ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳಕ್ಕೆ ದಾಖಲೆ ಬೆಲೆ!

ದಾಸ್ತಾನಿಟ್ಟಿದ್ದ ವರ್ತಕ ಸಮೂಹಕ್ಕೆ ಪ್ರಯೋಜನ: ರೈತರಿಗಿಲ್ಲ ಲಾಭ
Last Updated 8 ಮೇ 2019, 20:15 IST
ಅಕ್ಷರ ಗಾತ್ರ

ವಿಜಯಪುರ: ಮೆಕ್ಕೆಜೋಳದ ಧಾರಣೆ ಮೊದಲ ಬಾರಿಗೆ ವಿಜಯಪುರ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹2,300 ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಪಶು ಆಹಾರ ಹಾಗೂ ಕುಕ್ಕುಟೋದ್ಯಮದ ಬೇಡಿಕೆಯ ಉತ್ಪನ್ನವಾಗಿರುವ ಮೆಕ್ಕೆಜೋಳವನ್ನು ಬಯಲು ಸೀಮೆ, ಉತ್ತರ ಕರ್ನಾಟಕದ ಹಲವೆಡೆ ಪ್ರಮುಖ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ.

110ರಿಂದ 120 ದಿನದ ಈ ಬೆಳೆಗೆ ಹೆಚ್ಚಿನ ಕೀಟ ಬಾಧೆ ಇಲ್ಲ. ಧಾರಣೆಯೂ ಕ್ವಿಂಟಲ್‌ಗೆ ₹ 1,000 ದಿಂದ ₹ 1,500 ಸಿಗುತ್ತದೆನ್ನುವ ನಂಬಿಕೆ ಬೆಳೆಗಾರರದ್ದು. ಹೀಗಾಗಿ ಈಚೆಗೆ ಮೆಕ್ಕೆಜೋಳ ಬೆಳೆಯುವ ಪ್ರದೇಶ ಹೆಚ್ಚುತ್ತಿದೆ.

ಇದೀಗ ಬೇಸಿಗೆಯ ಹಂಗಾಮು ಆರಂಭ. ಡಿಸೆಂಬರ್ ಅಂತ್ಯ– ಜನವರಿಯಲ್ಲಿ ಬಿತ್ತನೆ ನಡೆಸಿದ್ದವರು ರಾಶಿ ಮಾಡಿಕೊಂಡು, ಮಾರುಕಟ್ಟೆಗೆ ಮೆಕ್ಕೆಜೋಳ ತರುವ ಹೊತ್ತು.

ಆದರೆ ಭೀಕರ ಬರ, ನೀರಿನ ಅಭಾವದಿಂದ ಸ್ಥಳೀಯ ಮೆಕ್ಕೆಜೋಳ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರ ಪರಿಣಾಮ ಧಾರಣೆ ಹೆಚ್ಚಾಗಿದೆ ಎನ್ನುತ್ತವೆ ವಿಜಯಪುರ ಎಪಿಎಂಸಿ ಮೂಲಗಳು.

ವ್ಯಾಪಾರಿಗಳಿಗೆ ಲಾಭ: ‘ಹಲ್ಲಿದ್ದರೆ ಕಡಲೆಯಿಲ್ಲ, ಕಡಲೆಯಿದ್ದರೆ ಹಲ್ಲಿಲ್ಲ’ ಎಂಬಂಥ ಸ್ಥಿತಿ ರೈತರದ್ದಾಗಿದೆ. ದಾಸ್ತಾನು ಇಟ್ಟ ವ್ಯಾಪಾರಿಗಳಿಗೆ ಮಾತ್ರ ದುಪ್ಪಟ್ಟು ಪ್ರಯೋಜನ ದೊರೆಯುತ್ತಿದೆ. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 1,000 ಲಾಭ ಸಿಗುತ್ತಿದೆ.

ಯುಗಾದಿಗೂ ಮುನ್ನವೇ ಬಹುಪಾಲು ರೈತರು ಮೆಕ್ಕೆಜೋಳ ಮಾರಿದ್ದಾರೆ. ಆಗ ₹1,300ರ ಧಾರಣೆ ಇತ್ತು. ಇದೀಗ ಏಕಾಏಕಿ ಕ್ವಿಂಟಲ್‌ಗೆ ಸಾವಿರ ರೂಪಾಯಿ ಹೆಚ್ಚಾಗಿದೆ.

‘ಇನ್ನೊಂದೆರೆಡು ತಿಂಗಳು ಕಾದಿದ್ದರೆ, ಲಾಭ ಸಿಗುತ್ತಿತ್ತು’ ಎಂಬುದು ರೈತರ ಚಡಪಡಿಕೆ. ಈ ಬೆಲೆ ಏರಿಕೆಯ ಪ್ರಯೋಜನ ತಮಗೆ ಆಗಿಲ್ಲ ಎನ್ನುತ್ತಾರೆ ಅವರು.

‘ಸುಗ್ಗಿಯ ಬೆನ್ನಿಗೆ ಈ ಧಾರಣೆ ಸಿಕ್ಕಿದ್ದರೆ, ಉತ್ತಮ ಲಾಭ ದೊರೆತಂತಾಗುತ್ತಿತ್ತು’ ಎನ್ನುತ್ತಾರೆ ಬಸವನ ಬಾಗೇವಾಡಿಯ ರೈತ ಮುದುಕಪ್ಪ ಕುಳಗೇರಿ.

ಆವಕ ದುಪ್ಪಟ್ಟು!

ವಿಜಯಪುರ ಜಿಲ್ಲೆ ಹಿಂದಿನ ವರ್ಷ ಭೀಕರ ಬರಕ್ಕೆ ತುತ್ತಾಗಿತ್ತು. ಮುಂಗಾರು– ಹಿಂಗಾರು ಎರಡೂ ಕೈ ಸುಟ್ಟಿದ್ದವು. ಆದರೂ ಇಲ್ಲಿನ ಎಪಿಎಂಸಿಗೆ ಬೇರೆ ರಾಜ್ಯಗಳ ಮೆಕ್ಕೆಜೋಳದ ಆವಕ ದುಪ್ಪಟ್ಟಾಗಿದೆ.

‘2017–18ನೇ ಸಾಲಿನಲ್ಲಿ ಇಲ್ಲಿನ ಎಪಿಎಂಸಿಗೆ 2,24,431 ಕ್ವಿಂಟಲ್‌ ಮೆಕ್ಕೆಜೋಳ ಆವಕ ಆಗಿತ್ತು. ಕ್ವಿಂಟಲ್‌ಗೆ ₹1000ದಿಂದ ₹1,560 ದರ ಸಿಕ್ಕಿತ್ತು. 2018–19ನೇ ಸಾಲಿನಲ್ಲಿ 4,02,646 ಕ್ವಿಂಟಲ್‌ ಮೆಕ್ಕೆಜೋಳ ಬಂದಿದೆ. ಧಾರಣೆ ಸಹ ದುಪ್ಪಟ್ಟುಗೊಂಡಿದೆ’ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದಾವಣಗೆರೆ ಭಾಗ, ನೆರೆಯ ಮಹಾರಾಷ್ಟ್ರ, ಉತ್ತರ– ಪಶ್ಚಿಮ ಭಾರತದ ವಿವಿಧ ರಾಜ್ಯಗಳಿಂದಲೂ ಮೆಕ್ಕೆಜೋಳ ನಮ್ಮಲ್ಲಿಗೆ ಬರುತ್ತಿದೆ. ಇದೀಗ ಬಿಹಾರದಿಂದ ಬರುತ್ತಿದೆ. ಮಾರುಕಟ್ಟೆಯ ಬದಲು ನೇರವಾಗಿ ವ್ಯಾಪಾರಿಗಳ ಗೋದಾಮು ತಲುಪುತ್ತಿದೆ’ ಎಂದು ಅವರು ತಿಳಿಸಿದರು.

***

ಮೆಕ್ಕೆಜೋಳಕ್ಕೆ ಮೊದಲ ಬಾರಿಗೆ ಭಾರಿ ಬೆಲೆ ದೊರೆತಿದೆ. ಈ ಹಿಂದೆ ಬಿಳಿಜೋಳಕ್ಕೂ ಇಷ್ಟು ಧಾರಣೆ ಸಿಕ್ಕಿರಲಿಲ್ಲ. ಆದರೆ ರೈತರ ಬಳಿ ಫಸಲಿಲ್ಲ
-ವಿ.ರಮೇಶ, ವಿಜಯಪುರ ಎಪಿಎಂಸಿ ಕಾರ್ಯದರ್ಶಿ

ಮೆಕ್ಕೆಜೋಳ ಮಾರಾಟ ಮಾಡದ ಬೆರಳೆಣಿಕೆಯ ರೈತರಿಗಷ್ಟೇ ಈ ಧಾರಣೆ ಸಿಕ್ಕಿದೆ. ಕ್ವಿಂಟಲ್‌ಗೆ ಕನಿಷ್ಠ ₹ 2,500 ಧಾರಣೆ ನಿಗದಿಪಡಿಸಿದರೆ ಬೆಳೆಗಾರರಿಗೆ ಅನುಕೂಲವಾಗಲಿದೆ
-ಉಮೇಶ ವಾಲೀಕಾರ, ಕಾನ್ನಾಳ ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT