ಗುರುವಾರ , ಡಿಸೆಂಬರ್ 5, 2019
21 °C
ಉದ್ಯಮಿ ಮೋಹನ್‌ದಾಸ್‌ ಪೈ ಅಂದಾಜು

‘ಐ.ಟಿ: 40 ಸಾವಿರ ಉದ್ಯೋಗ ಕಡಿತ’

Published:
Updated:
Prajavani

ಬೆಂಗಳೂರು: ‘ಮಂದಗತಿಯ ಆರ್ಥಿಕತೆಯಿಂದಾಗಿ ಈ ವರ್ಷ ಮಾಹಿತಿ ತಂತ್ರಜ್ಞಾನ (ಐ.ಟಿ) ಸೇವಾ ಕಂಪನಿಗಳಲ್ಲಿ 30 ಸಾವಿರದಿಂದ 40 ಸಾವಿರದವರೆಗೆ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ’ ಎಂದು ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ತಿಳಿಸಿದ್ದಾರೆ.

‘ಪಾಶ್ಚಿಮಾತ್ಯ ದೇಶಗಳಲ್ಲಿನ ಎಲ್ಲಾ ವಲಯಗಳಲ್ಲಿ ಕಂಡು ಬರುವಂತೆ, ಭಾರತದಲ್ಲಿಯೂ ಐ.ಟಿ ಕಂಪನಿಯೊಂದು ವಹಿವಾಟಿನ ಉತ್ತುಂಗ ಸ್ಥಿತಿಗೆ ತಲುಪಿದಾಗ ಮಧ್ಯಮ ಹಂತದಲ್ಲಿ ಇರುವ ಸಿಬ್ಬಂದಿ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ. ಇವರು ಪಡೆಯುವ ವೇತನಕ್ಕೆ ತಕ್ಕಂತೆ ಕಂಪನಿಗೆ ವಹಿವಾಟು, ಲಾಭ ತಂದುಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರನ್ನು ಕೈಬಿಡಲಾಗುತ್ತದೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಸಹಜ ಪ್ರಕ್ರಿಯೆ ಇದಾಗಿದೆ.

‘ಈ ರೀತಿ ಉದ್ಯೋಗ ಕಳೆದುಕೊಳ್ಳುವವರು ಯಾವುದಾದರೂ ಒಂದು ನಿರ್ದಿಷ್ಟ ವಿಷಯದಲ್ಲಿ ಪರಿಣತಿ ಹೊಂದಿದ್ದರೆ ಅವರಲ್ಲಿ ಶೇ 80ರಷ್ಟು ಮಂದಿಗೆ ಬೇರೆ ಕಡೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ’ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸರ್ವಿಸಸ್‌ನ ಅಧ್ಯಕ್ಷರಾಗಿರುವ ಪೈ ಹೇಳಿದ್ದಾರೆ. ಈ ಹಿಂದೆ ಇವರು, ಇನ್ಫೊಸಿಸ್‌ನ ‘ಸಿಎಫ್‌ಒ’ ಆಗಿದ್ದರು.

‘ಕಂಪನಿಯ ಪ್ರಗತಿಯು ಒಂದು ಹಂತವನ್ನು ದಾಟಿದ ಬಳಿಕ ಈ ರೀತಿಯ ಉದ್ಯೋಗ ಕಡಿತ ನಡೆಸಲಾಗುತ್ತದೆ. ಕಂಪನಿಯು ಬೆಳವಣಿಗೆ ಸಾಧಿಸುತ್ತಿರುವಾಗ ಬಡ್ತಿ ನೀಡುವುದು ಸರಿ. ಆದರೆ, ಮಂದಗತಿಯ ಬೆಳವಣಿಗೆ ಇರುವಾಗ ಇಂತಹ ಸಿಬ್ಬಂದಿಯನ್ನು ಕೈಬಿಡುವ ಪ್ರಕ್ರಿಯೆಗೆ ಕಂಪನಿಗಳು ಮುಂದಾಗುತ್ತವೆ. 

‘ಉದ್ಯೋಗಿಯೊಬ್ಬ ಉತ್ತಮ ಪ್ರದರ್ಶನ ನೀಡದೇ ಇದ್ದರೆ ಯಾರೊಬ್ಬರೂ ಗರಿಷ್ಠ ವೇತನದ ಉದ್ಯೋಗ ನೀಡುವುದಿಲ್ಲ. ಪಡೆಯುವ ವೇತನಕ್ಕೆ ಪ್ರತಿಯಾಗಿ ಕಂಪನಿಯ ಮೌಲ್ಯವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯೋಗಿಗಳು ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ’ ಎಂದು ಅವರು ವಾಸ್ತವಾಂಶವನ್ನು ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು