ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ಸೃಷ್ಟಿ; ಜನರ ಬದಲಾದ ಪ್ರವೃತ್ತಿ

Last Updated 22 ಜನವರಿ 2019, 19:30 IST
ಅಕ್ಷರ ಗಾತ್ರ

‘ಹಣ ಹೂಡಿಕೆ ಮಾಡುವಾಗ election (ಚುನಾವಣೆ), economy (ಆರ್ಥಿಕತೆ), earning (ಗಳಿಕೆ) ಈ ಮೂರು ’ಇ’ಗಳ ಪೈಕಿ ನಂತರದ ಎರಡು ‘ಇ’ಗಳು ಮುಖ್ಯವಾಗುತ್ತವೆಯೇ ಹೊರತು ಮೊದಲಿನ ‘ಇ’ ಅಲ್ಲ. ಚುನಾವಣೆಗಳು ನಡೆದ ಒಂದೆರಡು ವಾರ ಹಣಕಾಸು ಪೇಟೆಯಲ್ಲಿ ಕೆಲಮಟ್ಟಿಗೆ ಕಂಪನಗಳು ಕಂಡು ಬರುತ್ತವೆ. ಆದರೆ, ಹಣ ಹೂಡಿಕೆಗೆ ಸಂಬಂಧಿಸಿದಂತೆ ದೇಶಿ ಅರ್ಥವ್ಯವಸ್ಥೆಯ ಸ್ವರೂಪ ಮತ್ತು ಹೂಡಿಕೆಯ ಪ್ರತಿಫಲವಾಗಿ ಬರುವ ವರಮಾನವೇ ಮುಖ್ಯವಾಗುತ್ತದೆ’ ಎಂದು ಕಾರ್ವಿ ಪ್ರೈವೇಟ್‌ ವೆಲ್ತ್‌ನ ಸಿಇಒ ಅಭಿಜಿತ್‌ ಭಾವೆ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

ಹಣಕಾಸು ಸೇವೆ ಒದಗಿಸುವ ಕಾರ್ವಿ ಗ್ರೂಪ್‌ನ ಸಂಪತ್ತು ನಿರ್ವಹಣಾ ಅಂಗಸಂಸ್ಥೆಯಾಗಿರುವ ಕಾರ್ವಿ ಪ್ರೈವೇಟ್‌ ವೆಲ್ತ್‌, ದೇಶದ ಸಂಪತ್ತಿನ ಕುರಿತು ತನ್ನ 9ನೆ ವರದಿ ಪ್ರಕಟಿಸಿದೆ. ಒಂದು ವರ್ಷಾವಧಿಯಲ್ಲಿ ಎಲ್ಲ ಬಗೆಯ ಹಣಕಾಸು ಉತ್ಪನ್ನಗಳು ಸಂಪತ್ತು ಸೃಷ್ಟಿಗೆ ನೀಡಿರುವ ಕೊಡುಗೆಯ ಸಮಗ್ರ ಚಿತ್ರಣ ಇಲ್ಲಿದೆ. 85 ವರ್ಷ ಹಳೆಯದಾದ ಈ ಸಂಸ್ಥೆಯು, ₹ 54,000 ಕೋಟಿಗಳಷ್ಟು ಸಂಪತ್ತನ್ನು ನಿರ್ವಹಿಸುತ್ತದೆ. ಷೇರುಪೇಟೆ, ಮ್ಯೂಚುವಲ್‌ ಫಂಡ್‌, ರಿಯಲ್‌ ಎಸ್ಟೇಟ್‌, ಬಾಂಡ್‌ ಮತ್ತಿತರ ಹೂಡಿಕೆಗಳನ್ನು ಈ ಸಂಸ್ಥೆ ನಿರ್ವಹಿಸುತ್ತಿದೆ. ಭಾರತದ ಸಂಪತ್ತಿನ ವರದಿಯು, ಜನಸಾಮಾನ್ಯರಿಂದ ಹಿಡಿದು ಕೋಟ್ಯಧಿಪತಿಗಳ ವೈಯಕ್ತಿಕ ಸಂಪತ್ತಿನ ಬಗ್ಗೆ ಮಾಹಿತಿ ಒಳಗೊಂಡಿದೆ. ಜನರು ಚಿನ್ನ, ಸ್ಥಿರಾಸ್ತಿ, ಬ್ಯಾಂಕ್‌ ಉಳಿತಾಯ ಖಾತೆ, ಠೇವಣಿ, ಮ್ಯೂಚುವಲ್‌ ಫಂಡ್‌ ಮತ್ತಿತರ ರೂಪಗಳಲ್ಲಿ ಹಣ ತೊಡಗಿಸಿರುವುದರ ವಿವರಗಳು ಈ ವರದಿಯಲ್ಲಿ ಇವೆ.

2018ರ ಹಣಕಾಸು ವರ್ಷದಲ್ಲಿ ಹಣಕಾಸು ಮತ್ತು ಭೌತಿಕ ಸ್ವರೂಪದಲ್ಲಿನ ವ್ಯಕ್ತಿಗತ ಸಂಪತ್ತು ಶೇ 14ರಷ್ಟು ಹೆಚ್ಚಳಗೊಂಡಿದೆ. 2017ರಲ್ಲಿ ಇದು ಶೇ 11ರಷ್ಟಿತ್ತು. ಹಣಕಾಸು ಸಂಪತ್ತು ತ್ವರಿತಗತಿಯಲ್ಲಿ ಹೆಚ್ಚುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಷೇರುಪೇಟೆಯಲ್ಲಿನ ಹೂಡಿಕೆ ವೇಗಕ್ಕೆ ಹೋಲಿಸಿದರೆ, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಹೂಡಿಕೆ ಪ್ರಮಾಣವು ನಿಧಾನವಾಗಿದೆ. 2023ರ ವೇಳೆಗೆ ವ್ಯಕ್ತಿಗಳ ಹಣಕಾಸು ಸಂಪತ್ತಿನ ಪ್ರಮಾಣವು ಶೇ 68ಕ್ಕೆ ತಲುಪಲಿದೆ.

ಸ್ಥಿರ ಠೇವಣಿ ಮತ್ತು ಬಾಂಡ್‌ಗಳಿಗೆ ಹೋಲಿಸಿದರೆ ಷೇರುಗಳಲ್ಲಿನ ಹೂಡಿಕೆಯು ಏರುಗತಿಯಲ್ಲಿ ಇದೆ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳಿಗೆ ಹೋಲಿಸಿದರೆ ಇತರ ಹಣಕಾಸು ಉತ್ಪನ್ನಗಳಲ್ಲಿನ ಹೂಡಿಕೆ ಹೆಚ್ಚು ಆಕರ್ಷಕವಾಗಿರಲಿದೆ. ಮ್ಯೂಚುವಲ್‌ ಫಂಡ್‌ಗಳ ಹೂಡಿಕೆ ಲಾಭದಾಯಕವಾಗಿದೆ ಎನ್ನುವ ಪ್ರಚಾರ ಅಭಿಯಾನವು (ಮ್ಯೂಚುವಲ್‌ ಫಂಡ್‌ ಸಹಿ ಹೈ) ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸುತ್ತಿದೆ. ಷೇರುಪೇಟೆಯಲ್ಲಿನ ಗೂಳಿಯ ನಾಗಾಲೋಟ ಹೀಗೆಯೇ ಮುಂದುವರೆದರೆ, 2025ರ ವೇಳೆಗೆ ಸಂವೇದಿ ಸೂಚ್ಯಂಕವು 1 ಲಕ್ಷ ಅಂಶಗಳಿಗೆ ತಲುಪಲಿದೆ ಎಂದೂ ವರದಿಯಲ್ಲಿ ಅಂದಾಜಿಸಲಾಗಿದೆ.

‘ವಿವಿಧ ಬಗೆಯ ಹಣಕಾಸು ಉತ್ಪನ್ನಗಳಲ್ಲಿನ ಹೂಡಿಕೆ ವಿಷಯದಲ್ಲಿ ಜನಸಾಮಾನ್ಯರಲ್ಲಿ ಹೆಚ್ಚಿನ ಆಸಕ್ತಿ ಕಂಡು ಬರುತ್ತಿರುವುದನ್ನು ಇದು ಧ್ವನಿಸುತ್ತದೆ’ ಎಂದು ಭಾವೆ ಹೇಳುತ್ತಾರೆ. ಬಡವರು ಮತ್ತು ಶ್ರೀಮಂತರು ಎಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಈ ವರದಿ ಬೆಳಕು ಚೆಲ್ಲಿದೆ. ಆರ್‌ಬಿಐ ಮತ್ತು ‘ಸೆಬಿ’ಯಲ್ಲಿ ಲಭ್ಯ ಇರುವ ವಿವರಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. 2018ರ ಮಾರ್ಚ್‌ಗೆ ಸಂಬಂಧಿಸಿದ ವರದಿ ಇದಾಗಿದೆ. ಜನರು ಪರಂಪರಾಗತವಾಗಿ ಹೂಡಿಕೆ ಮಾಡಿಕೊಂಡು ಬರುತ್ತಿದ್ದ ಚಿನ್ನ, ಭೂಮಿ ಖರೀದಿ (physical asset) ಬದಲಿಗೆ ಈಗ ಉಳಿತಾಯ, ಷೇರುಪೇಟೆ, ಮ್ಯೂಚುವಲ್‌ ಫಂಡ್‌, ವಿಮೆ ಮತ್ತಿತರ ಹಣಕಾಸಿನ ಉತ್ಪನ್ನಗಳಲ್ಲಿ (financial asset) ಹೂಡಿಕೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಇತ್ತೀಚಿನ ನಾಲ್ಕು ವರ್ಷಗಳಲ್ಲಿ ಇಂತಹ ಪ್ರವೃತ್ತಿಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನ ಖರೀದಿಯ ಆಕರ್ಷಣೆ ಕಡಿಮೆಯಾಗುತ್ತಿದೆ.

ಇದೊಂದು ಬಡವರು ಮತ್ತು ಶ್ರೀಮಂತರು ಹೀಗೆ ಎಲ್ಲ ಬಗೆಯ ಆದಾಯದವರ ಹೂಡಿಕೆ ವಿವರಗಳನ್ನು ಒಳಗೊಂಡ ಸಮಗ್ರ ವರದಿಯಾಗಿದೆ. ಬೆಂಗಳೂರಿನ ಬಹಳಷ್ಟು ಜನರು ಉಳಿತಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ತೊಡಗಿಸಿದ್ದಾರೆ.
ಜನರ ಸಂಪತ್ತು 2018ರಲ್ಲಿ ₹ 392 ಲಕ್ಷ ಕೋಟಿಗೆ ಏರಿಕೆಯಾಗಿದೆ. ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಲಕ್ಷಾಧಿಪತಿಗಳನ್ನು ಹೊಂದಿರುವ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯೂ ಶೇ 20ರಷ್ಟು ಹೆಚ್ಚಳಗೊಂಡಿದೆ. ಸಂಪತ್ತು ವೃದ್ಧಿ ದರ ಇದೇ ಗತಿಯಲ್ಲಿ ಇದ್ದರೆ 2023ರ ವೇಳೆಗೆ ವ್ಯಕ್ತಿಗಳ ಸಂಪತ್ತು ₹ 518 ಲಕ್ಷ ಕೋಟಿಗೆ ತಲುಪಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಸಂಪತ್ತು ಹೆಚ್ಚಳದಲ್ಲಿ ಮ್ಯೂಚುವಲ್‌ ಫಂಡ್‌ಗಳು ಅತಿದೊಡ್ಡ ಚಾಲನಾ ಶಕ್ತಿಯಾಗಿವೆ. ನಿಯಮಿತ ಮತ್ತು ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಮೂಲಕ ಹೂಡಿಕೆ ಏರುಗತಿಯಲ್ಲಿ ಇದೆ. ಷೇರುಗಳಿಗೆ ಹೋಲಿಸಿದರೆ ಬ್ಯಾಂಕ್‌ ಠೇವಣಿಗಳ ಬೆಳವಣಿಗೆ ದರ ಒಂದಂಕಿಯಲ್ಲಿ ಇದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT