ಮಂಗಳವಾರ, ಡಿಸೆಂಬರ್ 7, 2021
27 °C
ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಮೌಲ್ಯ ಶೇ 6 ಕ್ಕೂ ಹೆಚ್ಚು ಏರಿಕೆ

ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ ವಹಿವಾಟು: ಸೆನ್ಸೆಕ್ಸ್‌ 454 ಅಂಶ ಜಿಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳ ವಹಿವಾಟು ಗುರುವಾರ ಮಂದಗತಿಯ ಆರಂಭ ಕಂಡರೂ ನಂತರದಲ್ಲಿ ಚೇತರಿಕೆಯ ಹಾದಿಯಲ್ಲಿ ಸಾಗಿತು. ಸರ್ಕಾರಿ ಸಾಲಪತ್ರಗಳ ನವೆಂಬರ್‌ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯ ಆಗುವುದಿದ್ದರೂ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾಗಿದ್ದು ಷೇರುಪೇಟೆಯಲ್ಲಿ ಸೂಚ್ಯಂಕದ ಓಟಕ್ಕೆ ನೆರವಾಯಿತು.

ಆದರೆ, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ, ವಿದೇಶಿ ಬಂಡವಾಳ ಹೊರಹರಿವು ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಮಿಶ್ರ ಫಲವು ಸೂಚ್ಯಂಕಗಳು ಹೆಚ್ಚು ಏರಿಕೆ ಕಾಣದಂತೆ ತಡೆದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 454 ಅಂಶ ಏರಿಕೆ ಕಂಡು 58,795 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 121 ಅಂಶ ಹೆಚ್ಚಾಗಿ 17,536 ಅಂಶಗಳಿಗೆ ತಲುಪಿತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಷೇರು ಮೌಲ್ಯವು ಶೇ 6.10ರಷ್ಟು ಗರಿಷ್ಠ ಏರಿಕೆ ಕಂಡಿತು. ಐಟಿಸಿ, ಇನ್ಫೊಸಿಸ್‌, ಟೆಕ್‌ ಮಹೀಂದ್ರ, ಕೋಟಕ್‌ ಬ್ಯಾಂಕ್‌, ಟೈಟನ್‌ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿ ಷೇರುಗಳ ಮೌಲ್ಯವೂ ಹೆಚ್ಚಾಗಿದೆ.

ದೇಶದ ಷೇರುಪೇಟೆಗಳ ವಹಿವಾಟು ಇಂದು ಸಕಾರಾತ್ಮಕವಾಗಿ ಅಂತ್ಯವಾಗಿದೆ. ಹೀಗಿದ್ದರೂ ಜಗತ್ತಿನ ವಿವಿಧ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಲವಲವಿಕೆ ಇರಲಿಕ್ಕಿಲ್ಲ ಎಂದು ಆಶಿಕಾ ಸ್ಟಾಕ್‌ ಬ್ರೋಕಿಂಗ್‌ನ ರಿಟೇಲ್‌ ವಿಭಾಗದ ಸಂಶೋಧನಾ ಮುಖ್ಯಸ್ಥ ಅರಿಜಿತ್‌ ಮಾಲಕರ್‌ ಹೇಳಿದ್ದಾರೆ.

ಬಿಎಸ್‌ಇಯಲ್ಲಿ ಇಂಧನ, ರಿಯಲ್‌ ಎಸ್ಟೇಟ್‌, ಆರೋಗ್ಯ ಸೇವೆ, ದೂರಸಂಪರ್ಕ, ತೈಲ ಮತ್ತು ಅನಿಲ ವಲಯಗಳು ಶೇ 4.47ರವರೆಗೂ ಏರಿಕೆ ಕಂಡರೆ, ಬಂಡವಾಳ ಸರಕುಗಳು, ವಾಹನ, ಬ್ಯಾಂಕ್‌ ಮತ್ತು ಹಣಕಾಸು ವಲಯಗಳು ಇಳಿಕೆ ಕಂಡಿವೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಗುರುವಾರ 12 ಪೈಸೆ ಇಳಿಕೆ ಆಗಿದ್ದು, ಒಂದು ಡಾಲರ್‌ಗೆ ₹ 74.52ರಂತೆ ವಿನಿಮಯಗೊಂಡಿತು.

ಮುಖ್ಯಾಂಶಗಳು
ಬಿಎಸ್‌ಇ ಮಿಡ್‌ ಆ್ಯಂಡ್‌ ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 0.87ರವರೆಗೆ ಹೆಚ್ಚಳ
ಮುಂದುವರಿದ ವಿದೇಶಿ ಬಂಡವಾಳ ಹೊರಹರಿವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು