ಭಾನುವಾರ, ಜೂನ್ 13, 2021
25 °C

ಕೆಂಭಾವಿ: ಭತ್ತ ಖರೀದಿಗೆ ಬಾರದ ವರ್ತಕರು

ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಲಾಕ್‍ಡೌನ್ ಮಾಡಿದ್ದರಿಂದ ವರ್ತಕರು ಭತ್ತ ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಪಟ್ಟಣ ಸೇರಿದಂತೆ ಮುದನೂರ(ಕೆ), ಮುದನೂರ(ಬಿ), ಹಂದ್ರಾಳ ಕ್ಯಾಂಪ್, ಅಗತೀರ್ಥ, ಅಗ್ನಿ, ಪತ್ತೆಪುರ, ಪರಸನಹಳ್ಳಿ, ಜೈನಾಪುರ, ಕಿರದಳ್ಳಿ, ಮಲ್ಲಾ(ಬಿ), ಏವೂರ, ಗೌಡಗೇರಾ, ಯಡಿಯಾಪುರ, ತೆಗ್ಗೆಳ್ಳಿ, ಶಖಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಭತ್ತ ಬೆಳೆದಿದ್ದಾರೆ.

ಈಗಾಗಲೇ ಕೆಂಭಾವಿ ವಲಯದಲ್ಲಿ ರೈತರು ಭತ್ತ ಕಟಾವು ಮಾಡಿ ಜಮೀನುಗಳಲ್ಲಿ, ರಸ್ತೆಗಳಲ್ಲಿ, ಮೈದಾನಗಳಲ್ಲಿ ರಾಶಿ ಹಾಕಿಕೊಂಡು ವರ್ತಕರಿಗಾಗಿ ಕಾಯುತ್ತಿದ್ದಾರೆ. ಕಟಾವು ಮಾಡಿ 20 ದಿನಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಭತ್ತ ಖರೀದಿಯಾಗದೇ ಇರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿವಂತೆ ಮಾಡಿದೆ.

ಭತ್ತಕ್ಕಿಲ್ಲ ಸೂಕ್ತ ಬೆಲೆ: ಹಿಂದಿನ ವರ್ಷಕ್ಕೆ ನೋಡಿದರೆ ಈ ವರ್ಷ ಅಕ್ಕಿ ಬೆಲೆ ಏರಿಕೆಯಾಗಿದೆ. ಈಗಿರುವ ಅಕ್ಕಿ ಬೆಲೆಗೆ ರೈತನಿಗೆ ಕನಿಷ್ಠ ಕ್ವಿಂಟಲ್‍ಗೆ ₹2,500 ದಿಂದ ₹3,000 ವರೆಗೆ ಲಭಿಸಬೇಕು. ಇಲ್ಲವಾದರೆ ಈಗಿರುವ ಭತ್ತದ ಬೆಲೆಗೆ ಜನತೆಗೆ ₹40 ಕ್ಕಿಂತ ಕಡಿಮೆ ದರಕ್ಕೆ ಅಕ್ಕಿ ಸಿಗಬೇಕು. ಎರಡೂ ಸಾಧ್ಯವಾಗಿಲ್ಲ. ಮಾರುಕಟ್ಟೆ ಲಾಬಿ ನಿಯಂತ್ರಿಸಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಬೇಡಿಕೆ ಇಲ್ಲ: ಕೆಂಭಾವಿ ವಲಯದಲ್ಲಿ ಆರ್ಎನ್‍ಆರ್ ಹಾಗೂ ಕಾವೇರಿ ತಳಿಯ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಆರ್ಎನ್‍ಆರ್ 75 ಕೆ.ಜಿ ಭತ್ತಕ್ಕೆ ₹1150 ರಿಂದ ₹1180 ರೂ ಹಾಗೂ ಕಾವೇರಿ 75 ಕೆ.ಜಿ ಭತ್ತಕ್ಕೆ ₹1100 ರಿಂದ ₹1120 ನಿಗದಿಪಡಿಸಲಾಗಿದೆ. ಆದರೆ, ವರ್ತಕರು ಭತ್ತದ ರಾಶಿಗಳ ಕಡೆಗೆ ಮುಖ ಮಾಡ
ದಿರುವುದು ಸಂಕಷ್ಟ ತಂದೊಡ್ಡಿದೆ.

ಮಳೆ ಕಣ್ಣಾಮುಚ್ಚಲೆ

ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರಿಂದ ಬೆಳೆದ ಭತ್ತವನ್ನು ತಮ್ಮಲ್ಲೇ ಇಟ್ಟುಕೊಂಡು ಬೇಡಿಕೆ ಬಂದಾಗ ಮಾರಾಟ ಮಾಡಿದರಾಯಿತು ಎನ್ನುವ ಆಲೋಚನೆಯಲ್ಲಿದ್ದ ರೈತರಲ್ಲಿ ಮಳೆರಾಯನ ನಿರಂತರ ಕಾಟ ಆತಂಕದ ಛಾಯೆ ಮೂಡಿಸಿದೆ. ನಿತ್ಯ ಮೋಡದ ಕವಿದ ವಾತಾವರಣ, ಸಂಜೆಯಾಗುತ್ತಲೆ ಸುರಿಯುವ ಮಳೆಯಿಂದ ಜಮೀನು, ಮೈದಾನಗಳಲ್ಲಿ ರಾಶಿ ಹಾಕಲಾಗಿರುವ ಬೆಳೆ ಹಾಳಾಗುವುದೆಂಬ ಚಿಂತೆ ಅನ್ನದಾತನನ್ನು ಆವರಿಸಿದೆ.

ಗೊಂದಲ ಸೃಷ್ಟಿಸಿದ ಪ್ರಕಟಣೆ

ಕಳೆದ ತಿಂಗಳಿನಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ 5 ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿ ಸಲಾಗಿದೆ ಎಂದು ಪ್ರಕಟಣೆ ಹೊರಡಿಸಿ ನೊಂದಣಿ ಮಾಡಲು ಸಮಾವಕಾಶ ನೀಡಿತ್ತು. ಆದರೆ, ಯಾವ ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿದ್ದೇವೆ ಎಂಬ ಮಾಹಿತಿ ಇಲ್ಲದ್ದರಿಂದ ರೈತರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು