ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಆಟೊಮೊಬೈಲ್ಸ್‌ ರಫ್ತಿಗೆ ಹೇರಳ ಅವಕಾಶ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್‌
Last Updated 17 ಡಿಸೆಂಬರ್ 2018, 14:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಆಟೊಮೊಬೈಲ್ಸ್‌ ಉದ್ದಿಮೆ ಹಾಗೂ ಕೃಷಿ ಸಂಸ್ಕರಣಾ ಘಟಕಗಳು ಮುಂಚೂಣಿಯಲ್ಲಿವೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ರಫ್ತಾಗುತ್ತಿಲ್ಲ. ಈ ಎರಡೂ ಕ್ಷೇತ್ರಗಳ ಉತ್ಪನ್ನಗಳ ರಫ್ತಿಗೆ ಹೇರಳ ಅವಕಾಶವಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್‌ ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಫೆಡರೇಷನ್‌ ಆಫ್‌ ಇಂಡಿಯನ್‌ ಎಕ್ಸ್‌ಪೋರ್ಟ್‌ ಆರ್ಗನೈಜೇಶನ್‌ ಹಾಗೂ ವಿಟಿವಿಪಿ(ವಿಶ್ವೇಶರಯ್ಯ ಟ್ರೇಡ್‌ ಪ್ರಮೋಷನ್‌ ಸೆಂಟರ್‌) ಸಹಯೋಗದೊಂದಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಫ್ತು ತಂತ್ರಜ್ಞಾನ ಅಭಿವೃದ್ಧಿ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ–ಧಾರವಾಡ ನಗರಗಳಿಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಆರಂಭದಿಂದಲೂ ಚನ್ನಾಗಿದೆ. ಆದರೆ, ಬೆಂಗಳೂರು, ಮೈಸೂರು, ತುಮಕೂರು ನಗರಗಳಿಂದ ವಿದೇಶಗಳಿಗೆ ಆಗುವಷ್ಟು ರಫ್ತು ಅವಳಿ ನಗರದಿಂದ ಆಗುತ್ತಿಲ್ಲ. ಜಿಲ್ಲೆಯ ಉದ್ಯಮಿಗಳಿಗೆ ರಫ್ತು ಕ್ಷೇತ್ರದ ಮಾಹಿತಿ ಕೊರತೆ ಇದೆ. ಯಾವಾವ ದೇಶಗಳು ಯಾವಾವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತವೆ ಮತ್ತು ಎಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಜಿಲ್ಲೆಯ ಉದ್ಯಮದಾರರು ತಮ್ಮ ಉತ್ಪನ್ನಗಳ ರಫ್ತಿಗೆ ವ್ಯಾಪಾರಿಗಳು, ಮಧ್ಯವರ್ತಿಗಳನ್ನು ಅವಲಂಭಿಸಿದ್ದಾರೆ. ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳು ಯಾವ ದೇಶಕ್ಕೆ, ಎಷ್ಟು ಪ್ರಮಾಣದಲ್ಲಿ ರಫ್ತು ಮಾಡುತ್ತೇವೆ ಎಂಬ ವ್ಯವಹಾರದ ಗುಟ್ಟನ್ನು ಉದ್ಯಮದಾರರಿಗೆ ನೀಡುತ್ತಿಲ್ಲ. ಈ ಸಮಸ್ಯೆ ನಿವಾರಣೆಗಾಗಿ ವಿಟಿಪಿಸಿ ವೆಬ್‌ಸೈಟ್‌ ಆರಂಭಿಸಿದ್ದು, ಇದರಲ್ಲಿ ರಫ್ತು ಕುರಿತು ಮಾಹಿತಿ ಲಭಿಸಲಿದ್ದು, ಉದ್ಯಮಿಗಳೇ ನೇರವಾಗಿ ರಫ್ತು ಮಾಡಲು ಅನುಕೂಲವಾಗಲಿದೆ ಎಂದರು.

ರಾಜ್ಯ ಸರ್ಕಾರದ ಪ್ರಸ್ತುತ ಬಜೆಟ್‌ನಲ್ಲಿ ‘ಚೀನಾದೊಂದಿಗೆ ಸ್ಪರ್ಧೆ’ ಎಂಬ ವಿನೂತನ ಯೋಜನೆ ರೂಪಿಸಿದೆ. ತುಮಕೂರು, ಬಳ್ಳಾರಿ, ಕೊಪ್ಪಳ, ಮೈಸೂರು ಸೇರಿದಂತೆ ರಾಜ್ಯದ 9 ನಗರಗಳಲ್ಲಿ ವಿವಿಧ ಕ್ಲಸ್ಟರ್‌ಗಳನ್ನು ಆರಂಭಿಸಲು ಮುಂದಾಗಿದೆ. ಈ ಯೋಜನೆಯಡಿ ಹುಬ್ಬಳ್ಳಿಗೆ ಆಟೊಮೊಬೈಲ್‌ ಕ್ಲಸ್ಟರ್‌ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ–ಧಾರವಾಡ ಅವಳಿ ನಗರದ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಸಾವಿರ ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹೊಂದಿದೆ. ಇನ್ನೂ 4 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ಆರಂಭಕ್ಕೆ ಯೋಜನೆ ರೂಪಿಸಲಾಗಿದೆ. ಅಗತ್ಯ ಬೇಡಿಕೆ ಬಂದರೆ ಕೆಐಡಿಬಿಯಿಂದ ಭೂಸ್ವಾಧೀನ ಮಾಡಿಕೊಂಡು, ಹಂಚಿಕೆ ಮಾಡಲಾಗುವುದು ಎಂದರು.

ವಿಟಿಪಿಸಿ ಜಂಟಿ ನಿರ್ದೇಶಕ ಪ್ರವೀಣ್‌ ರಾಮದುರ್ಗ, ಕೇಂದ್ರ ಸರ್ಕಾರವು ದೇಶದ 168 ವಿವಿಧ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಗುರುತಿಸಿದ್ದು, ಇದರಲ್ಲಿ ಈಗಾಗಲೇ ಕರ್ನಾಟಕದಿಂದ 160 ಉತ್ಪನ್ನಗಳು ರಫ್ತಾಗುತ್ತಿವೆ. 11 ಸೇವಾ ಕ್ಷೇತ್ರಗಳನ್ನು ಗುರುತಿದ್ದು, ಇದರಲ್ಲೂ ರಾಜ್ಯ ಮುಂದಿದೆ. 40ಕ್ಕೂ ಹೆಚ್ಚು ಭೌಗೋಳಿಕ ಉಪಲಬ್ಧಗಳು ಕರ್ನಾಟಕದಲ್ಲಿ ಇದೆ ಎಂದರು.

ರಾಜ್ಯದಿಂದ 84 ಬಿಲಿಯನ್‌ ಡಾಲರ್‌ ವಿವಿಧ ಉತ್ಪನ್ನಗಳು ಹಾಗೂ ಸೇವೆಗಳು ವಿದೇಶಗಳಿಗೆ ರಫ್ತಾಗುತ್ತಿದೆ. ಇದರಲ್ಲಿ 66 ಬಿಲಿಯನ್‌ ಡಾಲರ್‌ನಷ್ಟು ಸ್ಟಾಫ್ಟ್‌ವೇರ್‌ ಮತ್ತು ಸರ್ವಿಸ್‌ ಕ್ಷೇತ್ರಕ್ಕೆ ಸಂಬಂಧಿದೆ. ಈ ಕ್ಷೇತ್ರದಲ್ಲಿ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 18 ಬಿಲಿಯನ್‌ ಡಾಲರ್‌ನಷ್ಟು ವಿವಿಧ ಸರಕುಗಳು ರಫ್ತಾಗುತ್ತದೆ ಎಂದರು.

ನವದೆಹಲಿಯ ಫೆಡರೇಷನ್‌ ಆಫ್‌ ಇಂಡಿಯನ್‌ ಎಕ್ಸ್‌ಪೋರ್ಟ್‌ ಆರ್ಗನೈಜೇಶನ್‌ನ ಸಹಾಯಕ ಸಂಶೋಧಕಿ ಸುನೈನಾ ಶರ್ಮಾ ಮಾತನಾಡಿ, ರಫ್ತು ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ರಫ್ತು ಕ್ಷೇತ್ರದಲ್ಲಿ ರಾಜ್ಯಕ್ಕೆ ಹೇರಳ ಅವಕಾಶವಿದೆ. ಉತ್ಪನ್ನಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಕೆಸಿಸಿಐ ಗೌರವ ಕಾರ್ಯದರ್ಶಿ ವಿನಯ ಜೆ.ಜವಳಿ, ಉಪಾಧ್ಯಕ್ಷರಾದ ಮಹೇಂದ್ರ ಲದ್ದಡ, ಅಶೋಕ ತೋಳನ್ನವರ, ಜಿ.ಕೆ.ಆದಪ್ಪಗೌಡರ, ಅಶೋಕ ಗಡಾದ, ರಮೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT