ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಬಿಲ್‌ ₹ 1 ಲಕ್ಷ ಮೀರಿದರೆಐ.ಟಿ ರಿಟರ್ನ್‌ ಸಲ್ಲಿಕೆ ಕಡ್ಡಾಯ

ಐಟಿಆರ್‌ ಅರ್ಜಿ ಅಧಿಸೂಚನೆ ಪ್ರಕಟ
Last Updated 31 ಮೇ 2020, 14:30 IST
ಅಕ್ಷರ ಗಾತ್ರ

ನವದೆಹಲಿ : 2019–20ರ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯದ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಸುವ ಅರ್ಜಿ ನಮೂನೆಗಳ ಅಧಿಸೂಚನೆ ಹೊರಡಿಸಲಾಗಿದೆ.

ಹಣಕಾಸು ವರ್ಷದಲ್ಲಿ ವಿದ್ಯುತ್‌ ಬಿಲ್‌ ಪಾವತಿಯು ₹ 1 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಮತ್ತು ಚಾಲ್ತಿ ಖಾತೆಯಲ್ಲಿನ ಠೇವಣಿ ₹ 1 ಕೋಟಿ ಮೀರಿದವರು ಐ.ಟಿ ರಿಟರ್ನ್‌ ಸಲ್ಲಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ.

2019ರ ಏಪ್ರಿಲ್‌ 1ರಿಂದ 2020 ಮಾರ್ಚ್‌ 31ರ ಅವಧಿಯಲ್ಲಿ ಗಳಿಸಿದ ಆದಾಯದ ಐ.ಟಿ ರಿಟರ್ನ್‌ ಸಲ್ಲಿಕೆಗೆ ಸಹಜ್‌ – (ಐಟಿಆರ್‌–1), (ಐಟಿಆರ್‌–2), (ಐಟಿಆರ್‌–3) ಸುಗಮ್‌ (ಐಟಿಆರ್‌–4), ಐಟಿಆರ್‌–5, ಐಟಿಆರ್‌–6 ಮತ್ತು ಐಟಿಆರ್‌–7 ಅರ್ಜಿ ನಮೂನೆಗಳ ಅಧಿಸೂಚನೆಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಹೊರಡಿಸಿದೆ.

ಗರಿಷ್ಠ ವೆಚ್ಚದ ವಿವರ: ಹೊಸ ಐಟಿಆಆರ್‌ ಅರ್ಜಿ ನಮೂನೆಗಳಲ್ಲಿ ತೆರಿಗೆದಾರರು, ಚಾಲ್ತಿ ಖಾತೆಯಲ್ಲಿ ₹ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ ಇರಿಸಿದ, ವಿದೇಶ ಪ್ರಯಾಣಕ್ಕೆ ₹ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ, ವಿದ್ಯುತ್‌ ಬಳಕೆಗೆ ₹ 1 ಲಕ್ಷ ಇಲ್ಲವೇ ಇದಕ್ಕಿಂತ ಹೆಚ್ಚು ಹಣ ಪಾವತಿಸಿದಂತಹ ಗರಿಷ್ಟ ವೆಚ್ಚದ ನಿರ್ದಿಷ್ಟ ವಿವರಗಳನ್ನು ನೀಡಬೇಕಾಗುತ್ತದೆ.

ಕೋವಿಡ್‌ ಪಿಡುಗು ನಿಯಂತ್ರಣ ಉದ್ದೇಶಕ್ಕೆ ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ ಕಾರಣಕ್ಕೆ ಸರ್ಕಾರ ನೀಡಿದ್ದ ವಿವಿಧ ಕಾಲಮಿತಿಗಳ ವಿಸ್ತರಣೆಯ ಪ್ರಯೋಜನಗಳನ್ನು ತೆರಿಗೆದಾರರು ಪಡೆದುಕೊಳ್ಳಬಹುದಾಗಿದೆ.

2020ರ ಜೂನ್‌ವರೆಗೆ ತೆರಿಗೆದಾರರು ಮಾಡಿದ ತೆರಿಗೆ ಉಳಿತಾಯದ ಹೂಡಿಕೆ ಮತ್ತು ದೇಣಿಗೆ ನೀಡಿದ ವಿವರಗಳನ್ನು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ.

ಗಡುವು ವಿಸ್ತರಣೆ: ಐ.ಟಿ ಕಾಯ್ದೆಯ ಸೆಕ್ಷನ್‌ 80 ಸಿ (ಎಲ್‌ಐಸಿ, ಪಿಪಿಎಫ್‌, ಎನ್‌ಎಸ್‌ಸಿ), 80 ಡಿ (ವೈದ್ಯಕೀಯ) 80 ಜಿ (ದೇಣಿಗೆ) ಅಡಿ ತೆರಿಗೆದಾರರು ಕೈಗೊಂಡ ಹೂಡಿಕೆ ನಿರ್ಧಾರ, ವೆಚ್ಚ ಮತ್ತು ಕಡಿತದ ಪ್ರಯೋಜನಗಳನ್ನು ಪಡೆದುಕೊಳ್ಳುವ ಗಡುವನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ಹೂಡಿಕೆ, ಉಳಿತಾಯ ಮತ್ತು ದೇಣಿಗೆ ನೀಡಿರುವ ಮಾಹಿತಿ ಬಹಿರಂಗಪಡಿಸಲು ಆದಾಯ ತೆರಿಗೆ ಕಾಯ್ದೆಯಲ್ಲಿ ತಂದಿರುವ ಬದಲಾವಣೆಗೆ ಅನುಗುಣವಾಗಿ ಐಟಿಆರ್‌ ಅರ್ಜಿ ಸ್ವರೂಪದಲ್ಲಿ ಮಾರ್ಪಾಡು ಮಾಡಲಾಗಿದೆ.

‘ಮನೆ ಆಸ್ತಿಗಳ ಜಂಟಿ ಮಾಲೀಕರು ಮತ್ತು ದೊಡ್ಡ ಮೊತ್ತದ ವೆಚ್ಚ ಮಾಡುವವರು ಕೂಡ ಸರಳವಾಗಿ ಭರ್ತಿ ಮಾಡಬಹುದಾದ ಸಹಜ್‌ ಮತ್ತು ಸುಗಮ್‌ ಅರ್ಜಿಗಳನ್ನು ಬಳಸಬಹುದಾಗಿದೆ’ ಎಂದು ಎಕೆಎಂ ಗ್ಲೋಬಲ್‌ ಟ್ಯಾಕ್ಸ್‌ ಪಾರ್ಟನರ್‌ನ ಅಮಿತ್‌ ಮಹೇಶ್ವರಿ ಹೇಳಿದ್ದಾರೆ.

ಸಹಜ್ ಮತ್ತು ಸುಗಮ್‌

ವಾರ್ಷಿಕ ಆದಾಯ ₹ 50 ಲಕ್ಷ ಮೀರದವರು ‘ಐಟಿಆರ್‌–1’ ಸಹಜ್‌ ಮತ್ತು ₹ 50 ಲಕ್ಷದಷ್ಟು ಆದಾಯ ಹೊಂದಿದ ಹಿಂದೂ ಅವಿಭಕ್ತ ಕುಟುಂಬ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯೇತರ (ಎಲ್‌ಎಲ್‌ಪಿ) ಕಂಪನಿಗಳು ಐಟಿಆರ್‌–4 ಸುಗಮ್‌ ಅರ್ಜಿ ಸಲ್ಲಿಸಬಹುದಾಗಿದೆ.

ವಸತಿ ಆಸ್ತಿಯಿಂದ ಆದಾಯ ಪಡೆಯುವವರು ಐಟಿಆರ್‌–2,ಉದ್ದಿಮೆಗಳು ಐಟಿಆರ್‌–3 ಮತ್ತು ಐಟಿಆರ್‌–6, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯ (ಎಲ್‌ಎಲ್‌ಪಿ) ಕಂಪನಿಗಳು, ಕಾರ್ಪೊರೇಟ್‌ಗಳು (ಎಒಪಿ) ಐಟಿಆರ್‌–5, ಟ್ರಸ್ಟ್‌ ಮತ್ತು ಧಾರ್ಮಿಕ ದತ್ತಿ ಉದ್ದೇಶದ ಆಸ್ತಿಗಳಿಂದ ಆದಾಯ ಪಡೆಯುವವರು ಐಟಿಆರ್‌–7 ಅರ್ಜಿ ಸಲ್ಲಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT