ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಧಾರಣೆ ಮತ್ತೆ ಕುಸಿತ

ಆಲಿಕಲ್ಲು ಮಳೆ: ಅವಧಿ ಪೂರ್ವ ಕೊಯ್ಲಿಗೆ ಮುಂದಾದ ರೈತರು
Last Updated 20 ಮೇ 2019, 18:44 IST
ಅಕ್ಷರ ಗಾತ್ರ

ರಾಮನಗರ: ಉತ್ಪನ್ನ ಹೆಚ್ಚು ಆವಕವಾಗುತ್ತಿರುವ ಹಿನ್ನೆಲೆಯಲ್ಲಿ ಮಾವಿನ ಧಾರಣೆ ಮತ್ತೆ ಕುಸಿಯತೊಡಗಿದೆ.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾವಿನ ವಹಿವಾಟು ಜೋರಾಗಿ ನಡೆದಿದೆ. ಆದರೆ ಧಾರಣೆ ಮಾತ್ರ ದಿನೇ ದಿನೇ ಇಳಿಮುಖವಾಗತೊಡಗಿದೆ. ರಾಮನಗರ ಜಿಲ್ಲೆಯಾದ್ಯಂತ ಬದಾಮಿ ತಳಿಯ ಹಣ್ಣನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ. ಈ ಹಣ್ಣು ಎರಡು ವಾರದ ಹಿಂದೆ ಪ್ರತಿ ಕೆ.ಜಿ.ಗೆ ₹40–50ರ ದರದಲ್ಲಿ ಮಾರಾಟ ಕಾಣುತ್ತಿತ್ತು. ಈಗ ಅದರ ಬೆಲೆ ಅರ್ಧದಷ್ಟು ಕುಸಿದಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರು ನಿರಾಸೆ ಅನುಭವಿಸುತ್ತಿದ್ದಾರೆ. ತೊಟ್ಟು ಸಹಿತ ಬಿಡಿಸಿ ತಂದ ರೈತರಿಗಷ್ಟೇ ಕೆ.ಜಿ.ಗೆ ₹30ರವರೆಗೆ ಬೆಲೆ ಸಿಗುತ್ತಿದೆ.

ಕಾರ್ಖಾನೆಗಳು ಆರಂಭ: ಪ್ರತಿ ವರ್ಷ ಹಣ್ಣಿನ ರಸ ತಯಾರಿಕೆ ಕಾರ್ಖಾನೆಗಳು ಆರಂಭವಾಗುತ್ತಿದ್ದಂತೆಯೇ ಮಾವಿನ ಬೆಲೆಯು ಏಕಾಏಕಿ ಕುಸಿಯುತ್ತದೆ. ಈ ಕಾರ್ಖಾನೆಗಳು ಹಣ್ಣು–ಕಾಯಿ ಎಲ್ಲವನ್ನೂ ಒಂದೇ ದರದಲ್ಲಿ ಖರೀದಿ ಮಾಡುವುದು ಇದಕ್ಕೆ ಕಾರಣ. ಹೀಗಾಗಿಯೇ ರೈತರು ಸಾಮೂಹಿಕ ಕೊಯ್ಲಿಗೆ ಮುಂದಾಗುತ್ತಾರೆ.

ಈ ಕಾರ್ಖಾನೆಗಳು ಇದೇ ತಿಂಗಳ 10ರಿಂದ ಬಾಗಿಲು ತೆರೆದಿವೆ. ಅಂದಿನಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಬರುತ್ತಿದೆ. ಸದ್ಯ ಇವುಗಳು ರೈತರಿಂದ ₹18–20ರ ದರದಲ್ಲಿ ಬದಾಮಿ ಕಾಯಿ ಖರೀದಿ ಮಾಡುತ್ತಿವೆ. ಸೇಂದೂರ, ರಸಪುರಿ ತೀರ ಅಗ್ಗವಾಗಿದ್ದು, ಇವುಗಳಿಗೆ ಬೇಡಿಕೆ ತಗ್ಗಿದೆ.

ಆಲಿಕಲ್ಲು ಹೊಡೆತ: ಆಗಾಗ್ಗೆ ಆಲಿಕಲ್ಲು ಸಹಿತ ಮಳೆಯಾಗುತ್ತಿರುವ ಕಾರಣ ರೈತರು ಆತಂಕದಿಂದಲೇ ಮಾವಿನ ಕೊಯ್ಲು ನಡೆಸಿದ್ದಾರೆ. ಆಲಿಕಲ್ಲು ಬಿದ್ದಲ್ಲಿ ಕಾಯಿ ಅಲ್ಲಲ್ಲಿ ಕಪ್ಪಾಗುತ್ತದೆ. ಇದರಿಂದ ವರ್ತಕರು ಕಾಯಿ ಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ರೈತರು ತುಸು ಬೇಗವೇ ಮಾವಿನ ಕೊಯ್ಲು ನಡೆಸತೊಡಗಿದ್ದಾರೆ.

ರಾಜ್ಯದಲ್ಲಿ ಈ ವರ್ಷ 8 ಲಕ್ಷ ಟನ್‌ನಷ್ಟು ಮಾವು ಉತ್ಪನ್ನ ನಿರೀಕ್ಷಿಸಲಾಗಿದೆ. ಇದರಲ್ಲಿ ಈಗಾಗಲೇ ಸುಮಾರು 3 ಲಕ್ಷ ಟನ್‌ ಉತ್ಪನ್ನ ಈಗಾಗಲೇ ಕೊಯ್ಲಾಗಿದೆ ಎಂದು ಅಂದಾಜಿಸಲಾಗಿದೆ. ರಾಮನಗರ ಜಿಲ್ಲೆ ಒಂದರಲ್ಲಿಯೇ ಸುಮಾರು 1 ಲಕ್ಷ ಟನ್‌ನಷ್ಟು ಮಾವು ಮಾರುಕಟ್ಟೆಗೆ ಬಂದಿದ್ದು, ಹೊರ ರಾಜ್ಯಗಳನ್ನೂ ತಲುಪುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT