ನಿಂಬೆಯ ಆವಕ ಕಡಿಮೆ; ಧಾರಣೆ ತುಸು ಚೇತರಿಕೆ

7
ನಿಂಬೆ ಬೆಳೆಗಾರರಲ್ಲಿಲ್ಲ ಹರ್ಷ; ಉತ್ಪನ್ನಕ್ಕೆ ಸಿಗದ ಸೂಕ್ತ ಬೆಲೆ

ನಿಂಬೆಯ ಆವಕ ಕಡಿಮೆ; ಧಾರಣೆ ತುಸು ಚೇತರಿಕೆ

Published:
Updated:
Deccan Herald

ವಿಜಯಪುರ: ಶ್ರಾವಣ ಆರಂಭಗೊಂಡ ಬೆನ್ನಿಗೆ ಜಿಟಿಜಿಟಿ ಮಳೆಯೂ ಶುರುವಾಗಿದೆ. ರಾಜ್ಯದ ಏಕೈಕ ನಿಂಬೆ ಮಾರುಕಟ್ಟೆಯಲ್ಲಿ ಧಾರಣೆಯೂ ತುಸು ಚೇತರಿಸಿಕೊಂಡಿದೆ.

ಶ್ರಾವಣದ ಶುರುವಿನಿಂದಲೇ ಧಾರ್ಮಿಕ ಚಟುವಟಿಕೆ ಬಿರುಸುಗೊಂಡಿರುವುದರಿಂದ ನಿಂಬೆಹಣ್ಣಿಗೆ ಮಾರುಕಟ್ಟೆಯಲ್ಲಿ ಕೊಂಚ ಬೇಡಿಕೆಯಿದೆ. ಇದರ ಬೆನ್ನಿಗೆ ನಿಂಬೆಯ ಉತ್ಪನ್ನ ಆವಕವಾಗುವುದು ಕಡಿಮೆಯಾಗಿದ್ದು, ಇನ್ನಷ್ಟು ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆ ಬೆಳೆಗಾರರ ಸಮೂಹದ್ದಾಗಿದೆ.

‘ಈ ಹಿಂದಿನ ಶುಕ್ರವಾರ (ಆ. 10) ವಿಜಯಪುರ ಎಪಿಎಂಸಿಯಲ್ಲಿರುವ ನಿಂಬೆ ಮಾರುಕಟ್ಟೆಗೆ 5906 ಡಾಗ್ (ಒಂದು ಡಾಗ್‌ಗೆ 1000 ನಿಂಬೆಹಣ್ಣು) ಬಂದಿದ್ದರೆ, ಧಾರಣೆ ₹ 100ರಿಂದ ₹ 300 ಇತ್ತು. ಭಾನುವಾರ (ಆ. 12) 5500 ಡಾಗ್ ಆವಕವಾಗಿದ್ದರೆ; ಒಂದು ಡಾಗ್‌ ₹ 100ರಿಂದ ₹ 400 ಬೆಲೆಯಲ್ಲಿ ಮಾರಾಟವಾಗಿತ್ತು.

ಇದೇ 15ರ ಬುಧವಾರ ನಿಂಬೆ ಮಾರ್ಕೆಟ್‌ಗೆ ಉತ್ಪನ್ನ ಹಿಂದಿನ ವಾರಕ್ಕಿಂತ ಶೇ 40ರಷ್ಟು ಕಡಿಮೆ ಪ್ರಮಾಣದಲ್ಲಿ ಆವಕವಾಗಿದೆ. ಈ ವಾರ ಕೇವಲ 3215 ಡಾಗ್ ಬಂದಿದ್ದು, ಧಾರಣೆ ₹ 100ರಿಂದ ₹ 500ರವರೆಗೂ ಸಿಕ್ಕಿದೆ. ವಾರದಿಂದ ವಾರಕ್ಕೆ ಆವಕ ಕಡಿಮೆಯಾಗುತ್ತಿದ್ದು, ಬೆಲೆ ಚೇತರಿಸಿಕೊಳ್ಳುತ್ತಿರುವುದು ರೈತ ಸಮೂಹದಲ್ಲಿ ಕೊಂಚ ಭರವಸೆ ಮೂಡಿಸಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ ತಿಳಿಸಿದರು.

‘ಶ್ರಾವಣ ಆರಂಭಕ್ಕೂ ಮುನ್ನಾ ನಿಂಬೆ ದರ ಸಹಜವಾಗಿಯೇ ಕುಸಿದಿತ್ತು. ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಗಿದ್ದರು. ಇದೀಗ ಹಬ್ಬಗಳು ಸರತಿ ಸಾಲಿನೋಪಾದಿ ಬರಲಿವೆ. ಸಹಜವಾಗಿಯೇ ಧಾರಣೆ ಹೆಚ್ಚಬಹುದು ಎಂಬ ನಿರೀಕ್ಷೆ ಬೆಳೆಗಾರರಲ್ಲಿದೆ’ ಎಂದು ಅವರು ಹೇಳಿದರು.

‘ಆಂಧ್ರದ ಉತ್ಪನ್ನ ರಾಜ್ಯ ಮಾರುಕಟ್ಟೆ ಪ್ರವೇಶಿಸುವುದು ಕಡಿಮೆಯಾಗಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ ಇತ್ಯಾದಿ ಕಡೆಯಿಂದ ನಿಂಬೆಗೆ ಬೇಡಿಕೆ ಬರಲಾರಂಭಿಸಿದೆ. ನಮ್ಮ ಮಾರುಕಟ್ಟೆಗೂ ಉತ್ಪನ್ನ ಆವಕವಾಗುವುದು ಕಡಿಮೆಯಾಗಿರುವುದರಿಂದ ನಿಂಬೆಯ ದರ ಕೊಂಚ ಏರುತ್ತಿದೆ. ಗುಣಮಟ್ಟದ ಹಣ್ಣಿಗೆ ಚಲೋ ಧಾರಣೆಯಿದೆ’ ಎಂದು ಸ್ಟಾರ್‌ ಲೆಮೆನ್‌ ಅಂಗಡಿ ಮಾಲೀಕ ಎ.ಕೆ.ಬಾಗವಾನ ತಿಳಿಸಿದರು.

ಆಳುಗಳ ಕೂಲಿ ಗಿಟ್ತಿಲ್ಲ:

‘150 ನಿಂಬೆ ಗಿಡಗಳಿವೆ. ಸದ್ಯ ವಾರಕ್ಕೊಮ್ಮೆ ಕಾಯಿ ಕೀಳಿಸ್ತೀವಿ. ಹೆಚ್ಚು ಉದುರೋದು ಶುರುವಾದರೆ ಎರಡು ಬಾರಿ ಕೀಳಿಸ್ತೀವಿ. 10 ಡಾಗ್ ಕಾಯಿ ಕೀಳಲು ಕನಿಷ್ಠ ಎಂಟು ಮಂದಿ ಕೂಲಿಯಾಳುಗಳು ಬೇಕು. ಪ್ರತಿಯೊಬ್ಬರಿಗೂ ₹ 150 ಕೂಲಿಯಿದೆ. ಇದರ ಜತೆ ನಾಷ್ಟಾ–ಊಟವೂ.

ಚೀಲಕ್ಕೆ ತುಂಬಿಕೊಂಡು ಒಂದು ಡಾಗ್‌ ನಿಂಬೆಹಣ್ಣನ್ನು ಮಾರ್ಕೆಟ್‌ಗೆ ಮಾರಾಟಕ್ಕೆ ತರಲು ಕನಿಷ್ಠ ₹ 50 ಖರ್ಚಾಗುತ್ತೆ. ಇಲ್ಲಿ ₹ 250–350ಕ್ಕೆ ಕೇಳ್ತ್ವಾರೆ. ನಮಗೆ ಇನ್ನೇನು ಗಿಟ್ಟುತ್ತೆ ನೀವೇ ಹೇಳಿ. ಎರಡ್ಮೂರು ವರ್ಷದಿಂದ ಲಾಭದ ಮುಖವನ್ನೇ ನೋಡಿಲ್ಲ’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ರಾಮನಹಟ್ಟಿ ಗ್ರಾಮದ ನಿಂಬೆ ಬೆಳೆಗಾರ ಶಿವಪ್ಪ ಕಲ್ಲಪ್ಪ ಇಂಗಳಗಿ ತಿಳಿಸಿದರು.

‘ನಮ್‌ ಕಡೆ ಆಳಿನ ಪಗಾರವೇ ₹ 250 ಐತಿ. ಯಾಡ್ ವಾರಕ್ಕೊಮ್ಮೆ ನಾಲ್ಕೈದ್ ಡಾಗ್‌ ನಿಂಬೆಯನ್ನು ತರುವೆ. ಈಗ ಸಿಗೋ ಬೆಲೆ ಯಾವುದಕ್ಕೂ ಆಗಲ್ಲ. ಸಾಲ ಮಾಡಿ ಬೆಳೆ ನೋಡ್ಕೋತ್ವೀನಿ. ಕನಿಷ್ಠ ಒಂದ್‌ ಡಾಗ್‌ಗೆ ಒಂದ್‌ ಸಾವ್ರ ಸಿಕ್ಕರೇ ಲುಕ್ಸಾನಾಗಲ್ಲ. ಇಲ್ಲದಿದ್ರೇ ನಮ್‌ ಸಮಸ್ಯೆ ಬಗೆಹರಿಯಲ್ಲ’ ಎಂದು ಕುಮಟಗಿಯ ರೈತ ಸಾಣಂದ ಶಿರಹಟ್ಟಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !