ನವದೆಹಲಿ: ಅದಾನಿ ಸಮೂಹದ ಕಂಪನಿಗಳ ಷೇರುಗಳು ಶುಕ್ರವಾರದ ವಹಿವಾಟಿನಲ್ಲಿ ಚೇತರಿಕೆ ಕಂಡುಕೊಂಡವು. ಕಂಪನಿಗಳ ಒಟ್ಟು ಬಂಡವಾಳ ಮೌಲ್ಯ ₹13,500 ಕೋಟಿಯಷ್ಟು ಏರಿಕೆ ಕಂಡಿತು.
ಪಾರದರ್ಶಕ ಅಲ್ಲದ (opaque), ಮಾರಿಷಸ್ ಮೂಲದ ಫಂಡ್‌ಗಳ ಮೂಲಕ ಅದಾನಿ ಸಮೂಹದ ಕಂಪನಿಗಳಲ್ಲಿ ₹8,269 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ತನಿಖಾ ಪತ್ರಕರ್ತರ ಸಂಘಟನೆಯಾದ ‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ’ (ಒಸಿಸಿಆರ್‌ಪಿ) ಆರೋಪ ಮಾಡಿದ್ದರಿಂದ 9 ಕಂಪನಿಯ ಷೇರುಗಳ ಮೌಲ್ಯ ಗುರುವಾರ ಇಳಿಕೆ ಕಂಡಿತ್ತು.
ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಪವರ್ ಶೇ 2.77ರಷ್ಟು, ಅದಾನಿ ಗ್ರೀನ್ ಎನರ್ಜಿ ಶೇ 2.32, ಅದಾನಿ ಎನರ್ಜಿ ಸಲ್ಯೂಷನ್ಸ್ (ಶೇ 1.62), ಅದಾನಿ ಎಂಟರ್‌ಪ್ರೈಸಸ್ (ಶೇ 1.29), ಅಂಬುಜಾ ಸಿಮೆಂಟ್ಸ್, ಅದಾನಿ ಪೋರ್ಟ್ಸ್, ಎನ್‌ಡಿಟಿವಿ ಷೇರು ಮೌಲ್ಯ ಹೆಚ್ಚಾಗಿದೆ.
ಅದಾನಿ ವಿಲ್ಮರ್ ಷೇರು ಶೇ 1.97, ಅದಾನಿ ಟೋಟಲ್ ಗ್ಯಾಸ್ ಮತ್ತು ಎಸಿಸಿ ಷೇರುಗಳ ಮೌಲ್ಯ ಇಳಿಕೆ ಕಂಡಿತು.
ಸೆನ್ಸೆಕ್ಸ್, ನಿಫ್ಟಿ ಶೇ 1ರವರೆಗೆ ಏರಿಕೆ (ಮುಂಬೈ ವರದಿ): ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 556 ಅಂಶ ಏರಿಕೆ ಕಂಡಿತು. ಎರಡು ತಿಂಗಳಿನಲ್ಲಿ ಸೆನ್ಸೆಕ್ಸ್‌ನ ಗರಿಷ್ಠ ಏರಿಕೆ ಇದಾಗಿದೆ. ಎನ್‌ಎಸ್‌ಇ ನಿಫ್ಟಿ 19,400ರ ಮಟ್ಟ ದಾಟಿತು.
ಜಾಗತಿಕ ವಿದ್ಯಮಾನಗಳ ಜೊತೆಗೆ ದೇಶದಲ್ಲಿ ಜಿಡಿಪಿ ಬೆಳವಣಿಗೆ ಮತ್ತು ತಯಾರಿಕಾ ವಲಯದ ಬೆಳವಣಿಗೆ ಸಕಾರಾತ್ಮಕ ಆಗಿರುವುದು ಷೇರುಪೇಟೆಗಳ ವಹಿವಾಟಿನ ಮೇಲೆ ಪ್ರಭಾವ ಬೀರಿತು. ವಿದ್ಯುತ್, ಲೋಹ ಮತ್ತು ತೈಲ ಕಂಪನಿಗಳ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿ ನಡೆಸಿದ್ದರಿಂದಾಗಿ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು.
ಬ್ರೆಂಟ್ ಕಚ್ಚಾ ತೈಲ ದರ ಶೇ 1.26ರಷ್ಟು ಏರಿಕೆ ಕಂಡು ಬ್ಯಾರಲ್‌ಗೆ 87.92 ಡಾಲರ್‌ಗೆ ತಲುಪಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.