ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 5ನೇ ದಿನವೂ ಸೂಚ್ಯಂಕ ಏರಿಕೆ

ರೂಪಾಯಿ ಮೌಲ್ಯ ವೃದ್ಧಿ: ವಿದೇಶಿ ಸಾಂಸ್ಥಿಕ ಹೂಡಿಕೆ
Last Updated 21 ಜುಲೈ 2022, 13:56 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳು ಸತತ ಐದನೇ ದಿನವೂ ಗಳಿಕೆ ಕಂಡುಕೊಂಡವು. ಹೂಡಿಕೆದಾರರು ಇಂಧನ, ಹಣಕಾಸು ಮತ್ತು ಐ.ಟಿ. ವಲಯದ ಷೇರುಗಳನ್ನು ಹೆಚ್ಚು ಖರೀದಿ ಮಾಡಿದ್ದರಿಂದ ಗುರುವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯವಾಯಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಚೇತರಿಕೆ ಮತ್ತು ವಿದೇಶಿ ಬಂಡವಾಳ ಒಳಹರಿವು ಸೂಚ್ಯಂಕಗಳ ಓಟಕ್ಕೆ ಬಲ ನೀಡಿದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 284 ಅಂಶ ಏರಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 84 ಅಂಶ ಹೆಚ್ಚಾಯಿತು.

ಸೆನ್ಸೆಕ್ಸ್‌ನಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಮೌಲ್ಯ ಶೇ 7.88ರಷ್ಟು ಗರಿಷ್ಠ ಏರಿಕೆ ಕಂಡಿತು. ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭ ಶೇ 60.5ರಷ್ಟು ಹೆಚ್ಚಳ ಕಂಡಿರುವುದರಿಂದ ಷೇರು ಮೌಲ್ಯ ಈ ಪ್ರಮಾಣದ ಏರಿಕೆ ಕಂಡಿದೆ.

ಬಿಎಸ್‌ಇ ಮಿಡ್‌ ಕ್ಯಾಪ್‌ ಶೇ 1.24ರಷ್ಟು ಮತ್ತು ಸ್ಮಾಲ್‌ಕ್ಯಾಪ್‌ ಶೇ 0.90ರಷ್ಟು ಏರಿಕೆ ಕಂಡವು.

ದೇಶಿ ಷೇರುಪೇಟೆಗಳು ಜಾಗತಿಕ ಮಾರುಕಟ್ಟೆಗಳ ಒತ್ತಡದಿಂದ ಹೊರಬರಲು ವಿದೇಶಿ ಸಾಂಸ್ಥಿಕ ಹೂಡಿಕೆಯು (ಎಫ್‌ಐಐ) ನೆರವಿಗೆ ಬಂತು ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 3.90ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 102.8 ಡಾಲರ್‌ಗೆ ತಲುಪಿತು.

ಐದು ದಿನಗಳ ವಹಿವಾಟಿನಲ್ಲಿ ಬಿಎಸ್‌ಇ ಹೂಡಿಕೆದಾರರ ಸಂಪತ್ತು ಮೌಲ್ಯ ₹ 9.76 ಲಕ್ಷ ಕೋಟಿ ವೃದ್ಧಿಯಾಗಿದೆ. ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 260.42 ಲಕ್ಷ ಕೋಟಿಗೆ ಏರಿಕೆ ಆಗಿದೆ.

ವಲಯವಾರು ಗಳಿಕೆ (%)

ದೂರಸಂಪರ್ಕ;2.16

ಬಂಡವಾಳ ಸರಕುಗಳು;2.08

ಕೈಗಾರಿಕೆಗಳು;1.45

ತೈಲ ಮತ್ತು ಅನಿಲ;1.32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT