ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಗತಿಕ ಸವಾಲುಗಳ ಪರಿಹಾರಕ್ಕೆ ಕರ್ನಾಟಕ ಸಿದ್ಧ: ಸಿದ್ದರಾಮಯ್ಯ

ಯುಎಸ್‌–ಇಂಡಿಯಾ ಬಿಜಿನೆಸ್‌ ಕೌನ್ಸಿಲ್‌ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ
Published : 10 ಸೆಪ್ಟೆಂಬರ್ 2024, 16:07 IST
Last Updated : 10 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ಬೆಂಗಳೂರು: ‘ಐಟಿ–ಬಿಟಿ, ಏರೋಸ್ಪೇಸ್‌ ಅಥವಾ ಇನ್ಯಾವುದೇ ಕ್ಷೇತ್ರವಿರಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ಅಮೆರಿಕದ ಉದ್ಯಮಗಳ ಸಹಯೋಗದೊಂದಿಗೆ ಒಟ್ಟಾಗಿ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ತಂತ್ರಜ್ಞಾನ, ನಾವೀನ್ಯತೆ, ವ್ಯಾಪಾರ ಮತ್ತು ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಯುಎಸ್‌–ಇಂಡಿಯಾ ಬಿಜಿನೆಸ್‌ ಕೌನ್ಸಿಲ್‌ (ಯುಎಸ್‌ಐಬಿಸಿ) ಗ್ಲೋಬಲ್ ಬೋರ್ಡ್‌ ಆಫ್ ಡೈರೆಕ್ಟರ್ಸ್ ಮಿಷನ್ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

'ಕರ್ನಾಟಕ ರಾಜ್ಯ ವ್ಯಾಪಾರ– ವ್ಯವಹಾರಗಳಿಗೆ ಮುಕ್ತವಾಗಿದೆ. ಕರ್ನಾಟಕದಲ್ಲಿರುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಆಹ್ವಾನಿಸುತ್ತೇನೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಉದ್ಯಮಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ವಾತಾವರಣವನ್ನು ಕಲ್ಪಿಸಲು ಬದ್ಧವಾಗಿದೆ. ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯವಾಗಿದ್ದು, ನಮ್ಮ ಜನ ಹಾಗೂ ಜಾಗತಿಕ ಸಮುದಾಯದ ಭವಿಷ್ಯಕ್ಕಾಗಿ ಇವುಗಳನ್ನು ಬಳಸಿಕೊಳ್ಳಲು ಬದ್ಧರಾಗಿದ್ದೇವೆ’ ಎಂದರು.

ಮೂಲಸೌಕರ್ಯ ಯೋಜನೆಗಳ ಕುರಿತು ಮಹಾನಗರ ಪಾಲಿಕೆ, ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಒಳನೋಟಗಳನ್ನು ನೀಡಿದರೆ, ಬೆಂಗಳೂರು ನಗರದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ವಿಷಯ ಮಂಡಿಸಿದವು.

ಪರಿಸರ ವಿಜ್ಞಾನ ಮತ್ತು ಅರಣ್ಯ ಇಲಾಖೆಯು ಸುಸ್ಥಿರ ಅಭ್ಯಾಸಗಳ ಪ್ರಾಮುಖ್ಯದ ಬಗ್ಗೆ ವಿಷಯ ಮಂಡನೆ ಮಾಡಿತು. ಕೌಶಲ್ಯ ಅಭಿವೃದ್ಧಿ ಇಲಾಖೆಯು ರಾಜ್ಯದಲ್ಲಿ ಕೌಶಲ ತರಬೇತಿಯಂತಹ ಪ್ರಮುಖ ಕಾರ್ಯಕ್ರಮಗಳನ್ನು ಹೆಚ್ಚಿಸುವ ಕುರಿತು ತನ್ನ ಕಾರ್ಯ ಚಟುವಟಿಕೆಯನ್ನು ವಿವರಿಸಿತು.

ಸಭೆಯಲ್ಲಿ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಎಂಇಐಎಸ್‌ಎ ಕಾರ್ಯಾಚರಣೆಗಳ ಅಧ್ಯಕ್ಷ ಕಾಮಿ ವಿಶ್ವನಾಥನ್, ಐಬಿಎಂ ಇಂಡಿಯಾ ಮತ್ತು ಸೌತ್‌ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಟೇಲ್‌, ಝಡ್‌ ಸ್ಕೇಲರ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಕವಿತಾ ಮಾರಿಯಪ್ಪನ್, ಗೂಗಲ್‌ನ ಉಪಾಧ್ಯಕ್ಷ ವಿಲ್ಸನ್ ವೈಟ್, ವಾಲ್‌ಮಾರ್ಟ್‌ನ ಜಾಗತಿಕ ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷ ಪಾಲ್ ಡಿಕ್ ಮತ್ತು ಮೆಟಾ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್ ಅವರೆಲ್ಲ ಚರ್ಚೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT