ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌ ಸೇವೆಗಳಿಗೆ ಏಕೀಕೃತ ‍ಪೋರ್ಟಲ್‌ ಆರಂಭ

Last Updated 23 ಸೆಪ್ಟೆಂಬರ್ 2021, 15:33 IST
ಅಕ್ಷರ ಗಾತ್ರ

ಬೆಂಗಳೂರು: ಬೇರೆ ಬೇರೆ ಮ್ಯೂಚುವಲ್‌ ಫಂಡ್‌ಕಂಪನಿಗಳ ಮೂಲಕ ಹೂಡಿಕೆ ಮಾಡಿದವರಿಗೆ, ಹೂಡಿಕೆಗೆ ಸಂಬಂಧಿಸಿದ ಹತ್ತು ಹಲವು ಸೇವೆಗಳನ್ನು ಒಂದೇ ಕಡೆ ಒದಗಿಸಲು ಹೊಸ ಪೋರ್ಟಲ್ ಸಿದ್ಧವಾಗಿದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಕೆ–ಫಿನ್‌ ಟೆಕ್ನಾಲಜೀಸ್‌, ಕ್ಯಾಮ್ಸ್, ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಒಟ್ಟಾಗಿ ಎಂಎಫ್‌ಸೆಂಟ್ರಲ್‌ (mfcentral.com) ಹೆಸರಿನ ಪೋರ್ಟಲ್‌ಗೆ ಚಾಲನೆ ನೀಡಿವೆ.

ದೇಶದಲ್ಲಿ ನಲವತ್ತಕ್ಕೂ ಹೆಚ್ಚು ಕಂಪನಿಗಳು ಮ್ಯೂಚುವಲ್‌ ಫಂಡ್‌ ಹೂಡಿಕೆ ಸೇವೆಗಳನ್ನು ಒದಗಿಸುತ್ತಿವೆ. ಬೇರೆ ಬೇರೆ ಕಂಪನಿಗಳ ಮೂಲಕ ಹೂಡಿಕೆ ಮಾಡಿದವರು, ತಮ್ಮ ಎಲ್ಲ ಹೂಡಿಕೆಗಳ ವಿವರಗಳನ್ನುಈ‍ಪೋರ್ಟಲ್‌ ಮೂಲಕ ಪಡೆಯಬಹುದು. ಅಲ್ಲದೆ, ಮ್ಯೂಚುವಲ್‌ ಫಂಡ್‌ ಹೂಡಿಕೆ ಜೊತೆ ನೀಡಿದ ಬ್ಯಾಂಕ್‌ ವಿವರಗಳಲ್ಲಿ ಬದಲಾವಣೆ, ಇ–ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಬದಲಾವಣೆ, ಬ್ಯಾಂಕ್‌ ಖಾತೆಯ ವಿವರ ಅಪ್ಡೇಟ್ ಮಾಡುವುದು ಸೇರಿದಂತೆ ಒಟ್ಟು ಒಂಬತ್ತು ಸೇವೆಗಳನ್ನು ಈ ಪೋರ್ಟಲ್‌ನಲ್ಲಿ ಪಡೆಯಬಹುದು.

ಹೂಡಿಕೆದಾರರು ಬೇರೆ ಬೇರೆ ಕಂಪನಿಗಳ ಮೂಲಕ ಮಾಡಿದ ಹೂಡಿಕೆಯ ವಿವರಗಳನ್ನೆಲ್ಲ ಒಂದೇ ಕಡೆ ವೀಕ್ಷಿಸಬಹುದು. ಯಾವ ಫಂಡ್‌ ಹೌಸ್ ಮೂಲಕ ಎಷ್ಟು ಹೂಡಿಕೆ ಆಗಿದೆ, ಈಕ್ವಿಟಿಯಲ್ಲಿ ಎಷ್ಟು ಹೂಡಿಕೆ, ಸಾಲಪತ್ರಗಳಲ್ಲಿ ಎಷ್ಟು ಹೂಡಿಕೆ ಎಂಬ ವಿವರಗಳನ್ನು ನೋಡಿಕೊಳ್ಳಬಹುದು.

‘ಈ ಪೋರ್ಟಲ್‌ನಿಂದಾಗಿ ಮ್ಯೂಚುವಲ್‌ ಫಂಡ್‌ಗೆ ಸಂಬಂಧಿಸಿದ ಸೇವೆಗಳನ್ನು ಪಡೆಯುವುದು ಸರಳವಾಗುತ್ತದೆ. ಸೇವೆಗಳನ್ನು ಪಡೆಯುವುದಕ್ಕೆ ಬೇಕಿದ್ದ ಸಮಯ ಕಡಿಮೆ ಆಗುತ್ತದೆ. ಯಾವುದೇ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೂ, ಒಂದೇ ಪೋರ್ಟಲ್‌ ಮೂಲಕ ಸೇವೆಗಳನ್ನು ಪಡೆಯಬಹುದು’ ಎಂದು ಕ್ಯಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅನುಜ್‌ ಕುಮಾರ್ ಹೇಳಿದ್ದಾರೆ.

ಈ ಪೋರ್ಟಲ್‌ ಮೂರು ಹಂತಗಳಲ್ಲಿ ಸೇವೆಗಳನ್ನು ನೀಡಲಿದೆ. ಈಗ ಮೊದಲ ಹಂತವು ಸೇವೆಗೆ ಲಭ್ಯವಾಗಿದೆ. ಇನ್ನೆರಡು ಹಂತಗಳು ಡಿಸೆಂಬರ್ ಅಂತ್ಯಕ್ಕೆ ಸೇವೆಗೆ ದೊರೆಯಲಿವೆ. ಆಗ ಮೊಬೈಲ್ ಆ್ಯಪ್ ಮೂಲಕ ಈ ಸೇವೆಯನ್ನು ಪಡೆಯಬಹುದು, ಪೋರ್ಟಲ್‌ ಮೂಲಕ ಯಾವುದೇ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆಯನ್ನೂ ಮಾಡಬಹುದು ಎಂದು ಕೆ–ಫಿನ್‌ ಟೆಕ್ನಾಲಜೀಸ್ ಮತ್ತು ಕ್ಯಾಮ್ಸ್‌ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT