ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಯ ಬದುಕಿಗೆ ‘ಜೀವನ ಶಾಂತಿ’

Last Updated 27 ನವೆಂಬರ್ 2018, 19:30 IST
ಅಕ್ಷರ ಗಾತ್ರ

ತಾವೇ ಕಟ್ಟಿ ಬೆಳೆಸಿದ ರೇಮಂಡ್ಸ್ ಸಂಸ್ಥೆಯಿಂದಲೇ ಮುಖ್ಯಸ್ಥ ವಿಜಯಪಥ ಸಿಂಘಾನಿಯಾ ಅವರನ್ನು ಹೊರ ಹಾಕಲಾಗಿದೆ. ಈ ಇಳಿ ವಯಸ್ಸಿನಲ್ಲಿ ಅವರು ತಮ್ಮ ಮಿತ್ರರ ಸಹಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಉತ್ತಮ ಸಂಪಾದನೆ ಇದ್ದ ಸಮಯದಲ್ಲಿ ನಿವೃತ್ತಿ ಯೋಜನೆಗಳಲ್ಲಿ ಹಣ ತೊಡಗಿಸಿದ್ದರೆ ಅವರು ವೃದ್ಧಾಪ್ಯದ ದಿನಗಳನ್ನು ನೆಮ್ಮದಿಯಿಂದ ಕಳೆಯಬಹುದಾಗಿತ್ತು. ಇದೊಂದು ಸಾಂದರ್ಭಿಕ ಉದಾಹರಣೆಯಷ್ಟೇ. ಇಂತಹ ಪರಿಸ್ಥಿತಿಯು ಯಾರ ಬದುಕಿನಲ್ಲಾದರೂ ಎದುರಾಗಬಹುದು. ದುಡಿಮೆಯ ದಿನಗಳಲ್ಲಿ ಗಳಿಸಿದ ಆದಾಯದಿಂದ ಸ್ಥಿರಾಸ್ತಿ ಅಥವಾ ವ್ಯಾಪಾರ ವಹಿವಾಟು ವಿಸ್ತಾರದಲ್ಲಿಯೇ ಎಲ್ಲಾ ಮೊತ್ತವನ್ನು ತೊಡಗಿಸುವ ಬದಲು ವೃದ್ಧಾಪ್ಯದಲ್ಲಿ ನಿರಂತರ ಹಾಗೂ ನಿಗದಿತ ಆದಾಯ ಪಡೆಯಲು ನಿವೃತ್ತಿ ಯೋಜನೆಗಳಲ್ಲಿ ಹಂತ ಹಂತವಾಗಿ ಅಥವಾ ಏಕಕಂತಿನಲ್ಲಿ ಉಳಿತಾಯ ಮಾಡಿದರೆ ಹಲವಾರು ಪ್ರಯೋಜನಗಳಿವೆ. ತಕ್ಷಣಕ್ಕೆ ಅಥವಾ ಮುಂದೂಡಿದ ದಿನಗಳಲ್ಲಿ ಪಿಂಚಣಿ ಪಡೆಯುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮರೆಯಬಾರದು.

ನಿರ್ದಿಷ್ಟ ಆದಾಯ ಇಲ್ಲದ ಮುಪ್ಪಿನ ದಿನಗಳಲ್ಲಿ ಮಾಸಿಕ ನಗದು ಆದಾಯ ಅನಿವಾರ್ಯ. ವ್ಯಕ್ತಿಯ ದುಡಿಯುವ ಸಾಮರ್ಥ್ಯ ಕಡಿಮೆಯಾದಾಗಲೂ ಉತ್ತಮ ಜೀವನ ನಡೆಸಲು ಉತ್ತಮ ಆರೋಗ್ಯ ಇರುವುದರ ಜತೆಗೆ ಸಾಕಷ್ಟು ಆರ್ಥಿಕ ಭದ್ರತೆಯೂ ಇರಬೇಕಾಗುತ್ತದೆ. ವೈದ್ಯಕೀಯ ರಂಗದಲ್ಲಿ ಆಗುತ್ತಿರುವ ಸುಧಾರಣೆಗಳಿಂದ ಜೀವಿತಾವಧಿ ಹೆಚ್ಚುತ್ತಿದೆ. ಆರ್ಥಿಕವಾಗಿ ಸದೃಢರಾಗಿದ್ದಲ್ಲಿ, ನಿಮ್ಮ ಆದಾಯದ ಒಂದು ಭಾಗವನ್ನು ವೈದ್ಯಕೀಯ ವೆಚ್ಚಕ್ಕಾಗಿ ಮೀಸಲಿಟ್ಟರೂ ಸಹ ಗೌರವಾನ್ವಿತ ಜೀವನ ನಡೆಸಲು ಸಾಧ್ಯವಾಗುತ್ತದೆ.

ನಿರಂತರ, ಖಚಿತ ಹಾಗೂ ನಿರ್ದಿಷ್ಟವಾದ ಅವಧಿಯಿಂದ ಪಿಂಚಣಿ ಪಡೆಯುವ ಯೋಜನೆ ಯಾವುದಾದರೂ ಇದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಇತ್ತೀಚೆಗೆ ಆರಂಭಿಸಿರುವ ’ಜೀವನ ಶಾಂತಿ’ ಯೋಜನೆಯೇ ಸೂಕ್ತ ಉತ್ತರವಾಗಿದೆ.

ನಿವೃತ್ತಿಯ ಬದುಕಿದೆ ನಿರಂತರ ಖಚಿತ ಆದಾಯ ನೀಡುವ ಭರವಸೆಯನ್ನು ಈ ಯೋಜನೆ ನೀಡುತ್ತದೆ. ಹೆಸರೇ ಸೂಚಿಸುವಂತೆ ‘ಜೀವನ ಶಾಂತಿ’ (ಯೋಜನೆ ಸಂಖ್ಯೆ 850) ಈ ಯೋಜನೆಯು ಖಚಿತ, ನಿರ್ದಿಷ್ಟ ಹಾಗೂ ನಿರಂತರ ಪಿಂಚಣಿ ನೀಡುವ ಯೋಜನೆಯಾಗಿದೆ.

ಏಕ ಕಂತಿನಲ್ಲಿ ಹಣ ಪಾವತಿ

ತಕ್ಷಣ (Immediate Pension) ಅಥವಾ ಮುಂದೂಡಿದ ದಿನದಿಂದ (Deferred Pension) ಪಿಂಚಣಿ ಸೌಲಭ್ಯ. ಮುಂದೂಡಿದ ಪಿಂಚಣಿಯನ್ನು 1 ರಿಂದ 20ವರ್ಷಗಳವರೆಗೆ ಮುಂದೂಡಬಹುದು.

ತಕ್ಷಣ ಪಿಂಚಣಿ ಪಡೆಯಲು 10 ವಿಧದ ಆಯ್ಕೆಗಳಿವೆ. ಅವುಗಳಲ್ಲಿ ‘ಎಫ್’ ಆಯ್ಕೆ ಅತ್ಯುತ್ತಮವಾಗಿದೆ.

ಮುಂದೂಡಿದ ಪಿಂಚಣಿಯಲ್ಲಿ ಒಬ್ಬರಿಗೆ ಅಥವಾ ಜಂಟಿ ಪಿಂಚಣಿಯಾಗಿ ಇಬ್ಬರೂ ಪಿಂಚಣಿದಾರರಿಗೆ ಜೀವನ ಪರ್ಯಂತ ಶೇ 100 ರಷ್ಟು ಪಿಂಚಣಿ ದೊರೆಯುತ್ತದೆ. ಇಲ್ಲಿ ಶೇ 9 ರಿಂದ ಶೇ 21ರ ದರದಲ್ಲಿ ಪಿಂಚಣಿ ದೊರೆಯುತ್ತದೆ. ಪಿಂಚಣಿಯನ್ನು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕವಾಗಿ ಪಡೆಯಲು ಅವಕಾಶ ಇದೆ. 30 ವರ್ಷ ಪೂರ್ಣಗೊಳಿಸಿದವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ ₹1.50 ಲಕ್ಷ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.

ಸಾಲ ಸೌಲಭ್ಯ

ಎಫ್ ಮತ್ತು ಜೆ ವಿಧಗಳಲ್ಲಿ ಸಾಲ ಸೌಲಭ್ಯವಿದೆ. ಹೂಡಿಕೆಯ ಒಂದು ವರ್ಷದ ನಂತರ ಸಾಲವನ್ನು ಪಡೆಯಬಹುದು.

ಸರೆಂಡರ್:ಹೂಡಿಕೆ ಮಾಡಿದ 3 ತಿಂಗಳ ನಂತರ ತಮಗೆ ಇಚ್ಛೆ ಇಲ್ಲದಿದ್ದರೆ ಸರೆಂಡರ್ ಮಾಡಲು ಅವಕಾಶವಿದೆ.

ಉದಾಹರಣೆ: 40 ವರ್ಷ ವಯಸ್ಸಿನ ವ್ಯಕ್ತಿ ₹ 10ಲಕ್ಷ ಮೊತ್ತವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸಿದ್ದರೆ, ಏಕ ಕಂತಿನಲ್ಲಿಜಿ.ಎಸ್.ಟಿ. ಸೇರಿ
₹ 10,18,000 ಪ್ರಿಮಿಯಂ ಪಾವತಿಸಬೇಕು.

1) ತಕ್ಷಣ ಪಿಂಚಣಿ ಬಯಸಿದಲ್ಲಿ ‘ಎಫ್’ ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ವಾರ್ಷಿಕ ಪಿಂಚಣಿ ಬಯಸಿದಲ್ಲಿ ₹ 65,200. ಮಾಸಿಕ ಪಿಂಚಣಿ ಬಯಸಿದಲ್ಲಿ ₹ 5,242 ದೊರೆಯುತ್ತದೆ.

ಆಯ್ಕೆ ಮಾಡಿದ ವಿಧಾನದಲ್ಲಿ ಜೀವನ ಪರ್ಯಂತ ಪಿಂಚಣಿ ಪಡೆಯಬಹುದು. ಪಿಂಚಣಿದಾರರ ಕಾಲಾನಂತರ ₹ 10 ಲಕ್ಷವನ್ನು ವಾರಸುದಾರರಿಗೆ ಮರಳಿಸಲಾಗುವುದು
2) ಮುಂದೂಡಿದ ಪಿಂಚಣಿ: 20ವರ್ಷಗಳ ಅವಧಿಗೆ ಮುಂದೂಡಿದರೆ ಅಂದರೆ ಪಿಂಚಣಿದಾರನಿಗೆ 60 ವರ್ಷ ವಯಸ್ಸಾದ ನಂತರ ಪಿಂಚಣಿ ಪಡೆಯುವುದು.

ವಾರ್ಷಿಕ ಪಿಂಚಣಿ ₹ 2,13,400 ಮತ್ತು ಮಾಸಿಕ ಪಿಂಚಣಿ ₹ 16,904 ದೊರೆಯುತ್ತದೆ. ಅವರ ಕಾಲಾನಂತರ ನಾಮಿನಿಗೆ ಅಥವಾ ವಾರಸುದಾರರಿಗೆ ಶೇ.110 ರಷ್ಟು ಪರ್ಚೇಜ್ ಪ್ರೈಸ್ ಅಥವಾ ಪರ್ಚೇಜ್ ಪ್ರೈಸ್ ಮತ್ತು ಒಟ್ಟುಗೂಡಿದ ಖಚಿತ ಸೇರ್ಪಡೆಯಲ್ಲಿ ಅವರ ಅವಧಿಯವರೆಗೆ ನೀಡಿದ ಪಿಂಚಣಿಯನ್ನು ಕಳೆದ ಮೊತ್ತ. ಇವುಗಳಲ್ಲಿ ಯಾವುದು ಹೆಚ್ಚು ಆ ಮೊತ್ತವನ್ನು ನೀಡುತ್ತಾರೆ.

ಮುಂದೂಡಿದ ಪಿಂಚಣಿಯಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕು. ಪಿಂಚಣಿ ಪ್ರಾರಂಭವಾಗುವ ಮೊದಲು ಪಿಂಚಣಿದಾರ ಮೃತರಾದರೆ ಅಥವಾ ಪಿಂಚಣಿ ಪ್ರಾರಂಭದ ನಂತರ ಪಿಂಚಣಿದಾರ ಮೃತರಾದರೆ ಸಿಗುವ ಸೌಲಭ್ಯಗಳೇನು ಎನ್ನುವುದನ್ನೂ ತಿಳಿದುಕೊಳ್ಳಬೇಕು.

ಪಿಂಚಣಿ ಪ್ರಾರಂಭವಾಗುವ ಮೊದಲೇ ಪಿಂಚಣಿದಾರ ಮೃತರಾದರೆ, 20ವರ್ಷ ಮುಂದೂಡಿದ ಪಿಂಚಣಿ ಅವಧಿಯಲ್ಲಿ ಅಕಸ್ಮಾತ್ ಹೂಡಿಕೆ ಮಾಡಿದ 11 ವರ್ಷಗಳ ನಂತರ ಮೃತರಾದರೆ, ವಿಮೆ ಮೊತ್ತ ಮತ್ತು 11 ವರ್ಷಗಳ ಪಿಂಚಣಿಯನ್ನು ಒಟ್ಟಾಗಿ ವಾರಸುದಾರರಿಗೆ ನೀಡಲಾಗುತ್ತದೆ. ಪಿಂಚಣಿ ಪ್ರಾರಂಭದ ನಂತರ ಪಿಂಚಣಿದಾರ ಮೃತಪಟ್ಟ ಸಂದರ್ಭದಲ್ಲಿ, ವಾರಸುದಾರರಿಗೆ ನಿಯಮಾನುಸಾರ ನೀಡಬೇಕಾದ ಮೊತ್ತದಲ್ಲಿ ಅಲ್ಲಿಯವರೆಗೆ ಪಡೆದ ಪಿಂಚಣಿ ಕಳೆದು ನೀಡಲಾಗುತ್ತದೆ.

ಈ ಎಲ್ಲಾ ಭರವಸೆಗಳನ್ನು ಪಾಲಿಸಿ ಬಾಂಡ್‌ನಲ್ಲಿಯೇ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಈ ಎಲ್ಲ ಕಾರಣಕ್ಕೆ ಇದೊಂದು ಖಚಿತ, ನಿರಂತರ ಹಾಗೂ ನಿರ್ದಿಷ್ಟವಾಗಿ ಪಿಂಚಣಿ ನೀಡುವ ಯೋಜನೆಯಾಗಿದೆ. ನಿವೃತ್ತಿಯ ಬದುಕಿಗೆ ಸ್ವಲ್ಪವಾದರೂ ಉಳಿತಾಯ ಮಾಡಿ ನಿಶ್ಚಿಂತರಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT