ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಕ ಹೆಚ್ಚಳ: ಮಾವು ಬೆಲೆ ಇಳಿಕೆ

ಈ ವರ್ಷ ರಾಜ್ಯದಲ್ಲಿ 8 ಲಕ್ಷ ಟನ್‌ ಉತ್ಪನ್ನ ದೊರೆಯುವ ನಿರೀಕ್ಷೆ
Last Updated 27 ಏಪ್ರಿಲ್ 2019, 20:24 IST
ಅಕ್ಷರ ಗಾತ್ರ

ರಾಮನಗರ: ಮಾರುಕಟ್ಟೆಗೆ ಮಾವಿನ ಆವಕ ಗಣನೀಯವಾಗಿ ಹೆಚ್ಚುತ್ತಿದ್ದು, ಬೆಲೆ ಇಳಿಮುಖವಾಗತೊಡಗಿದೆ.

ಏಪ್ರಿಲ್‌ ಎರಡನೇ ವಾರದಿಂದ ಇಲ್ಲಿನ ಮಾರುಕಟ್ಟೆಗೆ ಮಾವು ಬರುತ್ತಿದೆ. ಅದರಲ್ಲೂ ರಾಜ್ಯದಲ್ಲೇ ಮೊದಲು ಮಾರುಕಟ್ಟೆಗೆ ಬರುವ ಹೆಗ್ಗಳಿಕೆ ರಾಮನಗರ ಮಾವಿನದ್ದು. ಉತ್ಪನ್ನದ ಪ್ರಮಾಣವು ಹೆಚ್ಚಿದಂತೆ ಏರುಗತಿಯಲ್ಲಿ ಇದ್ದ ದರವು ಗ್ರಾಹಕರ ಕೈಗೆಟಕುವಂತೆ ಬರುತ್ತಿದೆ.

ಸದ್ಯ ಮಾರುಕಟ್ಟೆಗೆ ಬದಾಮಿ, ಸೇಂದೂರ, ರಸಪುರಿ ಹಾಗೂ ತೋತಾಪುರಿ ತಳಿಯ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಎರಡು ವಾರದ ಹಿಂದಷ್ಟೇ ಇಲ್ಲಿನ ಎಪಿಎಂಸಿಯಲ್ಲಿ ಪ್ರತಿ ಕೆ.ಜಿ.ಗೆ₹ 80–100ರವರೆಗೆ ಮಾರಾಟ ಆಗುತ್ತಿದ್ದ ಬದಾಮಿ ಬೆಲೆ ₹ 30ರಷ್ಟು ಇಳಿದಿದೆ.

ರಸಪುರಿ ಹಣ್ಣಿನ ಬೆಲೆ ಕೂಡ ಅಷ್ಟೇ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ ಎನ್ನುತ್ತಾರೆ ಮಾವು ಮಂಡಿಯಲ್ಲಿನ ವರ್ತಕರು.

8 ಲಕ್ಷ ಟನ್‌ ನಿರೀಕ್ಷೆ: ದೇಶದಲ್ಲಿಯೇ ಕರ್ನಾಟಕವು ಮಾವು ಬೆಳೆಯುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿ ಇದೆ.

ರಾಜ್ಯದಲ್ಲಿ ಒಟ್ಟು 1.78 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದ್ದು, ಹೆಕ್ಟೇರ್‌ಗೆ 12 ರಿಂದ 14 ಟನ್‌ ಇಳುವರಿ ಸಿಗುತ್ತಿದೆ. ಕೋಲಾರ ಹಾಗೂ ರಾಮನಗರ ಜಿಲ್ಲೆಗಳು ಹೆಚ್ಚು ಮಾವು ಬೆಳೆಯುವ ಪ್ರದೇಶ ಹೊಂದಿವೆ.

ರಾಜ್ಯದಲ್ಲಿ ಈ ಹಂಗಾಮಿನಲ್ಲಿ 8 ಲಕ್ಷ ಟನ್‌ನಷ್ಟು ಉತ್ಪನ್ನ ನಿರೀಕ್ಷಿಸಲಾಗಿದೆ. ಈಗಾಗಲೇ 1 ಲಕ್ಷ ಟನ್‌ಗೂ ಹೆಚ್ಚು ಹಣ್ಣು ಮಾರುಕಟ್ಟೆ ಪ್ರವೇಶ ಮಾಡಿದೆ. ಮೇ 15ರವರೆಗೆ ಇನ್ನೂ 1.5 ಲಕ್ಷ ಟನ್‌ನಷ್ಟು ಉತ್ಪನ್ನ ಕೊಯ್ಲಾಗುವ ನಿರೀಕ್ಷೆ ಇದೆ.

ಮೇ 15ರಿಂದ ಜೂನ್‌ 15ರ ಅವಧಿಯಲ್ಲಿ 3 ಲಕ್ಷ ಟನ್‌ ಹಾಗೂ ಜೂನ್‌ 15ರಿಂದ ಜುಲೈ 15ರ ಒಳಗೆ 2.5 ಲಕ್ಷ ಟನ್‌ ಮಾವು ಕೊಯ್ಲು ನಡೆಯಬಹುದು ಎಂದು ತೋಟಗಾರಿಕೆ ಇಲಾಖೆಯು ಅಂದಾಜಿಸಿದೆ.

ಸತತ ಬರಗಾಲ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಉತ್ಪನ್ನದ ಪ್ರಮಾಣ ಕುಸಿಯುತ್ತಿದೆ. ಈ ಬಾರಿ ಮಾರ್ಚ್‌ ಹಾಗೂ
ಏಪ್ರಿಲ್‌ನಲ್ಲಿ ಮಳೆ ಕೊರತೆಯಿಂದಾಗಿ ಕಾಯಿಗಳಲ್ಲಿನ ಗುಣಮಟ್ಟ ಕ್ಷೀಣಿಸಿದೆ. ಮತ್ತೊಂದೆಡೆ ಕೋಲಾರದ ಕೆಲವು ಭಾಗದಲ್ಲಿ ಆಲಿಕಲ್ಲು ಮಳೆಯ ಕಾರಣಕ್ಕೆ ಬೆಳೆ ನಷ್ಟವಾಗಿದೆ. ಇದು ಒಟ್ಟಾರೆ ಉತ್ಪನ್ನದ ಆವಕ ಮತ್ತು ಗುಣಮಟ್ಟದ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ತೋಟಗಾರಿಕೆ ತಜ್ಞರು.

ಮರುಕಳಿಸದಿರಲಿ ಹಿಂದಿನ ಸ್ಥಿತಿ

ಕಳೆದ ವರ್ಷ ಮಾವಿನ ಬೆಲೆ ತೀವ್ರ ಕುಸಿತ ಕಂಡಿದ್ದು, ರೈತರು ರಸ್ತೆಗೆ ಉತ್ಪನ್ನ ಸುರಿದು ಪ್ರತಿಭಟನೆ ನಡೆಸಿದ್ದರು. ಕೇವಲ ₹2–3ಕ್ಕೆ ಒಂದು ಕೆ.ಜಿ. ಕಾಯಿ ಮಾರಾಟ ಕಂಡಿತ್ತು. ಇದರಿಂದ ಸಾಕಷ್ಟು ರೈತರು ತೋಟಗಳಲ್ಲಿ
ಹಣ್ಣು ಕೊಯ್ಲು ಮಾಡದೇ ಬಿಟ್ಟಿದ್ದರು.

‘ಈ ವರ್ಷ ಸದ್ಯದ ಮಟ್ಟಿಗೆ ಉತ್ತಮ ಧಾರಣೆ ಇದೆ. ಇದೇ ಬೆಲೆ ಮುಂದುವರಿದರೆ ಸಾಕು. ಆದರೆ ಬದಾಮಿಯ ಬೆಲೆ ಕೆ.ಜಿ.ಗೆ ₹10–15ಕ್ಕೆ ಇಳಿದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಕಳೆದ ವರ್ಷ ನೆರೆಯ ರಾಜ್ಯಗಳು ಕರ್ನಾಟಕದ ಮಾವು ಸಾಗಣೆಗೆ ತಡೆ ಒಡ್ಡಿದ್ದರಿಂದ ಸಮಸ್ಯೆಯಾಗಿತ್ತು. ಈ ವರ್ಷ ಪರಿಸ್ಥಿತಿ ಹಾಗಾಗದಂತೆ ಸರ್ಕಾರವೂ ಎಚ್ಚರ ವಹಿಸಬೇಕು’ ಎನ್ನುತ್ತಾರೆ ರಾಮನಗರದ ಮಾವು ಬೆಳೆಗಾರ ಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT