ಶುಕ್ರವಾರ, ಆಗಸ್ಟ್ 23, 2019
21 °C

ಐಟಿಆರ್: ಯಾರಿಗೆ ಯಾವ ಫಾರ್ಮ್?

Published:
Updated:
Prajavani

ಈ ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐ.ಟಿ ರಿಟರ್ನ್ಸ್ ಫೈಲ್) ಮಾಡುವ ಕೊನೆ ದಿನಾಂಕವನ್ನು ಕೇಂದ್ರ ಸರ್ಕಾರವು ಈಗ ಆಗಸ್ಟ್‌ ಅಂತ್ಯದವರೆಗೆ ವಿಸ್ತರಿಸಿದೆ. ಹಣಕಾಸು ವರ್ಷ 2018-19 ರ ಆದಾಯವನ್ನು ಈ ವರ್ಷ ಅಂದರೆ ಮೌಲ್ಯಮಾಪನ ವರ್ಷ 2019-20 ರಲ್ಲಿ ವರದಿ ಮಾಡಬೇಕು. ತಡವಾದರೆ ದಂಡವನ್ನು ಕಟ್ಟಬೇಕಾಗುತ್ತದೆ. ಡಿಸೆಂಬರ್ 31, 2019 ರ ಒಳಗಾಗಿ ರಿಟರ್ನ್ಸ್ ಫೈಲ್ ಮಾಡಿದರೆ ₹ 5,000 ಹಾಗೂ ಡಿಸೆಂಬರ್ 31, 2019 ರ ನಂತರ ಫೈಲ್ ಮಾಡಿದರೆ ₹ 10,000 ದಂಡ ಪಾವತಿ ಮಾಡಬೇಕಾಗುತ್ತದೆ.

ಸರಳವಾಗಿ ಹೇಳುವುದಾದರೆ ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 2.5 ಲಕ್ಷಕ್ಕಿಂತ ಜಾಸ್ತಿ ಇದ್ದರೆ ನೀವು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕು. 60 ಮತ್ತು 80 ವರ್ಷದ ಒಳಗಿರುವವರಿಗೆ ₹ 3 ಲಕ್ಷದ ಮಿತಿ ನಿಗದಿ ಮಾಡಿಸಲಾಗಿದೆ. 80 ವರ್ಷ ಮೇಲ್ಪಟ್ಟರಿಗೆ 5 ಲಕ್ಷ ರೂಪಾಯಿ ನಿಗದಿ ಪಡಿಸಲಾಗಿದೆ. ನಿಮ್ಮ ಆದಾಯವನ್ನು ಹೇಗೆ ರಿಪೋರ್ಟ್ ಮಾಡುವಿರಿ. ಮೌಲ್ಯಮಾಪನ ವರ್ಷ 2019-20ರಲ್ಲಿ (ಹಣಕಾಸು ವರ್ಷ 2018-19) ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಯಾವ ಆದಾಯ ತೆರಿಗೆ ಫಾರಂ ಬಳಸಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

1. ಐಟಿಆರ್-1 (ITR-1)

ಸಂಬಳ, ಒಂದು ಮನೆಯ ಬಾಡಿಗೆ ಮತ್ತು ಬ್ಯಾಂಕ್ ಬಡ್ಡಿಯಿಂದ ಆದಾಯ ಪಡೆಯುತ್ತಿರುವ ಭಾರತೀಯರು ಐಟಿಆರ್-1 ಫಾರಂ ಬಳಸಿ  ರಿಟರ್ನ್ಸ್ ಫೈಲ್ ಮಾಡಬಹುದಾಗಿದೆ. ₹ 50 ಲಕ್ಷವರೆಗಿನ ಆದಾಯದ ಲೆಕ್ಕಪತ್ರ ಸಲ್ಲಿಸಬಹುದು. ಆದರೆ, ಇಲ್ಲಿ ಸೂಚಿಸಿರುವ ಸಂಗತಿಗಳನ್ನು ನಿಮ್ಮ ಒಟ್ಟು ಆದಾಯದಿಂದ ಕಡಿತಗೊಳಿಸಬೇಕು. ಅ) ಸಂಬಳ ಭತ್ಯೆಗಳು ಆ) ಗೃಹ ಸಾಲ ಮರು ಪಾವತಿ (ಬಡ್ಡಿ ಸೇರಿದಂತೆ) ಇ) ಭವಿಷ್ಯ ನಿಧಿಯಲ್ಲಿನ ಹೂಡಿಕೆ, ಎಲ್‌ಐಸಿ ಪ್ರೀಮಿಯಂ ಪಾವತಿ, ವೈದ್ಯಕೀಯ ವಿಮೆ ಮತ್ತು ಆದಾಯ ತೆರಿಗೆಯಿಂದ ವಿನಾಯ್ತಿ ಇರುವ ಆದಾಯಗಳಾದ ಲಾಭಾಂಶ, ಪಿಪಿಎಫ್ ಮೇಲಿನ ಬಡ್ಡಿ, ಎಲ್‌ಐಸಿ ಮೆಚ್ಯೂರಿಟಿ. ಈ ಆದಾಯಗಳು ನಿಮ್ಮ ವಾರ್ಷಿಕ ಒಟ್ಟು ಆದಾಯಕ್ಕೆ ಒಳಪಡುವುದಿಲ್ಲ.

2. ಐಟಿಆರ್-2 (ITR-2)

ವ್ಯಕ್ತಿ ಮತ್ತು ಹಿಂದೂ ಅವಿಭಜಿತ ಕುಟುಂಬವು ಐಟಿಆರ್-2 ಬಳಸಿ ರಿಟರ್ನ್ಸ್ ಫೈಲ್ ಮಾಡಬಹುದು. ಐಟಿಆರ್-1 ಒಂದು ಸರಳವಾದ ಫಾರಂ ಆಗಿದ್ದು ಈಗಾಗಲೇ ಮೇಲೆ ತಿಳಿಸಿರುವ ವಿಷಯಗಳಿಗೆ ಮಾತ್ರ ಅನ್ವಯಿಸುತ್ತದೆ. ವ್ಯಕ್ತಿ ಹಾಗೂ ಹಿಂದೂ ಅವಿಭಜಿತ ಕುಟುಂಬ ತಮ್ಮ ಆದಾಯವನ್ನು (ವ್ಯಾಪಾರ ಹಾಗೂ ವೃತ್ತಿಯಿಂದ ಗಳಿಸಿದ ಆದಾಯ ಹೊರತುಪಡಿಸಿ) ಐಟಿಆರ್-2 ಬಳಕೆ ಮಾಡಿ ರಿಟರ್ನ್ಸ್ ಫೈಲ್ ಮಾಡಬಹುದು. ಐಟಿಆರ್-2 ಅನ್ನು ಈ ಕೆಳಗಿನ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದೆ.

ಎ) ವ್ಯಕ್ತಿಯ (ನಿವಾಸಿ ಹಾಗೂ ಅನಿವಾಸಿ) ಒಟ್ಟು ವಾರ್ಷಿಕ ಆದಾಯ ₹ 50 ಲಕ್ಷಕ್ಕಿಂತ ಜಾಸ್ತಿ ಇದ್ದರೆ. ಬಿ) ಅನಿವಾಸಿ ಕಡ್ಡಾಯವಾಗಿ ಐಟಿಆರ್-2 ಬಳಸಿ ತಮ್ಮ ರಿಟರ್ನ್ಸ್ ಫೈಲ್ ಮಾಡಬೇಕು. ಅನಿವಾಸಿ ಭಾರತೀಯರು ಎಷ್ಟು ದಿವಸ ಭಾರತದಲ್ಲಿ ಇದ್ದರು ಎನ್ನುವುದು ಸೇರಿದಂತೆ ಅವರು ವಾಸಿಸುವ ರಾಷ್ಟ್ರ ಮತ್ತು ವಿದೇಶಿ ತೆರಿಗೆದಾರ ಗುರುತಿನ ಸಂಖ್ಯೆ ಒದಗಿಸಬೇಕು.

ಸಿ) ವ್ಯಕ್ತಿಗಳು ಒಂದು ಕಂಪನಿಯ (ಖಾಸಗಿ ಅಥವಾ ಸಾರ್ವಜನಿಕ) ನಿರ್ದೇಶಕರಾಗಿದಲ್ಲಿ ಐಟಿಆರ್-2 ಬಳಕೆ ಮಾಡಿ ರಿಟರ್ನ್ಸ್ ಫೈಲ್ ಮಾಡಬೇಕು. ಆದರೆ ವ್ಯಾಪಾರ ಅಥವಾ ವೃತ್ತಿಯನ್ನು ಮುಂದುವರೆಸುತ್ತಿದ್ದರೆ ಅಂಥವರು ಐಟಿಆರ್-3 ಬಳಕೆ ಮಾಡಬೇಕು.

ಡಿ) ಷೇರುಪೇಟೆಯಲ್ಲಿ ವಹಿವಾಟು ನಡೆಸದ (unlisted equity shares) ಸಂಸ್ಥೆಯಲ್ಲಿ ತಮ್ಮ ಹೆಸರಿನಲ್ಲಿ ಹೂಡಿಕೆ ಮಾಡಿರುವ ವ್ಯಕ್ತಿಗಳು ಐಟಿಆರ್-2 ಬಳಕೆ ಮಾಡಬೇಕು. ವ್ಯಾಪಾರ ಅಥವಾ ವೃತ್ತಿಯನ್ನು ಮುಂದುವರೆಸುತ್ತಿರುವವರು ಐಟಿಆರ್-3 ಬಳಕೆ ಮಾಡಬೇಕು.

ಇ) ಹಿಂದೂ ಅವಿಭಜಿತ ಕುಟುಂಬ ಐಟಿಆರ್-2 ಬಳಕೆ ಮಾಡಬೇಕು (ವ್ಯಾಪಾರ ಅಥವಾ ವೃತ್ತಿಯನ್ನು ಮುಂದುವರೆಸುತ್ತಿರುವರನ್ನು ಹೊರತ ಪಡಿಸಿ)

ಎಫ್) ವ್ಯಕ್ತಿ ಹಾಗೂ ಹಿಂದೂ ಅವಿಭಜಿತ ಕುಟುಂಬವು ಬಂಡವಾಳದಿಂದ ಗಳಿಸಿದ ಲಾಭ ಅಂದರೆ ಷೇರು, ಸಾಲಪತ್ರ ಅಥವಾ ಸ್ಥಿರ ಆಸ್ತಿ ಮಾರಾಟದಿಂದ ಬಂದ ಲಾಭ ಅಥವಾ ನಷ್ಟವನ್ನು ಐಟಿಆರ್-2 ಬಳಸಿ ಫೈಲ್ ಮಾಡಬೇಕು.

ಜಿ) ಮನೆ ಆಸ್ತಿಯಲ್ಲಿನ ನಷ್ಟ ಅಥವಾ ಈ ನಷ್ಟವನ್ನು ಕ್ಯಾರಿ ಫಾರ್ವಡ್ ಮಾಡಲು ಬಯಸುವ ವ್ಯಕ್ತಿಗಳು ಐಟಿಆರ್-2 ಬಳಕೆ ಮಾಡಬೇಕು.

ಎಚ್) ಒಂದಕ್ಕಿಂತ ಹೆಚ್ಚು ಮನೆ  ಹೊಂದಿದ ವ್ಯಕ್ತಿಗಳು.

ಐ) ವಿದೇಶಿ ಆದಾಯ ಮತ್ತು ಆಸ್ತಿ ಹೊಂದಿದ ವ್ಯಕ್ತಿ ಹಾಗೂ ಇಂಥವರು ವಿದೇಶಿ ತೆರಿಗೆ ಪಾವತಿ ಮಾಡಿರುವುದಾಗಿ ಹೇಳುವವರು.

3. ಐಟಿಆರ್-3 (ITR-3)

ವ್ಯಕ್ತಿಗಳು ಹಾಗೂ ಹಿಂದೂ ಅವಿಭಜಿತ ಕುಟುಂಬ ವ್ಯಾಪಾರ ಅಥವಾ ವೃತ್ತಿಯಿಂದ ಗಳಿಸಿದ ಆದಾಯ ಫೈಲ್ ಮಾಡಲು ಐಟಿಆರ್-3 ಬಳಕೆ ಮಾಡಬೇಕು. ಒಂದು ವೇಳೆ ಇವರ ವಾರ್ಷಿಕ ಆದಾಯ ₹ 50 ಲಕ್ಷಕ್ಕಿಂತ ಕಡಿಮೆ ಇದ್ದು ಇವರ ಆದಾಯದ ಮೂಲ ವ್ಯಾಪಾರ ಅಥವಾ ವೃತ್ತಿ (ಪಾರ್ಟನರ್‌ಶಿಪ್ ಅಥವಾ ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯಿಂದ ಗಳಿಸಿದ ಲಾಭ ಒಳಗೊಂಡಂತೆ) ಆಗಿದ್ದರೆ ಐಟಿಆರ್-3 ಬಳಕೆ ಮಾಡಬೇಕು. ಐಟಿಆರ್-3 ಫೈಲ್ ಮಾಡುವಾಗ ವ್ಯಾಪಾರ, ಲಾಭ ಮತ್ತು ನಷ್ಟ, ವಹಿವಾಟಿನ ಮಾಹಿತಿಯನ್ನು ಜಿಎಸ್‌ಟಿ ನಿಯಮದ ಪ್ರಕಾರ ಒದಗಿಸಬೇಕು. ವ್ಯಾಪಾರದ ಹಣಕಾಸು ಮಾಹಿತಿ (ಬ್ಯಾಲೆನ್ಸ್‌ಶೀಟ್) ಕೂಡ ನೀಡಬೇಕು.

ವ್ಯಕ್ತಿಗಳು ಅಥವಾ ಹಿಂದೂ ಅವಿಭಜಿತ ಕುಟುಂಬ ತಮ್ಮ ಎಲ್ಲಾ ಆದಾಯದ ಮೂಲಗಳಾದ ವೇತನ, ಮನೆ ಆಸ್ತಿ, ವ್ಯಾಪಾರ ಅಥವಾ ವೃತ್ತಿ, ಬಂಡವಾಳದಿಂದ ಗಳಿಸಿದ ಆದಾಯ ಮತ್ತು ಇತರ ಮೂಲದ ಆದಾಯವನ್ನು ಐಟಿಆರ್-3 ಬಳಸಿ ಫೈಲ್ ಮಾಡಬಹುದು.

4. ಐಟಿಆರ್-4 (ITR-4)

ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಗಳಿಸುವ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬ ಮತ್ತು ಪಾರ್ಟನರ್‌ರ್ಶಿಪ್ ಕಂಪನಿಗಳು (ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಹೊರತುಪಡಿಸಿ–ಎಲ್‌ಎಲ್‌ಪಿ) ಐಟಿಆರ್-4 ಬಳಕೆ ಮಾಡಬೇಕು.

ಒಟ್ಟು ವಾರ್ಷಿಕ ಆದಾಯ ₹ 50 ಲಕ್ಷ ಮಾತ್ರ ಇರುವವರು ಇದನ್ನು ಬಳಸಬಹುದು. ವಹಿವಾಟಿನ ಮೇಲಿನ ತೆರಿಗೆಯು ಊಹೆ ಆಧಾರಿತವಾಗಿರುತ್ತದೆ. ವ್ಯಾಪಾರ ತೆರಿಗೆದಾರರು ತಮ್ಮ ವಹಿವಾಟಿನ ಶೇಕಡ 8 ರಷ್ಟನ್ನು ಲಾಭ ಎಂದು ಪರಿಗಣಿಸಿ ಈ ಊಹೆ ಆಧಾರಿತ ತೆರಿಗೆ ಅಡಿಯಲ್ಲಿ ತಮ್ಮ ರಿಟರ್ನ್ಸ್ ಫೈಲ್ ಮಾಡಬಹುದು. (₹ 2 ಕೋಟಿವರೆಗಿನ ವಹಿವಾಟಿಗೆ ಮಾತ್ರ ಅನ್ವಯಿಸುತ್ತದೆ).

5. ಐಟಿಆರ್-5 (ITR-5)

ಅಸೋಸಿಯೇಷನ್ ಆಫ್ ಪರ್ಸನ್ಸ್, ಬಾಡಿ ಆಫ್ ಇಂಡಿವಿಜುವಲ್ಸ್, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ, ಕೋ-ಆಪರೇಟಿವ್ ಸೊಸೈಟಿಸ್, ಆರ್ಟಿಫಿಷಿಯಲ್ ಜುಡಿಷಿಯಲ್‌ ಪರ್ಸನ್ ಮತ್ತು ಸ್ಥಳೀಯ ಸಂಸ್ಥೆಗಳು ಈ ಅರ್ಜಿ ನಮೂನೆಯನ್ನು ಬಳಸಬಹುದು.

6. ಐಟಿಆರ್-6 (ITR-6)

ದತ್ತಿ ಹಾಗೂ ಧಾರ್ಮಿಕ ಉದ್ದೇಶಕ್ಕಾಗಿ ಹೊಂದಿದ ಆಸ್ತಿಯಿಂದ ಗಳಿಸಿದ ಆದಾಯದ ವಿನಾಯ್ತಿ ಕೇಳುವ ಕಂಪನಿಗಳು ಹೊರತು ಪಡಿಸಿ ಎಲ್ಲಾ ಕಾರ್ಪೊರೇಟ್ ತೆರಿಗೆದಾರ ಇದನ್ನು ಬಳಸಬೇಕು.

7. ಐಟಿಆರ್-7 (ITR-7)

ಸೆಕ್ಷನ್ಸ್ 139(4ಎ) to 139(4ಡಿ) ಅಡಿಯಲ್ಲಿ ಬರುವ ಕಾರ್ಪೊರೇಟ್‌ಗಳಾದ ಟ್ರಸ್ಟ್ಸ್, ನಾನ್-ಪ್ರಾಫಿಟ್ ಇನ್ಸ್ಟಿಟ್ಯೂಷನ್ಸ್, ಕಾಲೇಜು, 
ಇನ್‌ವೆಸ್ಟ್‌ಮೆಂಟ್ ಫಂಡ್ ಈ ಐಟಿಆರ್-7 ಬಳಸಿ ರಿಟರ್ನ್ಸ್ ಫೈಲ್ ಮಾಡಬೇಕು.

(ಲೇಖಕ: ಕ್ಲಿಯರ್ ಟ್ಯಾಕ್ಸ್‌ನ ಸಿಇಒ)

Post Comments (+)