ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಇ: ₹ 219 ಲಕ್ಷ ಕೋಟಿ ದಾಟಿದ ಮಾರುಕಟ್ಟೆ ಮೌಲ್ಯ

Last Updated 24 ಮೇ 2021, 16:27 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಷೇರುಪೇಟೆಯ ಮುಕುಟಕ್ಕೆ ಸೋಮವಾರ ಮತ್ತೊಂದು ಮಣಿ ಸೇರಿಕೊಂಡಿದೆ. ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಇದೇ ಮೊದಲ ಬಾರಿಗೆ 3 ಟ್ರಿಲಿಯನ್ ಅಮೆರಿಕನ್ ಡಾಲರ್ (₹ 218 ಲಕ್ಷ ಕೋಟಿ) ಆಗಿದೆ.

ಮಾರುಕಟ್ಟೆಯಲ್ಲಿ ವಹಿವಾಟಿನ ನಡುವಿನ ಒಂದು ಹಂತದಲ್ಲಿ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ₹ 219 ಲಕ್ಷ ಕೋಟಿಗೂ ತಲುಪಿತ್ತು. ‘₹ 218 ಲಕ್ಷ ಕೋಟಿಯ ಗಡಿಯನ್ನು ದಾಟಿರುವುದು ಷೇರುಪೇಟೆಯ ಪಯಣದಲ್ಲಿ ದೊಡ್ಡ ಮೈಲಿಗಲ್ಲು. 6.9 ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಲ್ಲ ನೋಂದಾಯಿತ ಹೂಡಿಕೆದಾರರಿಗೆ, 1,400ಕ್ಕಿಂತ ಹೆಚ್ಚಿನ ಬ್ರೋಕರ್‌ಗಳಿಗೆ, 69 ಸಾವಿರಕ್ಕೂ ಹೆಚ್ಚಿನ ಮ್ಯೂಚುವಲ್‌ ಫಂಡ್‌ ವಿತರಕರಿಗೆ, 4,700ಕ್ಕೂ ಹೆಚ್ಚಿನ ಕಂಪನಿಗಳಿಗೆ ಅಭಿನಂದನೆಗಳು’ ಎಂದು ಮುಂಬೈ ಷೇರುಪೇಟೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶಿಶ್‌ಕುಮಾರ್ ಚವಾಣ್‌ ಟ್ವೀಟ್ ಮಾಡಿದ್ದಾರೆ.

ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ 111 ಅಂಶ ಏರಿಕೆ ದಾಖಲಿಸಿತು. 50,651 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ತೇಜಿಯ ವಹಿವಾಟಿನ ಕಾರಣದಿಂದಾಗಿ ಹೂಡಿಕೆದಾರರ ಸಂಪತ್ತು ₹ 3.30 ಲಕ್ಷ ಕೋಟಿ ವೃದ್ಧಿಯಾಗಿದೆ.

ಬಿಎಸ್‌ಇಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳದ ಮೊತ್ತವು ₹ 100 ಲಕ್ಷ ಕೋಟಿಯ ಮೈಲಿಗಲ್ಲನ್ನು 2014ರ ನವೆಂಬರ್‌ 28ರಂದು ದಾಟಿತ್ತು. ‘ಕೋವಿಡ್‌ ಪ್ರಕರಣಗಳ ಸಂಖ್ಯೆಯು ನಿರಂತರವಾಗಿ ಕಡಿಮೆ ಆಗುತ್ತಿರುವುದು, ಲಾಕ್‌ಡೌನ್‌ ನಿರ್ಬಂಧಗಳು ಬೇಗನೆ ತೆರವಾಗುತ್ತವೆ ಎನ್ನುವ ಭರವಸೆ ದೇಶಿ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಸೋಮವಾರದ ವಹಿವಾಟಿನಲ್ಲಿ ಎಸ್‌ಬಿಐ, ಎಲ್‌ಆ್ಯಂಡ್‌ಟಿ, ಎಕ್ಸಿಸ್ ಬ್ಯಾಂಕ್, ಪವರ್‌ಗ್ರಿಡ್‌ ಮತ್ತು ಐಟಿಸಿ ಷೇರುಗಳು ಏರಿಕೆ ಕಂಡವು. ಟೈಟಾನ್ ಮತ್ತು ಇಂಡಸ್‌ಇಂಡ್‌ ಬ್ಯಾಂಕ್ ಷೇರುಗಳು ಇಳಿಕೆ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT