ಸಿಇಎ ಹುದ್ದೆ ತೊರೆಯಲು ಅರವಿಂದ ನಿರ್ಧಾರ

7
ಒಂದೆರಡು ತಿಂಗಳಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ

ಸಿಇಎ ಹುದ್ದೆ ತೊರೆಯಲು ಅರವಿಂದ ನಿರ್ಧಾರ

Published:
Updated:
ಅರವಿಂದ ಸುಬ್ರಮಣಿಯನ್‌

ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ಹಣಕಾಸು ಸಚಿವಾಲಯದಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ.

ಕೌಟುಂಬಿಕ ಕಾರಣಗಳಿಗಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದು, ಅಮೆರಿಕೆಗೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸುಬ್ರಮಣಿಯನ್ ಅವರನ್ನು 2014ರ ಅಕ್ಟೋಬರ್‌ ತಿಂಗಳಲ್ಲಿ ಮೂರು ವರ್ಷಗಳ ಅವಧಿಗಾಗಿ ಈ ಹುದ್ದೆಗೆ ನೇಮಿಸಲಾಗಿತ್ತು. 2017ರಲ್ಲಿ ಅವರ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷದವರೆಗೆ ಮುಂದುವರೆಸಲಾಗಿತ್ತು.

‘ಕೆಲ ದಿನಗಳ ಹಿಂದೆ ಅರವಿಂದ್‌ ಅವರು ನನ್ನ ಜತೆ ವಿಡಿಯೊ ಸಂವಾದದ ಮೂಲಕ ಸಂ‍ಪರ್ಕಿಸಿ, ಕೌಟುಂಬಿಕ ಕಾರಣಗಳಿಗಾಗಿ ತಾವು ಅಮೆರಿಕೆಗೆ ಮರಳಲು ನಿರ್ಧರಿಸಿರುವುದನ್ನು ನನ್ನ ಗಮನಕ್ಕೆ ತಂದಿದ್ದರು. ವೈಯಕ್ತಿಕ ಕಾರಣಗಳು ಅವರಿಗೆ ತುಂಬ ಮಹತ್ವವಾಗಿದ್ದವು. ಅವರ ನಿರ್ಧಾರಕ್ಕೆ ಸಮ್ಮತಿಸದೇ ನನಗೆ ಬೇರೆ ದಾರಿಯೇ ಇದ್ದಿರಲಿಲ್ಲ’ ಎಂದು ಜೇಟ್ಲಿ ಬರೆದುಕೊಂಡಿದ್ದಾರೆ.

‘ಹಿಂದಿನ ವರ್ಷ ಅವರ ಅಧಿಕಾರಾವಧಿ ಕೊನೆಗೊಂಡಾಗ, ಇನ್ನಷ್ಟು ಸಮಯದವರೆಗೆ ಹುದ್ದೆಯಲ್ಲಿ ಮುಂದುವರೆಯುವಂತೆ ನಾನು ಕೇಳಿಕೊಂಡಿದ್ದೆ. ಆಗಲೂ ಅವರು ಕೌಟುಂಬಿಕ ಕಾರಣಗಳನ್ನು ಪ್ರಸ್ತಾಪಿಸಿದ್ದರು. ಸದ್ಯಕ್ಕೆ ತಾವು ನಿರ್ವಹಿಸುತ್ತಿರುವ ಹುದ್ದೆಯು ತಮಗೆ ಅತ್ಯಂತ ಸೂಕ್ತವಾಗಿ ಹೊಂದುತ್ತಿದೆ ಎಂದು ಹೇಳಿಕೊಂಡಿದ್ದರು.

‘ದೇಶಿ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಲು ಅವರು ನೀಡಿರುವ ಕೊಡುಗೆಗಳಿಗೆ ನಾನು ಅವರಿಗೆ ಧನ್ಯವಾದ ಸಲ್ಲಿಸುವೆ. ವೈಯಕ್ತಿಕವಾಗಿ ನಾನು ಅವರ ಚುರುಕುತನ, ಸಾಮರ್ಥ್ಯ, ಬೌದ್ಧಿಕ ಸಾಮರ್ಥ್ಯ ಮತ್ತು ಚಿಂತನೆಗಳಿಂದ ಇನ್ನು ಮುಂದೆ ವಂಚಿತನಾಗಲಿರುವೆ’ ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಟೀಕೆ: ಪ್ರಧಾನಿ ಮೋದಿ ಅವರ ಸರ್ಕಾರವು ಅರ್ಥ ವ್ಯವಸ್ಥೆಯನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿರುವುದನ್ನು ಕಂಡು ಅದರ ಹಣಕಾಸು ಪರಿಣತರು ರೋಸಿ ಹೋಗಿದ್ದಾರೆ.ಅರವಿಂದ ಅವರ ನಿರ್ಧಾರದಲ್ಲಿ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !