ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ರಿಟರ್ನ್‌: ಅಧಿಸೂಚನೆ ಪ್ರಕಟ

ಐಟಿಆರ್‌ ಸಲ್ಲಿಸಲು ಜುಲೈ 31 ಕೊನೆಯ ದಿನ
Last Updated 5 ಏಪ್ರಿಲ್ 2019, 17:11 IST
ಅಕ್ಷರ ಗಾತ್ರ

ನವದೆಹಲಿ: ಅಂದಾಜು ವರ್ಷ 2019–20ರ ವೈಯಕ್ತಿಕ ಮತ್ತು ಕಂಪನಿಗಳ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐ.ಟಿ ರಿಟರ್ನ್‌) ಅರ್ಜಿಗಳ ಅಧಿಸೂಚನೆ ಹೊರಡಿಸಲಾಗಿದೆ.

ವೇತನ ವರ್ಗದವರು ಭರ್ತಿ ಮಾಡುವ ಐಟಿಆರ್‌–1 ಅಥವಾ ‘ಸಹಜ್‌’ ಅರ್ಜಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಐಟಿಆರ್‌ 2, 3, 5, 6 ಮತ್ತು 7ರಲ್ಲಿನ ಕೆಲ ಸೆಕ್ಷನ್‌ಗಳನ್ನು ಸರಳಗೊಳಿಸಲಾಗಿದೆ.

2018–19ನೆ ಹಣಕಾಸು ವರ್ಷದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳು ಗಳಿಸಿದ ಆದಾಯದ ಲೆಕ್ಕಪತ್ರ ವಿವರಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಸಲ್ಲಿಸಬೇಕಾಗುತ್ತದೆ.

ಹೆಚ್ಚಿನ ನಿಗಾ: ತೆರಿಗೆದಾರರು ಅಸಮರ್ಪಕ ಅಥವಾ ಕಡಿಮೆ ತೆರಿಗೆ ಪಾವತಿಸುವುದರ ಮೇಲೆ ಹೆಚ್ಚಿನ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಇತರ ವರಮಾನ ದಾಖಲಿಸುವಾಗ ಪ್ರತಿಯೊಂದು ಮೂಲದ ವಿವರಗಳನ್ನು ನೀಡಬೇಕಾಗುತ್ತದೆ. ಲಾಟರಿ, ಬಹುಮಾನದ ಮೊತ್ತ, ಬ್ಯಾಂಕ್‌ ಖಾತೆಯ ಬಡ್ಡಿ ವರಮಾನ, ಕುಟುಂಬ ಪಿಂಚಣಿಯ ವಿವರ ನೀಡಬೇಕಾಗುತ್ತದೆ.

ಆಸ್ತಿಪಾಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವಿವರ ನೀಡಬೇಕಾಗುತ್ತದೆ. ಆಸ್ತಿ ಮಾರಾಟಗಾರ ಮತ್ತು ಖರೀದಿದಾರನ ಸಂಪೂರ್ಣ ಮಾಹಿತಿ ನೀಡಬೇಕಾಗುತ್ತದೆ. ಇದಕ್ಕೂ ಮೊದಲು ಕೇವಲ ಮಾರಾಟಗಾರನ ವಿವರ ನೀಡಬೇಕಾಗಿತ್ತು.

ಐಟಿಆರ್‌–1: ಇದನ್ನು ವಾರ್ಷಿಕ ₹ 50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದವರು, ಒಂದು ಮನೆ ಆಸ್ತಿ, ಬಡ್ಡಿ ಸೇರಿದಂತೆ ಇತರ ವರಮಾನ ಮತ್ತು ₹ 5 ಸಾವಿರದವರೆಗಿನ ಕೃಷಿ ಆದಾಯ ಹೊಂದಿದವರು ಇದನ್ನು ಸಲ್ಲಿಸಬೇಕು.

ಐಟಿಆರ್‌–2: ಲಾಭ, ವಹಿವಾಟು, ವೃತ್ತಿ ಆದಾಯ ಹೊಂದಿಲ್ಲದ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳ (ಎಚ್‌ಯುಎಫ್‌) ಬಳಕೆಗೆ.

ಐಟಿಆರ್‌–3: ಲಾಭ, ವಹಿವಾಟು, ವೃತ್ತಿ ಆದಾಯ ಹೊಂದಿದ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗಾಗಿ.

ಐಟಿಆರ್‌–4 ಅಥವಾ ಸುಗಮ್‌: ವಾರ್ಷಿಕ ₹ 50 ಲಕ್ಷದವರೆಗೆ ಆದಾಯ ಹೊಂದಿದ ವ್ಯಕ್ತಿಗಳು, ಎಚ್‌ಯುಎಫ್‌ ಮತ್ತು ಸಂಸ್ಥೆಗಳು ವಹಿವಾಟು ಹಾಗೂ ವೃತ್ತಿಯಿಂದ ಊಹಾತ್ಮಕ ಆದಾಯ ಹೊಂದಿದವರಿಗಾಗಿ.

ಐಟಿಆರ್‌–3 ಮತ್ತು ಐಟಿಆರ್‌–6 (ಕಂಪನಿಗಳು) ತಮ್ಮ ವಹಿವಾಟು ಮತ್ತು ಜಿಎಸ್‌ಟಿಗೆ ಸಂಬಂಧಿಸಿದ ವರಮಾನದ ವಿವರಗಳನ್ನೂ ನೀಡಬೇಕಾಗುತ್ತದೆ. ಹಿಂದಿನ ವರ್ಷ ಇದು ಬರೀ ‘ಐಟಿಆರ್‌–4’ಗೆ ಅನ್ವಯವಾಗಿತ್ತು. ತಮ್ಮ ಲೆಕ್ಕಪತ್ರಗಳನ್ನು ತಪಾಸಣೆ ನಡೆಸುವ ಅಗತ್ಯ ಇಲ್ಲದವರು ಜುಲೈ 31ರ ಒಳಗೆ ಐಟಿಆರ್‌ಸಲ್ಲಿಸಬೇಕಾಗುತ್ತದೆ.

ಹೊಸ ತೆರಿಗೆದಾರರು
2017–18ನೆ ಹಣಕಾಸು ವರ್ಷದಲ್ಲಿ 1.07 ಕೋಟಿ ಹೊಸ ತೆರಿಗೆದಾರರು ಐಟಿಆರ್‌ ಸಲ್ಲಿಸಿದ್ದಾರೆ. 2016–17ರಲ್ಲಿ ಹೊಸದಾಗಿ ಐಟಿಆರ್‌ ಸಲ್ಲಿಸಿದವರ ಸಂಖ್ಯೆ 86.16 ಲಕ್ಷ ಇದ್ದರೆ, 2017–18ರಲ್ಲಿ ಇದು 1.07 ಕೋಟಿಗೆ ಏರಿಕೆಯಾಗಿತ್ತು. 2016–17ರಲ್ಲಿ 5.48 ಕೋಟಿ ಐಟಿಆರ್‌ ಸಲ್ಲಿಕೆಯಾಗಿದ್ದವು. 2017–18ರಲ್ಲಿ ಈ ಸಂಖ್ಯೆ 6.87 ಕೋಟಿಗೆ ಏರಿಕೆಯಾಗಿದ್ದು ಶೇ 25ರಷ್ಟು ಏರಿಕೆ ಕಂಡು ಬಂದಿದೆ.

ನೋಟು ರದ್ದತಿ ನಿರ್ಧಾರವು ತೆರಿಗೆ ವ್ಯಾಪ್ತಿ ವಿಸ್ತರಿಸಲು ಮತ್ತು ನೇರ ತೆರಿಗೆ ಸಂಗ್ರಹ ಹೆಚ್ಚಳಗೊಳ್ಳಲು ಗಮನಾರ್ಹ ಕೊಡುಗೆ ನೀಡಿದೆ. ಒಂದು ಬಾರಿ ಐಟಿಆರ್‌ ಸಲ್ಲಿಸಿದ ನಂತರ ಮೂರು ವರ್ಷಗಳವರೆಗೆ ಐಟಿಆರ್‌ ಸಲ್ಲಿಸದವರ ಸಂಖ್ಯೆಯು 28 ಲಕ್ಷದಿಂದ 25 ಲಕ್ಷಕ್ಕೆ ಇಳಿದಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

ನಿಯಮ ಪಾಲಿಸದ ಕಂಪನಿ ನಿರ್ದೇಶಕರಿಗೆ ನಿರ್ಬಂಧ
ಕಂಪನಿ ಕಾಯ್ದೆಯನ್ನು ಸಮರ್ಪಕವಾಗಿ ಪಾಲನೆ ಮಾಡದ ಕಂಪನಿಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಅವುಗಳ ನಿರ್ದೇಶಕರು ಮತ್ತು ಷೇರುಪೇಟೆಯಲ್ಲಿ ವಹಿವಾಟು ನಡೆಸದ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದವರು ಐಟಿಆರ್‌ ಅರ್ಜಿ ನಮೂನೆಗಳಾದ ‘ಸಹಜ್‌’ ಮತ್ತು ‘ಸುಗಮ್’ ಸಲ್ಲಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಹೊಸ ಹಣಕಾಸು ವರ್ಷದ ಐಟಿಆರ್‌ ನಿಯಮಗಳ ಅನ್ವಯ, ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಮತ್ತು ವಹಿವಾಟು ನಡೆಸದ ಕಂಪನಿಗಳ ನಿರ್ದೇಶಕರು ‘ಐಟಿಆರ್‌–2’ ಸಲ್ಲಿಸಬೇಕು. ಇದರಲ್ಲಿ ನಿರ್ದೇಶಕರ ಗುರುತಿನ ಸಂಖ್ಯೆ (ಡಿಐಎನ್‌), ಪ್ಯಾನ್‌, ಕಂಪನಿಗಳಲ್ಲಿನ ಪಾಲು ಬಂಡವಾಳದ ವಿವರಗಳನ್ನು ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT