ತುಟ್ಟಿಯಾದ ಕಚ್ಚಾ ಸರಕು: ಕರ್ಪೂರ ಬೆಲೆ ಏರಿಕೆ

7
ಸಗಟು ಬೆಲೆ ಕೆ.ಜಿಗೆ ₹ 950

ತುಟ್ಟಿಯಾದ ಕಚ್ಚಾ ಸರಕು: ಕರ್ಪೂರ ಬೆಲೆ ಏರಿಕೆ

Published:
Updated:
Prajavani

ಮೈಸೂರು: ಕರ್ಪೂರದ ಬೆಲೆ ದುಬಾರಿಯಾಗುತ್ತಲೇ ಇದೆ. ಸದ್ಯ, ಒಂದು ಕೆ.ಜಿ ಸಗಟು ಬೆಲೆ ₹ 950ಕ್ಕೆ ತಲುಪಿದೆ.

ಧಾರ್ಮಿಕ ವಿಧಿವಿಧಾನಗಳಿಗೆ ಕರ್ಪೂರ ಇರಲೇಬೇಕು. ₹ 10ಕ್ಕೆ ಒಂದು ಸಣ್ಣ ಪ್ಯಾಕೇಟ್‌ನಲ್ಲಿ ಕೇವಲ 10 ಕರ್ಪೂರದ ಬಿಲ್ಲೆಗಳಷ್ಟೇ ಸಿಗುತ್ತಿವೆ.

ನಗರದಲ್ಲಿ ಏಳೆಂಟು ಗುಡಿ ಕೈಗಾರಿಕೆಗಳು ಕರ್ಪೂರ ತಯಾರಿಕೆಯಲ್ಲಿ ತೊಡಗಿವೆ. ಬೆಂಗಳೂರಿನಲ್ಲಿ ಇಂತಹ ಸುಮಾರು 50 ಕೈಗಾರಿಕೆಗಳು ಸಾಕಷ್ಟು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ. ದರ ದುಬಾರಿಯಾಗುತ್ತಿರುವುದರಿಂದ ಬೇಡಿಕೆಯೂ ಕುಸಿಯಲಾರಂಭಿಸಿದೆ.

ದುಬಾರಿ ಏಕೆ?: ಕರ್ಪೂರದ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಕೊರತೆಯಿಂದ ಬೆಲೆ ಹೆಚ್ಚಾಗಿದೆ ಎಂದು ಕಂಚಿ ಕರ್ಪೂರ ಲಿಮಿಟೆಡ್‌ನ ಕರ್ನಾಟಕ ವಿಭಾಗದ ವ್ಯವಸ್ಥಾಪಕ ನಾಗರಾಜು ಹೇಳುತ್ತಾರೆ.

ಕರ್ಪೂರ ತಯಾರಿಕೆಗೆ ಬೇಕಾದ ಪುಡಿ ವರ್ಷದ ಹಿಂದೆ ಕೆ.ಜಿ.ಗೆ ₹ 300 ಇತ್ತು. ಈಗ ಇದು ₹ 884 ಆಗಿದೆ. ಈ ಪುಡಿ ತಯಾರಿಕೆಗೆ ಬೇಕಾದ ‘ಆಲ್ಫಾ ಪೈನ್ ರೆಸಿನ್‌’ ಎಂಬ ದ್ರಾವಣದ ಕೊರತೆ ಉಂಟಾಗಿದೆ. ಈ ದ್ರಾವಣವನ್ನು ಪೈನ್‌ ಜಾತಿಯ ಮರಗಳಿಂದ ಸಂಗ್ರಹಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಇಂತಹ ಮರಗಳು ಇದ್ದವು. ಈಗ ಅರಣ್ಯ ನಾಶದಿಂದ ಈ ಮರಗಳು ವಿರಳವಾಗಿದ್ದು, ಕಚ್ಚಾವಸ್ತು ಸಿಗುವುದು ಕಷ್ಟವಾಗಿದೆ.

ಚೀನಾದಿಂದ ಯಥೇಚ್ಛವಾಗಿ ಕಚ್ಚಾ ದ್ರಾವಣ ಬರುತ್ತಿತ್ತು. ಈಗ ಅಲ್ಲಿಂದಲೂ ಬರುತ್ತಿಲ್ಲ. ಸದ್ಯಕ್ಕೆ, ಇಂಡೊನೇಷ್ಯಾ, ವಿಯೆಟ್ನಾಂನಿಂದ ಆಮದಾಗುತ್ತಿದೆ. ಬ್ರೆಜಿಲ್, ಫ್ರಾನ್ಸ್‌ನಲ್ಲಿ ಪೈನ್‌ ಮರಗಳು ಹೆಚ್ಚಾಗಿದ್ದರೂ ದೂರದ ರಾಷ್ಟ್ರಗಳಿಂದ ಕಚ್ಚಾ ದ್ರಾವಣ ಆಮದು ಮಾಡಿಕೊಳ್ಳುವುದು ದುಬಾರಿ ಎನಿಸಿದೆ.

ಈ ದ್ರಾವಣವನ್ನು ಔಷಧಗಳ ತಯಾರಿಕೆಯಲ್ಲೂ ಬಳಸುವುದರಿಂದ ಔಷಧ ತಯಾರಿಕಾ ಕಂಪನಿಗಳಿಂದಲೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಇದೂ ಕರ್ಪೂರದ ಬೆಲೆ ದುಬಾರಿಯಾಗಲು ಕಾರಣ ಎಂದು ಕರ್ಪೂರ ತಯಾರಿಕಾ ಕಾರ್ಖಾನೆಯೊಂದರ ವ್ಯವಸ್ಥಾಪಕರು ಹೇಳುತ್ತಾರೆ.

ಮುಂದೇನು?: ಪೈನ್‌ ಮರಗಳು ಪ್ರತಿ ವರ್ಷ ಜೂನ್, ಜುಲೈ ತಿಂಗಳಿನಲ್ಲಿ ದ್ರಾವಣವನ್ನು ಸ್ಫುರಿಸುತ್ತವೆ. ಈ ವರ್ಷ ಪ್ರಪಂಚದ ಪೈನ್‌ ಮರಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಳುವರಿ ನೀಡಿದ್ದವು. ಇದರಿಂದ ಕಚ್ಚಾ ದ್ರಾವಣದ ಕೊರತೆ ಎದುರಾಯಿತು. ಮುಂದಿನ ವರ್ಷ ಇಳುವರಿ ಉತ್ತಮಗೊಂಡರೆ ಬೆಲೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.

ತಯಾರಿಕೆ ಹೇಗೆ?

ನಿತ್ಯಹರಿದ್ವರ್ಣ ಜಾತಿಗೆ ಸೇರಿದ ಪೈನ್‌ ವರ್ಗಕ್ಕೆ ಸೇರಿದ ಮರಗಳಿಂದ ಗಮ್ ಮಾದರಿಯ ದ್ರಾವಣವನ್ನು ತಯಾರಿಸಲಾಗುತ್ತದೆ. ಈ ದ್ರಾವಣವನ್ನು ಔಷಧ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದೇ ದ್ರಾವಣವು ಕರ್ಪೂರ ತಯಾರಿಕೆಗೂ ಬಳಕೆಯಾಗುತ್ತದೆ. ಈ ದ್ರಾವಣವನ್ನು ಸಂಸ್ಕರಿಸಿ ಪುಡಿಯನ್ನಾಗಿ ಮಾಡಲಾಗುತ್ತದೆ. ಈ ಪುಡಿಯನ್ನು ಗುಡಿ ಕೈಗಾರಿಕೆಗಳಲ್ಲಿ ಸಂಸ್ಕರಿಸಿ ಕರ್ಪೂರದ ಬಿಲ್ಲೆಗಳನ್ನಾಗಿ ಮಾಡಲಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !