ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಂಡ್‌ಟ್ರೀ ಸ್ವಾಧೀನಕ್ಕೆ ಸಂಪೂರ್ಣ ಗಮನ

ದೊಡ್ಡ ಸಂಸ್ಥೆಯನ್ನಾಗಿ ಬೆಳೆಸುವ ಉದ್ದೇಶ: ಎಲ್‌ಆ್ಯಂಡ್‌ಟಿ ಅಧ್ಯಕ್ಷ
Last Updated 27 ಮೇ 2019, 17:51 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀಯನ್ನು ಸ್ವಾಧೀನಪಡಿಸಿಕೊಳ್ಳುವುದೇ ಸದ್ಯಕ್ಕೆ ತನ್ನ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಮೂಲಸೌಕರ್ಯ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟುಬ್ರೊ (ಎಲ್‌ಆ್ಯಂಡ್‌ಟಿ) ಹೇಳಿಕೊಂಡಿದೆ.

₹ 1.40 ಲಕ್ಷ ಕೋಟಿ ಮೊತ್ತದ ಬಹುಬಗೆಯ ವಹಿವಾಟಿನ ಕಾರ್ಪೊರೇಟ್‌ ಸಮೂಹವು ಈಗಾಗಲೇ ಮೈಂಡ್‌ಟ್ರೀನಲ್ಲಿನ ಶೇ 28.45ರಷ್ಟು ಪಾಲು ಬಂಡವಾಳವನ್ನು ವಶಪಡಿಸಿಕೊಂಡಿದೆ. ಹೆಚ್ಚುವರಿ ಪಾಲು ಖರೀದಿಸಲು ಮುಂದಿನ 10 ದಿನಗಳಲ್ಲಿ ಮುಕ್ತ ಕೊಡುಗೆಗೆ ಮುಂದಾಗಲಿದೆ.

‘ಸ್ವಾಧೀನಪಡಿಸಿಕೊಳ್ಳಲು ಇರುವ ಅವಕಾಶಗಳನ್ನು ನಾವು ನಿರಂತರವಾಗಿ ಎದುರು ನೋಡುತ್ತಿದ್ದೇವೆ. ಈಗ ಮೈಂಡ್‌ಟ್ರೀ ಸ್ವಾಧೀನಕ್ಕೆ ಗಮನ ಕೇಂದ್ರೀಕರಿಸಲಾಗಿದೆ’ ಎಂದು ಎಲ್‌ಆ್ಯಂಡ್‌ಟಿ ಗ್ರೂಪ್‌ ಅಧ್ಯಕ್ಷ ಎ. ಎಂ. ನಾಯಕ್‌ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ನಾವು ಈಗಾಗಲೇ ಮೈಂಡ್‌ಟ್ರೀನಲ್ಲಿ ಶೇ 28.45ರಷ್ಟು ಪಾಲು ಬಂಡವಾಳ ಹೊಂದಿದ್ದೇವೆ. ಇದನ್ನು ಶೇ 51ರಷ್ಟಕ್ಕೆ ಹೆಚ್ಚಿಸಲು ಎದುರು ನೋಡುತ್ತಿದ್ದೇವೆ.

‘ಪ್ರವರ್ತಕರೆಲ್ಲ ಶೇ 12ರಷ್ಟು ಪಾಲು ಬಂಡವಾಳ ಹೊಂದಿದ್ದಾರೆ. ಈ ಪಾಲನ್ನು ಮಾರಾಟ ಮಾಡಿ ಸಂಸ್ಥೆಯಿಂದ ಹೊರ ನಡೆಯಿರಿ ಎಂದೇನೂ ನಾವು ಅವರಿಗೆ ಹೇಳುತ್ತಿಲ್ಲ. ಅವರು ತಮ್ಮ ಪಾಲು ಬಂಡವಾಳವನ್ನು ಯಾವಾಗಲಾದರೂ ನಮಗೆ ಮಾರಾಟ ಮಾಡಲು ಬಯಸಿದ್ದರೆ ಅದನ್ನು ಖರೀದಿಸಲು ನಾವು ಸಿದ್ಧರಿದ್ದೇವೆ.

‘ನಾಲ್ಕೈದು ವರ್ಷಗಳಲ್ಲಿ ಅದನ್ನು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 35 ಸಾವಿರ ಕೋಟಿ ವಹಿವಾಟಿನ ಸಂಸ್ಥೆಯನ್ನಾಗಿ ಬೆಳೆಸುತ್ತೇವೆ’ ಎಂದು ನಾಯಕ್‌ ಭರವಸೆ ನೀಡಿದ್ದಾರೆ.

ಭಾವನಾತ್ಮಕ ಸಂಬಂಧ: ಮೈಂಡ್‌ಟ್ರೀನ ಪ್ರವರ್ತಕರು ಈ ಒತ್ತಾಯಪೂರ್ವಕ ಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಅವರೆಲ್ಲ ಸಂಸ್ಥೆ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹೀಗಾಗಿ ಅವರು ಸ್ವಾಧೀನ ಪ್ರಕ್ರಿಯೆ ವಿರೋಧಿಸುತ್ತಿದ್ದಾರೆ. ಸಂಸ್ಥೆಯನ್ನು ಸುಲಭವಾಗಿ ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ನಮ್ಮ ಸಂಸ್ಥೆ ಕೂಡ ಉದ್ಯೋಗಿ ಕೇಂದ್ರೀತ ಕಾರ್ಪೊರೇಟ್‌ ಗ್ರೂಪ್‌ ಆಗಿರುವುದು ಅವರಿಗೆ ಈಗ ಕ್ರಮೇಣ ಮನವರಿಕೆಯಾಗುತ್ತಿದೆ’ ಎಂದು ಹೇಳಿದ್ದಾರೆ.

1965ರಲ್ಲಿ ಜೂನಿಯರ್‌ ಎಂಜಿನಿಯರ್‌ ಆಗಿ ಎಲ್‌ಆ್ಯಂಡ್‌ಟಿ ಸೇರ್ಪಡೆಗೊಂಡಿದ್ದ ನಾಯಕ್‌ ಅವರು, 1999ರಲ್ಲಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಏರಿದ್ದರು. 2017ರಲ್ಲಿ ಅವರು ಕಾರ್ಯನಿರ್ವಾಹಕ ಹೊಣೆಗಾರಿಕೆಗಳಿಂದ ನಿವೃತ್ತರಾಗಿ, ಸಮೂಹದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT