ಬುಧವಾರ, ಸೆಪ್ಟೆಂಬರ್ 22, 2021
29 °C

2017ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಜಮೆಯಾದ ಭಾರತೀಯರ ಹಣ ₹7000 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಸ್ವಿಸ್‌ ರಾಷ್ಟ್ರೀಯ ಬ್ಯಾಂಕ್‌ 

ನವದೆಹಲಿ: ಸ್ವಿಸ್‌ ರಾಷ್ಟ್ರೀಯ ಬ್ಯಾಂಕ್‌(ಎಸ್‌ಎನ್‌ಬಿ) ಗುರುವಾರ ವಾರ್ಷಿಕ ವರದಿ ಬಿಡುಗಡೆಯಾಗಿದ್ದು, ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಜಮೆ ಮಾಡಿರುವ ಹಣದ ಮೊತ್ತ 2017ರಲ್ಲಿ ಶೇ 50ರಷ್ಟು ಏರಿಕೆಯಾಗಿರುವ ಮಾಹಿತಿ ದೊರೆತಿದೆ.

ವಿದೇಶಗಳಲ್ಲಿ ಭಾರತೀಯರ ಕಪ್ಪು ಹಣ ಪತ್ತೆಗೆ ಕ್ರಮವಹಿಸುವುದಾಗಿ ಸರ್ಕಾರ ಘೋಷಿಸಿದ ಬಳಿಕ, ಸ್ವಿಸ್‌ ಬ್ಯಾಂಕ್‌ಗಳಲ್ಲಿ ಠೇವಣೆಯಾಗುವ ಹಣದ ಪ್ರಮಾಣ ಸತತ ಮೂರು ವರ್ಷ ಇಳಿಕೆಯಾಗಿತ್ತು. ಆದರೆ, ಕಳೆದ ವರ್ಷ ₹7000 ಕೋಟಿ (1.01 ಬಿಲಿಯನ್‌ ಸ್ವಿಸ್‌ ಫ್ರಾಂಕ್ಸ್‌) ಭಾರತೀಯ ಹಣ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಜಮೆಯಾಗಿದೆ. 

ಎಸ್‌ಎನ್‌ಬಿ ಅಧಿಕೃತ ಮಾಹಿತಿ ಪ್ರಕಾರ, 2017ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಿಗೆ ವಿದೇಶಿಯರಿಂದ ಹರಿದು ಬಂದ ಹಣದ ಪ್ರಮಾಣ ಶೇ 3ರಷ್ಟು ಏರಿಕೆ ಕಂಡಿದೆ. ಒಟ್ಟು ₹100 ಲಕ್ಷ ಕೋಟಿಯಷ್ಟು ಹಣ ಜಮೆಯಾಗಿದೆ. 

2016ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ₹4500 ಕೋಟಿ ಇರಿಸುವ ಮೂಲಕ ಜಮೆ ಮಾಡುವ ಪ್ರಮಾಣದಲ್ಲಿ ಶೇ 45ರಷ್ಟು ಇಳಿಕೆಯಾಗಿತ್ತು. 1987ರಿಂದ ಹೊರ ಬರುತ್ತಿರುವ ಅಧಿಕೃತ ಮಾಹಿತಿ ಆಧಾರದಲ್ಲಿ 2016ರಲ್ಲಿ ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿದ ಹಣದ ಪ್ರಮಾಣ ಅತಿ ಕಡಿಮೆಯದಾಗಿತ್ತು.

2006ರಲ್ಲಿ ಭಾರತೀಯರಿಂದ ಸ್ವಿಸ್‌ ಬ್ಯಾಂಕ್‌ಗಳಲ್ಲಿ ₹23 ಸಾವಿರ ಕೋಟಿ ಜಮೆಯಾಗಿತ್ತು. ಅದು ಸ್ವಿಸ್‌ ಬ್ಯಾಂಕ್‌ಗಳ ಇತಿಹಾಸದಲ್ಲಿ ಈವರೆಗಿನ ದಾಖಲೆಯಾಗಿ ಉಳಿದಿದೆ. 

ಎಸ್‌ಎನ್‌ಬಿ ವರದಿಯಲ್ಲಿನ ಮಾಹಿತಿ ಪ್ರಕಾರ, ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಗ್ರಾಹಕರ ಠೇವಣಿ ರೂಪದಲ್ಲಿ ₹3200 ಕೋಟಿ, ಇತರೆ ಬ್ಯಾಂಕ್‌ಗಳ ಮೂಲಕ ₹1,050 ಕೋಟಿ ಹಾಗೂ ಭದ್ರತಾ ಠೇವಣಿ ರೂಪದಲ್ಲಿ ₹2,640 ಕೋಟಿ ಇರಿಸಿದ್ದಾರೆ.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು