ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಸಿಕೊಳ್ಳುವುದೇ ರಿಯಲ್‌ ಎಸ್ಟೇಟ್‌

Last Updated 5 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸಾಲುಸಾಲು ಹಬ್ಬಗಳು ಬಂದಾಗಲೇ ಗೃಹ ನಿರ್ಮಾಣ ಕ್ಷೇತ್ರ ಚೇತರಿಕೆ ಕಾಣುವುದು ನಮ್ಮಲ್ಲಿ ಸಾಮಾನ್ಯ ಬೆಳವಣಿಗೆ. ರಿಯಲ್‌ಎಸ್ಟೇಟ್‌ ಸಂಸ್ಥೆಗಳೂ ಗ್ರಾಹಕರನ್ನು ಆಕರ್ಷಿಸಲು ಹಬ್ಬದ ಸಂದರ್ಭದಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸುತ್ತವೆ.ಈ ಬಾರಿಯಂತೂ ಗೃಹ ನಿರ್ಮಾಣ ಉದ್ಯಮವು ಭಾರಿ ಸಂಕಷ್ಟ ಅನುಭವಿಸಿದೆ. ಈ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರವೂ ಇತ್ತೀಚೆಗೆ ಒಂದಷ್ಟು ರಿಯಾಯಿತಿಗಳನ್ನು ಘೋಷಿಸಿದೆ.

ದೇಶದಲ್ಲಿ ಕೃಷಿ ಕ್ಷೇತ್ರವನ್ನು ಬಿಟ್ಟರೆ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ರಿಯಲ್‌ಎಸ್ಟೇಟ್‌ ಉದ್ಯಮ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಈ ಉದ್ದಿಮೆಯ ಪಾಲು ತುಂಬಾ ದೊಡ್ಡದಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಗೃಹ ನಿರ್ಮಾಣ ಕ್ಷೇತ್ರವು ಬಿಲ್ಡರ್‌ಗಳು ಮತ್ತು ಖರೀದಿದಾರರನ್ನು ಮಾತ್ರವಲ್ಲ ಸರ್ಕಾರವನ್ನೂ ಸಹ ಆತಂಕಕ್ಕೆ ದೂಡಿದೆ.

ಗೃಹನಿರ್ಮಾಣ ಕ್ಷೇತ್ರವು ಸಂಕಷ್ಟದ ಸುಳಿಗೆ ಸಿಲುಕಿರುವುದನ್ನು ಗಮನಿಸಿದ ಸರ್ಕಾರವು ಈಗಾಗಲೇ ಮಧ್ಯಮ ವರ್ಗದವರ ಕೈಗೆಟುಕುವ ಗೃಹನಿರ್ಮಾಣ ಯೋಜನೆಗಳ ಉತ್ತೇಜನಕ್ಕಾಗಿ ₹ 20,000 ಕೋಟಿಯ ನಿಧಿಯನ್ನು ಘೋಷಿಸಿದೆ. ಇದರಿಂದ 3.5 ಲಕ್ಷದಷ್ಟು ಮನೆಗಳ ನಿರ್ಮಾಣಕ್ಕೆ ಉತ್ತೇಜನ ಲಭಿಸಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಇದಲ್ಲದೆ, ಸರ್ಕಾರಿ ನೌಕರರಿಗೆ ನೀಡುವ ಗೃಹ ನಿರ್ಮಾಣ ಸಾಲದ ಬಡ್ಡಿದರವನ್ನು ಒಂದು ವರ್ಷದ ಅವಧಿಗೆ ಶೇ 7.9ಕ್ಕೆ ಇಳಿಸಿದೆ. ಜೊತೆಗೆ ಬಾಹ್ಯ ವಾಣಿಜ್ಯ ಸಾಲವನ್ನು (ಇಸಿಬಿ) ಕುರಿತ ನಿಯಮಾವಳಿಗಳನ್ನೂ ಸಡಿಲಗೊಳಿಸಿದೆ. ಇದರಿಂದ ಗೃಹ ನಿರ್ಮಾಣ ಕ್ಷೇತ್ರದ ನಗದು ಕೊರತೆಯ ಸಮಸ್ಯೆ ನಿವಾರಣೆ ಆಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

ಆರ್‌ಬಿಐ ಇತರ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವು (ರೆಪೊ ದರ) ಕಳೆದ ವರ್ಷ ಶೇ 6.50ರಷ್ಟು ಇತ್ತು. ಅದನ್ನು ಸತತವಾಗಿ ಐದು ಬಾರಿ ಇಳಿಕೆ ಮಾಡಲಾಗಿದೆ. ಈ ವರ್ಷ ಹಬ್ಬದ ಸಂದರ್ಭದಲ್ಲಿ ರೆಪೊ ದರ ಶೇ 5.15ರಷ್ಟು ಇತ್ತು. ಈ ಕಾರಣಕ್ಕೆ ಗ್ರಾಹಕರಿಗೆ ಶೇ 8.20ರ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಬ್ಯಾಂಕ್‌ಗಳಿಗೆ ಸಾಧ್ಯವಾಗಿದೆ.

ಗಾತ್ರ– ಬೇಡಿಕೆಯಲ್ಲಿ ಅಸಮತೋಲನ

ದೇಶದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಪ್ರಮಾಣವು ಮಧ್ಯಮ ವರ್ಗದ ಜನರ ಖರೀದಿ ಸಾಮರ್ಥ್ಯವನ್ನು ಮೀರಿದ ಕಾರಣದಿಂದಾಗಿ ಬೇಡಿಕೆ ಮತ್ತು ಪೂರೈಕೆಗಳ ಮಧ್ಯೆ ಅಂತರ ಸೃಷ್ಟಿಯಾಯಿತು. ಇದೇ ಗೃಹ ನಿರ್ಮಾಣ ಕ್ಷೇತ್ರದ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

2022ರವೇಳೆಗೆ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿರುವ ಸರ್ಕಾರವು ಖರೀದಿ ಸಾಮರ್ಥ್ಯಕ್ಕೆ ಅನುಗುಣವಾದ ಗಾತ್ರದ ಮನೆಗಳ ನಿರ್ಮಾಣಕ್ಕೆ ಒತ್ತು ನೀಡುವುದರಿಂದ ಖರೀದಿದಾರರು ಈಗ ಸ್ವಂತ ಮನೆಹೊಂದುವ ಚಿಂತನೆ ನಡೆಸಬಹುದು. ಪರೋಕ್ಷವಾಗಿ ಇದು ಈ ಕ್ಷೇತ್ರಕ್ಕೆ ಉತ್ತೇಜನ ನೀಡಬಹುದು.

ವಾಸ್ತವಕ್ಕೆ ಸಮೀಪದ ಕೊಡುಗೆ

ಹಬ್ಬದ ಸಂದರ್ಭದಲ್ಲಿ ಗೃಹನಿರ್ಮಾಣ ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸಲು ವಿಶೇಷ ಕೊಡುಗೆಗಳನ್ನು ಘೋಷಿಸುವುದು ಸಾಮಾನ್ಯ. ಹೆಚ್ಚಿನ ಸಂದರ್ಭದಲ್ಲಿ ಇಂಥ ಕೊಡುಗೆಗಳು ವಾಸ್ತವಕ್ಕಿಂತ ಭಿನ್ನವಾಗಿರುತ್ತವೆ. ಆದರೆ, ಈ ವರ್ಷ ಬಿಲ್ಡರ್‌ಗಳು ನಗದು ಕೊರತೆಯ ಸಮಸ್ಯೆ ಎದುರಿಸುತ್ತಿರುವುದರಿಂದ ವಾಸ್ತವಿಕ ಕೊಡುಗೆಗಳನ್ನಷ್ಟೇ ಘೋಷಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮನೆಗಳ ನಿರ್ಮಾಣ ಪ್ರಮಾಣ ಹೆಚ್ಚಳವಾಗುತ್ತಿದೆ. ಅದಕ್ಕೆ ಅನುಗುಣವಾಗಿ ಖರೀದಿ ಪ್ರಮಾಣ ಏರಿಕೆಯಾಗುತ್ತಿಲ್ಲ. ಇದರಿಂದಾಗಿ ನಿರ್ಮಾಣ ಆಗಿರುವ ಮನೆಗಳ ಮಾರಾಟಕ್ಕೆ ವಿಶೇಷ ರಿಯಾಯಿತಿ ಯೋಜನೆಗಳನ್ನು ಘೋಷಿಸುವುದು ಅನಿವಾರ್ಯವಾಗುತ್ತಿದೆ. ಇದರಿಂದಾಗಿ ರಿಯಲ್‌ಎಸ್ಟೇಟ್‌ ಮಾರುಕಟ್ಟೆಯು ಈಗ ಖರೀದಿದಾರ ಕೇಂದ್ರಿತ ಮಾರುಕಟ್ಟೆಯಾಗುತ್ತಿದೆ. ಸ್ವಂತ ಮನೆ ಖರೀದಿ ನಿರ್ಧಾರವನ್ನು ಮುಂದೂಡುತ್ತಲೇ ಬಂದಿರುವವರು ಈಗ ಪರಿಸ್ಥಿತಿಯ ಗರಿಷ್ಠ ಲಾಭ ಮಾಡಿಕೊಳ್ಳಬಹುದಾಗಿದೆ.

ಗೃಹ ನಿರ್ಮಾಣ ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬ, ಸಕಾಲದಲ್ಲಿ ಮನೆಗಳ ಹಸ್ತಾಂತರ ಆಗದಿರುವುದು, ವ್ಯಾಜ್ಯ ಮುಂತಾದ ಕಾರಣಗಳಿಂದ ಖರೀದಿದಾರರು ಮಾರುಕಟ್ಟೆ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಘೋಷಿಸಿರುವ ಉಪಕ್ರಮಗಳು ಸರಿಯಾಗಿ ಜಾರಿಯಾಗದ ಹೊರತು ಗ್ರಾಹಕರ ವಿಶ್ವಾಸ ಪುನಃ ಸ್ಥಾಪನೆಯಾಗಲಾರದು. ಬಡ್ಡಿದರ ಇಳಿಕೆ ಮುಂತಾದ ಕ್ರಮಗಳು ಮತ್ತು ಹಬ್ಬದ ಸಂದರ್ಭದಲ್ಲಿ ನಿರ್ಮಾಣ ಸಂಸ್ಥೆಗಳು ಘೋಷಿಸಿದ ರಿಯಾಯಿತಿಗಳಿಂದಾಗಿ ಮಾರುಕಟ್ಟೆಯಲ್ಲಿ ಈಗ ಸ್ವಲ್ಪ ಉತ್ಸಾಹ ಕಾಣಿಸುತ್ತಿದೆ. ಸರ್ಕಾರ ಈ ಕ್ಷೇತ್ರದತ್ತ ಇನ್ನೂ ಸ್ವಲ್ಪ ಗಮನಹರಿಸಿದರೆ ಈ ವರ್ಷದಲ್ಲಿ ರಿಯಲ್‌ಎಸ್ಟೇಟ್‌ ಕ್ಷೇತ್ರವು ಚೇತರಿಕೆಯನ್ನು ಕಾಣಬಹುದು.

(ಲೇಖಕ: ನೈಟ್‌ಫ್ರ್ಯಾಂಕ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT