ಜೀವ ವಿಮೆ: ಐದು ತಪ್ಪು ಎಸಗಬೇಡಿ

7

ಜೀವ ವಿಮೆ: ಐದು ತಪ್ಪು ಎಸಗಬೇಡಿ

Published:
Updated:
lic

ಯಾವುದೇ ವಸ್ತುವನ್ನು ಖರೀದಿಸುವಾಗ, ಆ ವಸ್ತು ನಮ್ಮ ಉದ್ದೇಶವನ್ನು ಈಡೇರಿಸಬಲ್ಲದೇ ಎಂಬುದನ್ನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳುವುದು ಸಹಜ ಮತ್ತು ಅಗತ್ಯ. ಉದಾಹರಣೆಗೆ ನೀವೊಂದು ಕಾರು ಖರೀದಿಸುತ್ತೀರಿ ಎಂದಿಟ್ಟುಕೊಳ್ಳಿ. ಅದು ‘ನಮ್ಮ ಇಡೀ ಕುಟುಂಬಕ್ಕೆ ಸುಖಪ್ರಯಾಣದ ಅನುಭವ ನೀಡಬಲ್ಲದೇ’ ಎಂಬುದನ್ನು ಖಚಿತಪಡಿಸುತ್ತೀರಲ್ಲ.

ಯಾವುದೋ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಬಂದರೆ, ಅಲ್ಲಿ ಅಗತ್ಯ ಸೌಲಭ್ಯಗಳಿವೆಯೇ ಎಂಬುದನ್ನು ಖಚಿತಪಡಿಸುವುದಿಲ್ಲವೇ. ಹಾಗೆಯೇ ಒಂದು ಜೀವವಿಮೆ ಪಾಲಿಸಿ ಖರೀದಿಸುವಾಗಲೂ ಅಷ್ಟೇ ಎಚ್ಚರ ವಹಿಸುವುದು ಅಗತ್ಯ.

ನಾವು ಜೀವವಿಮೆ ಮಾಡಿಸುವ ಉದ್ದೇಶವಾದರೂ ಏನು. ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಅಥವಾ ನಿವೃತ್ತಿಯ ನಂತರ ಆರ್ಥಿಕ ಸಂಕಷ್ಟ ಬಾರದಿರಲಿ ಎಂಬ ಮುನ್ನೆಚ್ಚರಿಕೆಯೂ ಆಗಿರಬಹುದು. ನೀವು ಖರೀದಿಸುವ ಪಾಲಿಸಿಯು ನಿಮ್ಮ ಆ ಉದ್ದೇಶವನ್ನು ಈಡೇರಿಸುವಂತಿರಬೇಕಲ್ಲವೇ. ಆದ್ದರಿಂದ ಒಂದು ವಿಮಾ ಪಾಲಿಸಿ ಖರೀದಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ.

ನೀವು ಮಾಡಿಸುವ ವಿಮೆ ಯಾವ್ಯಾವ ಸೌಲಭ್ಯಗಳನ್ನು ನೀಡುತ್ತದೆ, ಅದರ ಲಾಭ– ನಷ್ಟಗಳ ತುಲನೆ ಮಾಡಿ ಪಾಲಿಸಿ ಖರೀದಿಸುವ ನಿರ್ಧಾರಕ್ಕೆ ಬರಲು ಒಂದು ವಾರಕ್ಕೂ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಕೆಲವರು ಒಂದು ತಿಂಗಳ ಅವಕಾಶ ಪಡೆಯುವುದೂ ಇದೆ.

ಹೀಗೆ ಸಾಕಷ್ಟು ಚಿಂತನ– ಮಂಥನ ನಡೆಸಿ ಖರೀದಿಸಿದ ಪಾಲಿಸಿಯನ್ನು ಉದ್ದೇಶ ಈಡೇರುವವರೆಗೂ ಉಳಿಸಿಕೊಳ್ಳುವುದು ಅಗತ್ಯ. ಖರೀದಿಗೂ ಮುನ್ನ ಸಾಕಷ್ಟು ಅಧ್ಯಯನ ಮಾಡದಿದ್ದರೆ ಅಥವಾ ಅವಧಿಗೂ ಮುನ್ನವೇ ಪಾಲಿಸಿಯನ್ನು ರದ್ದು ಮಾಡುವುದರ ಪರಿಣಾಮ ಕೆಟ್ಟದಾಗಬಹುದು.

ಯಾವುದೇ ಜೀವವಿಮೆ ಉತ್ಪನ್ನ ಖರೀದಿಯ ಸಮಯದಲ್ಲಿ ಮಾಡಲೇಬಾರದಾದ ತಪ್ಪುಗಳಾವುವು? ಇಲ್ಲಿದೆ ಆ ಕುರಿತ ವಿವರ.

1. ಅಗತ್ಯಗಳನ್ನು ಅರಿಯದೆಯೇ ಪಾಲಿಸಿ ಖರೀದಿಸುವುದು

ಜೀವವಿಮೆ ಎಂದರೆ ಮಾರಾಟ– ಖರೀದಿಯ ವ್ಯವಹಾರ. ಯಾರೋ ಒಬ್ಬರು ನಿಮಗೆ ಯೋಜನೆಯನ್ನು ಮಾರಾಟ ಮಾಡುತ್ತಾರೆ. ಅದನ್ನು ಖರೀದಿಸುವ ನಿಮಗೆ, ‘ಯಾಕೆ ಖರೀದಿಸುತ್ತಿದ್ದೇನೆ’ ಎಂಬುದು ಸ್ಪಷ್ಟವಾಗಿ ತಿಳಿದಿರಬೇಕು. ಆ ಕುರಿತು ಗೊಂದಲ ಇದ್ದಲ್ಲಿ, ‘ಆ ಪಾಲಿಸಿಯನ್ನು ಹೊಂದುವ ಅಗತ್ಯ’ದ ಬಗ್ಗೆ ವಿಶ್ಲೇಷಿಸುವಂತೆ ವಿಮಾ ಸಲಹೆಗಾರ ಅಥವಾ ಅದನ್ನು ಮಾರಾಟ ಮಾಡಲು ಬಂದ ಪ್ರತಿನಿಧಿಯನ್ನೇ ಕೇಳಿಕೊಳ್ಳಿ. ಅವರು ನೀಡಿದ ವಿಶ್ಲೇಷಣೆಯಿಂದ ನಿಮಗೆ ಸಮಾಧಾನವಾಗದಿದ್ದರೂ ನೀವು ಪಾಲಿಸಿಯನ್ನು ಖರೀದಿಸಿದರೆ, ಅದರಿಂದ ನಿಮಗಿಂತ ಹೆಚ್ಚಿನ ಲಾಭ ವಿಮೆ ಮಾರಾಟ ಮಾಡುವವನಿಗೆ ಆಗುತ್ತದೆ ಎಂದೇ ಅರ್ಥ.

2. ಕರಾರುಪತ್ರವನ್ನು ಓದದೆಯೇ ಸಹಿ ಮಾಡುವುದು

ವಿಮೆ ಕರಾರುಪತ್ರ ಅತಿ ಪ್ರಮುಖವಾದ ದಾಖಲೆ. ವಿಮೆ ಖರೀದಿಸುವವರಲ್ಲಿ ಹೆಚ್ಚಿನವರು ಫಾರಂ ತುಂಬುವ ಜವಾಬ್ದಾರಿಯನ್ನು ಸಹ ವಿಮಾ ಪ್ರತಿನಿಧಿಗೇ ಒಪ್ಪಿಸಿರುತ್ತಾರೆ. ನೀವೂ ಅಂಥವರಲ್ಲಿ ಒಬ್ಬರಾಗಿದ್ದರೆ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದರ್ಥ. ಕರಾರುಪತ್ರವೆಂದರೆ ಕಂಪನಿ ಹಾಗೂ ವಿಮೆ ಖರೀದಿಸಿದವರ ನಡುವಣ ಒಪ್ಪಂದ. ಕಂಪನಿಯು ಈ ಕರಾರು ಪತ್ರಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಆದ್ದರಿಂದ ನಿಮ್ಮ ಆರೋಗ್ಯ, ಜೀವನಶೈಲಿ, ಕುಟುಂಬದ ವಿವರಗಳು ಮುಂತಾದವು ಕಂಪನಿಗೆ ಅತಿ ಮುಖ್ಯವಾಗಿರುತ್ತವೆ. ಈ ವಿಚಾರಗಳಲ್ಲಿ ಸರಿಯಾದ ಮಾಹಿತಿಯನ್ನು ನೀಡದಿದ್ದಲ್ಲಿ ಮುಂದೆ ಸಮಸ್ಯೆ ಆಗಬಹುದು. ಆದ್ದರಿಂದ ಕರಾರು ಪತ್ರವನ್ನು ಸರಿಯಾಗಿ ಓದುವುದು ಅಗತ್ಯ.

3. ಪಾಲಿಸಿಯ ವಿವರಗಳನ್ನು ಪರಿಶೀಲಿಸದಿರುವುದು

ವಿಮೆ ಬಾಂಡ್‌ ದೀರ್ಘವಾಗಿದ್ದರೂ, ಅದು ನಿಮ್ಮ ಕೈಸೇರಿದ ಬಳಿಕ ಅದನ್ನು ಸಂಪೂರ್ಣವಾಗಿ ಓದುವುದು ಅಗತ್ಯ. ಪಾಲಿಸಿಯಿಂದ ನಿಮಗೆ ಆಗುವ ಲಾಭಗಳೇ ಮುಂತಾದ ವಿವರಗಳು ಅದರಲ್ಲಿರುತ್ತವೆ.

ನಿಮಗೆ ಮೊದಲೇ ಕೊಟ್ಟಿದ್ದ ಮಾಹಿತಿಗೂ, ಬಾಂಡ್‌ನಲ್ಲಿರುವ ಮಾಹಿತಿಗೂ ವ್ಯತ್ಯಾಸವಿದ್ದರೆ ಅದನ್ನು ಕಂಪನಿಗೆ ಮರಳಿಸಿ ಸರಿಯಾದ ಕರಾರುಪತ್ರವನ್ನು ಪಡೆಯಬಹುದು. ಅಥವಾ ಪಾಲಿಸಿಯನ್ನೇ ರದ್ದು ಮಾಡಿ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಬಹುದು. ಬಾಂಡ್‌ ನಿಮ್ಮ ಕೈಸೇರಿದ ಬಳಿಕ 15 ದಿನಗಳೊಳಗೆ ಅದನ್ನು ಮರಳಿಸಲು ಅಥವಾ ರದ್ದುಪಡಿಸಲು ಅವಕಾಶ ಇರುತ್ತದೆ.

4. ಕುಟುಂಬದ ಜೊತೆ ಚರ್ಚಿಸದಿರುವುದು

ವಿಮೆ ಮಾಡಿಸುವುದು ಕುಟುಂಬದ ಭದ್ರತೆಗಾಗಿ ಅಲ್ಲವೇ. ಅಂದಮೇಲೆ ಪಾಲಿಸಿಯ ನಿಯಮಾವಳಿ, ಲಾಭಗಳು ಮುಂತಾದ ವಿಚಾರಗಳ ಬಗ್ಗೆ ಪತ್ನಿ, ಮಕ್ಕಳು, ಪಾಲಕರು, ವಿಶೇಷವಾಗಿ ನಾಮ ನಿರ್ದೇಶಿಸಿರುವ ವ್ಯಕ್ತಿಗಳ ಜೊತೆ ಚರ್ಚಿಸಿ. ಇಲ್ಲವಾದರೆ ತುರ್ತು ಸಂದರ್ಭದಲ್ಲಿ ಅವರು ಕಷ್ಟ ಅನುಭವಿಸಬೇಕಾಗುತ್ತದೆ. ಪಾಲಿಸಿಯ ಬಾಂಡ್‌ ಅನ್ನು ಸುರಕ್ಷಿತ ಸ್ಥಳದಲ್ಲಿಡಬೇಕು. ಈಗ ಗ್ರಾಹಕರು ಡಿಜಿಟಲ್‌ ರೂಪದ ಪಾಲಿಸಿಯನ್ನೂ ಪಡೆಯಬಹುದು (ಇದು ಡಿ ಮ್ಯಾಟ್‌ ಷೇರುಗಳಂತೆಯೆ ಕೆಲಸ ಮಾಡುತ್ತದೆ).

5. ಒಪ್ಪಂದಕ್ಕೆ ಬದ್ಧತೆ ತೋರದಿರುವುದು

ಜನರು ಸಾಮಾನ್ಯವಾಗಿ ಮಾಡುವ ತಪ್ಪೆಂದರೆ, ಕಂತುಗಳನ್ನು ಕಟ್ಟದಿರುವುದು. ಮಧ್ಯದಲ್ಲೇ ಪಾಲಿಸಿಯನ್ನು ಸರೆಂಡರ್‌ ಮಾಡುವುದು ಅಥವಾ ಕಂತು ಕಟ್ಟುವುದನ್ನು ಸ್ಥಗಿತಗೊಳಿಸುವುದು ದೊಡ್ಡ ತಪ್ಪು.

ನೀವು ಸಾಕಷ್ಟು ಚಿಂತನೆ ನಡೆಸಿಯೇ ಪಾಲಿಸಿಯನ್ನು ಖರೀದಿಸಿದ್ದರೆ, ನಿಮ್ಮ ಆದ್ಯತೆಗಳ ಬಗ್ಗೆ ಮರು ಚಿಂತನೆ ನಡೆಸಿ. ಅವು ಈಗಲೂ ಪ್ರಸ್ತುತ ಎನಿಸಿದರೆ ಪಾಲಿಸಿಯನ್ನು ಮುಂದುವರಿಸುವುದು ಅಗತ್ಯ. ಒಂದು ವೇಳೆ ಕಂಪನಿಯವರು ಸಾಲ ನೀಡುತ್ತಾರೆ ಎಂದಾದರೆ ಸಾಲವನ್ನು ಪಡೆದು ಪಾಲಿಸಿಯನ್ನು ಮುಂದುವರಿಸುವ ಬಗ್ಗೆ ವಿಮಾ ಸಲಹೆಗಾರರಿಂದ ಸಲಹೆ ಪಡೆಯಬಹುದು.

ಯಾವುದೇ ಕ್ಷೇತ್ರದಲ್ಲಿ ಒಮ್ಮೆ ಹಣ ತೊಡಗಿಸಿದಿರಿ ಎಂದರೆ ಉದ್ದೇಶ ಈಡೇರುವವರೆಗೂ ನಿರ್ಧಾರದಿಂದ ಹಿಂತೆಗೆದುಕೊಳ್ಳದಿರುವುದೇ ಬುದ್ಧಿವಂತಿಕೆ.

(ಲೇಖಕ: ಫ್ಯೂಚರ್‌ ಜನರಲ್‌ ಇಂಡಿಯಾ ಲೈಫ್‌ ಇನ್ಶುರನ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !