ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಹೂಡಿಕೆ ಹಿಂತೆಗೆತಕ್ಕಿಲ್ಲ ತಡೆ; 5 ದಿನಗಳಲ್ಲಿ ₹ 18.74 ಲಕ್ಷ ಕೋಟಿ ನಷ್ಟ

Last Updated 13 ಮೇ 2022, 5:44 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ದೇಶದ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದವರು ಐದು ದಿನಗಳ ವಹಿವಾಟಿನಲ್ಲಿ ₹ 18.74 ಲಕ್ಷ ಕೋಟಿ ಸಂಪತ್ತು ಕಳೆದುಕೊಂಡಿದ್ದಾರೆ. ದೇಶದ ಷೇರು ಮಾರುಕಟ್ಟೆಗಳಲ್ಲಿ ಸತತ ಐದು ದಿನಗಳಿಂದ ನಕಾರಾತ್ಮಕ ವಹಿವಾಟು ನಡೆದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ವಹಿವಾಟಿನಲ್ಲಿ 1,158 ಅಂಶ ಇಳಿಕೆ ಕಂಡು, 52,930ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 359 ಅಂಶ ಕುಸಿದು, 15,808ಕ್ಕೆ ತಲುಪಿತು. ಐದು ದಿನಗಳಲ್ಲಿ ಸೆನ್ಸೆಕ್ಸ್ 2,771 ಅಂಶ ಇಳಿದಿದೆ.

‘ಹಣದುಬ್ಬರವು ಷೇರುಪೇಟೆಗಳ ಪಾಲಿಗೆ ಕಳವಳಕಾರಿ ಸಂಗತಿಯಾಗಿ ಮುಂದುವರಿದಿದೆ. ಆರ್ಥಿಕ ಬೆಳವಣಿಗೆ ಅಂದಾಜು ತಗ್ಗಿರುವುದು, ರಷ್ಯಾ–ಉಕ್ರೇನ್ ಯುದ್ಧ ಮುಂದುವರಿದಿರುವುದು, ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆತವನ್ನು ನಿಲ್ಲಿಸದಿರುವುದು ಮತ್ತು ಬಾಂಡ್ ಮೇಲಿನ ಗಳಿಕೆ ಹೆಚ್ಚಾಗುತ್ತಿರುವುದು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ.

‘ಅಮೆರಿಕದ ಹಣದುಬ್ಬರ ಪ್ರಮಾಣದ ಅಂಕಿ–ಅಂಶಗಳು, ಹಣದುಬ್ಬರದ ಒತ್ತಡವು ತಕ್ಷಣಕ್ಕೆ ಕಡಿಮೆ ಆಗುವುದಿಲ್ಲ ಎಂಬುದನ್ನು ಹೇಳುತ್ತಿವೆ. ಆದರೆ, ಅಲ್ಲಿ ಹಣದುಬ್ಬರ ಪ್ರಮಾಣವು ಗರಿಷ್ಠ ಮಟ್ಟವನ್ನು ತಲುಪಿ ಆಗಿದೆ ಎಂಬ ಅಂದಾಜು ಇದೆ. ಅದು ಮುಂದಿನ ದಿನಗಳಲ್ಲಿ ನಿಧಾನವಾಗಿ ಕಡಿಮೆ ಆಗಬಹುದು. ಹಣದುಬ್ಬರ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ತೀರ್ಮಾನವನ್ನು ಪರಿಗಣನೆಗೆ ತೆಗದುಕೊಂಡು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಬಂಡವಾಳ ಹಿಂತೆಗೆತವನ್ನು ಕಡಿಮೆ ಮಾಡಿದ ನಂತರದಲ್ಲಿ ಷೇರು ಮಾರುಕಟ್ಟೆಗಳಲ್ಲಿ ಸ್ಥಿರತೆ ಕಾಣಿಸಬಹುದು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ಜಾಗತಿಕ ಮಾರುಕಟ್ಟೆಗಳಲ್ಲಿ ಆಗುತ್ತಿರುವಂತೆ ಭಾರತದ ಷೇರು ಮಾರುಕಟ್ಟೆಗಳಲ್ಲಿಯೂ ಒತ್ತಡ ಇರಲಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಸಹಜ್ ಅಗರ್ವಾಲ್ ಹೇಳಿದ್ದಾರೆ. ಸೆನ್ಸೆಕ್ಸ್‌ನ ಮೂವತ್ತು ಷೇರುಗಳ ಪೈಕಿ ವಿಪ್ರೊ ಹೊರತುಪಡಿಸಿ ಬೇರೆ ಎಲ್ಲ ಕಂಪನಿಗಳ ಷೇರುಗಳು ಗುರುವಾರ ಕುಸಿತ ಕಂಡಿವೆ.

ಟೋಕಿಯೊ, ಹಾಂಗ್‌ಕಾಂಗ್, ಸೋಲ್ ಮತ್ತು ಶಾಂಘೈ ಷೇರು ಮಾರುಕಟ್ಟೆಗಳು ಕೂಡ ಕುಸಿತ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇ 2.02ರಷ್ಟು ಕಡಿಮೆ ಆಗಿದ್ದು, ಪ್ರತಿ ಬ್ಯಾರೆಲ್‌ಗೆ 105.7 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT