ಗುರುವಾರ , ಜೂನ್ 24, 2021
27 °C
ರದ್ದಾದ ಸಾಲ ನಿಧಿ ಯೋಜನೆಗಳ ಹಣ ವಾಪಸ್‌

ಫ್ರ್ಯಾಂಕ್ಲಿನ್‌ಗೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೂಡಿಕೆದಾರರಿಗೆ ಹಣ ಮರಳಿಸಲು ಸಲ್ಲಿಕೆಯಾಗಿರುವ ಮೊಕದ್ದಮೆ ಸಂಬಂಧ ಮದ್ರಾಸ್‌ ಹೈಕೋರ್ಟ್‌, ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ಮತ್ತು ಷೇರು ನಿಯಂತ್ರಣ ಮಂಡಳಿಗೆ (ಸೆಬಿ) ನೋಟಿಸ್ ಜಾರಿ ಮಾಡಿದೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಅಸೆಟ್‌ ಮ್ಯಾನೇಜ್‌ಮೆಂಟ್‌, ಮ್ಯೂಚುವಲ್‌ ಫಂಡ್‌ನ ಟ್ರಸ್ಟಿಗಳು, ಅಧ್ಯಕ್ಷ ಸಂಜಯ್‌ ಸಪ್ರೆ ಮತ್ತು ಇತರ ಪ್ರಮುಖ ಅಧಿಕಾರಿಗಳಿಗೆ ನೋಟಿಸ್‌ ಜಾರಿಯಾಗಿದೆ ಎಂದು ಮೊಕದ್ದಮೆ ಹೂಡಿರುವ ಚೆನ್ನೈ ಫೈನಾನ್ಶಿಯಲ್‌ ಮಾರ್ಕೆಟ್ಸ್‌ ಅಕೌಂಟಬಿಲಿಟಿ ಹೆಸರಿನ ಹೂಡಿಕೆದಾರರ ತಂಡವು ತಿಳಿಸಿದೆ. ತಂಡದ ಪರವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ.

ಆರು ಸಾಲ ನಿಧಿ ರದ್ದತಿಯಿಂದಾಗಿ ಅವುಗಳಲ್ಲಿ ಜನಸಾಮಾನ್ಯರು ಹೂಡಿಕೆ ಮಾಡಿರುವ ₹ 28 ಸಾವಿರ ಕೋಟಿ ಮೊತ್ತವು ಮರಳಿ  ಕೈಸೇರದ ಆತಂಕ ಸೃಷ್ಟಿಯಾಗಿದೆ. ಕಂಪನಿಯೇ ಹೇಳಿಕೊಂಡಂತೆ ಹೂಡಿಕೆದಾರರಿಗೆ ಈ ಹಣ ಮರಳಲು 5 ವರ್ಷ ಬೇಕಾಗಬಹುದು. 6 ಸಾಲ ನಿಧಿಗಳು ಒಟ್ಟು ₹ 28 ಸಾವಿರ ಕೋಟಿ ಮೊತ್ತದ ಸಂಪತ್ತು ನಿರ್ವಹಿಸುತ್ತಿದ್ದವು. ಹೂಡಿಕೆದಾರರಿಗೆ ಅಸಲು ಮರಳುವ ಸಾಧ್ಯತೆಯೂ ಕ್ಷೀಣಿಸಿದೆ ಎಂದು ಹೂಡಿಕೆದಾರರ ತಂಡ ಆತಂಕ ವ್ಯಕ್ತಪಡಿಸಿದೆ.

‘ಈಕ್ವಿಟಿ ಸ್ಕೀಮ್‌ಗಳಿಗೆ ಹೋಲಿಸಿದರೆ ಡೆಟ್‌ ಸ್ಕೀಮ್‌ಗಳು ಹೆಚ್ಚು ಸುರಕ್ಷಿತ ಎನ್ನುವ ಭಾವನೆ ಉದ್ದಿಮೆಯಲ್ಲಿದೆ. ಹೂಡಿಕೆದಾರರ ಅಸಲು, ಬ್ಯಾಂಕ್‌ ಠೇವಣಿಯಂತೆ ಸುರಕ್ಷಿತವಾಗಿ ಇರಲಿದೆ. ಅಸಲು ಮರಳಿಸುವ ಬಗ್ಗೆ ’ಸೆಬಿ’ ಇದುವರೆಗೂ ಯಾವುದೇ ಬದ್ಧತೆ ತೋರಿಸಿಲ್ಲ. ’ಸೆಬಿ’ ಕೈಗೊಂಡಿರುವ ಕ್ರಮಗಳ ಬಗ್ಗೆ ನಿಗಾ ಇಡಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು’ ಎಂದು ತಂಡದ ವಕೀಲ ನಿತ್ಯೇಶ್‌ ನಟರಾಜ್‌ ಹೇಳಿದ್ದಾರೆ.

ಹಣ ವಾಪಸ್‌ ಪಡೆಯುವ ಒತ್ತಡ ಮತ್ತು ಬಾಂಡ್‌ ಮಾರುಕಟ್ಟೆಯಲ್ಲಿ ನಗದು ಕೊರತೆಯ ಕಾರಣಕ್ಕೆ 6 ಸಾಲ ನಿಧಿಗಳನ್ನು ಫ್ರ್ಯಾಂಕ್ಲಿನ್‌ ರದ್ದುಪಡಿಸಿತ್ತು.

ಕಂಪನಿಯ ಟ್ರಸ್ಟಿಗಳು, ನಿಧಿ ನಿರ್ವಾಹಕರು ಮತ್ತು ಪ್ರಮುಖ ಅಧಿಕಾರಿಗಳು ಅನಿಯಂತ್ರಿತ ಮತ್ತು ದುಡುಕಿನ  ಹೂಡಿಕೆ ನಿರ್ಧಾರ ಕೈಗೊಂಡು ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂದು ಹೂಡಿಕೆದಾರರು ದೂರಿದ್ದಾರೆ.

9 ರಿಂದ ಮತದಾನ: ಹಣ ಮರಳಿಸುವುದಕ್ಕೆ ಹೂಡಿಕೆದಾರರ ಸಮ್ಮತಿ ಪಡೆಯಲು ಜೂನ್‌ 9ರಿಂದ ಆನ್‌ಲೈನ್‌ ಮತದಾನವು 3 ದಿನಗಳವರೆಗೆ ನಡೆಯಲಿದೆ. ಯುನಿಟ್ ಹೊಂದಿದವರ ಸಭೆಯು ಜೂನ್‌ 12 ರಂದು ವಿಡಿಒ ಕಾನ್‌ಫೆರನ್ಸ್‌ ಮೂಲಕ ನಡೆಯಲಿದೆ.

ಇ–ಮೇಲ್‌ ನೋಂದಣಿ ಮಾಡದ ಹೂಡಿಕೆದಾರರಿಗೆ ಜೂನ್‌ 8ರವರೆಗೆ ಅವಕಾಶ ಕಲ್ಪಿಸಲಾಗಿದೆ. ಕಂಪನಿಯಲ್ಲಿ ಇ–ಮೇಲ್‌ ಅಥವಾ ಮೊಬೈಲ್‌ ಸಂಖ್ಯೆ ನೋಂದಣಿ ಮಾಡದವರು ಮತದಾನದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು