ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾಲಕ್ಕೂ ‘ಯೂಲಿಪ್‌’

Last Updated 14 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‘ಖರೀದಿ ಅಥವಾ ಮಾರಾಟದಲ್ಲಿ ಹೆಚ್ಚು ಹಣವಿಲ್ಲ. ಬದಲಿಗೆ, ಕಾಯುವಿಕೆಯಲ್ಲಿ ಇದೆ’ ಎಂಬುದು ಅನುಭವಿಗಳ ಮಾತು. ಕಾಯುವಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳುವುದು ಕಷ್ಟ. ಆದರೆ, ಸಂಪತ್ತನ್ನು ಸೃಷ್ಟಿಸುವುದು ನಿಮ್ಮ ಉದ್ದೇಶವಾಗಿದ್ದರೆ ಅದರ ಈಡೇರುವಿಕೆಗೆ ಕಾಯುವಿಕೆ ಅಗತ್ಯ. ನೀವು ಯಾವ ಹೂಡಿಕಾ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯ. ಆದರೆ, ಎಷ್ಟು ದೀರ್ಘ ಅವಧಿಯವರೆಗೆ ಹೂಡಿಕೆ ಮುಂದುವರಿಸಬಲ್ಲಿರಿ ಎಂಬುದು ಇನ್ನೂ ಮುಖ್ಯವಾಗುತ್ತದೆ. ‘ಹೆಚ್ಚು ಕಾಯುವಿಕೆಯಿಂದ ಹೂಡಿಕೆ ನಷ್ಟವಾಗುತ್ತದೆ’ ಎಂದು ಹೂಡಿಕೆದಾರರು ಭಾವಿಸುತ್ತಾರೆ. ಹೂಡಿಕೆಯ ಮೇಲೆ ಸತತವಾಗಿ ನಿಗಾ ಇಡುವುದು ಮತ್ತು ಆಗಾಗ ಮಧ್ಯಪ್ರವೇಶ ಮಾಡುವುದರಿಂದ ಪ್ರತಿಬಾರಿಯೂ ಆದಾಯ ಹೆಚ್ಚಾಗಬೇಕೆಂದಿಲ್ಲ. ಕೆಲವೊಮ್ಮೆ ಅದರಿಂದ ದೊಡ್ಡ ಹಾನಿಯೂ ಆಗಬಹುದು.

ಒಂದೇ ಯೋಜನೆಯಡಿ ಹೂಡಿಕೆದಾರರಿಗೆ ವಿಮೆ ಸೌಲಭ್ಯ ಮತ್ತು ಹಣ ಹೂಡಿಕೆ ಅವಕಾಶ ಕಲ್ಪಿಸಲು ವಿಮೆ ಸಂಸ್ಥೆಗಳು ‘ಯೂಲಿಪ್‌’ (Unit *inked Insurance P*an - U*IP) ಯೋಜನೆ ಒದಗಿಸುತ್ತವೆ. ಸಂಪತ್ತನ್ನು ವೃದ್ಧಿಸುವ ಅವಕಾಶದ ಜೊತೆಗೆ ಗ್ರಾಹಕರಿಗೆ ವಿಮೆಯ ಭದ್ರತೆಯನ್ನು ಸಹ ‘ಯುಲಿಪ್‌’ ನೀಡುತ್ತದೆ. ವಿಮೆ ಸಂಸ್ಥೆಗಳು ಕೊಡಮಾಡುವ ವಿಶಿಷ್ಟ ವಿಮೆ ಉತ್ಪನ್ ಇದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನ ‘ಯೂಲಿ‍ಪ್‌’ಗಳು ಹೂಡಿಕೆದಾರರ ಗ್ರಹಿಕೆಯನ್ನು ಬದಲಿಸಲು ಶ್ರಮಿಸಿವೆ. ಸಂಪತ್ತನ್ನು ಕ್ರೋಡೀಕರಿಸಬೇಕಾದರೆ ದೀರ್ಘಕಾಲದವರೆಗೆ ಕಾಯುವ ಅಗತ್ಯವನ್ನು ಇವು ಮನವರಿಕೆ ಮಾಡಿಕೊಡುತ್ತಿವೆ. ವಿಶೇಷವಾಗಿ ಇ–ಕಾಮರ್ಸ್‌ ಕ್ಷೇತ್ರದ ಉತ್ಪನ್ನಗಳು ಈ ಕ್ಷೇತ್ರದಲ್ಲಿ ಗಮನ ಸೆಳೆದಿವೆ. ಉಬರ್‌, ಅಮೆಜಾನ್‌ನಂಥ ಇನ್ನೂ ಕೆಲವು ಸಂಸ್ಥೆಗಳು ಗ್ರಾಹಕರ ನಿರೀಕ್ಷೆಗಳನ್ನು ಬದಲಿಸಿವೆ. ಪಾರದರ್ಶಕತೆ, ಸ್ಥಿತಿಸ್ಥಾಪಕತ್ವ, ಕಡಿಮೆ ವೆಚ್ಚ ಮತ್ತು ಹೂಡಿಕೆಯನ್ನು ಸರಳಗೊಳಿಸುವಂತಹ, ತೀರಾ ಗೊಂದಲಗಳಿಲ್ಲದ, ಸರಳವಾದ ಹೂಡಿಕಾ ವಿಧಾನವನ್ನು ಗ್ರಾಹಕರು ಈಗ ನಿರೀಕ್ಷಿಸುತ್ತಾರೆ. ಹೊಸ ‘ಯೂಲಿ‍ಪ್‌’ಗಳು ಹೊಸ ಕಾಲದ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುತ್ತವೆ. ಆದ್ದರಿಂದ, ‘ಯೂಲಿ‍ಪ್‌’ಗಳು ಈಗ ದೀರ್ಘಾವಧಿ ಅಥವಾ ಅಲ್ಪಾವಧಿಯ ಗುರಿ ಈಡೇರಿಕೆಗೆ ಹೆಚ್ಚು ಸೂಕ್ತವಾದ ಉತ್ಪನ್ನಗಳಾಗಿರುವುದರಲ್ಲಿ ಅಚ್ಚರಿ ಇಲ್ಲ.

ಷೇರು ಸೂಚ್ಯಂಕ ಏರುಪೇರಾಗುತ್ತಿದ್ದರೂ, ಅಪಾಯವನ್ನು ತಾಳಿಕೊಳ್ಳುವ ಸಾಮರ್ಥ್ಯವು ‘ಯೂಲಿ‍ಪ್‌’ಗಳ ಜನಪ್ರಿಯತೆ ಹೆಚ್ಚಾಗಲು ಇನ್ನೊಂದು ಕಾರಣವಾಗಿದೆ. ಅಲ್ಪಾವಧಿ ಅಥವಾ ದೀರ್ಘಾವಧಿಯಲ್ಲಿ ತಮ್ಮ ಹೂಡಿಕೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಹಣಕಾಸು ಉತ್ಪನ್ನವನ್ನು ಹೂಡಿಕೆದಾರರು ಬಯಸುತ್ತಾರೆ. ಸಂಪತ್ತು ಸೃಷ್ಟಿಗೆ ‘ಯೂಲಿ‍ಪ್‌’ಗಳೇ ನಿಮ್ಮ ಆಯ್ಕೆಯ ಹೂಡಿಕಾ ಉತ್ಪನ್ನಗಳು ಯಾಕಾಗಬೇಕು ಎಂಬುದಕ್ಕೆ ಇಲ್ಲಿ ಒಂದಿಷ್ಟು ಕಾರಣಗಳಿವೆ.

1 ಚಿಲ್ಲರೆ ಹೂಡಿಕೆ ಮೇಲೆ ಗಮನ: ಚಿಲ್ಲರೆ ಹೂಡಿಕೆದಾರರಿಗೆ ‘ಯೂಲಿ‍ಪ್‌’ಗಳು ಸೂಕ್ತವಾದ ಉತ್ಪನ್ನಗಳಾಗಿವೆ. ಇತರ ಹೆಚ್ಚಿನ ಹೂಡಿಕಾ ಉತ್ಪನ್ನಗಳು ಚಿಲ್ಲರೆ ಹೂಡಿಕೆದಾರರಿಂದ ಮಾತ್ರವಲ್ಲದೆ ಸಾಂಸ್ಥಿಕ ಹೂಡಿಕೆದಾರರು ಮತ್ತು ದೊಡ್ಡ ಹೂಡಿಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಸ್ವೀಕರಿಸುತ್ತವೆ. ಆದ್ದರಿಂದ, ಅಂಥವರನ್ನೇ ಗಮನದಲ್ಲಿಟ್ಟು ಕಾರ್ಯ ನಿರ್ವಹಿಸುತ್ತವೆ. ಅಲ್ಪಾವಧಿಯ ಲಾಭವನ್ನು ಗುರಿಯಾಗಿಟ್ಟುಕೊಂಡು ಇವು ಯೋಜನೆಗಳನ್ನು ರೂಪಿಸುತ್ತವೆ. ಆದ್ದರಿಂದ ನಿರ್ವಹಣೆಯಲ್ಲಿರುವ ಸಂಪತ್ತಿನಲ್ಲಿ ದೊಡ್ಡ ಭಾಗವು ನಗದೀಕರಣಕ್ಕಾಗಿ ಮೀಸಲಿಡಬೇಕಾಗಿದೆ. ಇದರಿಂದಾಗಿ ಚಿಲ್ಲರೆ ಹೂಡಿಕೆದಾರರ ದೀರ್ಘಾವಧಿಯ ಗಳಿಕೆಯ ಮೇಲೆ ಇದು ಪರಿಣಾಮ ಉಂಟುಮಾಡುತ್ತದೆ.

ಹೊಸಕಾಲದ ‘ಯೂಲಿ‍ಪ್‌’ಗಳು ಇಂಥ ವಿನ್ಯಾಸವನ್ನು ಹೊಂದಿಲ್ಲ. ಬದಲಿಗೆ ಗ್ರಾಹಕರು ಕಡ್ಡಾಯವಾಗಿ ಹೂಡಿಕೆಯನ್ನು ಐದು ವರ್ಷಗಳ ಕಾಲ ಲಾಕ್‌ ಮಾಡಿ, ಹಣವು ಪೂರ್ಣ ಪ್ರಮಾಣದಲ್ಲಿ ವೃದ್ಧಿಯಾಗಲು ಅವಕಾಶ ನೀಡಬೇಕಾಗುತ್ತದೆ.

2 ದೀರ್ಘಾವಧಿಯವರೆಗೆ ಒಂದೇ ಫಂಡ್‌ ಅಥವಾ ಇತರ ಉತ್ಪನ್ನದಲ್ಲಿ ಹೂಡಿಕೆ ಮಾಡಿರುವವರಿಗೆ ಮಾತ್ರ ಈಗಿನ ತೆರಿಗೆ ವ್ಯವಸ್ಥೆಯು ಪ್ರತಿಫಲಗಳನ್ನು ನೀಡುತ್ತದೆ. ಹೂಡಿಕೆದಾರರ ಅಪಾಯ ತಾಳಿಕೆಯ ಶಕ್ತಿಯನ್ನಾಗಲಿ, ಮಾರುಕಟ್ಟೆಯ ಏರುಪೇರಿಗೆ ಅನುಗುಣವಾಗಿ ಗ್ರಾಹಕರ ಆದ್ಯತೆಗಳೂ ಬದಲಾಗುತ್ತವೆ ಎಂಬುದನ್ನಾಗಲಿ ಅದು ಪರಿಗಣಿಸುವುದಿಲ್ಲ. ಆದ್ದರಿಂದ ಒಂದು ಹೂಡಿಕೆಯಿಂದ ಇನ್ನೊಂದಕ್ಕೆ ಬದಲಾಗಲು ಇಚ್ಛಿಸುವ ಗ್ರಾಹಕರು ತೆರಿಗೆ ಕಟ್ಟಲು ಸಹ ಸಿದ್ಧರಾಗಬೇಕಾಗುತ್ತದೆ. ಆದರೆ, ‘ಯೂಲಿ‍ಪ್‌’ ಯಾವುದೇ ತೆರಿಗೆಯ ಹೊರೆ ಇಲ್ಲದೆಯೇ ಬದಲಾವಣೆಯ ಅವಕಾಶವನ್ನು ಗ್ರಾಹಕರಿಗೆ ನೀಡುತ್ತದೆ.

ಷೇರು, ಸಾಲನಿಧಿ, ಬ್ಯಾಲೆನ್ಸ್‌ ಫಂಡ್‌ ಮುಂತಾಗಿ ವೈವಿಧ್ಯಮಯವಾದ ಹೂಡಿಕೆಗೆ ಹೊಸ ಯುಗದ ‘ಯೂಲಿ‍ಪ್‌’ ಅವಕಾಶ ಒದಗಿಸುತ್ತದೆ. ಹೆಚ್ಚುವರಿಯಾಗಿ ಯಾವುದೇ ವೆಚ್ಚ ಇಲ್ಲದೆ, ಹೂಡಿಕೆಯನ್ನು ಯಾವಾಗ ಬೇಕಾದರೂ ಬದಲಿಸಲು ಸಹ ಇದರಲ್ಲಿ ಸ್ವಾತಂತ್ರ್ಯವಿರುತ್ತದೆ. ಉತ್ತಮ ಗಳಿಕೆಯನ್ನು ಬಯಸುವವರು ಈ ಸೌಲಭ್ಯದ ಲಾಭವನ್ನು ಪಡೆಯಬಹುದಾಗಿದೆ. ಕೆಲವು ಉತ್ಪನ್ನಗಳಂತೂ ಹೂಡಿಕೆದಾರರ ವಯಸ್ಸಿಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ಮರುಹೊಂದಾಣಿಕೆ ಮಾಡುವ ಸೌಲಭ್ಯವನ್ನೂ ಹೊಂದಿವೆ. ಹೂಡಿಕೆದಾರರ ವಯಸ್ಸು ಜಾಸ್ತಿಯಾಗುತ್ತಿದ್ದಂತೆ ಅಥವಾ ಹೂಡಿಕೆಯ ಪಕ್ವತೆಯ ಅವಧಿ ಸಮೀಪಿಸುತ್ತಿದ್ದಂತೆ, ಹೆಚ್ಚು ಅಪಾಯಕಾರಿ ಉತ್ಪನ್ನಗಳಲ್ಲಿ ಮಾಡಿರುವ ಹೂಡಿಕೆಯು ತಾನಾಗಿಯೆ ಸಾಂಪ್ರದಾಯಿಕ ಉತ್ಪನ್ನಕ್ಕೆ ಬದಲಾಗುತ್ತದೆ. ಆ ಮೂಲಕ ಹೆಚ್ಚಿನ ತೆರಿಗೆ ಹೊರೆ ಇಲ್ಲದೆ ಹೂಡಿಕೆದಾರರ ನಿಧಿಯ ರಕ್ಷಣೆಯೂ ಆಗುತ್ತದೆ.

3 ಸುರಕ್ಷತೆಯನ್ನು ಅಂತರ್ಗತವಾಗಿಸಿಕೊಂಡೇ ‘ಯೂಲಿ‍ಪ್‌’ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಹೂಡಿಕೆದಾರರ ಅಗತ್ಯಗಳಿಗೆ ಸ್ಪಂದಿಸುವುದರ ಜತೆಗೆ ಇವು ಅವರ ಪ್ರೀತಿಪಾತ್ರರಿಗೂ ರಕ್ಷಣೆ ಒದಗಿಸುತ್ತವೆ. ಉದಾಹರಣೆಗೆ; ಕೆಲವು ‘ಯೂಲಿ‍ಪ್‌’ ಯೋಜನೆಗಳು ಪತ್ನಿ ಹಾಗೂ ಮಕ್ಕಳನ್ನೂ ವಿಮೆಯ ವ್ಯಾಪ್ತಿಯೊಳಗೆ ಸೇರಿಸಲು ಅವಕಾಶ ಕಲ್ಪಿಸುತ್ತವೆ.

ನಿವೃತ್ತಿಯ ನಂತರದ ಬದುಕಿಗಾಗಿ ಯೋಜನೆ ರೂಪಿಸುವವರಿಗೆ ಜೀವನಪರ್ಯಂತ ಅನ್ವಯವಾಗುವ ಯೋಜನೆಗಳು ಸೂಕ್ತವೆನಿಸಬಹುದು. ಇಂತಹ ಉತ್ಪನ್ನಗಳು ರಕ್ಷಣೆಯ ಜತೆಗೆ, ದೊಡ್ಡ ನಿಧಿಯೊಂದನ್ನು ರೂಪಿಸಲೂ ಸಹಾಯಕವಾಗುತ್ತವೆ. ಏರುತ್ತಿರುವ ವಯಸ್ಸು ಹಾಗೂ ಅಪಾಯ ತಾಳಿಕೆಯ ಶಕ್ತಿಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಇಂಥ ಉತ್ಪನ್ನಗಳು ಸಹಾಯಕ.

4 ತೆರಿಗೆ ಲಾಭ: ‘ಯೂಲಿ‍ಪ್‌’ಗಳ ಮೇಲೆ ಚಿಲ್ಲರೆ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ಮೇಲೆ ತಿಳಿಸಿದ ಕಾರಣಗಳೇ ಸಾಕಾಗಬಹುದು. ಆದರೆ ‘ಯೂಲಿ‍ಪ್‌’ಗಳ ಅತ್ಯಂತ ಆಕರ್ಷಕವಾದ ಲಾಭವೆಂದರೆ ಉತ್ಪನ್ನವನ್ನು ನಗದೀಕರಿಸುವ ಸಂದರ್ಭದಲ್ಲಿ ತೆರಿಗೆ ಅನ್ವಯವಾಗುವುದಿಲ್ಲ ಎಂಬುದು. ಆದ್ದರಿಂದ ಎಷ್ಟು ದೀರ್ಘ ಕಾಲ ನೀವು ಹೂಡಿಕೆಯನ್ನು ಮುಂದುವರಿಸುತ್ತೀರೋ, ಅದಕ್ಕೆ ಅನುಗುಣವಾಗಿ ಹೆಚ್ಚಿನ ನಿಧಿ ಸಂಗ್ರಹಿಸಲು ಅವಕಾಶವಿರುತ್ತದೆ. ಇತರ ಹೂಡಿಕಾ ಉತ್ಪನ್ನಗಳು ಇದಕ್ಕೆ ವಿರುದ್ಧವಾಗಿರುತ್ತವೆ. ಅವುಗಳಲ್ಲಿ ಎಷ್ಟು ದೀರ್ಘ ಕಾಲ ಹೂಡಿಕೆ ಮಾಡಿರುತ್ತೀರೋ, ತೆರಿಗೆಯೂ ಅದೇ ಪ್ರಮಾಣದಲ್ಲಿ ಹೆಚ್ಚಿರುತ್ತದೆ.

ಆದ್ದರಿಂದ, ರಕ್ಷಣೆಯ ಜತೆಗೆ ದೊಡ್ಡ ನಿಧಿಯನ್ನೂ ಸಂಗ್ರಹಿಸಬೇಕು ಎಂದು ಬಯಸುವ ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡೇ ಹೊಸ ಕಾಲದ ‘ಯೂಲಿ‍ಪ್‌’ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇ–ಕಾಮರ್ಸ್‌ ಯುಗದಲ್ಲಿ ಉತ್ಪನ್ನ ಮತ್ತು ಆನ್‌ಲೈನ್‌ ಅನುಭವದ ವಿಚಾರಗಳಲ್ಲಿ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಇಂಥ ಸನ್ನಿವೇಶದಲ್ಲಿ ‘ಯೂಲಿ‍ಪ್‌’ಗಳು ವಿಮಾ ಕ್ಷೇತ್ರದ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಬಲ್ಲವು.

*ಹೂಡಿಕೆದಾರರ ಗ್ರಹಿಕೆ ಬದಲಿಸಿರುವ ಹೊಸ ತಲೆಮಾರಿನ ‘ಯೂಲಿಪ್‌’ಗಳು

*ಹೊಸ ಕಾಲದ ಗ್ರಾಹಕರ ಬೇಡಿಕೆ ಈಡೇರಿಕೆ

*ಅಲ್ಪಾವಧಿ, ದೀರ್ಘಾವಧಿ ಗುರಿ ಈಡೇರಿಕೆಗೆ ಸೂಕ್ತ ಉತ್ಪನ್ನ

*ಚಿಲ್ಲರೆ ಹೂಡಿಕೆದಾರರಿಗೆ ಹೆಚ್ಚು ಸೂಕ್ತ

*ತೆರಿಗೆ ಹೊರೆ ಇಲ್ಲದೆಯೇ ಹೂಡಿಕೆ ಬದಲಾವಣೆ

*ವೈವಿಧ್ಯಮಯ ಹೂಡಿಕೆಗೆ ಅವಕಾಶ

*ಹೂಡಿಕೆ ನಗದೀಕರಣ ಸಂದರ್ಭದಲ್ಲಿ ತೆರಿಗೆ ಅನ್ವಯವಾಗದು

(ಲೇಖಕ: ಎಡಲ್ವೈಸ್‌ ಟೋಕಿಯೊ ಲೈಫ್‌ನ ಮುಖ್ಯ ರಿಟೇಲ್‌ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT