ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ ವಿಸ್ತರಿಸಲು ಸಿ.ಎಂ. ಮನವಿ

Last Updated 26 ಆಗಸ್ಟ್ 2021, 15:43 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ರಾಜ್ಯದ ಆದಾಯ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ ಆಗಿರುವ ಕಾರಣ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವುದನ್ನು 2022ರ ನಂತರವೂ ಮುಂದುವರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಬೊಮ್ಮಾಯಿ ಅವರು ನಿರ್ಮಲಾ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿ ಮಾಡಿದರು. ಕರ್ನಾಟಕಕ್ಕೆ ಬರಬೇಕಿರುವ ₹ 11 ಸಾವಿರ ಕೋಟಿ ಜಿಎಸ್‌ಟಿ ಪರಿಹಾರ ಬಾಕಿ ಬಗ್ಗೆಯೂ ಸಚಿವರ ಜೊತೆ ಚರ್ಚಿಸಲಾಯಿತು ಎಂದು ಬೊಮ್ಮಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೋವಿಡ್‌ ಬಿಕ್ಕಟ್ಟಿನಿಂದಾಗಿ ಜಿಎಸ್‌ಟಿ ಸಂಗ್ರಹವು ಇನ್ನೂ ಸ್ಥಿರತೆ ಕಾಣುತ್ತಿಲ್ಲ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕೊಡುವುದನ್ನು ಇನ್ನೂ ಮೂರು ವರ್ಷ ವಿಸ್ತರಿಸಿದರೆ ಈಗಿನ ಸಂದರ್ಭದಲ್ಲಿ ಹೆಚ್ಚು ಸಹಾಯ ಆಗುತ್ತದೆ ಎಂದು ಬೊಮ್ಮಾಯಿ ಅವರು ಸಭೆಯಲ್ಲಿ, ನಿರ್ಮಲಾ ಅವರಿಗೆ ಹೇಳಿದರು.

ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ‘ಆದರೆ, ಕಳೆದ ಆರ್ಥಿಕ ವರ್ಷದಿಂದ ಶುರುವಾದ ಕೊರೊನಾ ಬಿಕ್ಕಟ್ಟು ರಾಜ್ಯದ ಆದಾಯ ಸಂಗ್ರಹ ಪ್ರಮಾಣವನ್ನು ತಗ್ಗಿಸಿದೆ. ಜಿಎಸ್‌ಟಿ ಸಂಗ್ರಹ ಕೂಡ ಕುಸಿದಿದೆ’ ಎಂದು ಬೊಮ್ಮಾಯಿ ಅವರು ನಿರ್ಮಲಾ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.

ಎಲ್ಲ ರಾಜ್ಯಗಳೂ ಎದುರಿಸುತ್ತಿರುವ ಆದಾಯದ ಬಿಕ್ಕಟ್ಟನ್ನು ಪರಿಗಣಿಸಿ ಕೇಂದ್ರ ಸರ್ಕಾರವು, ಜಿಎಸ್‌ಟಿ ಪರಿಹಾರ ಸಾಲವನ್ನು 2020–21ನೇ ಸಾಲಿನಲ್ಲಿ ನೀಡಿದೆ. ಈ ಸಾಲವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೂ ವಿಸ್ತರಿಸಲಾಗಿದೆ. ‘ಪರಿಹಾರ ಸಾಲವು ರಾಜ್ಯಗಳಿಗೆ ಹಾಲಿ ಆರ್ಥಿಕ ವರ್ಷಕ್ಕೆ ಮಾತ್ರ ಆಗುತ್ತದೆ. ಆದಾಯ ಸಂಗ್ರಹದ ಮೇಲೆ ಕೋವಿಡ್‌ನ ಪರಿಣಾಮವು ಮುಂದಿನ ಕೆಲವು ವರ್ಷಗಳವರೆಗೆ ಇರಲಿದೆ’ ಎಂದು ಅವರು ವಿವರಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಸಿಗುವ ತೆರಿಗೆ ಆದಾಯವು 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕಡಿಮೆ ಆಗಲಿದೆ. ಅನುದಾನ ಹಂಚಿಕೆಗೆ ಸಂಬಂಧಿಸಿದ ಮಾನದಂಡ ಬದಲಿಸುವಂತೆ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಿದೆ. ಆದರೆ, ಈ ಮನವಿಯನ್ನು ಆಯೋಗ ಪರಿಗಣಿಸಿಲ್ಲ ಎಂದು ಬೊಮ್ಮಾಯಿ ಅವರು ಸಭೆಯಲ್ಲಿ ನಿರ್ಮಲಾ ಅವರಿಗೆ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT