ಮಂಗಳವಾರ, ಆಗಸ್ಟ್ 3, 2021
20 °C
ಏ. 15ಕ್ಕೆ ಮುಷ್ಕರ ಮುಂದೂಡಿದ ಪೈಲಟ್‌ಗಳ ಸಂಘ

ಜೆಟ್‌ ಏರ್‌ವೇಸ್‌: ತಪ್ಪಿದ ಬಿಕ್ಕಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೋಮವಾರದಿಂದ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಜೆಟ್‌ ಏರ್‌ವೇಸ್‌ ಪೈಲಟ್‌ಗಳ ಸಂಘವು, ಈ ಗಡುವನ್ನು ಈಗ ಏಪ್ರಿಲ್‌ 15ಕ್ಕೆ ಮುಂದೂಡಿದೆ.

ಇದರಿಂದಾಗಿ, ಸೋಮವಾರದಿಂದ ಸಂಸ್ಥೆಯ ವಿಮಾನ ಹಾರಾಟ ಸೇವೆಯು ಸಂಪೂರ್ಣವಾಗಿ ರದ್ದಾಗಲಿದೆ ಎನ್ನುವ ಆತಂಕ ದೂರವಾಗಿದೆ.

ತೀವ್ರ ಸ್ವರೂಪದ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ವಿಮಾನ ಯಾನ ಸಂಸ್ಥೆಯ ಪೈಲಟ್‌ಗಳ ಸಂಘಟನೆಯಾಗಿರುವ ನ್ಯಾಷನಲ್‌ ಏವಿಯೇಟರ್ಸ್‌ ಗಿಲ್ಡ್‌ (ಎನ್‌ಎಜಿ) ಭಾನುವಾರ ಈ ನಿರ್ಧಾರ ಕೈಗೊಂಡಿದೆ. ಪೂರ್ಣ ಪ್ರಮಾಣದ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನ 1,600 ಪೈಲಟ್‌ಗಳ ಪೈಕಿ 1,100 ಪೈಲಟ್‌ಗಳು ‘ಎನ್‌ಎಜಿ’ಯ ಸದಸ್ಯರಾಗಿದ್ದಾರೆ.

ಬಾಕಿ ವೇತನ ಪಾವತಿ ಮತ್ತು ಭವಿಷ್ಯದಲ್ಲಿನ ವೇತನ ಪಾವತಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವವರೆಗೆ ವಿಮಾನಗಳ ಹಾರಾಟ ನಡೆಸುವುದಿಲ್ಲ ಎಂದು ‘ಎನ್‌ಎಜಿ’, ಶನಿವಾರ ಬೆದರಿಕೆ ಹಾಕಿತ್ತು. ನಷ್ಟಪೀಡಿತ ಸಂಸ್ಥೆಯು ತನ್ನ ಪೈಲಟ್‌, ಎಂಜಿನಿಯರ್ಸ್‌ ಮತ್ತು ಹಿರಿಯ ಅಧಿಕಾರಿಗಳಿಗೆ ಹಿಂದಿನ ವರ್ಷದ ಆಗಸ್ಟ್ ತಿಂಗಳಿನಿಂದ ಸಮರ್ಪಕವಾಗಿ ವೇತನ ಪಾವತಿಸುತ್ತಿಲ್ಲ.

ಪೈಲಟ್‌ ಮತ್ತು ಇತರ ಸಿಬ್ಬಂದಿಗೆ ಡಿಸೆಂಬರ್‌ ವೇತನವನ್ನಷ್ಟೇ ಪಾವತಿಸಲಿದೆ. ಮೂರು ತಿಂಗಳ ಸಂಬಳವನ್ನು ತಕ್ಷಣಕ್ಕೆ ಪಾವತಿಸಲು ತನ್ನಿಂದ ಸಾಧ್ಯವಾಗದು ಎಂದು ಸಂಸ್ಥೆ ತಿಳಿಸಿದೆ.

 ಸಾಲ ಮರು ಹೊಂದಾಣಿಕೆ ಯೋಜನೆ ಅನ್ವಯ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿನ ಬ್ಯಾಂಕ್‌ಗಳ ಒಕ್ಕೂಟವು ಸಂಸ್ಥೆಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಇದೊಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

 

ಎ. ಕೆ. ಪುರವಾರ ನೇಮಕ?
ಹಿರಿಯ ಬ್ಯಾಂಕರ್‌ ಎ. ಕೆ. ಪುರವಾರ ಅವರನ್ನು ಜೆಟ್‌ ಏರ್‌ವೇಸ್‌ನ ಹಂಗಾಮಿ ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲು ಬ್ಯಾಂಕ್‌ಗಳ ಒಕ್ಕೂಟವು ಆಲೋಚಿಸುತ್ತಿದೆ. ಪುರವಾರ ಅವರು ಎಸ್‌ಬಿಐ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ.

ಹೊಸ ಹೂಡಿಕೆದಾರರನ್ನು ಗುರುತಿಸಲು ‘ಎಸ್‌ಬಿಐ ಕ್ಯಾಪಿಟಲ್‌’ ಸಂಸ್ಥೆಯನ್ನು ನೇಮಿಸಲು ಒಕ್ಕೂಟವು ಕಾರ್ಯಪ್ರವೃತ್ತವಾಗಿದೆ ಎಂದು   ಅಧಿಕಾರಿಗಳು ತಿಳಿಸಿದ್ದಾರೆ.

‘ಸರ್ಕಾರದ ಮಧ್ಯಪ್ರವೇಶ ಇಲ್ಲ’
‘ದಕ್ಷ ಕಾರ್ಯನಿರ್ವಹಣೆ ಮತ್ತು ಲಾಭದಾಯಕ ಹಣಕಾಸು ಸಾಧನೆಯು ವಿಮಾನ ಯಾನ ಸಂಸ್ಥೆಗಳ ಹೊಣೆಯಾಗಿದ್ದು, ಅವುಗಳ ದಿನನಿತ್ಯದ ವಹಿವಾಟಿನಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸುವುದಿಲ್ಲ’ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

‘ಪ್ರತಿಯೊಂದು ವಿಮಾನಯಾನ ಸಂಸ್ಥೆಯು  ತನ್ನ ಹಣಕಾಸು ಸಂಪನ್ಮೂಲ ಮತ್ತು ಮಾರುಕಟ್ಟೆಯ ಅಂದಾಜು ಆಧರಿಸಿ ತನ್ನ ಸೇವೆಯ ಕಾರ್ಯವ್ಯಾಪ್ತಿ ರೂಪಿಸಬೇಕು. ವಿಮಾನ ಯಾನ ರಂಗದ ಅಗತ್ಯಗಳಿಗೆ ಸರ್ಕಾರವು ಸೂಕ್ತ ರೀತಿಯಲ್ಲಿ ಸ್ಪಂದಿಸಿ ವಿವಿಧ ಬಗೆಯಲ್ಲಿ ಅಗತ್ಯ ಬೆಂಬಲವನ್ನೂ ನೀಡುತ್ತಿದೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು