ಸಂಬಳ ಕಡಿಮೆ, ಖರ್ಚು ಹೆಚ್ಚು ಹೇಗಪ್ಪಾ ಸರಿದೂಗಿಸುವುದು

7

ಸಂಬಳ ಕಡಿಮೆ, ಖರ್ಚು ಹೆಚ್ಚು ಹೇಗಪ್ಪಾ ಸರಿದೂಗಿಸುವುದು

Published:
Updated:
Deccan Herald

ಸಾಮಾನ್ಯವಾಗಿ ಎಲ್ಲರೂ ತಮ್ಮ ವೃತ್ತಿ ಜೀವನವನ್ನು ತೀರ ಕಡಿಮೆ ಸಂಬಳದ ಉದ್ಯೋಗದಿಂದ ಆರಂಭಿಸುತ್ತಾರೆ. ‘ಒಮ್ಮೆ ವೃತ್ತಿ ಜೀವನಕ್ಕೆ ಕಾಲಿಟ್ಟರೆ, ಹಂತ ಹಂತವಾಗಿ ಮೇಲೇರಿ ಹೆಚ್ಚು ಸಂಪಾದನೆ ಮಾಡಬಹುದು’ ಎಂಬುದು ಎಲ್ಲರ ಕನಸಾಗಿರುತ್ತದೆ. ಆದರೆ, ಹೀಗೆ ಮೇಲೇರುತ್ತಾ ಒಳ್ಳೆಯ ವೇತನ ಪಡೆಯಲು ಆರಂಭಿಸಿದವರಲ್ಲೂ ಅನೇಕರು ಹಣದ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಅಂಥವರು ತಮ್ಮ ಹಣದ ನಿರ್ವಹಣಾ ಕೌಶಲವನ್ನು ಪುನಾ ಪರೀಕ್ಷೆಗೆ ಒಡ್ಡಿಕೊಳ್ಳುವುದು ಅಗತ್ಯ. ಏಕೆಂದರೆ, ಒಳ್ಳೆಯ ವೇತನ ಪಡೆಯುತ್ತಿದ್ದರೂ ಹಲವಾರು ಸಂದರ್ಭಗಳಲ್ಲಿ ಹಣದ ಸಮಸ್ಯೆ ಎದುರಾಗುತ್ತಿದೆ ಎಂದರೆ ಹಣದ ನಿರ್ವಹಣೆಯಲ್ಲಿ ಎಲ್ಲೋ ತಪ್ಪಾಗಿದೆ ಎಂದೇ ಅರ್ಥ.

ನೀವು ನಿರೀಕ್ಷಿಸಿದಷ್ಟು ವೇತನ ಅಥವಾ ಸಂಪಾದನೆ ನಿಮಗೆ ಆಗುತ್ತಿದೆ ಎಂದರೆ ನೀವು ಹಿಂದೆ ಕಂಡಿದ್ದ ಕನಸುಗಳನ್ನು ನನಸಾಗಿಸುವ ಮತ್ತು ನಿಮ್ಮ ಭವಿಷ್ಯವನ್ನು ಭದ್ರಪಡಿಸಲು ಅಗತ್ಯ ಯೋಜನೆಗಳನ್ನು ರೂಪಿಸುವ ಕಾಲ ಬಂದಿದೆ ಎಂದೇ ಅರ್ಥ. ಹಣವನ್ನು ಎಚ್ಚರಿಕೆಯಿಂದ ನಿರ್ವಹಿಸಿ, ಸರಿಯಾಗಿ ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಾಗದಂತೆ ಮಾಡಲು ಸಾಧ್ಯ. ಆ ಕುರಿತು ಒಂದಿಷ್ಟು ಸಲಹೆಗಳು ಇಲ್ಲಿವೆ.

ಆದಾಯ– ವೆಚ್ಚಗಳ ಮೇಲೆ ಕಣ್ಣಿರಲಿ

ದಿನನಿತ್ಯದ ಖರ್ಚು ವೆಚ್ಚಗಳ ಮೇಲೆ ನಿಗಾ ಇಡುವುದು ಸ್ವಲ್ಪ ಬೇಸರ ತರುವ ಕೆಲಸವೇ. ಆದರೆ, ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮುಖ್ಯ ಹೆಜ್ಜೆ. ನೀವು ಮಿತವ್ಯಯದ ಬದುಕನ್ನು ಸಾಗಿಸಬೇಕು ಎಂಬುದು ಇದರ ಅರ್ಥವಲ್ಲ. ಬದಲಿಗೆ ಹಣವನ್ನು ವೆಚ್ಚ ಮಾಡುವ ಮುನ್ನ ಚೆನ್ನಾಗಿ ಯೋಚನೆ ಮಾಡಬೇಕು ಎಂಬುದು ಉದ್ದೇಶ. ದಿನನಿತ್ಯದ ಖರ್ಚುವೆಚ್ಚಗಳ ಮೇಲೆ ನಿಗಾ ಇಡಲು ಅನುಕೂಲವಾಗುವಂಥ ಅನೇಕ ‘ಆ್ಯಪ್‌’ಗಳು ಈಗ ಲಭ್ಯ ಇವೆ. ಇವುಗಳನ್ನು ಬಳಸಿದರೆ ಎಲ್ಲೆಲ್ಲಿ ಎಷ್ಟು ಹಣ ಪೋಲಾಗಿದೆ ಎಂಬುದನ್ನು ಮಾಸಾಂತ್ಯದಲ್ಲಿ ಸ್ವತಃ ನೀವೇ ಕಂಡುಕೊಳ್ಳಬಹುದು. ಅವನ್ನೆಲ್ಲ ನಿಯಂತ್ರಿಸುವ ಮೂಲಕ ಪೋಲಾಗುವ ಹಣವನ್ನು ಸುಭದ್ರ ಭವಿಷ್ಯ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು.

ಹೀಗೆ ಖರ್ಚು– ವೆಚ್ಚಗಳ ಪ್ರಮಾಣವನ್ನು ಅರಿತರೆ, ಭವಿಷ್ಯದಲ್ಲಿ ಒಳ್ಳೆಯ ಜೀವನ ನಡೆಸಲು ನಮಗೆಷ್ಟು ಹಣ ಬೇಕಾಗಬಹುದು ಎಂಬ ಒಂದು ಸ್ಥೂಲ ಅಂದಾಜು ಲಭಿಸುತ್ತದೆ. ಈಗಿನ ಜೀವನದ ಗುಣಮಟ್ಟವನ್ನೇ ಭವಿಷ್ಯದಲ್ಲೂ ಮುಂದುವರಿಸಲು ಎಷ್ಟು ಹಣ ಬೇಕಾಗಬಹುದು, ಅದಕ್ಕೆ ಎಷ್ಟು ಉಳಿತಾಯ ಅಥವಾ ಹೂಡಿಕೆ ಮಾಡಬೇಕಾಗಬಹುದು ಎಂಬ ಎಲ್ಲ ವಿವರಗಳನ್ನು ನೀಡಲೂ ಸಹ ಇಂದು ಸಾಕಷ್ಟು ಸೌಲಭ್ಯಗಳಿವೆ. ಹಣದುಬ್ಬರ ಮುಂತಾದ ಹತ್ತು ಹಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಇವು ಭವಿಷ್ಯದ ಅಗತ್ಯಗಳ ಅಂದಾಜನ್ನು ನೀಡುತ್ತವೆ. ಹಣಕಾಸು ಯೋಜನೆ ರೂಪಿಸುವ ತಜ್ಞರಿಂದಲೂ ಇಂಥ ಸಲಹೆಗಳನ್ನು ಪಡೆಯಬಹುದಾಗಿದೆ.

ಉಳಿತಾಯವೇ ಮುಖ್ಯವಾಗಲಿ

ನಾವು ಸೀಮಿತ ಆದಾಯದಲ್ಲಿ ಬದುಕುತ್ತೇವೆ. ಆದರೆ, ನಮ್ಮ ನಿರೀಕ್ಷೆ, ಕನಸುಗಳಿಗೆ ಮಿತಿಗಳಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಇಂಥ ಕನಸುಗಳ ಈಡೇರಿಕೆಗಾಗಿ ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವೆಚ್ಚಮಾಡಿ ಬಿಡುತ್ತೇವೆ. ಅದರಿಂದಾಗಿಯೇ ನಾವು ಆಗಾಗ ಹಣಕಾಸಿನ ತೊಂದರೆಗೆ ಸಿಲುಕಬೇಕಾಗುತ್ತದೆ.

ಇದರ ಬದಲು, ನಮ್ಮ ಅಗತ್ಯ ಮತ್ತು ಆದ್ಯತೆಗಳ ಪಟ್ಟಿ ತಯಾರಿಸಿ ಅದಕ್ಕೆ ಅನುಗುಣವಾಗಿ ವೆಚ್ಚ ಮಾಡುತ್ತ ಹೋದರೆ ಸೀಮಿತ ಆದಾಯವನ್ನು ಸಹ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಹೀಗೆ ಪಟ್ಟಿ ತಯಾರಿಸುವಾಗ ‘ಉಳಿತಾಯ’ವು ಮೊದಲ ಸ್ಥಾನದಲ್ಲಿರಲಿ. ವೇತನ ಬರುತ್ತಿದ್ದಂತೆಯೇ ಅದರ ಒಂದು ಭಾಗ ನೇರವಾಗಿ ಉಳಿತಾಯವಾಗುವಂತೆ ನೋಡಿಕೊಳ್ಳಿ. ಒಟ್ಟು ಆದಾಯದ ಶೇ 20 ರಷ್ಟನ್ನು ಉಳಿತಾಯ ಮಾಡುವುದು ಸೂಕ್ತವಾದ ವಿಧಾನ. ಉಳಿದ ಹಣದಲ್ಲಿ ನಿಮ್ಮ ಇತರ ಎಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು.

ಹೀಗೆ ಮಾಡುವಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಶೇ 20ರಷ್ಟು ಉಳಿತಾಯಕ್ಕೆ ಹೋದರೆ, ಮನೆ ಬಾಡಿಗೆ, ಅಕ್ಕಿ–ಬೇಳೆ, ವಿದ್ಯುತ್‌, ನೀರು, ಫೋನ್‌ ಬಿಲ್‌... ಹೀಗೆ ಅನಿವಾರ್ಯ ಖರ್ಚು ವೆಚ್ಚಗಳ ಬಳಿಕ ಕೈಯಲ್ಲಿ ಉಳಿಯುವುದು ಅತ್ಯಲ್ಪ. ಹೀಗಾದಾಗ ಹೋಟೆಲ್‌ನಲ್ಲಿ ಊಟ, ಸಿನಿಮಾ, ಶಾಪಿಂಗ್‌... ಮುಂತಾದವುಗಳಿಗೆ ಸಾಕಷ್ಟು ಹಣ ಲಭಿಸುವುದಿಲ್ಲ ಎನಿಸಬಹುದು. ಈ ಸಮಸ್ಯೆಯಿಂದ ಹೊರಬರಲು ನಿಮಗೆ ಇಷ್ಟವಾಗುವಂಥ ಆದರೆ ಹೆಚ್ಚು ಹಣ ಬಯಸದಂಥ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳಿ. ಇತರ ವೆಚ್ಚಗಳಿಗೆ ಒಂದು ಟೈಮ್‌ ಟೇಬಲ್‌ ಮಾಡಿಕೊಳ್ಳಿ. ಉದಾಹರಣೆಗೆ ಈ ತಿಂಗಳಲ್ಲಿ ಕುಟುಂಬ ಸಹಿತ ಹೋಟೆಲ್‌ ಊಟ ಮಾಡುವ ಬಯಕೆಯಾದರೆ, ವಾರಾಂತ್ಯದ ಪ್ರವಾಸವನ್ನೋ, ಶಾಪಿಂಗ್‌ ಅನ್ನೋ ಮುಂದಿನ ತಿಂಗಳಿಗೆ ಮುಂದೂಡಿಬಿಡಿ.

ನಿಯಮಿತವಾಗಿ ಉಳಿತಾಯ ಮಾಡುವುದೆಂದರೆ ನಿಮ್ಮ ಗುರಿ ಸಾಧನೆಯ ನಿಟ್ಟಿನಲ್ಲಿ ಅರ್ಧ ಕೆಲಸವನ್ನು ಮುಗಿಸಿದಂತೆಯೇ. ಆದರೆ, ಉಳಿತಾಯದ ಹಣವನ್ನು ವೃದ್ಧಿಸಬೇಕಾದರೆ ಅದನ್ನು ಒಳ್ಳೆಯ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದೂ ಅಷ್ಟೇ ಮುಖ್ಯ.

ಅದಕ್ಕೊಂದು ಸೂತ್ರವಿದೆ. ಸಂಖ್ಯೆ 100ರಿಂದ ನಿಮ್ಮ ವಯಸ್ಸನ್ನು ಕಳೆದಾಗ ಬರುವ ಸಂಖ್ಯೆಯಷ್ಟು ಪ್ರಮಾಣವನ್ನು (ಶೇಕಡ) ಈಕ್ವಿಟಿಯಲ್ಲಿ ಹೂಡಿಕೆ ಮಾಡಿ. ಈಕ್ವಿಟಿಗಳು 15 ರಿಂದ 20ವರ್ಷಗಳ ಅವಧಿಯಲ್ಲಿ ಶೇ 15ರಿಂದ ಶೇ 16ರಷ್ಟು ಗಳಿಕೆಯನ್ನು ತಂದಿವೆ ಎಂಬುದು ಹಿಂದಿನ ದಾಖಲೆಗಳು ಸಾರುತ್ತವೆ. ಆದ್ದರಿಂದ ಮಧ್ಯಮ ಮತ್ತು ದೀರ್ಘಾವಧಿಯ ಹೂಡಿಕೆಗೆ ಇದು ಅತ್ಯುತ್ತಮ ಆಯ್ಕೆ. ಮ್ಯೂಚುವಲ್‌ ಫಂಡ್‌ಗಳ ಮೂಲಕವೂ ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದು. ತುರ್ತು ಅಗತ್ಯಕ್ಕಾಗಿ ಒಂದಿಷ್ಟು ಹಣವನ್ನು ನಗದೀಕರಿಸಬಹುದಾದ ಸಾಲಪತ್ರಗಳಲ್ಲಿ ಅಥವಾ ಅವಧಿ ಠೇವಣಿಯ ರೂಪದಲ್ಲಿ ಹೂಡಿಕೆ ಮಾಡಬಹುದು.

ಹನಿಗೂಡಿ ಹಳ್ಳ

ಸ್ವಲ್ಪ ಸ್ವಲ್ಪವೇ ಮಾಡುವ ಹೂಡಿಕೆಯು ಭವಿಷ್ಯದಲ್ಲಿ ದೊಡ್ಡ ನಿಧಿಯಾಗಿ ರೂಪುಗೊಳ್ಳುತ್ತದೆ ಎಂಬುದೂ ಸತ್ಯ.  ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಹೂಡಿಕೆ ಮಾಡುವ ವಿಧಾನವು ‘ಹನಿ, ಹನಿಗೂಡಿದರೆ ಹಳ್ಳ’ ಎಂಬ ಗಾದೆಮಾತಿಗೆ ಪೂರಕ ಎಂಬಂತಿದೆ. ಪ್ರತಿ ತಿಂಗಳೂ ಕನಿಷ್ಠ ₹ 1000 ಹೂಡಿಕೆ ಮಾಡುತ್ತಾ ಹೋಗಿ. ಅದು ವಾರ್ಷಿಕ ಶೇ 12ರಷ್ಟು ಗಳಿಕೆಯನ್ನು ತಂದುಕೊಡುತ್ತದೆ. ಹೀಗೆ ಮಾಡಿದ ಹೂಡಿಕೆಯು 30 ವರ್ಷಗಳಲ್ಲಿ ₹ 35.3 ಲಕ್ಷವಾಗುತ್ತದೆ! ಅಂದರೆ, ನಿಮಗೆ ಈಗ ದೊಡ್ಡ ಆದಾಯ ಇಲ್ಲದಿದ್ದರೂ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನು ಕೂಡಿಡಲು ಸಾಧ್ಯವಾಗಿಸುತ್ತದೆ.

ತುರ್ತು ಸಂದರ್ಭಕ್ಕೆ ಪ್ರತ್ಯೇಕ ಹೂಡಿಕೆ ಇರಲಿ

ಖರ್ಚು ವೆಚ್ಚಗಳ ಬಗ್ಗೆ ಎಷ್ಟೇ ಯೋಜನೆ ರೂಪಿಸಿದರೂ ಅನಿರೀಕ್ಷಿತವಾಗಿ ಬರುವ ತುರ್ತು ಸಂದರ್ಭಗಳು ಕೆಲವೊಮ್ಮೆ ಆರ್ಥಿಕವಾಗಿ ದೊಡ್ಡ ಸಂಕಷ್ಟವನ್ನು ತಂದೊಡ್ಡುತ್ತವೆ. ಇಂಥ ಸಂದರ್ಭಕ್ಕೆಂದೇ ಪ್ರತ್ಯೇಕ ಹೂಡಿಕೆಯೊಂದನ್ನು ಮಾಡುವುದು ಅನುಕೂಲಕರ.

ಈ ನಿಧಿಯು ವೇತನ ಅಥವಾ ಗಳಿಕೆಯೇ ಇಲ್ಲದಿದ್ದರೂ ಕನಿಷ್ಠ ಮೂರು ತಿಂಗಳ ಕಾಲ ನಿಮ್ಮ ಜೀವನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವಷ್ಟು ಇರಬೇಕು. ಅಲ್ಪಾವಧಿಯ ಸಾಲಪತ್ರ ಅಥವಾ ಲಿಕ್ವಿಡ್‌ ಫಂಡ್‌ಗಳಲ್ಲೂ ಈ ಹೂಡಿಕೆಯನ್ನು ಮಾಡಬಹುದು.

ಇಂಥ ಕೆಲವು ಸಣ್ಣಪುಟ್ಟ ಹೆಜ್ಜೆಗಳನ್ನು ಇಡಲು ಆರಂಭಿಸುವ ಮೂಲಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಧ್ಯ. ನೀವು ಮಾಡಬೇಕಾದ ಮುಖ್ಯ ಬದಲಾವಣೆ ಎಂದರೆ ಹಳೆಯ ಸಿದ್ಧ ಆರ್ಥಿಕ ನಿರ್ವಹಣಾ ವಿಧಾನವನ್ನು ಬದಲಿಸಿ, ಬುದ್ಧಿವಂತಿಕೆಯ ವಿಧಾನವನ್ನು ಅಳವಡಿಸಿಕೊಳ್ಳುವುದು ಮಾತ್ರ.

(ಲೇಖಕ: ಆ್ಯಕ್ಸಿಸ್‌ ಸೆಕ್ಯುರಿಟೀಸ್‌ನ ಸಿಇಒ)

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !