ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಸಂಪರ್ಕ ವ್ಯವಸ್ಥೆ | ‘5ಜಿ ಸೇವೆಗೆ ಜಿಯೊ ಸಿದ್ಧ’

ಕಡಿಮೆ ದರಕ್ಕೆ ಸ್ಮಾರ್ಟ್‌ಫೋನ್‌: ಗೂಗಲ್‌ ಜತೆ ಒಪ್ಪಂದ
Last Updated 15 ಜುಲೈ 2020, 20:37 IST
ಅಕ್ಷರ ಗಾತ್ರ

ನವದೆಹಲಿ: ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆಗಳನ್ನು ನೀಡುವ ಮೂಲಕ ಜನರಿಗೆ ಹತ್ತಿರವಾದ ಜಿಯೊ ಕಂಪನಿಯು, ಈಗ 5ಜಿ ದೂರಸಂಪರ್ಕ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಇದನ್ನು ಗ್ರಾಹಕರಿಗೆ ಮುಂದಿನ ವರ್ಷದಿಂದಲೇ ನೀಡಲು ಸಿದ್ಧವಿರುವುದಾಗಿ ಹೇಳಿದೆ. ಅಲ್ಲದೆ, ಕಡಿಮೆ ದರದ ಸ್ಮಾರ್ಟ್‌ಫೋನ್‌ ಅಭಿವೃದ್ಧಿಪಡಿಸಲು ತಂತ್ರಜ್ಞಾನ ರಂಗದ ದೈತ್ಯ ಗೂಗಲ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಭಾರತವನ್ನು ‘2ಜಿ ಮುಕ್ತ’ವಾಗಿಸಲು ಜಿಯೊ ನಿರ್ಣಯಿಸಿದ್ದು, ದೇಶದಲ್ಲಿ ಈಗ 2ಜಿ ಫೀಚರ್ ಫೋನ್ ಬಳಸುತ್ತಿರುವ 35 ಕೋಟಿ ಜನ ಕೈಗೆಟಕುವ ದರದ ಸ್ಮಾರ್ಟ್‌ಫೋನ್‌ ಬಳಸುವಂತೆ ಮಾಡುವ ಪ್ರಕ್ರಿಯೆಗೆ ವೇಗ ನೀಡುವ ಅಗತ್ಯವಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದರು.

ಜಿಯೊದಲ್ಲಿ ಶೇ 7.7ರಷ್ಟು ಷೇರುಗಳನ್ನು ಹೊಂದಲು ಗೂಗಲ್‌ ಕಂಪನಿಯು ಒಟ್ಟು ₹ 33,737 ಕೋಟಿ ಹೂಡಿಕೆ ಮಾಡಲಿದೆ. ಹಾಗೆಯೇ, ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ ಕಾರ್ಯಾಚರಣೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಜಿಯೊ ಕಂಪನಿಯು ಗೂಗಲ್‌ ಜೊತೆ ಕೈಜೋಡಿಸಲಿದೆ ಎಂದು ಅಂಬಾನಿ ಅವರು ಆರ್‌ಐಎಲ್‌ನ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಿದರು.

‘ಫೀಚರ್‌ ಫೋನ್‌ ಬಳಸುತ್ತಿರುವ ಹಲವರು, ಕೈಗೆಟಕುವ ದರದಲ್ಲಿ ದೊರೆತರೆ ಸಾಂಪ್ರದಾಯಿಕ ಸ್ಮಾರ್ಟ್‌ಫೋನ್‌ ಹೊಂದಬಹುದು ಎಂದು ಬಯಸುತ್ತಿದ್ದಾರೆ. ನಾವು ಈಗಿನ ದರಕ್ಕಿಂತ ಬಹಳ ಕಡಿಮೆ ದರದಲ್ಲಿ 4ಜಿ ಅಥವಾ 5ಜಿ ಸ್ಮಾರ್ಟ್‌ಫೋನ್‌ಗಳನ್ನು ವಿನ್ಯಾಸಗೊಳಿಸಬಲ್ಲೆವು ಎಂದು ನಾನು ನಂಬಿದ್ದೇನೆ. ಆದರೆ, ಇಂಥದ್ದೊಂದು ಸ್ಮಾರ್ಟ್‌ಫೋನ್‌ಗೆ, ಕಡಿಮೆ ವೆಚ್ಚದ್ದಾಗಿದ್ದರೂ ಎಲ್ಲ ಕೆಲಸಗಳನ್ನು ನಿಭಾಯಿಸಬಲ್ಲ ಕಾರ್ಯಾಚರಣೆ ವ್ಯವಸ್ಥೆಯ ಅಗತ್ಯ ಇದೆ. ಇಂತಹ ಕಾರ್ಯಾಚರಣೆ ವ್ಯವಸ್ಥೆಯನ್ನು ಭಾರತದ ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಜಿಯೊ ಕಂಪನಿಯು 5ಜಿ ದೂರಸಂಪರ್ಕ ವ್ಯವಸ್ಥೆಯನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಿದೆ ಎಂದೂ ಅಂಬಾನಿ ತಿಳಿಸಿದರು. ದೇಶದಲ್ಲಿ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಯು ಇನ್ನಷ್ಟೇ ನಡೆಯಬೇಕಿದೆ.

*

ಈಗಿರುವ ತನ್ನ 4ಜಿ ವ್ಯವಸ್ಥೆಯನ್ನು ಬಹಳ ಸುಲಭವಾಗಿ 5ಜಿ ವ್ಯವಸ್ಥೆಗೆ ಮೇಲ್ದರ್ಜೆಗೆ ಏರಿಸುವ ಸಾಮರ್ಥ್ಯವನ್ನು ಜಿಯೊ ಕಂಪನಿ ಹೊಂದಿದೆ.
-ಮುಕೇಶ್‌ ಅಂಬಾನಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT