ಸೋಮವಾರ, ನವೆಂಬರ್ 18, 2019
27 °C
₹700 ದಾಟಿದ ಷೇರು ಬೆಲೆ

ಐಆರ್‌ಸಿಟಿಸಿ: ಮೊದಲ ವಹಿವಾಟಿನಲ್ಲೇ ಶೇ 101ರಷ್ಟು ಏರಿಕೆ ಕಂಡ ಷೇರು ಬೆಲೆ

Published:
Updated:
ಐಆರ್‌ಸಿಟಿಸಿ

ನವದೆಹಲಿ: ವಹಿವಾಟಿನ ಮೊದಲ ದಿನವೇ ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಷೇರುಗಳು ಶೇ 101ರಷ್ಟು ಏರಿಕೆ ದಾಖಲಿಸಿವೆ.  

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಐಆರ್‌ಸಿಟಿಸಿ ಪ್ರತಿ ಷೇರಿಗೆ ಗರಿಷ್ಠ ₹320 ನಿಗದಿಪಡಿಸಿ ಮಾರಾಟ ಮಾಡಲಾಗಿತ್ತು. ಸೋಮವಾರ ಷೇರುಗಳ ವಹಿವಾಟು ಆರಂಭವಾಗುತ್ತಿದ್ದಂತೆ ಒಮ್ಮೆಗೆ ಷೇರು ಬೆಲೆ ₹644 ಮುಟ್ಟಿತು. ಪ್ರಸ್ತುತ ಪ್ರತಿ ಷೇರಿನ ವಹಿವಾಟು ಬೆಲೆ ₹700 ದಾಟಿದೆ. 

ಐಪಿಒ ಮೂಲಕ ₹645 ಕೋಟಿ ಸಂಗ್ರಹಿಸಲಾಗಿದೆ. ₹10ರ ಮುಖಬೆಲೆಯ 2.01 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ವಹಿವಾಟಿನ ಬಳಿಕ ಐಆರ್‌ಸಿಟಿಸಿ ಮಾರುಕಟ್ಟೆ ಮೌಲ್ಯ ₹10,972 ಕೋಟಿ ತಲುಪಿದೆ. 

ರೈಲುಗಳಲ್ಲಿ ಕ್ಯಾಟರಿಂಗ್‌ ಸೇವೆ, ರೈಲು ನಿಲ್ದಾಣಗಳು ಮತ್ತು ಸಂಚರಿಸುವ ರೈಲುಗಳಲ್ಲಿ ಕುಡಿಯುವ ನೀರಿನ ಬಾಟಲಿಗಳ ಪೂರೈಕೆ ಹಾಗೂ ಆನ್‌ಲೈನ್‌ ರೈಲ್ವೆ ಟಿಕೆಟ್‌ ಒದಗಿಸುತ್ತಿರುವ ಭಾರತೀಯ ರೈಲ್ವೆಯಿಂದ ಅಧಿಕೃತಗೊಂಡಿರುವ ಏಕೈಕ ಸಂಸ್ಥೆ ಐಆರ್‌ಸಿಟಿಸಿ. 

ಯೆಸ್‌ ಸೆಕ್ಯುರಿಟೀಸ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಮತ್ತು ಐಡಿಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಆ್ಯಂಡ್‌ ಸೆಕ್ಯುರಿಟೀಸ್‌ ಈ ‘ಐಪಿಒ’ದ ನಿರ್ವಹಣೆ ಮಾಡಿವೆ.

ಪ್ರತಿಕ್ರಿಯಿಸಿ (+)