ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹ ವಿಮೆ ಮರೆಯಬೇಡಿ!

Last Updated 4 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಮದುವೆ ಎಂಬುದು ಇಡೀ ಕುಟುಂಬ ವರ್ಗದವರು, ಸ್ನೇಹಿತ ವರ್ಗದವರನ್ನೆಲ್ಲ ಒಂದೆಡೆ ಸೇರಿಸಿ ಆಚರಿಸುವ ಆತ್ಮೀಯ ಮತ್ತು ಸದಾ ನೆನಪಿನಲ್ಲಿ ಉಳಿಯುವಂಥ ಸಮಾರಂಭ. ಆದರೆ, ಅದು ಸಂತೋಷ, ಸಂಪ್ರದಾಯಗಳಿಗಷ್ಟೇ ಸೀಮಿತವಲ್ಲ. ದುಬಾರಿ ಕಾರ್ಯಕ್ರಮವೂ ಹೌದು.

ಸಮಾರಂಭವನ್ನು ಎಲ್ಲಿ, ಯಾವ ರೀತಿಯಾಗಿ ಹಮ್ಮಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ಖರ್ಚು ವೆಚ್ಚಗಳು ಅವಲಂಬಿಸಿರುತ್ತವೆ. ಮದುವೆಯ ಸಂದರ್ಭದಲ್ಲಿ ಅನಿರೀಕ್ಷಿತ ಅವಘಡಗಳು ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಇಂಥ ಸಂದರ್ಭ ಬಂತೆಂದರೆ, ಭಾರಿ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ. ಇಂಥ ಸಂದರ್ಭಗಳನ್ನು ಮನಗಂಡೇ ವಿಮೆ ಕಂಪನಿಗಳು ‘ವಿವಾಹ ವಿಮೆ’ಯನ್ನು ಆರಂಭಿಸಿವೆ. ಅವು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನೂ ಗಳಿಸುತ್ತಿವೆ.

‘ವಿವಾಹ ವಿಮೆ’ ಅನಿರೀಕ್ಷಿತವಾಗಿ ಮುಂದಾಗುವ ಆರ್ಥಿಕ ನಷ್ಟಗಳನ್ನಷ್ಟೇ ಅಲ್ಲ, ವಿವಾಹದ ಸ್ಥಳದಲ್ಲಿ ಅವಘಡ ಸಂಭವಿಸಿ ಉಂಟಾಗುವ ನಷ್ಟವನ್ನೂ ಭರಿಸುತ್ತವೆ. ಕೆಲವು ಕಂಪನಿಗಳು ವಿವಾಹ ಸಮಾರಂಭಕ್ಕಾಗಿಯೇ ಪ್ರತ್ಯೇಕ ಮತ್ತು ಆಕರ್ಷಕ ವಿಮಾ ಉತ್ಪನ್ನಗಳನ್ನು ರೂಪಿಸಿವೆ. ವಿವಾಹ ಸಮಾರಂಭಕ್ಕೂ ಮುನ್ನ ನಡೆಯುವ ಸಂಗೀತ, ಮೆಹಂದಿ ಶಾಸ್ತ್ರ ಮುಂತಾದ ಕಾರ್ಯಕ್ರಮಗಳನ್ನೂ ವಿಮೆಯ ವ್ಯಾಪ್ತಿಯಡಿ ತಂದಿವೆ.

ಆದರೆ, ಅಂತಹ ಕಾರ್ಯಕ್ರಮಗಳ ವಿವರವು ಆಮಂತ್ರಣ ಪತ್ರದಲ್ಲಿ ಮುದ್ರಿತವಾಗಿರಬೇಕು ಮತ್ತು ಅದರ ಪ್ರತಿಯನ್ನು ವಿಮಾ ಕಂಪನಿಗೆ ಕೊಟ್ಟಿರಬೇಕು. ಮದುವೆಯ ಹಿಂದಿನ ದಿನವೂ ವಿವಾಹ ವಿಮೆ ಮಾಡಿಸಿಕೊಳ್ಳಲು ಅವಕಾಶ ಇದೆ. ಆದರೆ, ಕನಿಷ್ಠ 15 ದಿನ ಮುಂಚಿತವಾಗಿಯೇ ವಿಮೆ ಮಾಡಿಸುವುದು ಹೆಚ್ಚು ಸೂಕ್ತ.

ವ್ಯಾಪ್ತಿ ಏನು?

ಅತಿಥಿಗಳಿಗೆ ವಿಶೇಷ ಅನುಭವ ನೀಡಬೇಕೆಂಬ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ವಿಹಾರ ತಾಣಗಳಲ್ಲಿ ಮದುವೆ ಸಮಾರಂಭಗಳನ್ನು ಏರ್ಪಡಿಸುವ (ಡೆಸ್ಟಿನೇಷನ್‌ ವೆಡ್ಡಿಂಗ್‌) ಹವ್ಯಾಸ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಇಂಥ ಸಮಾರಂಭಗಳು ಭವ್ಯವಾಗಿರುತ್ತವೆ. ಸಹಜವಾಗಿ, ದುಬಾರಿಯೂ ಆಗಿರುತ್ತವೆ. ವಿವಾಹ ವಿಮೆಗಳು ಜನಪ್ರಿಯತೆ ಗಳಿಸಲು ಇಂತಹ ಸಮಾರಂಭಗಳು ಸಹ ಕಾರಣ.

ವೈಯಕ್ತಿಕ ಅಪಘಾತ, ಸಮಾರಂಭಕ್ಕೆ ಅಡ್ಡಿಯಾಗುವುದು ಅಥವಾ ಸಮಾರಂಭ ರದ್ದಾಗುವುದು, ವಿವಾಹ ಸ್ಥಳ ಅಥವಾ ಅಲ್ಲಿನ ಉಪಕರಣಗಳಿಗೆ ಹಾನಿಯಾಗುವುದೇ ಮುಂತಾದ ವಿಚಾರಗಳು ವಿವಾಹ ವಿಮೆಯ ವ್ಯಾಪ್ತಿಯೊಳಗೆ ಬರುತ್ತವೆ. ಆದರೆ, ಸಂಭವನೀಯ ಅಪಾಯದ ಮುನ್ಸೂಚನೆ ಇದ್ದೂ ಅದನ್ನು ವಿಮಾ ಕಂಪನಿಗೆ ತಿಳಿಸದೆ ಮುಚ್ಚಿಟ್ಟಿದ್ದರೆ, ಹಾಗೆ ಸಂಭವಿಸಿದ ಹಾನಿಗಳಿಗೆ ಪರಿಹಾರ ನೀಡಲಾಗುವುದಿಲ್ಲ.

ಮೊತ್ತ ನಿರ್ಧಾರ ಹೇಗೆ?

ಇತರ ಯಾವುದೇ ವಿಮೆಗಳಂತೆ, ವಿವಾಹ ವಿಮೆ ಮಾಡಿಸುವಾಗಲೂ ಸಮಾರಂಭಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಕಂಪನಿಯ ಜೊತೆ ಹಂಚಿಕೊಳ್ಳುವುದು ಅಗತ್ಯ. ಸಮಾರಂಭದಲ್ಲಿ ಯಾರು ಯಾರು ಒಳಗೊಳ್ಳುತ್ತಾರೆ. ಪಾಲ್ಗೊಳ್ಳುವ ತಿಥಿಗಳ ಸಂಖ್ಯೆ ಎಷ್ಟು. ಸಮಾರಂಭವು ಒಳಾಂಗಣದಲ್ಲಿ ನಡೆಯುವುದೇ ಅಥವಾ ಹೊರಾಂಗಣದಲ್ಲೋ. ವಿವಾಹದ ವೇಳೆ ಬೆಳಿಗ್ಗೆ ಅಥವಾ ಮಧ್ಯಾಹ್ನ ಮುಂತಾದ ಎಲ್ಲ ಮಾಹಿತಿ ಮತ್ತು ವಿವಾಹದ ಆಮಂತ್ರಣ ಪತ್ರಿಕೆಯ ಪ್ರತಿಯನ್ನು ಮೊದಲೇ ವಿಮಾ ಕಂಪನಿಗೆ ಕೊಟ್ಟಿರಬೇಕು.

ಅಷ್ಟೇ ಅಲ್ಲ, ಸಮಾರಂಭ ಸ್ಥಳದ ಅಲಂಕಾರಕ್ಕೆ ಮಾಡುವ ವೆಚ್ಚ, ಬಾಡಿಗೆಗೆ ಪಡೆದ ಸಾಧನಗಳ ವೆಚ್ಚ, ಬಳಸುವ ಆಭರಣಗಳು… ಮುಂತಾಗಿ ಎಲ್ಲ ಖರ್ಚು ವೆಚ್ಚಗಳನ್ನು ಲೆಕ್ಕಹಾಕಿದ ನಂತರವೇ ನಿಮ್ಮ ಅಗತ್ಯ ಹಾಗೂ ಬಜೆಟ್‌ಗೆ ಅನುಗುಣವಾದ ವಿಮೆಯನ್ನು ಮಾಡಿಸಿಕೊಳ್ಳಬಹುದು.

ಪರಿಹಾರ ಪಡೆಯುವುದು ಹೇಗೆ?

ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ಅವಘಡ ಸಂಭವಿಸಿದರೆ ಕೂಡಲೇ ಆ ಬಗ್ಗೆ ಕಂಪನಿಗೆ ಮಾಹಿತಿ ನೀಡಬೇಕು. ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಹಾನಿಯ ಸಮಗ್ರ ವಿವರ, ಅಗತ್ಯ ದಾಖಲಾತಿಗಳನ್ನು ಹೊಂದಿರುವ ಕ್ಲೇಮ್‌ ಅರ್ಜಿಯ ಜೊತೆಗೆ ಎಫ್‌ಐಆರ್‌ನ ಪ್ರತಿಯನ್ನೂ ಇಟ್ಟು ವಿಮಾ ಕಂಪನಿಗೆ ನೀಡಬೇಕು. ಅದಾದ ನಂತದ ವಿಮಾ ಕಂಪನಿಯು ಆಗಿರುವ ಹಾನಿಯ ವಿಶ್ಲೇಷಣೆ ನಡೆಸಿ ಪರಿಹಾರವನ್ನು ಕೊಡುತ್ತದೆ.

ವಿವಾಹ ವಿಮೆಗೆ ದುಬಾರಿ ಹಣ ತುಂಬಬೇಕಾಗುತ್ತದೆ ಎಂಬ ಭಾವನೆ ಸತ್ಯಕ್ಕೆ ದೂರವಾದುದು. ಹೆಚ್ಚು ಹಣ ವೆಚ್ಚ ಮಾಡದೆಯೂ ವಿವಾಹ ವಿಮೆ ಮಾಡಿಸಬಹುದು. ಕೆಲವು ಕಂಪನಿಗಳು ಗ್ರಾಹಕರ ಅಗತ್ಯಕ್ಕೆ ತಕ್ಕುದಾದ ವಿಮೆಯನ್ನು ರೂಪಿಸಿಕೊಡುತ್ತವೆ. ವಿಮೆ ಮಾಡಿಸುವುದಕ್ಕೂ ಮೊದಲು ಎಲ್ಲ ಅಗತ್ಯಗಳನ್ನು ಅರಿತು, ವಿಮೆಯ ಬಗ್ಗೆ ಎಲ್ಲ ವಿಚಾರಗಳನ್ನೂ ತಿಳಿದು ಮುಂದಡಿ ಇಡಬೇಕು ಅಷ್ಟೇ.

(ಲೇಖಕ: ಬಜಾಜ್‌ ಅಲಯನ್ಸ್‌ ಜನರಲ್‌ ಇನ್ಶೂರನ್ಸ್‌ನ ಸಿಟಿಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT