ನವದೆಹಲಿ: ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ಜೂನ್‌ನಲ್ಲಿ ಭಾರತೀಯ ಟೆಲಿಕಾಂ ಚಂದಾದಾರರ ಸಂಖ್ಯೆ 120.5 ಕೋಟಿಗೆ ತಲುಪಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ತಿಳಿಸಿದೆ.
ವೈರ್‌ಲೆಸ್ ಚಂದಾದಾರರ ಸಂಖ್ಯೆ 3.51 ಕೋಟಿ ಹಾಗೂ ವೈರ್‌ಲೈನ್ ಬಳಕೆದಾರರ ಸಂಖ್ಯೆಯಲ್ಲಿ 3.47 ಕೋಟಿ ಹೆಚ್ಚಳವಾಗಿದೆ. ಈ ಎರಡು ವಿಭಾಗದಲ್ಲಿ ಜಿಯೊ ಮತ್ತು ಏರ್‌ಟೆಲ್ ಬೆಳವಣಿಗೆ ಸದೃಢವಾಗಿದೆ. ಆದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಚಂದಾದಾರರು ಕಡಿಮೆಯಾಗಿದ್ದಾರೆ ಎಂದು ವಿವರಿಸಿದೆ.
ಮೇ ತಿಂಗಳ ಅಂತ್ಯಕ್ಕೆ ಟೆಲಿಕಾಂ ಚಂದಾದಾರರ ಸಂಖ್ಯೆ 120.3 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಶೇ 0.16ರಷ್ಟು ಏರಿಕೆಯಾಗಿದೆ.
ವೈರ್‌ಲೆಸ್ ವಿಭಾಗದಲ್ಲಿ ಜಿಯೊಗೆ ಹೊಸದಾಗಿ 19.11 ಲಕ್ಷ ಹಾಗೂ ಭಾರ್ತಿ ಏರ್‌ಟೆಲ್‌ಗೆ 12.52 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ.
ಈ ವಿಭಾಗದಲ್ಲಿ ವೊಡಾಫೋನ್ ಐಡಿಯಾ (ವಿಐಎಲ್), ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ ಒಟ್ಟು 15.73 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಈ ಪೈಕಿ ವಿಐಎಲ್‌ನಿಂದ 8.6 ಲಕ್ಷ ಹಾಗೂ ಬಿಎಸ್ಎನ್‌ಎಲ್ 7.25 ಲಕ್ಷ ಚಂದಾದಾರರು ಹೊರಹೋಗಿದ್ದಾರೆ.
ವೈರ್‌ಲೈನ್ ವಿಭಾಗದಲ್ಲಿ ಜಿಯೊಗೆ ಹೊಸದಾಗಿ 4.34 ಲಕ್ಷ ಹಾಗೂ ಭಾರ್ತಿ ಏರ್‌ಟೆಲ್‌ಗೆ 44,611 ಚಂದಾದಾರರು ಸೇರ್ಪಡೆಯಾಗಿದ್ದಾರೆ. ಈ ವಿಭಾಗದಲ್ಲಿ ಬಿಎಸ್‌ಎನ್‌ಎಲ್ 60,644 ಚಂದಾದಾರರನ್ನು ಕಳೆದುಕೊಂಡಿದೆ.
ಮೇ ತಿಂಗಳಿನಲ್ಲಿ 94 ಕೋಟಿ ಇದ್ದ ಬ್ರ್ಯಾಂಡ್‌ಬಾಂಡ್ ಬಳಕೆದಾರರ ಸಂಖ್ಯೆಯ ಜೂನ್‌ನಲ್ಲಿ 93.51 ಕೋಟಿಗೆ ಏರಿಕೆಯಾಗಿದೆ. ಜಿಯೊ 48.89 ಕೋಟಿ, ಭಾರ್ತಿ ಏರ್‌ಟೆಲ್ 28.13 ಕೋಟಿ, ವಿಐಎಲ್ 12.78 ಕೋಟಿ ಹಾಗೂ ಬಿಎಸ್‌ಎನ್‌ಎಲ್ 2.5 ಬ್ರ್ಯಾಂಡ್‌ಬಾಂಡ್ ಚಂದಾದಾರರನ್ನು ಹೊಂದಿದೆ.