ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವಿಮೆಯ ದೀರ್ಘಾವಧಿ ಲಾಭ

ಹೂಡಿಕೆಯ ಆಯ್ಕೆಯಲ್ಲಿ ಜೀವವಿಮೆಯೂ ಇರಲಿ
Last Updated 26 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕುಟುಂಬದ ದುಡಿಯುವ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಆತ ಮಾಡಿಸಿದ್ದ ಜೀವವಿಮೆಯ ಹಣದಿಂದ ಆತನ ಕುಟುಂಬವು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ.

ಬದುಕಿನ ವಿವಿಧ ಗುರಿಗಳನ್ನು ಸಾಧಿಸಲು ಹಣ ಹೂಡಿಕೆಯ ಆಯ್ಕೆಯಲ್ಲಿ ಜೀವವಿಮೆಗೂ ಪಾತ್ರ ಇರಬೇಕೆ ಎಂಬ ಪ್ರಶ್ನೆಯು ಅನೇಕರಿಗೆ ಕಾಡಬಹುದು. ಒಂದಿಷ್ಟು ಸಮಾಧಾನ – ತಾಳ್ಮೆ ತೋರುವುದು, ಸರಿಯಾದ ಯೋಜನೆ ರೂಪಿಸುವುದು ಮತ್ತು ಹೂಡಿಕೆಯಲ್ಲಿ ಶಿಸ್ತು ಕಾಪಾಡಿಕೊಂಡು ಬಂದರೆ ಇಂದಿನ ಹೂಡಿಕೆಯು ದೀರ್ಘಾವಧಿಯಲ್ಲಿ ಖಂಡಿತವಾಗಿಯೂ ಹೆಚ್ಚು ಲಾಭದಾಯಕವಾಗಿರುತ್ತದೆ ಎನ್ನುವುದು ಸಮರ್ಪಕ ಉತ್ತರ ಎನಿಸಬಹುದು. ಈ ಸೂತ್ರಗಳನ್ನು ಅನುಸರಿಸಿದರೆ ದೀರ್ಘಾವಧಿಯಲ್ಲಿ ಉತ್ತಮ ಮೊತ್ತದ ಹಣ ಸಂಗ್ರಹಿಸಿ ಆರ್ಥಿಕ ಗುರಿಗಳನ್ನೆಲ್ಲವನ್ನು ಸುಲಭವಾಗಿ ಈಡೇರಿಸಿಕೊಳ್ಳಲು ಸಾಧ್ಯವಾಗಲಿದೆ.

ಈಗ ಈ ವಿಚಾರಗಳನ್ನು ಒಂದೊಂದಾಗಿ ವಿಶ್ಲೇಷಿಸುತ್ತಾ ಹೋಗೋಣ.ಹೂಡಿಕೆ ಆರಂಭಿಸುವುದಕ್ಕೂ ಮುನ್ನ, ಜೀವನದ ಆರ್ಥಿಕ ಗುರಿಯನ್ನು ನಿರ್ಧರಿಸಿ. ಆ ಗುರಿಯನ್ನು ಸಾಕಾರಗೊಳಿಸಲು ಎಷ್ಟು ಹಣ ಬೇಕಾಗುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಳ್ಳಿ. ಅದಾದ ನಂತರ ಗುರಿಗೆ ಅನುಗುಣವಾಗಿ ದೀರ್ಘಾವಧಿಯ, ವಿವಿಧ ಕ್ಷೇತ್ರಗಳಲ್ಲಿನ ಹಣ ಹೂಡಿಕೆ ಯೋಜನೆಗಳನ್ನು ರೂಪಿಸಿಕೊಳ್ಳಿ.

ಸ್ವಂತ ಮನೆ ಕಟ್ಟಬೇಕಾದರೆ ಒಂದು ನಿರ್ದಿಷ್ಟ ಯೋಜನೆ ಇರಬೇಕಾಗುತ್ತದೆ. ಆದರೆ, ಸುಂದರ ಬದುಕನ್ನು ರೂಪಿಸಬೇಕಾದರೆ ಇನ್ನೂ ದೊಡ್ಡ ಯೋಜನೆ ಮತ್ತು ಗುರಿಯ ಅಗತ್ಯವಿರುತ್ತದೆ ಎಂಬುದನ್ನು ಯಾರೊಬ್ಬರೂ ಮರೆಯಬಾರದು.

ದೀರ್ಘಾವಧಿಯಲ್ಲಿ ಒಳ್ಳೆಯ ಗಳಿಕೆ ಮಾಡಬೇಕೆಂದಿದ್ದರೆ ಹೂಡಿಕೆಯಲ್ಲಿ ವೈವಿಧ್ಯವೂ ಇರುವುದು ತುಂಬ ಅಗತ್ಯ. ಈ ನಿಟ್ಟಿನಲ್ಲಿ ಜೀವ ವಿಮೆ ಹೇಗೆ ಸಹಾಯ ಮಾಡಬಲ್ಲದು, ನಿಮ್ಮ ಜೀವನದ ಗುರಿಯನ್ನು ನಿರ್ಧರಿಸುವಲ್ಲಿ ಜೀವವಿಮೆಯ ಪಾತ್ರವೇನು, ದೀರ್ಘಾವಧಿಯ ಬಂಡವಾಳ ಹೂಡಿಕೆಯಲ್ಲಿ ಜೀವವಿಮೆಯನ್ನು ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನದಟ್ಟು ಮಾಡುವುದೇ ಈ ಲೇಖನದ ಉದ್ದೇಶವಾಗಿದೆ.

ದುಡಿಯುವ ವ್ಯಕ್ತಿಯ ಅನುಪಸ್ಥಿತಿಯಲ್ಲಿ...

ಕುಟುಂಬದ ದುಡಿಯುವ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಏನಾಗಬಹುದು. ಇಂತಹ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಲು ಯಾರೂ ಬಯಸಲಾರರು. ಆದರೆ, ಕುಟುಂಬದ ಯಜಮಾನನ ಅನುಪಸ್ಥಿತಿಯಲ್ಲೂ ಆತನು ಮಾಡಿಸಿರುವ ಜೀವವಿಮೆಯ ಹಣದಿಂದ ಆತನ ಕುಟುಂಬವು ಜೀವನದ ಗುರಿಗಳನ್ನು ಈಡೇರಿಸಿಕೊಳ್ಳಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರೂ ಖಂಡಿತವಾಗಿಯೂ ಬಯಸುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಕುಟುಂಬಕ್ಕೆ ಸಾಧ್ಯವಾದಷ್ಟು ಒಳಿತನ್ನು ಬಯಸುವುದೇ ವಿಮಾ ಕಂಪನಿಗಳ ಉದ್ದೇಶವೂ ಆಗಿದೆ.

ಆಕಸ್ಮಿಕಗಳಿಂದ ರಕ್ಷಣೆ

ಕುಟುಂಬದ ಯಜಮಾನ ಇಲ್ಲವಾದರೂ ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ ಎಂಬ ಕಾರಣಕ್ಕೆ ಜೀವ ವಿಮೆಯಲ್ಲಿ ಹೂಡಿಕೆ ಮಾಡುವುದು ಅತಿ ಮುಖ್ಯವಾಗುತ್ತದೆ. ಇದು ನಗದು ರೂಪದ ಸೊತ್ತು. ಮುಖ್ಯಸ್ಥನ ಅನುಪಸ್ಥಿತಿಯಲ್ಲಿ ಆತನ ಕುಟುಂಬವು ಆರ್ಥಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸೊತ್ತುಗಳ ಮಾರಾಟ ಮಾಡಬೇಕಾದ ಅನಿವಾರ್ಯತೆಯಿಂದ ಜೀವ ವಿಮೆಯು ರಕ್ಷಣೆ ನೀಡುತ್ತದೆ.

ಸಾಲ ಮರುಪಾವತಿಗೆ ಸಹಾಯಕ

ಯಾವುದೋ ಕಾರಣಕ್ಕೆ ದುರ್ಘಟನೆ ಸಂಭವಿಸಿ ಕುಟುಂಬದ ಯಜಮಾನ ಇಲ್ಲವಾದರೆ, ಆತ ಮಾಡಿದ ಸಾಲದ ಮರುಪಾವತಿಗೆ ಜೀವವಿಮೆ ನೆರವಾಗುತ್ತದೆ. ಪಾಲಿಸಿದಾರನು ಅಪಘಾತದಲ್ಲಿ ಗಾಯಗೊಂಡು ಕೆಲಸ ಮಾಡಲು ಸಾಧ್ಯವಾಗದ ಸಂದರ್ಭ ಬಂದರೆ ಜೀವವಿಮೆಯು ಅಂತಹ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಬರುತ್ತದೆ. ಆದರೆ ವಿಮೆ ಮಾಡಿಸುವಾಗ ಇಂಥ ‘ರೈಡರ್‌’ಗಳನ್ನು ಆಯ್ಕೆ ಮಾಡಿಕೊಂಡಿರಬೇಕು ಎನ್ನುವುದನ್ನು ಮರೆಯಬಾರದು.

ತೆರಿಗೆ ಉಳಿತಾಯ

ಆದಾಯ ತೆರಿಗೆ ಕಾಯ್ದೆ–1961ರ ಸೆಕ್ಷನ್‌ 80(ಸಿ) ಅಡಿ, ವಿಮೆಯ ಕಂತಿನ ರೂಪದಲ್ಲಿ ಪಾವತಿಸಿದ ಗರಿಷ್ಠ ₹ 1.50 ಲಕ್ಷ ವರೆಗಿನ ಹಣಕ್ಕೆ ಕೆಲವು ನಿಬಂಧನೆಗಳಿಗೆ ಒಳಪಟ್ಟು ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇದೆ. ವಿಮಾದಾರನಿಗೆ ಏನಾದರೂ ಸಂಭವಿಸಿದರೆ ಪರಿಹಾರದ ರೂಪದಲ್ಲಿ ಅವರ ಕುಟುಂಬದವರಿಗೆ ಬರುವ ಸೌಲಭ್ಯಗಳಿಗೂ ಕೆಲವು ರಿಯಾಯಿತಿಗಳು ಲಭಿಸುತ್ತವೆ. ಒಂದರ್ಥದಲ್ಲಿ ಇದು ನಿಮ್ಮ ಆದಾಯದಲ್ಲಿ ಆಗುವ ಉಳಿತಾಯವೇ ಆಗಿದೆ.

ಹಲವು ಲಾಭಗಳು

ನಿಮ್ಮ ವಿಮೆಗೆ ಒಬ್ಬರಿಗಿಂತ ಹೆಚ್ಚಿನ ಫಲಾನುಭವಿಗಳ ಹೆಸರನ್ನೂ ನೀವು ಸೂಚಿಸಬಹುದು. ಅಷ್ಟೇ ಅಲ್ಲ, ಯಾರಿಗೆ ಎಷ್ಟು ಪ್ರಮಾಣದ ಹಣ ಸಂದಾಯವಾಗಬೇಕು ಎಂಬುದನ್ನೂ ನಿರ್ಧರಿಸಬಹುದಾಗಿದೆ. ಪಾಲಿಸಿಯ ಅವಧಿಯಲ್ಲಿ ಇವರ ಹೆಸರುಗಳನ್ನು ಬದಲಿಸಲು ಅಥವಾ ಅವರಿಗೆ ನೀಡಬೇಕಾದ ಹಣದ ಪ್ರಮಾಣವನ್ನು ಬದಲಿಸಲೂ ಅವಕಾಶ ಇರುತ್ತದೆ.

ಭದ್ರತೆಯ ಜೊತೆಗೆ ವೃದ್ಧಿ

ನೀವು ಯಾವುದೇ ಹೂಡಿಕೆ ಮಾಡಿದರೂ ಅದು ವೃದ್ಧಿಯಾಗುತ್ತಲೇ ಇರಬೇಕು ಎಂದು ಬಯಸುವುದು ಸಹಜ. ಷೇರು ಮಾರುಕಟ್ಟೆ ಏರಿಕೆ ಕಾಣುತ್ತಿರುವ ಈಗಿನ ಸಂದರ್ಭದಲ್ಲಿ ನೀವು ಷೇರುಪೇಟೆ ಆಧಾರಿತ ಹೂಡಿಕೆ ಮಾಡಲು ಬಯಸುವುದು ಸಹಜವೇ. ಇಂತಹ ವಿಮೆ ಪಡೆಯಲು ಬಯಸುವವರಿಗೆ ‘ಯುಲಿಪ್‌’ಗಳು ಅತ್ಯುತ್ತಮ ಆಯ್ಕೆ ಎನಿಸಬಹುದು. ಇವು ಜೀವವಿಮೆಯ ಜೊತೆಗೆ ಬೇರೆಬೇರೆ ಫಂಡ್‌ಗಳಲ್ಲಿ ಹಣದ ಹೂಡಿಕೆಯ ಆಯ್ಕೆಯನ್ನೂ ನೀಡುತ್ತವೆ. ಷೇರು ಪೇಟೆ ಆಧಾರಿತ ಫಂಡ್‌ಗಳಲ್ಲಿ ಅಥವಾ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇರುವುದಷ್ಟೇ. ಬೇಕಾದಾಗ ಇವುಗಳಲ್ಲಿ ಬದಲಾವಣೆಗೂ ಅವಕಾಶ ನೀಡಲಾಗುತ್ತದೆ. ಇದು ಮಾರುಕಟ್ಟೆಯ ಏರುಪೇರುಗಳಿಂದ ರಕ್ಷಣೆ ಪಡೆಯಲು ಸಹಾಯಕವಾಗುತ್ತದೆ.

ಯಾವುದೇ ಅನಿರೀಕ್ಷಿತ ಆಘಾತಗಳಿಂದ ತಮ್ಮ ಕುಟುಂಬವನ್ನು ರಕ್ಷಿಸಲು ಬಯಸುವವರು ಜೀವವಿಮೆ ಮತ್ತು ‘ಯುಲಿಪ್‌’ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಜೊತೆಗೆ ಹೂಡಿಕೆಯು ನಿರಂತರವಾಗಿ ಇರುವಂತೆ ನೋಡಿಕೊಳ್ಳುವುದು ಅಗತ್ಯ.

(ಲೇಖಕ;ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶುರೆನ್ಸ್‌ನ ಸಿಎಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT