಾಗಲು ಕೆಲವು ಶಿಸ್ತುಬದ್ಧ ನಡೆಗಳನ್ನು ಪಾಲಿಸುವುದು ಅಗತ್ಯ. ಮೊದಲನೆಯದಾಗಿ, ಅರ್ಥವಾಗದ ಉದ್ಯಮಗಳಲ್ಲಿ ಹಣ ತೊಡಗಿಸಬಾರದು. ಎರಡನೆಯದಾಗಿ, ಯಾವುದೇ ಒಂದು ಕಂಪನಿಯ ಷೇರಿನಲ್ಲಿ ಒಟ್ಟು ಹೂಡಿಕೆಯ ಶೇ 10ಕ್ಕಿಂತ ಹೆಚ್ಚು ಹಣ ತೊಡಗಿಸಬಾರದು. ಹಾಗೆಯೇ, ಒಂದು ನಿರ್ದಿಷ್ಟ ವಲಯಕ್ಕೆ ಪೋರ್ಟ್ಫೋಲಿಯೊದ ಶೇ 20ಕ್ಕಿಂತ ಹೆಚ್ಚು ಪಾಲು ನೀಡಬಾರದು. ಒಂದು ವೇಳೆ ಯಾವುದಾದರೂ ಒಂದು ವಲಯದ ಬಗ್ಗೆ ಆಳವಾದ ಜ್ಞಾನವಿಲ್ಲದಿದ್ದರೆ, ನೇರವಾಗಿ ಷೇರು ಖರೀದಿಸುವ ಬದಲು ಮ್ಯೂಚುವಲ್ ಫಂಡ್ ಅಥವಾ ಇಟಿಎಫ್ ಮೂಲಕ ಹೂಡಿಕೆ ಮಾಡುವುದು ಜಾಣತನ.

ಆಸ್ತಿ ವರ್ಗಗಳಲ್ಲಿಯೂ ವೈವಿಧ್ಯ ಇರಲಿ: ಪೋರ್ಟ್ಫೋಲಿಯೊ ನಿರ್ವಹಣೆಯಲ್ಲಿ ಷೇರುಗಳ ಸಂಖ್ಯೆಯನ್ನು ನೋಡುವುದು ಒಂದು ಮಗ್ಗುಲಾದರೆ, ಹಣವನ್ನು ವಿವಿಧ ಆಸ್ತಿ ವರ್ಗಗಳಲ್ಲಿ ಹಂಚುವುದು ಇನ್ನೊಂದು ಪ್ರಮುಖ ಮಗ್ಗುಲು. ಮಾರುಕಟ್ಟೆ ಅತ್ಯಂತ ಅಸ್ಥಿರವಾಗಿದ್ದಾಗ ಅಥವಾ ಆರ್ಥಿಕ ಕುಸಿತದ ಸಮಯದಲ್ಲಿ ಷೇರುಗಳು ಮಾತ್ರವಲ್ಲದೆ ಇಡೀ ಮಾರುಕಟ್ಟೆಯೇ ಕುಸಿಯಬಹುದು. ಇಂತಹ ಸಮಯದಲ್ಲಿ ಹೂಡಿಕೆದಾರರನ್ನು ರಕ್ಷಿಸುವುದು ಬಂಗಾರ, ನಿಶ್ಚಿತ ಠೇವಣಿ (ಎಫ್.ಡಿ) ಅಥವಾ ರಿಯಲ್ ಎಸ್ಟೇಟ್ ಹೂಡಿಕೆಗಳು.

ಉದಾಹರಣೆಗೆ, ಷೇರು ಮಾರುಕಟ್ಟೆ ಬಿದ್ದಾಗ ಸಾಮಾನ್ಯವಾಗಿ ಚಿನ್ನದ ಬೆಲೆ ಏರುತ್ತದೆ. ಹೀಗಾಗಿ ಒಟ್ಟು ಆಸ್ತಿಯಲ್ಲಿ ಶೇ 10ರಿಂದ ಶೇ 15ರಷ್ಟು ಚಿನ್ನ ಅಥವಾ ಸಾಲಪತ್ರಗಳಲ್ಲಿ (ಬಾಂಡ್ಸ್) ಹೂಡಿಕೆ ಮಾಡಿದ್ದರೆ, ಅದು ಪೋರ್ಟ್ಫೋಲಿಯೊಗೆ ಒಂದು ಗಟ್ಟಿಯಾದ ಅಡಿಪಾಯದಂತೆ ಕೆಲಸ ಮಾಡುತ್ತದೆ.

ಹೂಡಿಕೆದಾರರು ಷೇರುಗಳ ಸಂಗ್ರಹಕಾರರಲ್ಲ, ಬದಲಿಗೆ ಲಾಭ ಗಳಿಸುವ ಉದ್ದೇಶ ಇರುವವರು. ಅತಿಯಾದ ಷೇರುಗಳು ಹೂಡಿಕೆದಾರರ ಗಮನವನ್ನು ಚದುರಿಸುತ್ತವೆ ಮತ್ತು ಪೋರ್ಟ್ಫೋಲಿಯೊದ ಗುಣಮಟ್ಟವನ್ನು ಕುಂದಿಸುತ್ತವೆ. 15ರಿಂದ 20 ಅತ್ಯುತ್ತಮ ಕಂಪನಿಗಳನ್ನು ಆರಿಸಿ, ಅವುಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ, ಮಾರುಕಟ್ಟೆಯ ಅನಿಶ್ಚಿತತೆಯಿಂದ ರಕ್ಷಿಸಿಕೊಳ್ಳಲು ಹೆಡ್ಜಿಂಗ್ ತಂತ್ರಗಳನ್ನು ಕಲಿಯಬೇಕು. ಚಿಕ್ಕ–ಚೊಕ್ಕ ಪೋರ್ಟ್ಫೋಲಿಯೊ ದೀರ್ಘಕಾಲದ ಶ್ರೀಮಂತಿಕೆಗೆ ರಾಜಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.