ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ರೂ ಸೇರಿ ನಮ್ಮೂರಿಗೆ ಶಾಂತಿ ಕೊಡ್ರಿ

ಗೋನಾಳು ಗ್ರಾಮದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಮಹಿಳೆಯರ ಮನವಿ
Last Updated 30 ಮೇ 2018, 13:57 IST
ಅಕ್ಷರ ಗಾತ್ರ

ಕಂಪ್ಲಿ: ಸಾಲಿ, ಕಾಲೇಜು ಸೇರಿಸಬೇಕೆಂದ್ರ ಗಂಡು ಮಕ್ಳಳೆಲ್ಲ ಊರು ಬಿಟ್ಟಾರ. ಊರಾಗ ಒಂದಿಬ್ಬರು ಮಾಡೋ ತಪ್ಪಿಗೆ ನಮಗ್ಯಾಕೆ ಶಿಕ್ಷೆ. ನಮ್ಮೂರಿಗೆ ಎಲ್ರೂ ಸೇರಿ ಶಾಂತಿ ಕೊಡ್ರಿ.

ತಾಲ್ಲೂಕಿನ ಗೋನಾಳು ಗ್ರಾಮದಲ್ಲಿ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಗ್ರಾಮದ ಮಹಿಳೆ ಯರಾದ ಪಾರ್ವತಮ್ಮ, ನೀಲಾವತಿ, ಶಶಿಕಲಾ, ಗ್ರಾಮ ಪಂಚಾಯಿತಿ ಸದಸ್ಯೆ ಚೌಡ್ಕಿ ಲಕ್ಷ್ಮಿ ಅವರು ಅಧಿಕಾರಿಗಳ ಈ ರೀತಿ ನಿವೇದಿಸಿಕೊಂಡರು.

‘ಬನ್ನೆಪ್ಪ ಕುಟುಂಬದವರಿಂದಾಗಿ ನಾವೆಲ್ಲ ಹೊಲಕ್ಕೆ ಹೋಗದ ಸ್ಥಿತಿ ಇದೆ. ವಿನಾಕಾರಣ ಬಾಯಿಗೆ ಬಂದಂತೆ ಬೈತಾರೆ. ಇದರಿಂದ ಭಯದಲ್ಲಿ ಜೀವನ ನಡೆಸಬೇಕಾಗಿದೆ’ ಎಂದು ಕೆಲವು ಮಹಿಳೆಯರು ಗೋಳು ತೋಡಿಕೊಂಡರು.

ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಮಾತನಾಡಿ, ‘ಇಬ್ಬರು ವ್ಯಕ್ತಿಗಳ ದ್ವೇಷ ಇಡೀ ಊರಿಗೆ ವ್ಯಾಪಿಸಿದೆ. ಎಲ್ಲರೂ ತೊಂದರೆ ಅನುಭವಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗ್ರಾಮದಲ್ಲಿ ಶಾಂತಿ ಭಂಗ ಮಾಡುವವರನ್ನು ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಾಗಿ ಬಹಿಷ್ಕಾರ ಹಾಕಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮದ ಎಲ್ಲ ಕುಟುಂಬಗಳಿಂದ ₹5 ಲಕ್ಷ ಮೊತ್ತದ ಮುಚ್ಚಳಿಕೆಯನ್ನು ಬಾಂಡ್‌ ಪೇಪರ್‌ನಲ್ಲಿ ಬರೆಯಿಸಿ ಕೊಳ್ಳಬೇಕು. ತಪ್ಪಿದರೆ ಅಷ್ಟು ಮೊತ್ತದ ಆಸ್ತಿ ಬರೆಯಿಸಿಕೊಳ್ಳುವಂತೆ’ ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.

‘ಗ್ರಾಮದ ಸರ್ವರೂ ಜಾತಿ, ಧರ್ಮಮೆಟ್ಟಿ ನಿಂತು ಬೆಳೆಯಬೇಕು. ಗ್ರಾಮದ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದರೆ ಸಹಕರಿಸುವುದಾಗಿ’ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮಾತನಾಡಿ, ‘25ರಂದು ನಡೆದ ಗುಂಪು ಘರ್ಷಣೆಯಲ್ಲಿ ಹೆಣ್ಣು ಮಕ್ಕಳು ಕಲ್ಲು ತೂರಾಟ ಮಾಡಿರುವ ವಿಡಿಯೊ ನಮ್ಮ ಬಳಿ ಇದೆ. ಗಂಡು ಮಕ್ಕಳಿಗೆ ಬುದ್ಧಿ ಹೇಳೋದು ಬಿಟ್ಟು ಈ ರೀತಿ ಮಹಿಳೆಯರು ನಡೆದುಕೊಂಡಿರುವುದು ಸರಿ ಇಲ್ಲ’ ಎಂದರು.

‘ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರು ಶರಣಾಗಬೇಕು. ಆರೋಪಿಗಳು ಇದೇ ಧೋರಣೆ ಮುಂದುವರಿಸಿದರೆ ಗುಂಡಾ ಕಾಯ್ದೆ ಅಡಿ ಬಂಧಿಸಲಾಗುವುದು’ ಎಂದು ಎಚ್ಚರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಕಾರಿ ಕೆ.ಎಚ್.ಜಗದೀಶ್ ಮಾತನಾಡಿ, ‘ಗ್ರಾಮದ ಎರಡು ಗುಂಪಿನವರಿಗೂ ಶಾಂತಿ ಬೇಕಾಗಿಲ್ಲ. ಹೆಂಗಸರು ಬಾಯಿ ಕಡಿಮೆ ಮಾಡಬೇಕು. ಒಬ್ಬರ ಮೇಲೊಬ್ಬರು ಹಠಕ್ಕೆ ಬಿದ್ದಂತೆ ವರ್ತಿಸುತ್ತಿದ್ದೀರಿ. ಇಲ್ಲಿ ಜೀವಕ್ಕ ಬೆಲೆ ಇಲ್ಲದಂತಾಗಿದೆ’ ಎಂದು ಕಿಡಿಕಾರಿದರು.

ಅಧಿಕಾರಿಗಳು ಗ್ರಾಮದ ಓಣಿಗಳಲ್ಲಿ ಸಂಚರಿಸಿ ನಾಗರಿಕರಿಗೆ ಧೈರ್ಯ ತುಂಬಿದರು. ಎಡಗೈ ಮುಂಗೈ ಕಳೆದುಕೊಂಡ ದೊಡ್ಡ ದೇವಣ್ಣ ಅವರ ಪತ್ನಿ ಕಮಲಮ್ಮ ಅವರಿಗೆ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ₹1 ಲಕ್ಷ ಮೊತ್ತದ ಚೆಕ್‌ ವಿತರಿಸಿದರು.

ಉಪ ವಿಭಾಗಾಧಿಕಾರಿ ಗಾರ್ಗಿ ಜೈನ್, ಡಿವೈಎಸ್‌ಪಿ ಸಲಿಮ್‌ಪಾಷಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಎಸ್.ಅಲ್ಲಾ ಭಕಶ್, ತಹಶೀಲ್ದಾರ್‌ ಬಿ. ರವೀಂದ್ರಕುಮಾರ್, ಸಿಪಿಐ ಕಾಂತರೆಡ್ಡಿ, ಸಿದ್ದೇಶ್ವರ ಕೃಷ್ಣಾಪುರ, ಪಿಎಸ್‌ಐ ಬಿ. ನಿರಂಜನ, ಹೊಸಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಸಂತ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವನಗೌಡರೆಡ್ಡಿ, ಪಿಡಿಒ ಬೀರಲಿಂಗ, ಗ್ರಾಮ ಲೆಕ್ಕಾಧಿಕಾರಿ ಜಿಲಾನ್‌, ನಿಲಯ ಪಾಲಕ ಮಡ್ಡೇರು ಸಿದ್ದಯ್ಯ, ಇಒ ವೆಂಕೋಬಪ್ಪ ಇದ್ದರು.

**
ಬೇರೆ ಊರಿನವರಿಗೆ ನಿಮ್ಮ ಬಗ್ಗೆ ಗೌರವ ಇಲ್ಲ. ಇನ್ನಾದರೂ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಶಾಂತಿಯಿಂದ ಬದುಕು ನಡೆಸಬೇಕು
ಕೆ.ಎಚ್.ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT