ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿಸಿ

Last Updated 1 ಫೆಬ್ರುವರಿ 2022, 17:25 IST
ಅಕ್ಷರ ಗಾತ್ರ

ಹೆಸರು ಬೇಡ, ಊರು ಬೇಡ.

l ಪ್ರಶ್ನೆ: ನಾನು 65 ವರ್ಷ ವಯಸ್ಸಿನ ನಿವೃತ್ತ ಸರ್ಕಾರಿ ನೌಕರ. ನನಗೆ ಮಾಸಿಕ ₹ 24,600 ನಿವೃತ್ತಿ ವೇತನ ಬರುತ್ತದೆ. ನನ್ನ ಹೆಸರಲ್ಲಿ 65X41 ಚದರ ಅಡಿಯ ನಿವೇಶನದಲ್ಲಿ ಈಗಾಗಲೇ ನೆಲ ಅಂತಸ್ತಿನ ಮನೆ ಕಟ್ಟಿಸಿ ವಾಸವಾಗಿದ್ದೇವೆ. ನನಗೆ ಒಬ್ಬ ಗಂಡು ಹಾಗೂ ಇಬ್ಬರು ವಿವಾಹಿತ ಹೆಣ್ಣು ಮಕ್ಕಳಿದ್ದಾರೆ. ನನ್ನ ಪತ್ನಿಯ ಹೆಸರಿನಲ್ಲಿ 60X45 ಚದರ ಅಡಿಯ ನಿವೇಶನವಿದ್ದು ಅದನ್ನು ಮಾರಿದರೆ ಸುಮಾರು ₹ 35 ಲಕ್ಷ ಬರಬಹುದು. ಈ ಹಣದಿಂದ ನನ್ನ ಹೆಸರಿನಲ್ಲಿರುವ ಮನೆಯ ಮೇಲೆ ಇನ್ನೊಂದು ಅಂತಸ್ತಿನ ಮನೆ ಕಟ್ಟಬೇಕೆಂದಿದ್ದೇನೆ. ಈ ನಿವೇಶನ ಬಿಟ್ಟರೆ ಬೇರಾವುದೇ ಆಸ್ತಿ ಇರುವುದಿಲ್ಲ. ಮಗನಿಗೆ ಉದ್ಯೋಗ ಇರುವುದಿಲ್ಲ. ನಿವೇಶನ ಮಾರಾಟದಿಂದ ಸಿಗುವ ಹಣಕ್ಕೆಬರುವ ಆದಾಯ ವೃದ್ಧಿ ತೆರಿಗೆಯ ಬಗ್ಗೆ ಸೂಕ್ತ ಸಲಹೆ ನೀಡಬೇಕಾಗಿ ಕೋರುತ್ತೇನೆ.

ಉತ್ತರ: ನಿಮ್ಮ ಪತ್ನಿಯ ಹೆಸರಿನಲ್ಲಿರುವ ನಿವೇಶನ ಮೂರು ವರ್ಷಗಳಿಗಿಂತ ಹಿಂದೆಯೇ ಖರೀದಿಸಿದ್ದೀರೆಂದು ಭಾವಿಸಿದ್ದೇನೆ. ಇದರ ಮೂಲ ಖರೀದಿ ಬೆಲೆಯ ಮೇಲೆ ಆಯಾ ವರ್ಷಕ್ಕೆ ಅನ್ವಯವಾಗುವ ಹಣದುಬ್ಬರ ಸೂಚ್ಯಂಕವನ್ನಾಧರಿಸಿ ಬೆಲೆಯನ್ನು ಮರುಹೊಂದಾಣಿಕೆ ಮಾಡಲಾಗುತ್ತದೆ. ಉದಾಹರಣೆಗೆ, ನಿಮ್ಮ ಮೂಲ ಖರೀದಿ ಬೆಲೆ ₹ 5 ಲಕ್ಷ ಎಂದಾದರೆ, ಹಣದುಬ್ಬರ ಪ್ರಮಾಣದಂತೆ ಮರು ಹೊಂದಾಣಿಕೆ ಮಾಡಲಾದ ಅಸಲು ಮೊತ್ತ ₹ 15 ಲಕ್ಷ ಎಂದಿಟ್ಟುಕೊಳ್ಳಿ. ಸುಮಾರು ₹ 35 ಲಕ್ಷಕ್ಕೆ ಮಾರಾಟ ಮಾಡುವ ಈ ಆಸ್ತಿಯ ಮೇಲೆ ಹಣದುಬ್ಬರ ಸೂಚ್ಯಂಕದ ಅಧಾರದ ಮೇಲೆ ನೀವು ಗಳಿಸುವ ಲಾಭ ₹ 20 ಲಕ್ಷ. ಈ ಮೌಲ್ಯವನ್ನು ಬಂಡವಾಳ ಲಾಭವೆಂದು ಪರಿಗಣಿಸಿ ಅದರ ಮೇಲೆ ಬಂಡವಾಳ ವೃದ್ಧಿ ತೆರಿಗೆಯನ್ನು ಶೇಕಡ 20ರ ದರದಲ್ಲಿ ಪಾವತಿಸಬೇಕಾಗುತ್ತದೆ.

ತೆರಿಗೆಯ ನಿರ್ಧಾರದ ದೃಷ್ಟಿಯಿಂದ ನಿಮಗೆ ಎರಡು ಸಲಹೆಗಳಿವೆ. ಪ್ರಸ್ತುತ ನಿಮ್ಮ ಪತ್ನಿಯ ಹೆಸರಲ್ಲಿರುವ ನಿವೇಶನವನ್ನು ನಿಮ್ಮ ಹೆಸರಿಗೆ ದಾನ ಪತ್ರದ ಮೂಲಕ ವರ್ಗಾಯಿಸಿ ಆ ನಿವೇಶನವನ್ನು ನೀವೇ ಮಾರಾಟ ಮಾಡುವುದು. ಮತ್ತು ನಿಮಗೆ ಬರುವ ಹಣವನ್ನು ಮೇಲಂತಸ್ತಿನ ಮನೆಗೆ ನೀವೇ ವಿನಿಯೋಗಿಸಬಹುದು. ಇದು ಸಾಧ್ಯವಾಗದಿದ್ದಲ್ಲಿ, ನೀವು ಪ್ರಸ್ತುತ ವಾಸವಿರುವ ಮನೆಯ ಭೂಮಿಯ ಭಾಗಶಃ ಹಕ್ಕನ್ನು ನಿಮ್ಮ ಪತ್ನಿಗೆ ದಾನ ಪತ್ರದ ಮೂಲಕ ವರ್ಗಾಯಿಸಿ ತದನಂತರ, ಅವರ ಹೆಸರಲ್ಲಿರುವ ನಿವೇಶನ ಮಾರಾಟ ಮಾಡಿ ಮೇಲಂತಸ್ತಿನ ಮನೆಯನ್ನು ಅವರ ಹೆಸರಲ್ಲಿ ಕಟ್ಟಿಕೊಳ್ಳಬಹುದು. ಇಲ್ಲಿ ಇಬ್ಬರ ಹೆಸರಲ್ಲೂ ಆಸ್ತಿ ರಚನೆಯಾಗುವ ಕಾರಣ ಸೂಕ್ತ ದಾಖಲೆಗಳನ್ನು ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ.

ಆದಾಯ ತೆರಿಗೆಯ ನಿಯಮ 54(ಎಫ಼್) ಪ್ರಕಾರ, ತೆರಿಗೆ ವಿನಾಯಿತಿಯ ಪ್ರಯೋಜನ ಪಡೆಯಲು, ಆಸ್ತಿ ಮಾರಾಟ ಮಾಡುವ ವ್ಯಕ್ತಿಯ ಹೆಸರಲ್ಲೇ ಹೊಸ ಮನೆಯ ಖರೀದಿ ಅಥವಾ ನಿರ್ಮಾಣ ಮಾಡಬೇಕಾಗಿರುತ್ತದೆ. ನೀವು ಸ್ವತಃ ಮನೆ ಕಟ್ಟಿಸುವುದಾದರೆ, ನಿವೇಶನ ಮಾರಾಟ ಮಾಡಿದ ಮೂರು ವರ್ಷದೊಳಗೆ ನಿರ್ಮಾಣ ಪೂರೈಸಬೇಕು. ತಾತ್ಕಾಲಿಕವಾಗಿ, ಮಾರಾಟದಿಂದ ಬಂದ ಹಣವನ್ನು ಯಾವುದೇ ಬ್ಯಾಂಕ್‌ನಲ್ಲಿ ಬಂಡವಾಳ ವೃದ್ಧಿ ಉಳಿತಾಯ ಖಾತೆಯಲ್ಲಿ ನಿಮ್ಮ ಆ ವರ್ಷದ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಹೂಡಬಹುದು ಹಾಗೂ ನಿರ್ಮಾಣಕ್ಕೆ ಉಪಯೋಗಿಸಬಹುದು. ನೀವು ಸಂಪೂರ್ಣ ಹಣವನ್ನು ಹೊಸ ಮನೆಗೆ ಹೂಡಿಕೆ ಮಾಡಿದರೆ ಒಟ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಭಾಗಶಃ ಹೂಡಿಕೆ ಮಾಡಿದರೆ, ಆಂಶಿಕವಾಗಿ ತೆರಿಗೆ ವಿನಾಯಿತಿ ಸಿಗುತ್ತದೆ.

ವೆಂಕಟರಮಣ, ಸಿದ್ದಾಪುರ

l ಪ್ರಶ್ನೆ:ನನ್ನ ಮಗನಿಗೆ ಈಗ ಒಂದು ವರ್ಷ ವಯಸ್ಸು. ಅವನ ಉಜ್ವಲ ಭವಿಷ್ಯಕ್ಕಾಗಿ ಸಾಂಪ್ರದಾಯಿಕ ಹೂಡಿಕೆ ಹಾಗೂ ಷೇರು/ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿಸಿ. ಅವು ಮಗನ ಓದಿಗೆ, ಅವನಿಗೆ ಸಂಬಂಧಿಸಿದ ಸಣ್ಣಪುಟ್ಟ ಖರ್ಚುಗಳಿಗೆ ನೆರವಾಗುವಂತೆ ಇರಬೇಕು.

ಉತ್ತರ: ನಿಮ್ಮ ಮಗನ ವಯಸ್ಸು ಈಗ ಕೇವಲ ಒಂದು ವರ್ಷ ಆಗಿರುವುದರಿಂದ ಉನ್ನತ ಶಿಕ್ಷಣಕ್ಕಾಗಿ ಹಾಗೂ ಸಣ್ಣ ವೆಚ್ಚಗಳಿಗಾಗಿ ಸಾಂಪ್ರದಾಯಿಕ ಹೂಡಿಕೆ, ಉತ್ತಮ ಗುಣಮಟ್ಟದ ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಸಾಂಪ್ರದಾಯಿಕ ಹೂಡಿಕೆಗಳು ನಿಮಗೆ ಏಕಪ್ರಕಾರದ ಆದಾಯ ಕೊಡಬಲ್ಲವು. ಇದರಲ್ಲಿ ನಿಮ್ಮ ಅಸಲು ಮೊತ್ತಕ್ಕೆ ಭದ್ರತೆ ಹೆಚ್ಚು. ಆದರೆ ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳು ದೇಶದ ಆರ್ಥಿಕ ಪರಿಸ್ಥಿತಿ, ಷೇರು ಮಾರುಕಟ್ಟೆಯ ಸ್ಥಿತಿಗತಿ ಅವಲಂಬಿಸಿ ಏರಿಳಿತವಾಗುತ್ತಿರುತ್ತವೆ.

ಉತ್ತಮ ಕಂಪನಿಗಳ ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳು ಸಾಂಪ್ರದಾಯಿಕ ಹೂಡಿಕೆಗಳಿಗಿಂತ ದುಪ್ಪಟ್ಟು ವಾರ್ಷಿಕ ಆದಾಯ ನೀಡಬಲ್ಲವು. ಈ ಬಗ್ಗೆ ನಿರ್ದಿಷ್ಟ ಮಾಹಿತಿಗಾಗಿ ಮಾರುಕಟ್ಟೆ ತಜ್ಞರಿಂದ ಸಲಹೆ ತೆಗೆದುಕೊಳ್ಳಿ. ನೀವು 15 ವರ್ಷಗಳ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆಯನ್ನು ಸಮೀಪದ ಅಂಚೆ ಇಲಾಖೆ ಅಥವಾ ಬ್ಯಾಂಕ್‌ನಲ್ಲಿ ತೆರೆಯಬಹುದು. ತಿಂಗಳ ಆದಾಯದಲ್ಲಿ ಒಂದಿಷ್ಟು ಮೊತ್ತವನ್ನು ಬ್ಯಾಂಕ್ ರೆಕರಿಂಗ್ ಡೆಪಾಸಿಟ್‌ನಲ್ಲೂ (ಆರ್‌.ಡಿ) ಇರಿಸಬಹುದು. ಗುಣಮಟ್ಟದ ಕಂಪನಿಯ ಷೇರುಗಳಲ್ಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯನ್ನು ಮಾರುಕಟ್ಟೆ ಕುಸಿದಾಗಲೆಲ್ಲ ಹೆಚ್ಚಿಸುತ್ತ ಇರಿ. ಒಂದೇ ವಲಯದ ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಿಗಿಂತ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿ ದೀರ್ಘಾವಧಿ ಹೂಡಿಕೆಯ ಲಾಭ ಪಡೆಯಬಹುದು. ಸಣ್ಣ ಪುಟ್ಟ ಖರ್ಚುಗಳಿಗೆ ಅಲ್ಪಾವಧಿ ನಿಶ್ಚಿತ ಠೇವಣಿ ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಮೂರು ವರ್ಷ ಅವಧಿಯ ತೆರಿಗೆ ಉಳಿತಾಯ ಲಾಭದ (ಇಎಲ್‌ಎಸ್‌ಎಸ್‌) ಮ್ಯೂಚುವಲ್ ಫಂಡ್‌ಗಳಲ್ಲೂ ಹೂಡಿಕೆ ಮಾಡಬಹುದು. ಮಕ್ಕಳ ವಿದ್ಯಾಭ್ಯಾಸದ ಉದ್ದೇಶದಿಂದ ವಿಮಾ ಯೋಜನೆಯಲ್ಲೂ ದೀರ್ಘಾವಧಿ ಹೂಡಿಕೆಯನ್ನು ಮುಂದಿನ ದಿನಗಳಲ್ಲಿ ಯೋಚಿಸಬಹುದು. ಇದರಿಂದ ಜೀವ ವಿಮಾ ಸೌಲಭ್ಯ ಹಾಗೂ ತೆರಿಗೆ ಉಳಿತಾಯಕ್ಕೂ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT