ಭಾನುವಾರ, ಆಗಸ್ಟ್ 25, 2019
24 °C
ಬಜೆಟ್‌ ಪ್ರಭಾವ, ಕಂಪನಿಗಳ ಆರ್ಥಿಕ ಸಾಧನೆ ನಿರಾಶಾದಾಯಕ

ಕರಗಿದೆ ₹13 ಲಕ್ಷ ಕೋಟಿ ಸಂಪತ್ತು

Published:
Updated:
Prajavani

ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ (ಎಫ್‌ಪಿಐ) ಕೇಂದ್ರ ಬಜೆಟ್‌ ಮೂಡಿಸಿರುವ ಆತಂಕದಿಂದಾಗಿ ಷೇರುಪೇಟೆಯಿಂದ ಬಂಡವಾಳ ಹೊರಹರಿವು ಹೆಚ್ಚುತ್ತಲೇ ಇದೆ. ಸಂಪತ್ತು ಮೌಲ್ಯದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.

ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಪ್ರಸ್ತಾವನೆಗಳು ವಿದೇಶಿ ಸಾಂಸ್ಥಿಕ ಹೂಡಿಕೆಯನ್ನು ಕಡಿಮೆ ಮಾಡುತ್ತಿವೆ. ಸಿರಿವಂತರ ಮೇಲೆ ಸರ್ಚಾರ್ಜ್‌ ಹೆಚ್ಚಿಸಿರುವುದರಿಂದ ಬಂಡವಾಳ ಒಳಹರಿವಿಗೆ ಅಡ್ಡಿಯಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜುಲೈ 1 ರಿಂದ ಆಗಸ್ಟ್‌ 2ರವರೆಗೆ ನಡೆದಿರುವ ವಹಿವಾಟು ಅವಧಿಗಳಲ್ಲಿ ಷೇರುಪೇಟೆಯ ಬಂಡವಾಳ ಮೌಲ್ಯ 152.55 ಲಕ್ಷ ಕೋಟಿಯಿಂದ ₹ 139.98 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದರಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ₹ 12.57 ಲಕ್ಷ ಕೋಟಿ ಕರಗಿದೆ. ಬಜೆಟ್‌ ನಂತರ (ಜುಲೈ 5ರಿಂದ ಆಗಸ್ಟ್‌ 2ರವರೆಗೆ) ₹ 11.37 ಲಕ್ಷ ಕೋಟಿ ಕರಗಿದೆ.

ವಾರದ ವಹಿವಾಟು: ಷೇರುಪೇಟೆಯ ವಾರದ ವಹಿವಾಟು ನಕಾರಾತ್ಮಕ ಅಂತ್ಯಕಂಡಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 765 ಅಂಶ ಇಳಿಕೆ ಕಂಡು 37,118 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 287 ಅಂಶ ಇಳಿಕೆಯಾಗಿ 10,997 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವಾರದಲ್ಲಿ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ₹ 4,498 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿ ₹14,383 ಕೋಟಿ ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಫೆಬ್ರುವರಿಯಿಂದ ಜೂನ್‌ವರೆಗೆ ಹೂಡಿಕೆಗೆ ಗಮನ ನೀಡಿದ್ದರು.

ಸೂಚ್ಯಂಕ ಇಳಿಕೆಗೆ ಕಾರಣಗಳು
*
 ಚೀನಾದ ₹ 2.07 ಲಕ್ಷ ಕೋಟಿ ಮೌಲ್ಯದ ಸರಕುಗಳಿಗೆ ಶೇ 10ರಷ್ಟು ಆಮದು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದ್ದಾರೆ. ಇದು ವಾಣಿಜ್ಯ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದು, ಭಾರತವನ್ನೂ ಜಾಗತಿಕ ಷೇರುಪೇಟೆಗಳಲ್ಲಿ ನಕಾರಾತ್ಮಕ ಚಲನೆಗೆ ಕಾರಣವಾಗಿದೆ.
* ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ  ಪ್ರಮುಖ ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷೆಯಂತೆ ತೃಪ್ತಿಕರವಾಗಿಲ್ಲ. ಇದರಿಂದ ಆಯಾ ಕಂಪನಿಗಳ ಷೇರುಗಳ ಬೆಲೆ ಇಳಿಕೆ ಕಾಣುತ್ತಿದೆ.
10 ವರ್ಷಗಳ ಸರ್ಕಾರಿ ಬಾಂಡ್‌ ಗಳಿಕೆಯು ಶೇ 6.35ಕ್ಕೆ ಇಳಿಕೆಯಾಗಿದೆ.
* ವಾಹನ ಉದ್ಯಮ 2018ರ ಏಪ್ರಿಲ್‌ನಿಂದ ಮಾರಾಟ ನಷ್ಟ ಎದುರಿಸುತತ್ತಿದೆ. ಜುಲೈ ತಿಂಗಳ ಮಾರಾಟ ಪ್ರಗತಿಯ ಎರಡಂಕಿ ಕುಸಿತ ಕಂಡಿದೆ.
* ಮೂಲಸೌಕರ್ಯ ವಲಯದ ಪ್ರಗತಿ ಶೇ 0.2ಕ್ಕೆ ಕುಸಿತ ಕಂಡಿದೆ.

Post Comments (+)