ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪಕ್ಷಗಳ ನಡುವೆ ಹಣಾಹಣಿ

ವಿಧಾನ ಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ
Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ತುಮಕೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ರಮೇಶ್ ಬಾಬು ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಬಾಬು ಅವರ ಎರಡನೇ ಗೆಲುವಿಗೆ ತಡೆಯೊಡ್ಡಲು ಬಿಜೆಪಿ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ ಎಂ.ರಾಮಪ್ಪ ಅವರನ್ನು ಸ್ಪರ್ಧೆಗಿಳಿಸಿದೆ. ಒಟ್ಟು 14 ಮಂದಿ ಕಣದಲ್ಲಿ ಇದ್ದಾರೆ.

ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ (ದಾವಣಗೆರೆ, ಹರಿಹರ, ಜಗಳೂರು) ಜಿಲ್ಲೆ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಅಪ್ಪಟ ಬಯಲು ಸೀಮೆಯ ಈ ಜಿಲ್ಲೆಗಳಲ್ಲಿ ಮೂರು ಪಕ್ಷಗಳು ತಮ್ಮದೇ ಆದ ನೆಲೆ ಹೊಂದಿವೆ. ನಾರಾಯಣಸ್ವಾಮಿ ಒಮ್ಮೆ ಪಕ್ಷೇತರರಾಗಿ, ಮತ್ತೊಮ್ಮೆ ಬಿಜೆಪಿಯಿಂದ ಗೆಲುವು ಕಂಡಿದ್ದರು. 2017ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಅವರು ಜಯ ಸಾಧಿಸಿದರು. ತೆರವಾದ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಪಿ.ಆರ್.ಬಸವರಾಜು ವಿರುದ್ಧ ಜೆಡಿಎಸ್‌ನ ರಮೇಶ್‌ ಬಾಬು ಗೆಲುವು ಸಾಧಿಸಿದರು.

ಒಂದೂವರೆ ವರ್ಷದ ನಂತರ ಮತ್ತೆ ತನ್ನ ತೆಕ್ಕೆಗೆ ಕ್ಷೇತ್ರವನ್ನು ತೆಗೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ರಾಮಪ್ಪ ಅವರು ಸ್ಪರ್ಧಿಸುವ ಅಪೇಕ್ಷೆಯಿಂದ ಒಂದು ವರ್ಷದಿಂದಲೇ ವೇದಿಕೆ ಸಿದ್ಧಗೊಳಿಸಿಕೊಂಡಿದ್ದರು.

ಕ್ಷೇತ್ರದಲ್ಲಿ 19,402 ಮತಗಳಿವೆ. ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 6,800 ಮತಗಳಿವೆ. ಆ ಕಾರಣಕ್ಕೆ ಎಲ್ಲ ಅಭ್ಯರ್ಥಿಗಳು ಜಿಲ್ಲೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಿ ಪ್ರಚಾರ ನಡೆಸಿದ್ದಾರೆ.

ಕೋಲಾರ ಜಿಲ್ಲೆಯ ನಾರಾಯಣಸ್ವಾಮಿ ರೆಡ್ಡಿ ಒಕ್ಕಲಿಗ ಸಮುದಾಯದವರು. ತುಮಕೂರು ಜಿಲ್ಲೆಯ ರಮೇಶ್ ಬಾಬು ಬಲಿಜ ಸಮುದಾಯದವರು. ಚಿತ್ರದುರ್ಗದ ಜಿಲ್ಲೆಯ ರಾಮಪ್ಪ ಭೋವಿ ಸಮುದಾಯದವರು.

ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚು ಮತಗಳನ್ನು ಪಡೆಯಲು ‘ಸ್ಥಳೀಯ’ ಅಭ್ಯರ್ಥಿ ಎನ್ನುವ ದಾಳ ಸಹ ಉರುಳಿಸುತ್ತಿದ್ದಾರೆ. ಸುಶಿಕ್ಷಿತ ಶಿಕ್ಷಕರು ಮತದಾರರಾದರೂ ಜಾತಿ ಸಹ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯ ಮಟ್ಟದ ಆಯಾ ಸಮುದಾಯದ ಪ್ರಭಾವಿ ಮುಖಂಡರನ್ನು ಕರೆಯಿಸಿ ಆಯಾ ಸಮುದಾಯದ ಶಿಕ್ಷಕ ಮತದಾರರ ಸೆಳೆಯುವ ಕಸರತ್ತು ಸಹ ನಡೆದಿದೆ. ಎಲ್ಲರ ಪ್ರಚಾರದ ಕರಪತ್ರಗಳಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡುವ ಭರವಸೆಗಳು ಭರಪೂರವಾಗಿಯೇ ಇವೆ.

ಈ ವ್ಯಾಪ್ತಿಯಲ್ಲಿ 32 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿ 11, ಕಾಂಗ್ರೆಸ್ 14, ಜೆಡಿಎಸ್ 6 ಕಡೆಗಳಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ‘ಬಲ’ ಎಂದು ರಾಮಪ್ಪ ನಂಬಿದ್ದಾರೆ. ಆದರೆ ವಿಧಾನಸಭೆಯ ಗೆಲುವು ಪರಿಷತ್ ಚುನಾವಣೆಯಲ್ಲಿ ಅಷ್ಟಾಗಿ ಪ್ರಭಾವ ಬೀರಿಲ್ಲ. ಕ್ಷೇತ್ರದ ಈ ಹಿಂದಿನ ಚುನಾವಣೆಗಳು ಇದಕ್ಕೆ ಸಾಕ್ಷಿ. 

ದಿಢೀರ್ ಅಭ್ಯರ್ಥಿ ಬದಲಾವಣೆ: ತುಮಕೂರಿನ ಲಿಂಗಾಯತ ಸಮುದಾಯದ ಹಾಲನೂರು ಲೇಪಾಕ್ಷಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ 2017ರ ಡಿಸೆಂಬರ್‌ನಲ್ಲಿಯೇ ಘೋಷಿಸಿತ್ತು. ಲೇಪಾಕ್ಷಿ ಪ್ರಚಾರ ಸಹ ಕೈಗೊಂಡಿದ್ದರು. ಆದರೆ ನಾರಾಯಣಸ್ವಾಮಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ತಕ್ಷಣ ಲೇಪಾಕ್ಷಿ ಅವರಿಂದ ಬಿ.ಫಾರಂ ವಾಪಸ್ ಪಡೆದು ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಲಾಯಿತು. ಈ ದಿಢೀರ್ ಬದಲಾವಣೆ ಲೇಪಾಕ್ಷಿ ಅವರಿಗೆ ಬೇಸರ ತರಿಸಿದ್ದರೂ ಪಕ್ಷಕ್ಕೆ ಹಾನಿಯಾಗುವ ಸಂಭವ ಕಡಿಮೆ.

‘ನಾರಾಯಣಸ್ವಾಮಿ ಅವರಿಗೆ ಕ್ಷೇತ್ರದ ನಾಡಿಮಿಡಿತ ತಿಳಿದಿದೆ. ಪಕ್ಷಕ್ಕೆ ಉತ್ತಮ ನೆಲೆ ಇಲ್ಲದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಮತಪಡೆಯುವ ಸಾಮರ್ಥ್ಯ ಇದೆ. ಆ ಕಾರಣಕ್ಕೆ ಅಭ್ಯರ್ಥಿ ಬದಲಾವಣೆ ಮಾಡಲಾಯಿತು’ ಎನ್ನುತ್ತವೆ ಬಿಜೆಪಿ ಮೂಲಗಳು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬಲಿಷ್ಠವಾಗಿವೆ. ಬಿಜೆಪಿ ಇಲ್ಲಿ ನಾರಾಯಣಸ್ವಾಮಿ ಅವರ ‘ಪ್ರಭಾವ’ವನ್ನೇ ಪ್ರಮುಖವಾಗಿ ನೆಚ್ಚಿದೆ. ಸ್ವಂತ ಜಿಲ್ಲೆ ಚಿತ್ರದುರ್ಗದಲ್ಲಿ ರಾಮಪ್ಪ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ರಮೇಶ್ ಬಾಬು ಸಹ ಎಲ್ಲರಿಗೂ ಸುಲಭವಾಗಿ ಸಿಗುವರು ಎನ್ನುವ ಭಾವನೆ ಶಿಕ್ಷಕರಲ್ಲಿ ಇದೆ.

ಕಳೆದ ಉಪಚುನಾವಣೆಯಲ್ಲಿ ಹರಿಹರದ ಜೆಡಿಎಸ್ ಶಾಸಕರಾಗಿದ್ದ ಎಚ್‌.ಎಸ್.ಶಿವಶಂಕರ್ ಅವರ ಸಹೋದರ ಅರವಿಂದ್, ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿದ್ದರು. ಆ ಬಂಡಾಯದ ನಡುವೆಯೂ ರಮೇಶ್ ಬಾಬು ಗೆಲುವು ಕಂಡರು. ಈ ಬಾರಿ ಬಂಡಾಯದ ಬೇಗುದಿ ಆ ಪಕ್ಷಕ್ಕೆ ಇಲ್ಲ. ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವುದು ತಮ್ಮ ಗೆಲುವಿಗೆ ಅನುಕೂಲವಾಗಲಿದೆ ಎಂಬುದು ಬಾಬು ಲೆಕ್ಕಾಚಾರ.

ತುಮಕೂರು, ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯತ ಮತದಾರರು ಗಣನೀಯವಾಗಿ ಇದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡಾಯ ಅಭ್ಯರ್ಥಿ ಆ ಸಮುದಾಯಕ್ಕೆ ಸೇರಿದವರಾಗಿದ್ದರು. ಹಿಂದುಳಿದ ವರ್ಗಗಳ ಮತಗಳ ಧ್ರುವೀಕರಣ ರಮೇಶ್ ಬಾಬು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿ ಲಿಂಗಾಯತ ‘ಪ್ರಮುಖ’ ಅಭ್ಯರ್ಥಿ ಇಲ್ಲ. ಆ ಮತಗಳತ್ತ ಬಿಜೆಪಿ ಪ್ರಮುಖವಾಗಿ ದೃಷ್ಟಿ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT